ಪ್ರಗತಿವಾಹಿನಿ ಸುದ್ದಿ; ಮುಂಬೈ: ಬ್ಯಾಟರ್‌ಗಳ ಪರಾಕ್ರಮದ ಬಳಿಕ ಬೌಲರ್‌ಗಳ ಆರ್ಭಟದ ನೆರವಿನಿಂದ ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸತತ 7ನೇ ಗೆಲುವಿನೊಂದಿಗೆ ಸೆಮಿಫೈನಲ್ ಪ್ರವೇಶಿಸಿತು.
ಟೂರ್ನಿಯಲ್ಲಿ ಅಜೇಯ ದಾಖಲೆ ಮುಂದುವರಿಸಿದ ರೋಹಿತ್ ಶರ್ಮ ಪಡೆ 302 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. ಈ ಸೋಲಿನೊಂದಿಗೆ ಶ್ರೀಲಂಕಾ ತಂಡದ ಉಪಾಂತ್ಯದ ಹಾದಿ ಬಹುತೇಕ ಬಂದ್ ಆಯಿತು. ಈ ಗೆಲುವಿನೊಂದಿಗೆ ಭಾರತ ತಂಡ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿತು. ಇದರೊಂದಿಗೆ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆರಂಭದಲ್ಲೇ ರೋಹಿತ್ ಶರ್ಮ ವಿಕೆಟ್ ಕಳೆದುಕೊಂಡ ಭಾರತ, ಯುವ ಬ್ಯಾಟರ್ ಶುಭಮಾನ್ ಗಿಲ್ (92ರನ್, 92ಎಸೆತ, 11 ಬೌಂಡರಿ, 2 ಸಿಕ್ಸರ್), ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (88ರನ್, 94ಎಸೆತ, 11 ಬೌಂಡರಿ) ಹಾಗೂ ಮುಂಬೈನವರೇ ಆದ ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 ಬೌಂಡರಿ, 6 ಸಿಕ್ಸರ್) ತ್ರಿಮೂರ್ತಿಗಳ ಅಬ್ಬರದ ಫಲವಾಗಿ ಭಾರತ ತಂಡ 8 ವಿಕೆಟ್‌ಗೆ 357 ರನ್ ಪೇರಿಸಿತು. ಪ್ರತಿಯಾಗಿ ಈ ಬೃಹತ್ ಮೊತ್ತ ಬೆನ್ನಟ್ಟಿದ ಶ್ರೀಲಂಕಾ ತಂಡ, ಮೊಹಮದ್ ಶಮಿ (18ಕ್ಕೆ 4) ಹಾಗೂ ಮೊಹಮದ್ ಸಿರಾಜ್ (16ಕ್ಕೆ 3) ಮಾರಕ ದಾಳಿಗೆ ನಲುಗಿ 19.4 ಓವರ್‌ಗಳಲ್ಲಿ 55ರನ್‌ಗಳಿಗೆ ಸರ್ವಪತನ ಕಂಡಿತು.
- 4 : ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ 4ನೇ ಅತಿದೊಡ್ಡ ಅಂತರದ ಗೆಲುವು ಇದಾಗಿದೆ. ಇದೇ ವರ್ಷ ಶ್ರೀಲಂಕಾ ವಿರುದ್ಧವೇ 317 ರನ್‌ಗಳಿಂದ ಸೋಲಿಸಿತ್ತು.
- 55 : ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ದಾಖಲಾದ 2ನೇ ಕನಿಷ್ಠ ಮೊತ್ತ ಇದಾಗಿದೆ. ಇದೇ ವರ್ಷ ಕೊಲಂಬೊದಲ್ಲಿ ಶ್ರೀಲಂಕಾ ತಂಡವೇ 50 ರನ್‌ಗಳಿಗೆ ಆಲೌಟ್ ಆಗಿತ್ತು.
- 45 : ಮೊಹಮದ್ ಶಮಿ, ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಪರ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು.
- 2 : ಮೊಹಮದ್ ಶಮಿ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಸತತ 3 ಪಂದ್ಯಗಳಲ್ಲಿ 4ಕ್ಕಿಂತ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಎನಿಸಿದ್ದಾರೆ. ಇದಕ್ಕೂ ಮೊದಲು ಪಾಕ್ ತಂಡ ವಾಕರ್ ಯೂನಿಸ್ ಈ ಸಾಧನೆ ಮಾಡಿದ್ದರು. ಭಾರತ: 8 ವಿಕೆಟ್‌ಗೆ 357 (ಶುಭಮಾನ್ ಗಿಲ್ 92, ವಿರಾಟ್ ಕೊಹ್ಲಿ 88, ಶ್ರೇಯಸ್ ಅಯ್ಯರ್ 82, ಕೆಎಲ್ ರಾಹುಲ್ 21, ರವೀಂದ್ರ ಜಡೇಜಾ 35, ದಿಲ್ಶಾನ್ ಮದುಶನಕ 80ಕ್ಕೆ 5, ಚಮೀರಾ 21ಕ್ಕೆ1), ಶ್ರೀಲಂಕಾ: 19.4 ಓವರ್‌ಗಳಲ್ಲಿ 55 (ಏಂಜಲೋ ಮ್ಯಾಥ್ಯೂಸ್ 12, ಮೊಹಮದ್ ಸಿರಾಜ್ 16ಕ್ಕೆ 3, ಮೊಹಮದ್ ಶಮಿ 18ಕ್ಕೆ 5, ಜಸ್‌ಪ್ರೀತ್ ಬುಮ್ರಾ 8ಕ್ಕೆ 1, ರವೀಂದ್ರ ಜಡೇಜಾ 4ಕ್ಕೆ 1).
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ