*ಖಾನಾಪುರ ತಾಲ್ಲೂಕಿನ 8 ಅಮೃತ ಸರೋವರ ಆವರಣಗಳಲ್ಲಿ ಧ್ವಜಾರೋಹಣ*
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ತಾಲ್ಲೂಕಿನ ಕಕ್ಕೇರಿ, ಲಿಂಗನಮಠ, ಗರ್ಲಗುಂಜಿ, ಮಂತುರ್ಗಾ, ಶಿಂಧೊಳ್ಳಿ ಸೇರಿದಂತೆ 8 ಗ್ರಾಮಗಳ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಭಿವೃದ್ಧಿಗೊಂಡ ಅಮೃತ ಸರೋವರ ಕೆರೆಗಳ ಆವರಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಮಂಗಳವಾರ ರಾಷ್ಟ್ರಧ್ವಜಾರೋಹಣವನ್ನು ನೆರವೇರಿಸಲಾಯಿತು.
ಕಕ್ಕೇರಿ ಅಮೃತ ಸರೋವರದ ಆವರಣದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ರವಿ ಬಂಗಾರೆಪ್ಪನವರ, ಶಿಂಧೊಳ್ಳಿ ಅಮೃತ ಸರೋವರದ ಆವರಣದಲ್ಲಿ ಮಾಜಿ ಸೈನಿಕ ಸುಹಾಸ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಉಳಿದೆಡೆಗಳಲ್ಲಿ ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಜಿ ಸೈನಿಕರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಗ್ರಾಮ ಪಂಚಾಯ್ತಿಗಳ ವತಿಯಿಂದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.
ವೀರಯೋಧರ ಗೌರವಾರ್ಥವಾಗಿ ಅಮೃತ ಸರೋವರಗಳ ಆವರಣದಲ್ಲಿ ಶಿಲಾಫಲಕಗಳನ್ನು ಅನಾವರಣಗೊಳಿಸಿ ಆಹ್ವಾನಿತರಿಂದ ಸರೋವರದ ಸುತ್ತಮುತ್ತ ಸಸಿ ನೆಡುವ ಮೂಲಕ ಅಮೃತ ವಾಟಿಕಾ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಸರೋವರದ ಆವರಣದಲ್ಲಿ ನನ್ನ ನೆಲ ನನ್ನ ದೇಶ ಅಭಿಯಾನದ ಅಂಗವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು. ಅಮೃತ ಕಲಶದಲ್ಲಿ ಮಣ್ಣು ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ ಇಒ ವೀರನಗೌಡ ಏಗನಗೌಡರ, ನರೇಗಾ ಸಹಾಯಕ ನಿರ್ದೇಶಕ ಶೇಖರ ಹಿರೇಸೋಮಣ್ಣವರ, ಲಿಂಗನಮಠ ಗ್ರಾಮ ಪಂಚಾಯ್ತಿ ಅಧ್ಯಕ್ಷ ಕಾಸೀಂ ಹಟ್ಟಿಹೊಳಿ, ಶಿಂಧೊಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರತಿಕ್ಷಾ ಕಾರ್ಲೇಕರ, ಪಿಡಿಒ
ಪ್ರಭಾಕರ ಭಟ್, ಸಂಜೀವ ಬೊಂಗಾಳೆ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂಚಿ, ಐಇಸಿ ಸಂಯೋಜಕ ಮಹಾಂತೇಶ ಜಾಂಗಟಿ ಸೇರಿದಂತೆ ಆಯಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರು, ಸಿಬ್ಬಂದಿ, ಶಿಕ್ಷಕರು, ಮಕ್ಕಳು, ನರೇಗಾ ಫಲಾನುಭವಿಗಳು
ಹಾಗೂ ಗ್ರಾಮಸ್ಥರು ಹಾಜರಿದ್ದರು.
ಖಾನಾಪುರ ತಾಲ್ಲೂಕಿನ ಶಿಂಧೊಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಮೃತ ಸರೋವರದಆವರಣದಲ್ಲಿ ಮಂಗಳವಾರ ಜರುಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ನರೇಗಾ ಫಲಾನುಭವಿಗಳು ಮತ್ತು ಸ್ಥಳೀಯರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ