ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಉಭಯ ದೇಶಗಳ ನಡುವಿನ ಸಂಘರ್ಷ ಹಿನ್ನೆಲೆಯಲ್ಲಿ ಬಿಕ್ಕಟ್ಟಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಮಹತ್ವದ ನಿರ್ಧಾರ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆದಿದೆ. ಸಭೆಯಲ್ಲಿ ಸರ್ಕಾರದ ರಾಜತಾಂತ್ರಿಕ ಮತ್ತು ಮಿಲಿಟರಿ ಪ್ರಯತ್ನಗಳ ಬಗ್ಗೆ, ದೇಶದ ಗಡಿ ರಕ್ಷಣೆ ಕುರಿತು ಒಮ್ಮತ ನಿರ್ಧಾರಕ್ಕೆ ಬರುವ ನಿರೀಕ್ಷೆಯಿದೆ.
ಜೂನ್. 15 ರ ರಾತ್ರಿ ಲಡಾಖ್‌ನ ಗಾಲ್ವಾನ್ ಕಣಿವೆ ಬಳಿಯ ಅಂತಾರಾಷ್ಟ್ರೀಯ ನಿಯಂತ್ರಣ ರೇಖೆಯ ಉದ್ದಕ್ಕೂ ಭಾರತ ಮತ್ತು ಚೀನಾ ಯೋಧರ ನಡುವೆ ಘರ್ಷಣೆ ಉಂಟಾಗಿದೆ. ಈ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟಿದ್ದು ಕೇಂದ್ರ ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಸಲುವಾಗಿ ಇಂದು ಸರ್ವ ಪಕ್ಷಗಳ ಸಭೆ ಕರೆದಿದೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿವಿಧ ಪಕ್ಷಗಳ ಮುಖ್ಯಸ್ಥರಿಗೆ ಗಾಲ್ವಾನ್ ಕಣಿವೆಯ ಘಟನೆ ಮತ್ತು ಭಾರತದ ಸನ್ನದ್ಧತೆಯ ಕುರಿತು ಮಾಹಿತಿ ನೀಡಲಿದ್ದಾರೆ. ಇನ್ನು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಷಯದ ಬಗ್ಗೆ ನಾಯಕರಿಗೆ ಸಂಕ್ಷಿಪ್ತ ಮಾಹಿತಿ ನೀಡಲಿದ್ದಾರೆ ಮತ್ತು ಗಡಿ ಬಿಕ್ಕಟ್ಟು ಸೇರಿದಂತೆ ಹಿಂದಿನ ಮತ್ತು ಪ್ರಸ್ತುತ ರಾಜತಾಂತ್ರಿಕ ಪ್ರಯತ್ನಗಳ ಕುರಿತ ವಿವರಗಳನ್ನು ನೀಡಲಿದ್ದಾರೆ ಎನ್ನಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ