ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪಟ್ಟಣದ ಹಳೆಯ ಪೊಲೀಸ್ ಠಾಣೆಯ ಆವರಣದಲ್ಲಿ ನಿರ್ಮಿಸಿದ ಖಾನಾಪುರ ಪೊಲೀಸ್
ಠಾಣೆಯ ಹೊಸ ಕಟ್ಟಡವನ್ನು ಶಾಸಕಿ ಡಾ.ಅಂಜಲಿ ನಿಂಬಾಳಕರ ಶನಿವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಖಾನಾಪುರ ಪೊಲೀಸ್ ಠಾಣೆ 104 ಚದರ
ಕಿಲೋ ಮೀಟರ್ ಪ್ರದೇಶದಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಈ ಠಾಣೆಯ
ವ್ಯಾಪ್ತಿಯಲ್ಲಿ ವಿಶಾಲವಾದ ಭೂ ಪ್ರದೇಶ ಬರುವ ಕಾರಣ ಪೊಲೀಸ್ ಅಧಿಕಾರಿಗಳು ಮತ್ತು
ಸಿಬ್ಬಂದಿ ಕೆಲಸದ ಒತ್ತಡ ಹೊಂದಿದ್ದಾರೆ. ಇವರ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ
ಜಾಂಬೋಟಿಯಲ್ಲಿ ಹೊಸದಾಗಿ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವ ಬಗ್ಗೆ ಸರ್ಕಾರದ
ಗಮನವನ್ನು ಸೆಳೆಯಲಾಗಿದೆ ಎಂದರು.
ಬೆಳಗಾವಿ ಎಸ್.ಪಿ ಡಾ.ಸಂಜೀವ ಪಾಟೀಲ ಮಾತನಾಡಿ, ಖಾನಾಪುರ ಪೊಲೀಸ್ ಠಾಣೆಯ ಹೊಸ
ಕಟ್ಟಡವನ್ನು ಪೊಲೀಸ್ ಗೃಹಮಂಡಳಿ ವತಿಯಿಂದ 1.54 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಎರಡು ಅಂತಸ್ತಿನ ಹೊಸ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳ ಕೊಠಡಿಗಳು, ಸ್ವಾಗತಕಾರರ
ಕೊಠಡಿ, ಕಂಪೂಟರ್ ರೂಂ, ದಾಖಲೆ ಕೊಠಡಿ, ವಿಶ್ರಾಂತಿ ಕೊಠಡಿ ಮತ್ತು ವಿಚಾರಣಾಧೀನ
ಪುರುಷ ಮತ್ತು ಮಹಿಳಾ ಕೈದಿಗಳ ಕೊಠಡಿಗಳಿವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ ನಾಗರಾಜ್, ಪಟ್ಟಣ ಪಂಚಾಯ್ತಿ ಅಧ್ಯಕ್ಷ
ನಾರಾಯಣ ಮಯೇಕರ, ಸಾಮಾಜಿಕ ಕಾರ್ಯಕರ್ತರಾದ ರವಿ ಕಾಡಗಿ, ಲಿಯಾಕತ್ ಬಿಚ್ಚುನವರ, ಪಟ್ಟಣ
ಪಂಚಾಯ್ತಿ ಸದಸ್ಯರಾದ ಲಕ್ಷ್ಮಣ ಮಾದಾರ, ಅಪ್ಪಯ್ಯ ಕೊಡೊಳಿ, ಪಟ್ಟಣ ಪಂಚಾಯ್ತಿ
ಮುಖ್ಯಾಧಿಕಾರಿ ರಾಜು ವಠಾರ, ಎ.ಎಸ್.ಪಿ ವೇಣುಗೋಪಾಲ, ಡಿ.ಎಸ್.ಪಿ ರವಿ ನಾಯ್ಕ,
ಇನ್ಸಪೆಕ್ಟರ್ ರಾಮಚಂದ್ರ ನಾಯ್ಕ ಸೇರಿದಂತೆ ಪೊಲೀಸ್ ಠಾಣೆಯ ಸಿಬ್ಬಂದಿ, ಪೊಲೀಸ್
ಕುಟುಂಬದ ಸದಸ್ಯರು, ಸಾರ್ವಜನಿಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ