
ರೋಹಿತ್ ಪಡೆಗೆ ಸುಲಭ ತುತ್ತಾದ ನ್ಯೂಜಿಲೆಂಡ್
ಪ್ರಗತಿವಾಹಿನಿ ಸುದ್ದಿ, ದುಬೈ : ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ (79ರನ್, 98 ಎಸೆತ, 4 ಬೌಂಡರಿ, 2 ಸಿಕ್ಸರ್) ಸಮಯೋಚಿತ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ವರುಣ್ ಚಕ್ರವರ್ತಿ (42ಕ್ಕೆ 5) ಮಾರಕ ದಾಳಿ ನೆರವಿನಿಂದ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ತನ್ನ ಕಡೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 44 ರನ್‌ಗಳಿಂದ ಮಣಿಸಿತು.
ಇದರೊಂದಿಗೆ ರೋಹಿತ್ ಶರ್ಮ ಪಡೆ ಲೀಗ್‌ನಲ್ಲಿ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಆಸ್ಟೇಲಿಯಾ ತಂಡಗಳು ಎದುರಾಗಲಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ನೆರವಿನಿಂದ 9 ವಿಕೆಟ್‌ಗೆ 249 ರನ್‌ಗಳಿಸಿತು. ಬಳಿಕ ನ್ಯೂಜಿಲೆಂಡ್ ತಂಡ ಕೇನ್ ವಿಲಿಯಮ್ಸನ್ (81ರನ್) ಏಕಾಂಗಿ ಹೋರಾಟದ ನಡುವೆಯೂ 45.3 ಓವರ್‌ಗಳಲ್ಲಿ 205ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಸ್ಪಿನ್ ಬೌಲರ್‌ಗಳ ದಾಳಿಗೆ ನಲುಗಿದ ಕಿವೀಸ್ ಬ್ಯಾಟರ್‌ಗಳು ಕನಿಷ್ಠ ಪ್ರತಿರೋಧ ತೋರಲು ವಿಫಲರಾದರು.
- ಭಾರತಕ್ಕೆ ಶ್ರೇಯಸ್ ಆಸರೆ:
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಘಾತ ಕಂಡಿತು. ಕೇವಲ 30 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು. ಬಳಿಕ ಅಕ್ಷರ್ ಪಟೇಲ್ (42ರನ್) ಹಾಗೂ ಶ್ರೇಯಸ್ ಅಯ್ಯರ್ ಜೋಡಿ 4ನೇ ವಿಕೆಟ್‌ಗೆ 98 ರನ್ ಜೊತೆಯಾಟವಾಡಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ರಾಹುಲ್ (23), ಹಾರ್ದಿಕ್ ಪಾಂಡ್ಯ (45) ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಸಂಕ್ಷೀಪ್ತ ಸ್ಕೋರ್:
ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 249 (ಶ್ರೇಯಸ್ ಅಯ್ಯರ್ 79, ಅಕ್ಷರ್ ಪಟೇಲ್ 42, ರಾಹುಲ್ 23, ಹಾರ್ದಿಕ್ ಪಾಂಡ್ಯ 45, ಮ್ಯಾಟ್ ಹೆನ್ರಿ 42ಕ್ಕೆ 5),
ನ್ಯೂಜಿಲೆಂಡ್: 45.3 ಓವರ್‌ಗಳಲ್ಲಿ 205 (ಕೇನ್ ವಿಲಿಯಮ್ಸನ್ 81, ಮಿಚಲ್ ಸ್ಯಾಂಟ್ನರ್ 28, ವುಣ್ ಚಕ್ರವರ್ತಿ 42ಕ್ಕೆ5, ಕುಲದೀಪ್ ಯಾದವ್ 56ಕ್ಕೆ2).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ