ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಟ್ರಸ್ಟ್ ಕೆಎಲ್ಇ ಸಂಸ್ಥೆಯ ಶತಮಾನೋತ್ಸವದ ನಿಮಿತ್ತ ಆರಂಭಿಸಿರುವ ವೆಲ್ ನೆಸ್ ಸೆಂಟರ್ ಉದ್ಘಾಟನೆ ಇಂದು (ಮೇ3) ಉದ್ಯಮಬಾಗದ ಆನಗೋಳ ಮುಖ್ಯ ರಸ್ತೆಯ ಕೆಎಲ್ಇ ಶೇಷಗಿರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.
ಬೆಳಗಾವಿ ಫೌಂಡ್ರಿ ಕ್ಲಸ್ಟರ್ ಅಧ್ಯಕ್ಷ ರಾಮು ಭಂಡಾರೆ ವೆಲ್ ನೆಸ್ ಸೆಂಟರ್ ಉದ್ಘಾಟಿಸಲಿದ್ದಾರೆ. ಬೆಳಗಾವಿ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಮಹಾದೇವ ಚೌಗುಲೆ, ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಅಧ್ಯಕ್ಷ ಹೇಮೇಂದ್ರ ಪೋರ್ವಾಲ್, ಲಘು ಉದ್ಯೋಗ ಭಾರತಿ ಅಧ್ಯಕ್ಷ ದಯಾನಂದ ನೇತಲ್ಕರ್, ಅಶೋಕ ಐರನ್ ವರ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಕಯಂತ ಹುಂಬರವಾಡಿ, ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಯುಎಸ್ಎಂ ಕೆಎಲ್ಇ ನಿರ್ದೇಶಕ ಡಾ. ರಾಜಶೇಖರ, ಕೆಎಲ್ಇ ಶತಮಾನ ಚಾರಿಟೇಬಲ್ ಆಸ್ಪತ್ರೆ ನಿರ್ದೇಶಕ ಡಾ. ಎಸ್.ಸಿ. ಧಾರವಾಡ ಉಪಸ್ಥಿತರಿರುವರು.
ಬೆಳಗಾವಿಯ ಕೆಎಲ್ಇ ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿರುವ ಕೆಎಲ್ಇ ವೆಲ್ ನೆಸ್ ಸೆಂಟರ್ ಕೈಗಾರಿಕೆಗಳ ಕಾರ್ಮಿಕರು, ಅವರ ಕುಟುಂಬದ ಸದಸ್ಯರಿಗೆ ಮತ್ತು ಅವಶ್ಯವಿರುವ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲಿದೆ. ಇದೇ ಮೊದಲ ಬಾರಿ ಈ ಪ್ರದೇಶದಲ್ಲಿ ಮೂರು ವಿಷೇಷತೆಗಳನ್ನು ಹೊಂದಿರುವ ಆರೋಗ್ಯ ಸೇವೆಗಳನ್ನು ನೀಡಲಾಗುತ್ತಿದೆ.
ಇಲ್ಲಿ ಆಲೊಪಥಿ, ಆಯುರ್ವೇದ ಮತ್ತು ಹೋಮಿಯೋಪಥಿ ವೈದ್ಯರು ತಮ್ಮ ಸೇವೆಗಳನ್ನು ನೀಡುವುದರೊಂದಿಗೆ ತುರ್ತು ಸೇವೆಗಳು, ಆ್ಯಂಬ್ಯುಲೆನ್ಸ್ ಸೇವೆ, 24 ಗಂಟೆಗಳ ಔಷಧಾಲಯ ಹಾಗೂ ಭೌತಿಕ ಚಿಕಿತ್ಸೆ (ಫಿಸಿಯೊಥೆರಪಿ) ಕೂಡ ನೀಡಲಾಗುತ್ತದೆ ಎಂದು ಕೆಎಲ್ಇ ಶತಮಾನೋತ್ಸವ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ