ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ನೆಹರುನಗರದ ಕನ್ನಡ ಭವನದಲ್ಲಿ ಡಿ.27ರಂದು ನೂತನ ರಂಗಮಂದಿರದ ಉದ್ಘಾಟನೆ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಡಂಬಳ-ಗದಗನ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲಕುಮಾರ್, ಸಂಸದೆ ಮಂಗಲ ಅಂಗಡಿ, ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ ಜೋಶಿ, ಶಾಸಕರಾದ ಅನಿಲ್ ಬೆನಕೆ, ಅಭಯ ಪಾಟೀಲ, ಚಿತ್ರನಟಿ ಗಿರಿಜಾ ಲೋಕೇಶ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಕೆಎಲ್ಇ ಕಾರ್ಯಾಧ್ಯಕ್ಷ ಹಾಗೂ ಕನ್ನಡ ಭವನ ಆಡಳಿತ ಮಂಡಳಿ ಅಧ್ಯಕ್ಷ ಡಾ. ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ
ಡಾ.ಪ್ರಭಾಕರ ಕೋರೆ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಬೆಳಗಾವಿ ಕರ್ನಾಟಕದ ಹೆಮ್ಮೆಯ ಜಿಲ್ಲೆ. ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆ. ಕನ್ನಡಾಂಬೆಯ ಮಣಿಮುಕುಟ. ಸಾಂಸ್ಕೃತಿಕವಾಗಿ ಶ್ರೀಮಂತವಾದ ಜಿಲ್ಲೆ. ಗಡಿ ಕನ್ನಡಿಗರ ಬಹುದಿನಗಳ ಕನಸಿನ ಪ್ರತಿಫಲವಾಗಿ, 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮಾರಕ ಸಾಂಸ್ಕೃತಿಕ ಭವನ ಡಾ. ಪ್ರಭಾಕರ ಕೋರೆಯವರ ಅದಮ್ಯ ಇಚ್ಛಾಶಕ್ತಿಯಂತೆ ಬೆಳಗಾವಿಯ ಹೃದಯ ಭಾಗದಲ್ಲಿ ಇಂದು ತಲೆಯೆತ್ತಿ ನಿಂತಿದೆ.
ಕನ್ನಡ ಭವನ ರಂಗಮಂದಿರದ ಅಗತ್ಯತೆ:
ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆಗಳು ಗಡಿ ಭಾಗದಲ್ಲಿ ನಿರಂತರವಾಗಿ ಜರುಗಬೇಕೆಂಬ ಉದಾತ್ತ ಉದ್ದೇಶ ಡಾ. ಪ್ರಭಾಕರ ಕೋರೆ ಅವರದು. 2003 ರಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನವನ್ನು ಕನ್ನಡದ ಕಟ್ಟಾಳು ಡಾ. ಪಾಟೀಲ್ ಪುಟ್ಟಪ್ಪನವರು ವಹಿಸಿದ್ದರು. ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರು ಡಾ. ಪ್ರಭಾಕರ ಕೋರೆಯವರು. ನಾಗನೂರಿನ ಶ್ರೀ ಡಾ.ಸಿದ್ಧರಾಮ ಮಹಾ ಸ್ವಾಮೀಜಿಯವರು, ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರ ನೇತೃತ್ವದಲ್ಲಿಈ ಸಮ್ಮೇಳನ ಯಶಸ್ವಿಯಾಗಿ ಜರುಗಿತು.
ಸಮ್ಮೇಳನ ನಂತರ ಉಳಿಕೆಯ ಹಣ ಇಟ್ಟು 21ಗುಂಟೆ ನಿವೇಶನದಲ್ಲಿ ಕನ್ನಡ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಭಾಷ್ಯ ಬರೆದರು. ಅಂದಿನ ನಗರಸೇವಕರು, ಉತ್ಸಾಹಿ ಯುವನಾಯಕ ಶಿವನಗೌಡ ಪಾಟೀಲರ ಪ್ರಯತ್ನ, ಅಂದಿನ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮೋಹನಗೌಡ ಪಾಟೀಲ್ ಸಹಕಾರ ನಿವೇಶನ ದೊರೆಯುವಲ್ಲಿ ಫಲಪ್ರದಾಯಿಕವಾಯಿತು.
2006ರ ಬೆಳಗಾವಿ ವಿಧಾನ ಮಂಡಲಗಳ ಅಧಿವೇಶನ ಸಂದರ್ಭದಲ್ಲಿ 2006ರ ಸೆಪ್ಟೆಂಬರ್ 28 ರಂದು ಕನ್ನಡ ಭವನ ಅಡಿಗಲ್ಲು ಸಮಾರಂಭದ ಶಂಕುಸ್ಥಾಪನೆಯು ಅಂದಿನ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಶ್ರೀ ಡಾ. ಸಿದ್ದರಾಮ ಮಹಾಸ್ವಾಮೀಜಿಯವರ ಸಾನಿಧ್ಯದಲ್ಲಿ ನೆರವೇರಿಸಿದರು.
2010 ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಕೊಡುಗೈಯ ದೊರೆ ಬಿಎಸ್ ಯಡಿಯೂರಪ್ಪನವರು ಮೂರು(೩) ಕೋಟಿ ಅನುದಾನವನ್ನು ನೀಡಿದರೆ, ಮತ್ತೆ 2020ರಲ್ಲಿ 3.27 ಕೋಟಿ ಅನುದಾನ ನೀಡಿ ಸಹಕರಿಸಿದರು. ಅಲ್ಲದೆ ಡಾ. ಪ್ರಭಾಕರ ಕೋರೆ ಅವರು ಜನಪ್ರತಿನಿಧಿಗಳಿಂದ 90 ಲಕ್ಷ ರೂ. ಸಂಗ್ರಹಿಸಿ ಭವ್ಯ ಕಟ್ಟಡದ ನಿರ್ಮಾಣಕ್ಕೆ ಅಹರ್ನಿಶಿ ಶ್ರಮಿಸಿದರು. ಇಂದು ಸಕ್ಕರೆಯ ಜಿಲ್ಲೆ ಬೆಳಗಾವಿಯಲ್ಲಿ ಮೂರು ಅಂತಸ್ತಿನ ಭವ್ಯ ಸಾಂಸ್ಕೃತಿಕ ಭವನ ಭವ್ಯವಾಗಿ ರಾರಾಜಿಸುತ್ತಿದೆ. ಬೆಳಗಾವಿ ಗಡಿ ಕನ್ನಡಿಗರ ಕನಸು ಸಾಕಾರಗೊಂಡಿದೆ.
ರಂಗಮಂದಿರದ ವೈಶಿ?ಗಳು:
ಕನ್ನಡ ಭವನದ ರಂಗ ಮಂದಿರವು ವಿಶಾಲವಾದ ಪ್ರಾಂಗಣವನ್ನು ಹೊಂದಿರುವುದು. ಮಾತ್ರವಲ್ಲದ ಸಂಪೂರ್ಣ ಹವಾ ನಿಯಂತ್ರಿತವಾಗಿದೆ. ಸೊಸಜ್ಜಿತವಾದ 300ಕ್ಕೂ ಹೆಚ್ಚು ಆಸನಗಳನ್ನು ಹೊಂದಿದೆ. ಸಾಹಿತಿಗಳಿಗೆ ಕಲಾವಿದರಿಗೆ ಉಳಿದುಕೊಳ್ಳಲು ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದೆ. ಅತ್ಯಾಧುನಿಕ ತಾಂತ್ರಿಕ ಧ್ವನಿ ವ್ಯವಸ್ಥೆಯೊಂದಿಗೆ ಧ್ವನಿ ಮುದ್ರಣ ಹೊಂದಿದೆ. ಆಕರ್ಷಕವಾದ ಬೆಳಕಿನ ವ್ಯವಸ್ಥೆ, ನೇಪಥ್ಯ ಕೋಣೆಗಳು, ಮುಂಭಾಗದಲ್ಲಿ ಹತ್ತು(10) ಮಳಿಗೆಗಳು ವಿನೂತನವೆನಿಸಿವೆ. ಕನ್ನಡ ಭವನದ ಹೊರಭಾಗದಲ್ಲಿ ಕಪ್ಪು ಗ್ಲಾಸುಗಳನ್ನು ಬಳಸಲಾಗಿದ್ದು ಅತ್ಯಾಕ?ಕವೆನಿಸಿದೆ. ಹಿಂಭಾಗದಲ್ಲಿ ವಿಶಾಲವಾದ ವಾಹನ ನಿಲುಗಡೆಗೆ ಸ್ಥಳಾವಕಾಶವನ್ನು ಮಾಡಿಕೊಡಲಾಗಿದೆ.
ಒಂದು ದಶಕದ ನಂತರ ರೂಪಗೊಂಡಿರುವ ಕನ್ನಡ ಭವನದ ರಂಗಮಂದಿರದ ಉದ್ಘಾಟನೆ ಇದೇ 2022ರ ಡಿಸೆಂಬರ್ 27ರಂದು ಜರುಗುತ್ತಿರುವುದು ಬೆಳಗಾವಿ ಕನ್ನಡಿಗರಿಗೆ ಹೆಮ್ಮೆಯ ಸಂಗತಿ.
ಸಮಾರಂಭದ ಸಾನ್ನಿಧ್ಯವನ್ನು ಡಂಬಳ ಗದಗ ತೋಂಟದ ಜಗದ್ಗುರು ಶ್ರೀ ಡಾ. ಸಿದ್ದರಾಮ ಮಹಾಸ್ವಾಮೀಜಿ ವಹಿಸಲಿದ್ದಾರೆ. ರಂಗಮಂದಿರದ ಉದ್ಘಾಟನೆಯನ್ನು ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಎಸ್ ಸುನೀಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬೆಳಗಾವಿ ಸಂಸದೆ ಮಂಗಲಾ ಸುರೇಶ ಅಂಗಡಿ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಬೆಳಗಾವಿ ದಕ್ಷಿಣದ ವಿಧಾನಸಭಾ ಸದಸ್ಯರಾದ ಅಭಯ ಪಾಟೀಲ, ನಟಿ ಗಿರಿಜಾ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಆಗಮಿಸಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ, ಕನ್ನಡ ಸಾಂಸ್ಕೃತಿಕ ಭವನದ ಅಧ್ಯಕ್ಷ ಡಾ. ಪ್ರಭಾಕರ ಕೋರೆ ವಹಿಸಲಿದ್ದಾರೆ.
ಮಹಾಂತೇಶ ಕವಟಗಿಮಠ ಮಾಜಿ ಎಂಎಲ್‌ಸಿ, ಡಾ.ಬಸವರಾಜ ಜಗಜಂಪಿ, ಬಿ.ಎಸ್.ಗವಿಮಠ, ಏಣಗಿ ಸುಭಾಷ, ಯ.ರು.ಪಾಟೀಲ, ಬಸವರಾಜ ಗಾರ್ಗಿ, ಮಂಗಲಾ ಮೆಟಗುಡ್ಡ ಮೊದಲಾದವರು ಉಪಸ್ಥಿತರಿರುವರು.
27ರಂದು ಕನ್ನಡ ಭವನ ರಂಗಮಂದಿರ ಉದ್ಘಾಟನೆ
https://pragati.taskdun.com/kannada-bhavan-ranga-mandir-inauguration-on-27th-by-cm-bsasavraj-bommai/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ