ಉಭಯ ರಾಷ್ಟ್ರಗಳ ಒಪ್ಪಂದಕ್ಕೆ ಸಹಿ
ಪ್ರಗತಿವಾಹಿನಿ ಸುದ್ದಿ: ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಒಂದು ಹೆಜ್ಜೆ ಮುಂದಿರುವ ಭಾರತ ಇದೀಗ ಜಪಾನ್ ಗೆ ಹಸಿರು ಅಮೋನಿಯಾ ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದೆ.
ನವದೆಹಲಿಯಲ್ಲಿ ಉಭಯ ರಾಷ್ಟ್ರಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ, ಜಪಾನ್‌ಗೆ ಇದೇ ಮೊದಲ ಭಾರಿ ಹಸಿರು ಅಮೋನಿಯ ರಫ್ತು ಯೋಜನೆ ಆಫ್‌ಟೇಕ್ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಜಪಾನ್ ಗೆ ಹಸಿರು ಅಮೋನಿಯಾ ರಫ್ತು ಮಾಡುವ ಈ ಒಪ್ಪಂದ ಹಸಿರು ಹೈಡ್ರೋಜನ್ ಮತ್ತು ಅಮೋನಿಯಾ ಉತ್ಪಾದನೆಯಲ್ಲಿ ಭಾರತ ಜಾಗತಿಕ ನಾಯಕನಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿದೆ ಎಂದು ಪ್ರತಿಪಾದಿಸಿದರು.
ಭಾರತದಲ್ಲಿ ಹಸಿರು ಅಮೋನಿಯಾ ಉತ್ಪಾದನೆಗೆ ಸೆಂಬ್‌ಕಾರ್ಪ್ ಇಂಡಸ್ಟ್ರೀಸ್ ಮುಂದಾಗಿದ್ದು, ಇದಕ್ಕಾಗಿದೇಶದ ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸಿಕೊಳ್ಳುತ್ತದೆ ಎಂದರು.
ಜಪಾನ್ ತನ್ನ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಬಳಕೆಯನ್ನು ಭಾಗಶಃ ಬದಲಾಯಿಸಿ ಹಸಿರು ಅಮೋನಿಯಾ ಬಳಕೆಗೆ ಮುಂದಾಗಿದ್ದು, ಭಾರತ ಹಸಿರು ಅಮೋನಿಯಾ ಪೂರೈಕೆ ಮಾಡುವ ಮೂಲಕ ಜಪಾನ್ ಈ ಕಾರ್ಯಕ್ಕೆ ಸಾಥ್ ನೀಡಲಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ ಹಸಿರು ಜಲಜನಕ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ಹಸಿರು ಅಮೋನಿಯಾ ರಫ್ತು ಮಾಡುವ ಜಪಾನ್ ನೊಂದಿಗಿನ ಒಪ್ಪಂದ ನಿದರ್ಶನ ಎಂದು ಹೇಳಿದರು.
7.5 ಲಕ್ಷ ಟಿಪಿಎ ಗೆ ಟೆಂಡರ್: ಪ್ರಸ್ತುತದಲ್ಲಿ ಗ್ರೀನ್ ಅಮೋನಿಯಾದ 7.5 ಲಕ್ಷ ಟಿಪಿಎಗೆ ಟೆಂಡರ್ ಆಗಿದೆ. 4.5 ಲಕ್ಷ ಟಿಪಿಎ ಸಾಮರ್ಥ್ಯಕ್ಕೆ ಹೆಚ್ಚುವರಿ ಟೆಂಡರ್‌ಗಳನ್ನು ಸಹ ನಿರೀಕ್ಷಿಸಲಾಗಿದೆ ಎಂದು ಸಚಿವ ಜೋಶಿ ತಿಳಿಸಿದರು.
1 ಮಿಲಿಯನ್ ಟನ್ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ: ಭಾರತದಲ್ಲಿ ವಾರ್ಷಿಕ ಒಂದು ಮಿಲಿಯನ್ ಟನ್ಗಳಷ್ಟು ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ ಹೊಂದಿದ್ದು, ಇದಕ್ಕಾಗಿ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಹಸಿರು ಶಕ್ತಿ ಉತ್ಪಾದನೆಯಲ್ಲಿ ಭಾರತ ತ್ವರಿತ ಮತ್ತು ಅಭೂತಪೂರ್ವ ಸಾಧನೆ ತೋರುತ್ತಿದೆ ಎಂದರು.
ಭಾರತ, ಜಪಾನ್ ಮತ್ತು ಸಿಂಗಾಪುರ ಈ ಮೂರು ದೇಶಗಳು ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳ ಮೇಲೆ ಸಹಯೋಗ ಮಾಡುತ್ತಿವೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ