*ಭಾರತದ ಸ್ಪಿನ್ ದಾಳಿಗೆ ಇಂಗ್ಲೆಂಡ್ ಧೂಳೀಪಟ: ರೋಹಿತ್ ಪಡೆಗೆ 4-1 ರಿಂದ ಸರಣಿ ಜಯ*
ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಕೆ
ಪ್ರಗತಿವಾಹಿನಿ ಸುದ್ದಿ: ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ (77ಕ್ಕೆ 5) ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ (40ಕ್ಕೆ2) ಜೋಡಿಯ ಮಾರಕ ದಾಳಿ ನೆರವಿನಿಂದ ಭಾರತ ತಂಡ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಇನಿಂಗ್ಸ್ ಹಾಗೂ 64 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ರೋಹಿತ್ ಶರ್ಮ ಪಡೆ 4-1 ರಿಂದ ವಶಪಡಿಸಿಕೊಂಡಿತು.
ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯ ಕೇವಲ ಎರಡೂವರೆ ದಿನದಾಟದಲ್ಲೇ ಮುಕ್ತಾಯಗೊಂಡಿತು. ಈ ಸರಣಿ ಗೆಲುವಿನೊಂದಿಗೆ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಸರಾಸರಿ 68.51 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 218 ರನ್‌ಗಳಿಗೆ ಸರ್ವಪತನ ಕಂಡಿತು. ಬಳಿಕ ಭಾರತ ತಂಡ 477 ರನ್ ಗಳಿಸಿ 258 ರನ್ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್ ನಲ್ಲಿ ಭಾರತದ ಸ್ಪಿನ್ ದಾಳಿಯನ್ನು ಎದುರಿಸಲು ವಿಫಲವಾದ ಇಂಗ್ಲೆಂಡ್ ತಂಡ 195 ರನ್‌ಗಳಿಗೆ ಸರ್ವಪತನ ಕಂಡಿತು. ಮೂರನೇ ದಿನದಾಟದ ಚಹಾವಿರಾಮಕ್ಕೂ ಮುನ್ನವೇ ಭಾರತ ಗೆಲುವಿನ ನಗೆ ಬೀರಿತು. ಸರಣಿಯಲ್ಲಿ ಎರಡು ದ್ವಿಶತಕ ಸೇರಿದಂತೆ 712 ರನ್ ಸಿಡಿಸಿದ ಯಶಸ್ವಿ ಜೈಸ್ವಾಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಕುಲದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಅಶ್ವಿನ್ ವಿಶೇಷ ದಾಖಲೆ: 100ನೇ ಟೆಸ್ಟ್ ಪಂದ್ಯವಾಡಿದ ಅಶ್ವಿನ್ ವಿಶೇಷ ದಾಖಲೆ ಬರೆಯುವ ಮೂಲಕ ಗಮನ ಸೆಳೆದರು. ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ 100ನೇ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿದ್ದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ದಾಖಲೆಯನ್ನು ಸರಿಗಟ್ಟಿದರು. ಭಾರತದ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಲೆ, ಕಪಿಲ್ ದೇವ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ತಲಾ 7 ವಿಕೆಟ್ ಕಬಳಿಸಿದ್ದರು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ಹಿರಿಯ ವೇಗಿ ಜೇಮ್ಸ್ ಆಂಡರ್‌ಸನ್ ಟೆಸ್ಟ್ ಕ್ರಿಕೆಟ್‌ನಲ್ಲಿ 700 ವಿಕೆಟ್ ಪೂರೈಸಿದರು. ಈ ಸಾಧನೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡರು.
ಸಂಕ್ಷೀಪ್ತ ಸ್ಕೋರ್:
ಇಂಗ್ಲೆಂಡ್: 218 ಮತ್ತು 195 (ಜೋ ರೂಟ್ 84, ಅಶ್ವಿನ್ 77ಕ್ಕೆ 5, ಕುಲದೀಪ್ ಯಾದವ್ 49ಕ್ಕೆ 2).
ಭಾರತ ಮೊದಲ ಇನಿಂಗ್ಸ್ 477(ಶುಭಮಾನ್ ಗಿಲ್ 110, ರೋಹಿತ್ ಶರ್ಮ 103, ದೇವದತ್ ಪಡಿಕಲ್ 65, ಸರ್ಫ್ರಾಜ್ ಖಾನ್ 56, ಬಶೀರ್ 173ಕ್ಕೆ 5).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ