ಗೋಕಾಕ-ಮೂಡಲಗಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಪ್ರಗತಿವಾಹಿನಿ ಸುದ್ದಿ, ಗೋಕಾಕ :
ವರುಣನ ರುದ್ರನರ್ತನದಿಂದ ಪ್ರವಾಹ ಸಂತ್ರಸ್ಥರಿಗೆ ತಾತ್ಕಾಲಿಕ ರೂಪದಲ್ಲಿ ಪ್ರತಿ ಕುಟುಂಬಕ್ಕೆ ರೂ. ೩೮೦೦ ಗಳನ್ನು ನೀಡಲಾಗುತ್ತಿದೆ. ಸಂತ್ರಸ್ಥರ ಬಟ್ಟೆ ಹಾಗೂ ಪಾತ್ರೆಗಳಿಗಾಗಿ ಈ ಹಣ ಸಾಕಾಗುವುದಿಲ್ಲ. ಆದ್ದರಿಂದ ಸಂತ್ರಸ್ಥರಿಗೆ ೧೦ ಸಾವಿರ ರೂ.ಗಳವರೆಗೆ ತಾತ್ಕಾಲಿಕ ಪರಿಹಾರವನ್ನು ನೀಡಬೇಕೆಂದು ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಇಲ್ಲಿಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ಮಂಗಳವಾರ ಸಂಜೆ ಪ್ರವಾಹದ ಹಿನ್ನೆಲೆಯಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ತಾತ್ಕಾಲಿಕ ೧೦ ಸಾವಿರ ರೂ. ಪರಿಹಾರಧನ ನೀಡಿದರೆ ಸಂತ್ರಸ್ಥರಿಗೆ ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿಗಳಲ್ಲಿ ಕೋರಿಕೊಂಡರು.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಸಂತ್ರಸ್ಥರಿಗೆ ೧೦ ಸಾವಿರ ರೂ. ತಾತ್ಕಾಲಿಕ ಪರಿಹಾರವನ್ನು ಘೋಷಿಸಿದ್ದಾರೆ. ಆದರೆ ಸರ್ಕಾರ ಆದೇಶದ ಪ್ರಕಾರ ಕೇವಲ ೩೮೦೦ ರೂ.ಗಳಲ್ಲಿ ೨ ಸಾವಿರ ರೂ. ಪಾತ್ರೆಗಳು ಹಾಗೂ ೧೮೦೦ ರೂ. ಬಟ್ಟೆಗಳ ಖರೀದಿಗಾಗಿ ನೀಡುತ್ತಿದ್ದು ಈ ಹಣ ಸಂತ್ರಸ್ಥರಿಗೆ ಸಾಲುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಕೆಲವೆಡೆ ಘೋಷಿಸಿದಂತೆ ಕನಿಷ್ಠ ೧೦ ಸಾವಿರ ರೂ.ಗಳ ಹಣವನ್ನು ಸಂತ್ರಸ್ಥರ ಖಾತೆಗಳಿಗೆ ನೀಡುವಂತೆ ಸಿಎಂ ಯಡಿಯೂರಪ್ಪ ಅವರಲ್ಲಿ ಕೋರಿದರು.
ಮನೆಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಸರ್ಕಾರ ೫ ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ. ಭಾಗಶಃ ಕುಸಿತಗೊಂಡಿದ್ದರೆ ಅವರಿಗೆ ಲಕ್ಷ ರೂ.ಗಳನ್ನು ನೀಡಲಾಗುವುದು. ನಿಜವಾದ ಸಂತ್ರಸ್ಥರನ್ನು ಗುರುತಿಸಿ, ಸರ್ಕಾರದ ಸೌಲಭ್ಯಗಳು ಸಂತ್ರಸ್ಥರಿಗೆ ದೊರಕಬೇಕು. ಸುಳ್ಳು ಸಮೀಕ್ಷೆ ಅಥವಾ ತಪ್ಪು ಮಾಹಿತಿ ನೀಡಿದರೆ ಸುಮ್ಮನಿರುವುದಿಲ್ಲ. ಸಂತ್ರಸ್ಥರ ನೆರವಿಗೆ ಅಧಿಕಾರಿಗಳು ದಿನದ ೨೪ ತಾಸು ಜಾಗೃತರಾಗಿ ಕರ್ತವ್ಯ ನಿರ್ವಹಿಸುವಂತೆ ಅವರು ಸೂಚನೆ ನೀಡಿದರು.
6000 ಮನೆ ಕುಸಿತ
ಆ.೨ ರಿಂದ ನಿರಂತರವಾಗಿ ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು, ಬಳ್ಳಾರಿ ನಾಲಾದಿಂದ ಭಾರೀ ಪ್ರಮಾಣದ ನೀರು ಹರಿದು ೩೧ ಗ್ರಾಮಗಳು ಜಲಾವೃತಗೊಂಡಿವೆ. ಈ ಗ್ರಾಮಗಳ ಸಂತ್ರಸ್ಥರಿಗೆ ವಾಸಿಸಲಿಕ್ಕೆ ತಾತ್ಕಾಲಿಕ ಶೆಡ್‌ಗಳನ್ನು ವಾರದೊಳಗೆ ನಿರ್ಮಿಸಿಕೊಡಲಾಗುವುದು. ಅಧಿಕಾರಿಗಳು ತಮ್ಮ ದೈನಂದಿನ ಕೆಲಸಗಳನ್ನು ಬದಿಗಿಟ್ಟು, ಸಂತ್ರಸ್ಥರ ಅಹವಾಲು ಸ್ವೀಕರಿಸಿ ಅವರಿಗೆ ಎಲ್ಲ ರೀತಿಯ ನೆರವು ನೀಡುವ ಕೆಲಸ ಮಾಡಬೇಕು. ನೆರೆ ಪ್ರವಾಹದಿಂದ ಆದ ಹಾನಿಯ ಬಗ್ಗೆ ಅಧಿಕಾರಿಗಳು ಸಮಗ್ರ ವರದಿ ನೀಡಬೇಕು. ಇದರಲ್ಲಿ ಲೋಪದೋಷ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಖಡಕ್ ವಾರ್ನಿಂಗ್ ಮಾಡಿದರು.
ಅರಭಾವಿ ಮತಕ್ಷೇತ್ರದ ನದಿ ತೀರದ ಸುಮಾರು ೬೦೦೦ ಮನೆಗಳು ಕುಸಿದು ಬಿದ್ದಿವೆ. ಈ ಸಂಖ್ಯೆ ಇನ್ನೂ ಹೆಚ್ಚು-ಕಡಿಮೆಯಾಗಬಹುದು. ಇದಕ್ಕಾಗಿಯೇ ಅಧಿಕಾರಿಗಳು ಕುಸಿತದ ಮನೆಗಳ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಬೇಕು. ಉಪವಿಭಾಗಾಧಿಕಾರಿಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಂತ್ರಸ್ಥರ ಜಾನುವಾರುಗಳಿಗೆ ಹಸಿ ಮೇವಿನ ಕೊರತೆ ಎದುರಾಗಿದ್ದು, ಮೇವಿನ ಸಮಸ್ಯೆಯನ್ನು ಬಗೆ ಹರಿಸುವಂತೆ ಸೂಚಿಸಿದ ಅವರು, ೨೩೦೦ ರೂ.ಗಳಿಂದ ೪ ಸಾವಿರ ರೂ.ಗಳವರೆಗೆ ದರ ಹೆಚ್ಚಿಸಲಾಗಿದೆ. ಆದ್ದರಿಂದ ರೈತರಿಂದ ಮೇವನ್ನು ಖರೀದಿಸಿ ಜಾನುವಾರುಗಳಿಗೆ ಮೇವಿನ ಕೊರತೆಯನ್ನು ನೀಗಿಸುವಂತೆ ಸೂಚಿಸಿದರು.
60 ಶಾಲೆಗಳು ಜಲಾವೃತ
೬೦ಕ್ಕೂ ಅಧಿಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರ ವರದಿಯನ್ನು ವಾರದೊಳಗೆ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರವಾಹದಿಂದ ಗೋಕಾಕ ಮತ್ತು ಮೂಡಲಗಿ ತಾಲೂಕಿನ ೩೧ ಗ್ರಾಮಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳಾಗಿವೆ. ಆದ್ದರಿಂದ ಸಾರ್ವಜನಿಕರಿಗೆ ನೀರಿನ ಸೌಲಭ್ಯ ಒದಗಿಸಲು ವಾರದೊಳಗೆ ಅಂದಾಜು ಪಟ್ಟಿಯೊಂದಿಗೆ ವರದಿ ಸಲ್ಲಿಸಬೇಕು. ಒಟ್ಟಿನಲ್ಲಿ ೧೭೫ ಕಿ.ಮೀ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು, ಸೇತುವೆಗಳು ಹಾಗೂ ಸರ್ಕಾರಿ ಕಟ್ಟಡಗಳು ಹಾಳಾಗಿವೆ. ಅಲ್ಲದೇ ಸುಮಾರು ೩೦೦ಕ್ಕೂ ಅಧಿಕ ಕಿ.ಮೀ ಗ್ರಾಮೀಣ ರಸ್ತೆಗಳು ಸಹ ಹಾಳಾಗಿದ್ದು, ವಾರದೊಳಗೆ ವರದಿ ನೀಡುವಂತೆ ಸೂಚಿಸಿದರು.
ಗ್ರಾಮಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತಾ ಕ್ರಮಗಳನ್ನು ಆರೋಗ್ಯ ಇಲಾಖೆಯವರು ಕೈಗೊಳ್ಳಬೇಕು. ಸಂತ್ರಸ್ಥರ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಲು ವೈದ್ಯರು ನಿಗಾವಹಿಸಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಕೂಡದು ಎಂದು ಸೂಚನೆ ನೀಡಿದರು. ಪ್ರವಾಹದಿಂದ ವಿದ್ಯುತ್ ಟ್ರಾನ್ಸ್‌ಫಾರ್ಮರಗಳು ಹಾಳಾಗಿವೆ. ವಿದ್ಯುತ್ ಕಂಬಗಳು ನೆಲಕ್ಕೆ ಅಪ್ಪಳಿಸಿವೆ. ಕೂಡಲೇ ಇವುಗಳ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಯುದ್ದೋಪಾದಿಯಲ್ಲಿ ಕೆಲಸ ಮಾಡಿ
ಇದೇ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೆರೆ ಸಂತ್ರಸ್ಥರಿಗೆ ಅನುಕೂಲ ಕಲ್ಪಿಸಿಕೊಡಲು ಮಾಡಬೇಕಾಗಿರುವ ಕೆಲಸಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಯುದ್ಧೋಪಾಯದಲ್ಲಿ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಡಾ.ಶಿವಾನಂದ ಭಜಂತ್ರಿ ಮಾತನಾಡಿ, ಸಂತ್ರಸ್ಥರ ವಿಷಯದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಬೇಡಿ. ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಆ ಹಣವನ್ನು ಸಂತ್ರಸ್ಥರಿಗೆ ಮುಟ್ಟಿಸುವ ಕೆಲಸ ನಡೆಯಬೇಕು. ಅಧಿಕಾರಿಗಳು ಜಾಗೃತರಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.
ಗೋಕಾಕ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಬೆಳಗಾವಿ ಜಿಪಂ ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ, ಮೂಡಲಗಿ ತಾಲೂಕಾ ನೋಡಲ್ ಅಧಿಕಾರಿ ಜಗದೀಶ ಐ.ಎಚ್, ಗೋಕಾಕ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮೂಡಲಗಿ ತಹಶೀಲ್ದಾರ ಮುರಳೀಧರ ತಳ್ಳಿಕೇರಿ, ತಾಪಂ ಇಓ ಬಸವರಾಜ ಹೆಗ್ಗನಾಯಿಕ, ವಿವಿಧ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ