Latest

ಇಂಡಿಯಾ ವಿರುದ್ದ ಭಾರತ

 ಶ್ಯಾಮ ಹಂದೆ, ಮುಂಬೈ 
ಇದು ಕೇವಲ ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವಲ್ಲ. ಈ ವ್ಯತ್ಯಾಸದ ಹಿಂದೆ ಶ್ರೇಷ್ಠತ್ವದ ಮತ್ತು ಬಡಜೀವಿಗಳನ್ನು ಕಡೆಗಣಿಸುವ ಭಾವನೆಯೂ ಇದೆ. ಯಾವುದರ ಲಕ್ಷಣ ಇದು?

ಕಾಲಾಯ ತಸ್ಮೈ ನಮಃ

ಮುಂಬಯಿಯಲ್ಲಿ ಒಂದು ಕಾಲದಲ್ಲಿದ್ದ ಮಿಲ್ ಗಳನ್ನು “ಕಾಣೆ” ಯಾಗಿಸಿ ಅದರ ಮೇಲೆ ಇಂದು ಅನೇಕ ಪಂಚತಾರಾ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗಿದೆ. ಕಾಲಾಯ ತಸ್ಮೈ ನಮಃ ಎಂಬಂತೆ, ಕಾಲಾಂತರದ ನಂತರ ಇಂತಹ ಬದಲಾವಣೆಗಳು ಸಂಭವಿಸುತ್ತವೆ. ಆದರೆ, ಗಂಭೀರ ವಿಷಯವೇನೆಂದರೆ ಈ ಬಡಾವಣೆ ನಿವಾಸಿಗಳ ವರ್ತನೆ. ಕೇಳಿದಷ್ಟು ಹಣವನ್ನು ಎಸೆದು ಇಂತಹ ಬಡಾವಣೆಗಳಲ್ಲಿ ಮನೆಯನ್ನು ಖರೀದಿಸಿದ್ದೇವೆಂದು, ಪರಿಸರದಲ್ಲಿಯ ಜನರ ಬದಕುವ ಹಕ್ಕನ್ನು ಸಹ ಖರೀದಿಸಿದ್ದೇವೆಂಬ ಭ್ರಮೆಯಲ್ಲಿರುತ್ತಾರೆ.

‘ಇಂಡಿಯಾ’ ಮತ್ತು ‘ಭಾರತ’

ಈ ಬಡಾವಣೆಗಳು ಮತ್ತು ಅವುಗಳ ಸುತ್ತಮುತ್ತಲಿನ ಪರಿಸರ ಇಂದಿನ ‘ಇಂಡಿಯಾ’ ಮತ್ತು ‘ಭಾರತ’ವನ್ನು ಪ್ರತಿನಿಧಿಸುತ್ತವೆ. ನಮ್ಮ ‘ಇಂಡಿಯಾ’’ ಒಂದು ಶ್ರೀಮಂತ ಸಾರ್ವಭೌಮ ಗಣರಾಜ್ಯವಾಗಿದ್ದು, ಅದರ ಪ್ರಗತಿಯ ಹಾದಿಯಲ್ಲಿ ಬರುವ ತಡೆಯೆಂದರೆ ‘ಭಾರತ’ದ ನಾಗರಿಕರು ಎಂಬ ಈ ಹೈಪ್ರೋಫೈಲ್ ಇಂಡಿಯನ್ಸ್ ಗಳ ತಿಳುವಳಿಕೆಯದ್ದು . ಅದು ದಿನದಿಂದ ದಿನಕ್ಕೆ ಬೆಳೆಯುತ್ತಿದೆ.

ಸರ್ವಿಸ್ ಇಂಡಸ್ಟ್ರಿ

ವಾಸ್ತವವಾಗಿ, ಈ ಪಂಚತಾರಾ ನಾಗರಿಕರ ಯೋಗಕ್ಷೇಮವು ಪರಿಸರದಲ್ಲಿರುವ ಬಡ ಜೀವಿಗಳ ಮೇಲೆ ಅವಲಂಬಿಸಿರುತ್ತದೆ. ಅಂದರೆ ಈ ಶ್ರೀಮಂತರ ಮನೆಕೆಲಸ, ಅವರ ಕಾರು ಮತ್ತು ನಾಯಿಗಳನ್ನು ತಿರುಗಿಸುವುದು, ಇತ್ಯಾದಿ ಕೆಲಸಗಳನ್ನು ಈ ಭಾರತದ ಪರಿಶ್ರಮಿಗಳಿಂದ ಮಾಡಲಾಗುತ್ತದೆ. ಇದನ್ನು ಇತ್ತೀಚಿನ ದಿನಗಳಲ್ಲಿ ಸೇವಾ ಉದ್ಯಮ (ಸರ್ವಿಸ್ ಇಂಡಸ್ಟ್ರಿ) ಎಂದು ಕರೆಯಲಾಗುತ್ತದೆ. ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಸೇವಾ ವಲಯದ ಪ್ರಮುಖ ಪಾತ್ರವಿದೆ. ಕೈಗಾರಿಕೆ ಮತ್ತು ಕೃಷಿಯಿಂದ ದೇಶದ ಆದಾಯ ಕ್ಷೀಣಿಸುತ್ತಿರುವಾಗ, ಈ ಸೇವಾ ಕ್ಷೇತ್ರವು ಅನೇಕರ ಹೊಟ್ಟೆ ಪಾಡಿಗೆ ಆಸರೆಯಾಯಿತು. ಈ ಸೇವಾ ಕ್ಷೇತ್ರದ ಹೆಚ್ಚುತ್ತಿರುವ ಪ್ರಭಾವದಿಂದಲೇ ಗ್ರಾಮೀಣ ಪ್ರದೇಶಗಳಿಂದ ನಮ್ಮ ನಗರಗಳಿಗೆ ವಲಸೆ ಹೋಗುತ್ತಾರೆ. ಆದಾಗ್ಯೂ, ಕೊರೋನಾದ ಸೊಂಕು ಹರಡಿತು ಮತ್ತು ದೇಶದಲ್ಲಿಯ ಅನೇಕರಂತೆ, ಈ ಸೇವಾ ಕ್ಷೇತ್ರಗಳನ್ನು ಅವಲಂಬಿಸಿರುವವರ ಬದುಕಿನ ಸಂಘರ್ಷ ಹೆಚ್ಚಾಯಿತು. ಈ ಅವಧಿಯಲ್ಲಿ ಅನೇಕ ಉದ್ಯೋಗ-ದಂಧೆಗಳು ಮುಚ್ಚಿದ ಹೊರತಾಗಿಯೂ, ಮೊದಲಿನ ಬ್ಯಾಂಕ್ ಬ್ಯಾಲೆನ್ಸ್ ಅಥವಾ ನಿಗದಿತ ಸಂಬಳದ ಆಧಾರದಲ್ಲಿ ‘ಇಂಡಿಯಾ’ದ ಜನರು ಹಾಯಾಗಿ ಉಳಿಯಲು ಸಾಧ್ಯವಾಯಿತು. ಮತ್ತು ಮುಂಬರುವ ಕೆಲವು ಸಮಯದವರೆಗೆ ಹಾಗೆಯೇ ಮುಂದುವರಿಸಬಹುದು. ಆದರೆ ನಿಜವಾದ ಸವಾಲು ಎದುರಾದದ್ದು ಬಡಪಾಯಿ ‘ಭಾರತೀಯರ’ ಎದುರು ಅದು ಹೇಗೆಂಬುದನ್ನು ಮುಂಬೈನ ಉದಾಹರಣೆಯಿಂದ ತಿಳಿಯಬಹುದು.

Home add -Advt

ಇದು ಬಡವರ ರೋಗವಲ್ಲ

ಈ ಪಂಚತಾರಾ ಬಡಾವಣೆ ನಿವಾಸಿಗಳು ಮನೆಕೆಲಸ ಮತ್ತು ಇತರ ಕೆಲಸಗಳಿಗೆ ಪರಿಸರದಿಂದ ಬರುವವರನ್ನು ನಿಷೇಧಿಸಿದರು. ಕಾರಣ ಈ ‘ಭಾರತದ’ ನಾಗರಿಕರಿಂದ ಕೊರೋನಾ ಸೊಂಕು ಹರಡುವ ಅಪಾಯವಿದೆ ಎಂದು. ವಾಸ್ತವದಲ್ಲಿ ಯಾವುದೇ ಇತರ ನೈಸರ್ಗಿಕ ವಿಕೋಪದಂತೆ ಕೊರೋನಾ ಸೋಂಕಿಗೂ ಬಲಿಯಾದವರು ಬಡವರೇ. ಆದರೆ ಇದು ಬಡವರ ರೋಗವಲ್ಲ. ಅದು ಭಾರತಕ್ಕೆ ಬಂದದ್ದು ವಿಮಾನದಲ್ಲಿ. ಅದು ಕೂಡ ಪ್ರವಾಸೋದ್ಯಮ, ಉದ್ಯೋಗ-ವ್ಯಾಪಾರ ಇತ್ಯಾದಿಗಳಿಗಾಗಿ ವಿದೇಶಕ್ಕೆ ಹೋದವರಿಂದ. ಅಂದರೆ, ಇದನ್ನು ತಂದವರು ಪಾಸ್‌ಪೋರ್ಟ್ ಹೊಂದಿರುವವರು. ಇದರ ಹೊರತಾಗಿಯೂ, ಈ ಉಪದ್ರವವನ್ನು ಬಡವರ ತಲೆಗೆ ಹೊರಿಸಿ ಅವರನ್ನು ಅಸ್ಪೃಶ್ಯರನ್ನಾಗಿ ಮಾಡುವ ದೊಡ್ಡ ಉದ್ಯೋಗ ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆರಂಭವಾಗಿದೆ. ಈ ಬಡಾವಣೆಗಳಲ್ಲೂ ಸಂಭವಿಸಿದ್ದೂ ಅದೇ. ಬಡ ಜೀವಿಗಳು ಸೋಂಕು ಪಸರಿಸುವ ವಾಹಕಗಳೆಂದು ಎಲ್ಲರನ್ನೂ ದೂರವಿಡಲಾಯಿತು.

ಬೇರೆ ಜಾತಿ ವ್ಯವಸ್ಥೆ

ಹೀಗಾದಲ್ಲಿ ಎಲ್ಲಕ್ಕಿಂತ ಹೆಚ್ಚು ತೊಂದರೆ ಗೀಡಾದವರು ಮನೆ ಕೆಲಸ ಮಾಡುವ ಮಹಿಳೆಯರು. ಗಂಡನ ಅಲ್ಪ ಆದಾಯಕ್ಕೆ ಸಹಾಯ ಮಾಡಲು ಮುಸುರೆ ತೊಳೆಯುವ ಕೆಲಸ ಮಾಡುತ್ತಾರೆ. ಇಂತಹ ಬದುಕನ್ನು ಬದುಕುವ ಎಲ್ಲ ಜನರನ್ನು ಈ ಬಡಾವಣೆಗಳು ನಿರುದ್ಯೋಗಿಗಳನ್ನಾಗಿ ಮಾಡಿತು. ಲಾಕ್ ಡೌನ್ ನಲ್ಲಿ ಉದ್ಯೋಗ-ದಂಧೆ ಕುಸಿತದಿಂದಾಗಿ ಪತಿ ಮನೆಯಲ್ಲಿಯೇ ಇರಬೇಕಾದ ಪರಿಸ್ಥಿತಿ, ಮತ್ತು ಮನೆ ಕೆಲಸ ಮಾಡುವ ಮಹಿಳೆಯರಿಗೆ ಪ್ರವೇಶವಿಲ್ಲ. ಪರಿಣಾಮ ಎಲ್ಲರ ಬದುಕು ಸಂಕಟದಲ್ಲಿ. ವಿಷಯ ಸ್ಪಷ್ಟವಾದಾಗ, ಸ್ಥಳೀಯ ರಾಜಕಾರಣಿಗಳು ಮಧ್ಯ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ ಈ ಫೈವ್ ಸ್ಟಾರ್ ಬಡಾವಣೆ ನಿವಾಸಿಗಳ “ಸೆಟ್ಟಿಂಗ್” ಮೇಲಿನವರೆಗೆ ಇದೆ. ಎಲ್ಲಾ ವಿರೋಧಿ ಧ್ವನಿಗಳನ್ನು ನಿಗ್ರಹಿಸುವ ಶಕ್ತಿಯನ್ನು ಅವರು ಹೊಂದಿರುತ್ತಾರೆ. ಕೊನೆಗೂ ಪೊಲೀಸರು ಮಧ್ಯಪ್ರವೇಶಿಸಿ ಬಡಾವಣೆಗಳಲ್ಲಿ ಕೆಲಸದಾಳುಗಳನ್ನು ಕೆಲಸಕ್ಕೆ ಬರಲು ಅವಕಾಶ ಮಾಡಿಕೊಡಲಾಯಿತು. ಅದಕ್ಕೂ ಬೇರೆ ಜಾತಿ ವ್ಯವಸ್ಥೆ ಇದೆ. ಅಂದರೆ ಈ ಸೇವಕರಿಗೆ ಮತ್ತು ಮನೆಮಾಲೀಕರಿಗೆ ಪ್ರತ್ಯೇಕ ಲಿಫ್ಟ್ ಗಳು ಇತ್ಯಾದಿ. ಈ ವಿಷಯ ನಿಜಕ್ಕೂ ಮುಜುಗರದ ಸಂಗತಿಯಾಗಿದೆ. ಇದು ಕೇವಲ ಶ್ರೀಮಂತ ಮತ್ತು ಬಡವರ ನಡುವಿನ ವ್ಯತ್ಯಾಸವಲ್ಲ. ಈ ವ್ಯತ್ಯಾಸದ ಹಿಂದೆ ಶ್ರೇಷ್ಠತ್ವದ ಮತ್ತು ಬಡಜೀವಿಗಳನ್ನು ಕಡೆಗಣಿಸುವ ಭಾವನೆ ಇದೆ. ಯಾವುದರ ಲಕ್ಷಣ ಇದು?

ದೇಶದೊಂದಿಗಿರುವ ಕೊಂಡಿ ಎಂದರೆ ಪಾಸ್‌ಪೋರ್ಟ್‌

ಇದರ ಹಿಂದೆ ಎರಡು ಮುಖ್ಯ ಕಾರಣಗಳಿವೆ. ಮೊದಲನೆಯದು, ನಮ್ಮ ಆರ್ಥಿಕ ಪ್ರಗತಿಯ ವೇಗ ತುಂಬಾ ನಿಧಾನವಾಗಿರುವುದರಿಂದ ಆರ್ಥಿಕ ಪ್ರಗತಿಯ ಫಲಗಳು ಕೆಳ ಹಂತದ ಘಟಕದವರೆಗೆ ತಲುಪುವುದಿಲ್ಲ. ಮತ್ತು ಎರಡನೆಯದಾಗಿ, ಮೊದಲಿನಿಂದಲೂ ಆಳವಾಗಿ ಬೇರೂರಿದ ಸಾಮಾಜಿಕ ಅಸಮಾನತೆಯ ಅಂತರ. ಇದು ಜಾತಿ ಮತ್ತು ಧರ್ಮ ಎರಡೂ ಮಟ್ಟಗಳಲ್ಲಿ ಕಂಡುಬರುತ್ತದೆ. ಆದ್ದರಿಂದ, ಆರ್ಥಿಕ ವಿಷಮತೆಯ ದುಷ್ಪರಿಣಾಮಗಳು ಹೆಚ್ಚಾಗುತ್ತಿವೆ. ಇದರ ದೃಶ್ಯ ಪರಿಣಾಮವೆಂದರೆ, ಇಂತಹ ಬಡಾವಣೆಗಳಲ್ಲಿರುವವರು ಪ್ರಧಾನವಾಗಿ “ನಿವಾಸಿ ಅಭಾರತೀಯರು” ಮತ್ತು ‘ಅನಿವಾಸಿ’ಗಳಾಗುವ ಅವರಿಗೆ ಬಯಕೆ ಇರುತ್ತದೆ. ಅವರಲ್ಲಿ ಹೆಚ್ಚಿನವರ ಈ ದೇಶದೊಂದಿಗಿರುವ ಕೊಂಡಿ ಎಂದರೆ ಅವರ ಪಾಸ್‌ಪೋರ್ಟ್‌. ಅದಕ್ಕಾಗಿ, ಸರ್ಕಾರ ಎಂಬ ವ್ಯವಸ್ಥೆಯೊಂದಿಗೆ ಏನೇ ಇದ್ದರೂ ಅವರ ಸಂಬಂಧ. ಈ ಚಿತ್ರವನ್ನು ಬದಲಾಯಿಸಲು ನಿಶ್ಚಿತ, ಹಾಗೂ ದೃಢವಾದ ಪ್ರಯತ್ನ ಬೇಕು.

ವಿಷಮತೆಯ ವೈರಸ್

ಕೊರೋನಾದಲ್ಲಿನ ಪ್ರಸ್ತುತ ಪರಿಸ್ಥಿತಿ ಈ ಬಗ್ಗೆ ನಮಗೆ ಅರಿವು ಮೂಡಿಸಿದೆ. ವೈರಸ್ ನ್ನು ನಿರ್ಮೂಲನೆ ಮಾಡುವಾಗ, ವಿಷಮತೆಯ ವೈರಸ್ ನಿರ್ಮೂಲನೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕಾರಣ ದೈಹಿಕ ಕಾಯಿಲೆಗಿಂತ ಈ ಸಾಮಾಜಿಕ ಕಾಯಿಲೆ ಪಸರಿಸುವ ವಿಷಾಣು ಹೆಚ್ಚು ಮಾರಕವಾಗಿದೆ.

Related Articles

Back to top button