*ಭಾರತಕ್ಕೆ ವಿಶ್ವದ ಸೆಮಿ ಕಂಡಕ್ಟರ್ ಹಬ್ ಆಗುವ ಸಾಮರ್ಥ್ಯವಿದೆ :ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್*
ಪ್ರಗತಿವಾಹಿನಿ ಸುದ್ದಿ: ಭಾರತಕ್ಕೆ ವಿಶ್ವದ ಸೆಮಿ ಕಂಡಕ್ಟರ್ ಹಬ್ ಆಗುವ ಸಾಮರ್ಥ್ಯವಿದೆ ಎಂದು ವಿ ಟಿ ಯು ಕುಲಪತಿ ಪ್ರೊ ವಿದ್ಯಾಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನೀರ್ಸ್ ನ ವಿ ಟಿ ಯು ವಿದ್ಯಾರ್ಥಿ ವಿಭಾಗ ಇತ್ತೀಚೆಗೆ ಹಮ್ಮಿಕೊಂಡಿದ್ದ “ಸರ್ಕ್ಯೂಟ್ ಕ್ರಾಫ್ಟಿಂಗ್” ಇಂಡಸ್ಟ್ರಿ ಲೀಡರ್ಸ್ ಜೊತೆ ಒಂದು ದಿನ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡುತಿದ್ದರು.
ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್ ಎಸ್. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆನ್ಲೈನ್ ಮೂಲಕ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ತಂತ್ರಜ್ಞಾನಕ್ಕೆ ಬಳಸಿಕೊಳ್ಳುವ ಮೂಲಕ ಇವತ್ತಿನ ಔದ್ಯೋಗಿಕ ವಲಯದಲ್ಲಿ ಕ್ರಾಂತಿಕಾರಕ ಬೆಳವಣಿಗೆಯನ್ನು ನೋಡುತ್ತಿದ್ದೇವೆ ಎಂದು ಹೇಳಿದರು.ಸೆಮಿಕಂಡಕ್ಟರ್ ಮತ್ತು ಸಂಬಂಧಿತ ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಮಾತನಾಡಿದ ಅವರು ವೇಗವಾದ ಮತ್ತು ಹೆಚ್ಚು ಶಕ್ತಿಶಾಲಿ ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳ ರಚನೆಯು ಸಾಮಾನ್ಯವಾಗಿ ಹೊಸ ಕಂಪ್ಯೂಟರ್‌ಗಳ ವಿನ್ಯಾಸಕ್ಕೆ ಕಾರಣವಾಯಿತು ಇದೆ ಮುಂದುವರೆದು ಹೊಸ ಸ್ಮಾರ್ಟ್‌ಫೋನ್‌ಗಳು ಮತ್ತು ಇತರ ಸಾಧನಗಳ ರಚನೆಗೆ ಕಾರಣವಾಯಿತು. ಈ ಕ್ಷೇತ್ರದಲ್ಲಿನ ತ್ವರಿತ ಬೆಳವಣಿಗೆ ಸೆಮಿಕಂಡಕ್ಟರ್ ಚಿಪ್ ಗಳ ರಚನೆಯಲ್ಲಿ ಒಂದು ಕ್ಷಿಪ್ರ ರೂಪಾಂತರಕ್ಕೆ ಕಾರಣವಾಗುತ್ತಿದೆ. ಸೆಮಿಕಂಡಕ್ಟರ್ ಚಿಪ್ ಕ್ಷೇತ್ರವು ಒಂದು ಚಿಪ್ ಬಳಕೆಯ ವಿಧಾನದಿಂದ ನಿಧಾನವಾಗಿ ದೂರ ಸರಿಯುತಿದ್ದು ವಿವಿಧತೆ, ವೈವಿಧ್ಯತೆ ಮತ್ತು ನಾವೀನ್ಯತೆಯ ಹೊಸ ರಚನಾ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಈ ರೂಪಾಂತರದ ಚಿಪ್ ಗಳ ಬದಲಾಗಿ ಚಿಪ್ ಗಳ ಗುಂಪು ಅಂದರೆ ಚಿಪ್ ಲೆಟ್ ಗಳ ರೂಪದಲ್ಲಿ ವಿನ್ಯಾಸಗೊಳ್ಳುತ್ತಿವೆ ಎಂದು ಹೇಳಿದರು. ಈ ಹೊಸ ವಿಧಾನವು ಶಕ್ತಿಯುತ ಪ್ರೊಸೆಸರ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಈ ವಿಶೇಷ ಚಿಪ್ಲೆಟ್‌ಗಳು ಅರೆವಾಹಕ ಉತ್ಪನ್ನಗಳ ಭವಿಷ್ಯವನ್ನು ನಿರ್ಧರಿಸುವುದರಿಂದ ಈ ಕ್ಷೇತ್ರದಲ್ಲಿ ಕೌಶಲ್ಯ ಮತ್ತು ಜ್ಞಾನವುಳ್ಳ ಪದವೀಧರರ ಅವಶ್ಯಕತೆ ತುಂಬಾ ಇದೆ ಎಂದು ಹೇಳಿದರು. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತ ಸರ್ಕಾರದ ಯೋಜನೆಗಳನ್ನು ಒತ್ತಿ ಹೇಳಿದ ಅವರು ಭಾರತ ಇನ್ನು ಕೆಲವೇ ವರ್ಷಗಳಲ್ಲಿ ಸೆಮಿಕಂಡಕ್ಟರ್ ಹಬ್ ಆಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿ ಈ ಬೆಳವಣಿಗೆ ರಾಷ್ಟ್ರದ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲಿದೆ ಎಂದು ಹೇಳಿದರು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಸಂಶೋಧನೆ ಮತ್ತು ನವೀನ ಮನೋಭಾವವನ್ನು ಉತ್ತೇಜಿಸಲು ವಿ ಟಿ ಯು ನಲ್ಲಿ ಸೆಮಿಕಂಡಕ್ಟರ್ ಚಿಪ್ ಡಿಸೈನ್ ವಿಷಯದ ಮೇಲೆ ಬಿ.ಟೆಕ್ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಗೌರವ ಅತಿಥಿಗಳಾದ ಆಗಮಿಸಿದ್ದ ಹುಬ್ಬಳ್ಳಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಬಸವರಾಜ ಎಸ್.ಅನಾಮಿ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲಿ ನುರಿತ ಮಾನವ ಸಂಪನ್ಮೂಲದ ಕೊರತೆ ಇರುವುದರಿಂದ ಅಗತ್ಯ ಕೌಶಲಗಳನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಅಂತಹ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಹೇಳಿದರು.
ಮತ್ತೊಬ್ಬ ಗೌರವ ಅತಿಥಿ. IEEE ಬೆಂಗಳೂರು ವಿಭಾಗದ CAS ವಿಭಾಗದ ಅಧ್ಯಕ್ಷರಾದ ಶ್ರೀ ಅಯಾನ್ ದತ್ತಾ ಅವರುಈ ಸಂದರ್ಭದಲ್ಲಿ ಮಾತನಾಡಿದ ಕೆಲವು ಉದಾಹರಣೆಗಳೊಂದಿಗೆ ಚಿಪ್ ವಿನ್ಯಾಸದಲ್ಲಿ ಕೌಶಲ್ಯಪೂರ್ಣ ಎಂಜಿನಿಯರ್‌ಗಳ ಕೊರತೆಯ ಪ್ರಮಾಣವನ್ನು ಎತ್ತಿ ತೋರಿಸಿದರು.
ಈ ಸಂದರ್ಭದಲ್ಲಿ ವಿಟಿಯು ಕುಲಸಚಿವರಾದ ಡಾ.ಬಿ.ಇ.ರಂಗಸ್ವಾಮಿ ಮಾತನಾಡಿ, ಕೈಗಾರಿಕಾ ಕ್ರಾಂತಿ ಕುರಿತು ಪ್ರಸ್ತಾಪಿಸಿದ ಅವರು, ರಾಷ್ಟ್ರದಲ್ಲಿರುವ ಇರುವ ಯುವ ಸಮೂಹವನ್ನು ಸರಿಯಾಗಿ ಬಳಸಿಕೊಂಡು ನಾವು ಸೆಮಿಕಂಡಕ್ಟರ್ ಹಬ್ ಆಗುವ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೇಳಿದರು.
ವಿಟಿಯು ಮೌಲ್ಯಮಾಪನ ಕುಲಸಚಿವರಾದ ಪ್ರೊ.ಟಿ.ಎನ್. ಶ್ರೀನಿವಾಸ ಮಾತನಾಡಿ ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆಯ ಕನಸು ಕಾಣಬೇಕು, ಉನ್ನತ ಗುರಿಗಳನ್ನು ಹೊಂದಬೇಕು ಮತ್ತು ಉದ್ಯೋಗಕ್ಕಾಗಿ ಮಾತ್ರವಲ್ಲದೆ ಉದ್ಯಮಶೀಲತೆಯತ್ತ ಶ್ರಮಿಸಬೇಕು ಎಂದು ಕರೆ ನೀಡಿದರು.
ವಿಟಿಯುನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಅಧ್ಯಕ್ಷೆ ಡಾ.ಮೇಘನಾ ಕುಲಕರ್ಣಿ ಸ್ವಾಗತಿಸಿದರು, ಐಇಇಇ ಯ ಉತ್ತರ ಕರ್ನಾಟಕ ವಿಭಾಗದ ಪ್ರೊ.ರವಿ ಹೊಸಮನಿ ವಂದಿಸಿದರು. ಐಇಇಇ ಉತ್ತರ ಕರ್ನಾಟಕ ಚೇರ್ ಪ್ರೊ.ಅಭಿಷೇಕ್ ದೇಶಮುಖ್, ಉದ್ಯಮ ಪ್ರತಿನಿಧಿಗಳು ಮತ್ತು ಉತ್ತರ ಕರ್ನಾಟಕದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ