*ಭಾರತಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕಿರೀಟ* *ಮೂರನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಟೀಮ್ ಇಂಡಿಯಾ*

ಪ್ರಗತಿವಾಹಿನಿ ಸುದ್ದಿ, *ದುಬೈ:* ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಸಮರ್ಥ ನಿರ್ವಹಣೆ ತೋರಿದ ಭಾರತ ತಂಡ, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 4 ವಿಕೆಟ್ ಗಳಿಂದ ಮಣಿಸಿ 3ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತು. ಟೂರ್ನಿಯುದ್ದಕ್ಕೂ ಪ್ರಭುತ್ವ ಸಾಧಿಸಿದ ರೋಹಿತ್ ಶರ್ಮ ಪಡೆ ಅಜೇಯ ಸಾಧನೆಯೊಂದಿಗೆ ಪ್ರಶಸ್ತಿಗೆ ಮುತ್ತಿಕ್ಕಿತು.
ಕಳೆದ ವರ್ಷವಷ್ಟೇ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿದ್ದ ಭಾರತ ಇದೀಗ ಮತ್ತೊಂದು ಪ್ರತಿಷ್ಠಿತ ಟ್ರೋಫಿಯನ್ನು ಮುಡಿಗೇರಿಸಿಕೊಂಡಿದೆ. ಭಾರತಕ್ಕೆ ದಕ್ಕಿದ 7 ಐಸಿಸಿ ಟ್ರೋಫಿ ಇದಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 7 ವಿಕೆಟ್ ಗೆ 251 ರನ್ ಗಳಿಸಿತು. ಬಳಿಕ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮ (76 ರನ್) ಭರ್ಜರಿ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಕೆಎಲ್ ರಾಹುಲ್ (34ಅಜೇಯ) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ 49 ಓವರುಗಳಲ್ಲಿ 6 ವಿಕೆಟ್ಗೆ 254 ರನ್ ಗಳಿಸಿ ಗೆಲುವಿನ ದಡ ಸೇರಿತು.
2017ರಲ್ಲಿ ಪಾಕಿಸ್ತಾನ ಎದುರು ಫೈನಲ್‌ನಲ್ಲಿ ಮುಗ್ಗರಿಸಿದ್ದ ಭಾರತ ತಂಡ,ಇದೀಗ 8 ವರ್ಷಗಳ ಹಿಂದಿನ ಸೋಲಿನ ಕಹಿಯನ್ನು ಮರೆಸಿದೆ. 2002ರಲ್ಲಿ ಶ್ರೀಲಂಕಾ ಜೊತೆ ಪ್ರಶಸ್ತಿ ಹಂಚಿಕೊಂಡಿದ್ದ ಭಾರತ, 2013ರಲ್ಲಿ ಎಂಎಸ್ ಧೋನಿ ಸಾರಥ್ಯದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. 12 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ಮೂಲಕ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪ್ರಭುತ್ವ ಮುಂದುವರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ