

ಪ್ರಗತಿವಾಹಿನಿ ಸುದ್ದಿ, *ಮುಂಬೈ:* ರನ್ ಮಳೆಗೆ ಸಾಕ್ಷಿಯಾಗಿದ ಟಿ20 ವಿಶ್ವಕಪ್ ಟೂರ್ನಿಯ ಸೆಮಿ ಫೈನಲ್ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಭಾರತ ತಂಡ 7 ರನ್ ಗಳಿಂದ ಇಂಗ್ಲೆಂಡ್ ಎದುರು ರೋಚಕ ಗೆಲುವು ದಾಖಲಿಸಿತು.
ಇದರೊಂದಿಗೆ ಎರಡು ಬಾರಿಯ ಚಾಂಪಿಯನ್ ಭಾರತ ತಂಡ ನಾಲ್ಕನೇ ಬಾರಿಗೆ ಪ್ರಶಸ್ತಿ ಸುತ್ತಿಗೇರಿತು.
ವಾಂಖೆಡೆ ಮೈದಾನದಲ್ಲಿ ಗುರುವಾರ ನಡೆದ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಆರಂಭಿಕ ಸಂಜು ಸ್ಯಾಮ್ಸನ್ (89ರನ್, 42 ಎಸೆತ, 8 ಬೌಂಡರಿ, 7 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ನೆರವಿನಿಂದ 7 ವಿಕೆಟ್ ಗೆ 253 ರನ್ ಪೇರಿಸಿತು. ಈ ಬೃಹತ್ ಮೊತ್ತ ಬೆನ್ನಟ್ಟಿದ ಇಂಗ್ಲೆಂಡ್ ತಂಡ, ಜಾಕೊಭ್ ಬೆತ್ಹೆಲ್ (105 ರನ್, 48 ಎಸೆತ, 8 ಬೌಂಡರಿ,7 ಸಿಕ್ಸರ್) ಬಿರುಸಿನ ಶತಕದ ಹೊರತಾಗಿಯೂ 7 ವಿಕೆಟ್ ಗೆ 246 ರನ್ ಕಲೆಹಾಕಲಷ್ಟೆ ಶಕ್ತವಾಯಿತು.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಭಾನುವಾರ ಅಹಮದಾಬಾದ್ ನಲ್ಲಿ ಪ್ರಶಸ್ತಿಗಾಗಿ ಸೆಣೆಸಲಿವೆ.



