Latest

ಜೂನ್​ 30ರವರೆಗೂ ಸಾಮಾನ್ಯ ರೈಲು ಸಂಚಾರ ಇಲ್ಲ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲಾಕ್ ಡೌನ್ ಅವಧಿ ಮುಗಿಯುತ್ತಾ ಬಂದರೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ನಡುವೆ ಜೂನ್ 30 ರವರೆಗೆ ಕಾಯ್ದಿರಿಸಿದ ಎಲ್ಲಾ ಸಾಮಾನ್ಯ ರೈಲು ಟಿಕೆಟ್‍ಗಳನ್ನು ರದ್ದುಗೊಳಿಸಿ ಭಾರತೀಯ ರೈಲ್ವೇ ಇಲಾಖೆ ಘೋಷಿಸಿದೆ.

ಮೂರನೇ ಹಂತದ ಲಾಕ್​ಡೌನ್​ ಮೇ 17ಕ್ಕೆ ಮುಗಿಯಲಿದ್ದು, ರೈಲು ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಅಲ್ಲದೆ, ಆನ್​ಲೈನ್ ಬುಕ್ಕಿಂಗ್​​ಗೂ ಅವಕಾಶ ನೀಡಿತ್ತು. ಆದರೆ, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಈಗ ನಾಲ್ಕನೇ ಹಂತದ ಲಾಕ್​ಡೌನ್​ ಜಾರಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಜೂನ್​ 30ರವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ಹೇಳಿದೆ. ಈಗಾಗಲೇ ಬುಕ್​ ಮಾಡಲಾದ ಟಿಕೆಟ್​ಗಳನ್ನು ರದ್ದು ಮಾಡಿ ಹಣ ಹಿಂದಿರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೂನ್ 30ರೊಳಗಿನ ಪ್ರಯಾಣಕ್ಕಾಗಿ ಮಾರ್ಚ್ 22ಕ್ಕೂ ಮುನ್ನ ಕಾಯ್ದಿರಿಸಲಾಗಿರುವ ರೈಲು ಟಿಕೆಟ್‍ಗಳನ್ನು ರದ್ದು ಪಡಿಸಲಾಗಿದೆ. ಐಆರ್‌ಸಿಟಿಸಿ ವೆಬ್‍ಸೈಟ್ ಮೂಲಕ ಟಿಕೆಟ್ ಬುಕ್ ಮಾಡಿರುವವರು ಟಿಕೆಟ್ ರದ್ದು ಪಡಿಸಬೇಕಿಲ್ಲ. ಟಿಕೆಟ್ ಹಣ ಅದಾಗಿಯೇ ಬ್ಯಾಂಕ್ ಖಾತೆಗೆ ಮರುಪಾವತಿಯಾಗಲಿದೆ. ಆದರೆ ರಿಸರ್ವೇಷನ್ ಕೌಂಟರ್‌ಗಳಲ್ಲಿ ಟಿಕಿಟ್ ಬುಕ್ ಪಡೆದರಿಗೆ ಮೂರು ತಿಂಗಳ ಒಳಗಾಗಿ ಹಣ ಸಿಗಲಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಇನ್ನು, ಶ್ರಮಿಕ್​ ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ಕಾರ್ಮಿಕರನ್ನು ರೈಲಿನ ಮೂಲಕ ಆಯಾ ರಾಜ್ಯಗಳಿಗೆ ತಲುಪಿಸುವ ಕೆಲಸ ನಡೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button