ಪ್ರಗತಿವಾಹಿನಿ ಸುದ್ದಿ, ಗೋಕಾಕ: ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ನಂತರ ರಾಷ್ಟ್ರಕ್ಕೆ ಸಮರ್ಥ ನಾಯಕತ್ವ ನೀಡಿದ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಆರ್‌ಎಸ್‌ಎಸ್ ಗರಡಿಯಲ್ಲಿ ಪಳಗಿರುವ ಮೋದಿ ಅವರ ಬದ್ಧತೆ, ಪ್ರಾಮಾಣಿಕತೆ ಮತ್ತು ಶಿಸ್ತಿನ ಆಡಳಿತದ ಮೂಲಕ ವಿಶ್ವದ ಶ್ರೇಷ್ಠ ಪ್ರಧಾನಿಗಳಲ್ಲಿ ಒಬ್ಬರಾಗಿದ್ದಾರೆಂದು ಆರ್‌ಎಸ್‌ಎಸ್ ಹಿರಿಯ ಮುಖಂಡ ಎಮ್.ಡಿ.ಚುನಮರಿ ಹೇಳಿದರು.
ಗುರುವಾರ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ೭೦ನೇ ಹುಟ್ಟು ಹಬ್ಬದ ಪ್ರಯುಕ್ತ ಸಸಿಗೆ ನೀರುಣಿಸುವ ಮೂಲಕ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಧಾನಿಗಳ ಜನ್ಮ ದಿನದಂದು ದೇಶದಲ್ಲೆಡೆ ಸೇವಾ ಕಾರ್ಯಗಳನ್ನು ಬಿಜೆಪಿ ಕಾರ್ಯಕರ್ತರು ಹಮ್ಮಿಕೊಂಡಿರುವುದು ಮೋದಿ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಶತಮಾನದಷ್ಟು ಹಳೆಯದಾದ ರಾಮಜನ್ಮ ಭೂಮಿ ವಿವಾದ ಸುಸೂತ್ರವಾಗಿ ಬಗೆ ಹರಿಯಲು ಮೋದಿ ಅವರ ಪಾತ್ರ ದೊಡ್ಡದಿದೆ. ಸಂವಿಧಾನದ ೩೭೦ ಮತ್ತು ೩೫ನೇ ವಿಧಿಯನ್ನು ರದ್ದು ಮಾಡುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಕಾರಣಿಕರ್ತರಾಗಿದ್ದಾರೆ. ಆತ್ಮನಿರ್ಭರ ಮಾರ್ಗದಲ್ಲಿ ಪ್ರಧಾನಿ ಮೋದಿ ಅವರ ಆಡಳಿತಕ್ಕೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವದ ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೇರಿಕಾ ಸಹಿತ ಮೋದಿ ಅವರ ಮೋಡಿಗೆ ಒಳಗಾಗಿ ಭಾರತವಿಂದು ವಿಶ್ವಕ್ಕೆ ಗುರುವಾಗಿದೆ. ಮುಂದಿನ ದಿನಗಳಲ್ಲಿ ಮೋದಿ ಅವರು ಇಡೀ ಜಗತ್ತಿಗೆ ದೊಡ್ಡಣ್ಣನ ಸ್ಥಾನದಲ್ಲಿ ವಿಜೃಂಭಿಸಲಿದ್ದಾರೆಂದು ತಿಳಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಮಾತನಾಡಿ, ಪ್ರಧಾನಿಗಳ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ಸೇವಾ ಸಪ್ತಾಹ ಕಾರ್ಯಕ್ರಮ ನಡೆಯಲಿದ್ದು, ಪ್ರತಿ ಬೂತ್‌ಮಟ್ಟದ ಕಾರ್ಯಕರ್ತರು ಈ ಸೇವಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.
ಈ ಸಂದರ್ಭದಲ್ಲಿ ಅರಭಾಂವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಕೋಲ್ಹಾರ, ಜಿಲ್ಲಾ ಕಾರ್ಯದರ್ಶಿ ಮುತ್ತೆಪ್ಪ ಮನ್ನಾಪೂರ, ಅರಭಾಂವಿ ಮಂಡಲ ಎಸ್‌ಟಿ ಮೋರ್ಚಾ ಅಧ್ಯಕ್ಷ ಯಲ್ಲಾಲಿಂಗ ವಾಳದ, ಯುವ ಮೋರ್ಚಾ ಅಧ್ಯಕ್ಷ ಪ್ರಮೋದ ನುಗ್ಗಾನಟ್ಟಿ, ನ್ಯಾಯವಾದಿ ಮುತ್ತೆಪ್ಪ ಕುಳ್ಳೂರ, ಮುಖಂಡರಾದ ಬಸಲಿಂಗ ಕೆಳಗಡೆ, ಗುರುರಾಜ ಪಾಟೀಲ, ಗುತ್ತಿಗೆದಾರ ಪ್ರಕಾಶ ಕೊಂಗಾಲಿ, ಬಸವರಾಜ ಕಪರಟ್ಟಿ, ಪಾಂಡುರಂಗ ಮಹೇಂದ್ರಕರ, ಸಹದೇವ ಕಮತಿ, ಇಬ್ರಾಹಿಂ ಹುಣಶ್ಯಾಳ, ವಿವಿಧ ಮೋರ್ಚಾಗಳ ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ