Latest

*ಬೆಂಗಳೂರಿನ ಕೈಯಲ್ಲಿ ಭಾರತದ ಭವ್ಯ ಭವಿಷ್ಯ: ರಾಜನಾಥ್ ಸಿಂಗ್* *ಇಂಧನ ಕ್ಷೇತ್ರದಲ್ಲಿ 3.43 ಲಕ್ಷ ಕೋಟಿ ರೂ. ಹೂಡಿಕೆ*

*3 ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕಾರ್ಯ ಪರಿಸರ ಹೊಂದಿರುವ ಕರ್ನಾಟಕವು ಬಂಡವಾಳ ಹೂಡಿಕೆಗೆ ಹೇಳಿಮಾಡಿಸಿದ ರಾಜ್ಯವಾಗಿದೆ. ಹೂಡಿಕೆದಾರರು ಇಲ್ಲಿ ಬಂಡವಾಳ ಹೂಡಿದರೆ ಇಡೀ ದೇಶವೇ ಅವರ ಬೆನ್ನಿಗಿರಲಿದೆ. ಭಾರತದ ಭವಿಷ್ಯದ ಬಗ್ಗೆ ಅನುಮಾನವಿರುವವರು ಒಮ್ಮೆ ಬೆಂಗಳೂರಿಗೆ ಬಂದು ಇಲ್ಲಿನ ಐಟಿ, ಸ್ಟಾರ್ಟಪ್ ಮತ್ತು ಇನ್ನಿತರ ಕ್ರಾಂತಿಕಾರಕ ಸಂಶೋಧನೆಗಳನ್ನು ನೋಡಿದರೆ, ಅವರ ಸಂಶಯಗಳೆಲ್ಲ ನಿವಾರಣೆಯಾಗಿ ಹೋಗುತ್ತವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಈ ಮೆಚ್ಚುಗೆಯ ಮಾತು ಮತ್ತು ಅದಮ್ಯ ಭರವಸೆಯ ಮೂಲಕ ಅವರು ಮಂಗಳವಾರ ಇಲ್ಲಿ `ಜಾಗತಿಕ ಹೂಡಿಕೆದಾರರ ಸಮಾವೇಶ’ವಾದ ಇನ್ವೆಸ್ಟ್ ಕರ್ನಾಟಕ-2025ಕ್ಕೆ ಚಾಲನೆ ನೀಡಿದರು. ಫೆ.14ರವರೆಗೆ ನಡೆಯಲಿರುವ ಸಮಾವೇಶದಲ್ಲಿ ಜಗತ್ತಿನ ನಾನಾ ಭಾಗಗಳ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

Home add -Advt

ಕರ್ನಾಟಕವು ಜ್ಞಾನ ಮತ್ತು ಸಂಪತ್ತು ಎರಡೂ ಮೇಳೈಸಿರುವ ರಾಜ್ಯವಾಗಿದೆ. ದೇಶದ ತಂತ್ರಜ್ಞಾನ ರಾಜಧಾನಿಯಾಗಿರುವ ಬೆಂಗಳೂರು ವೈಮಾಂತರಿಕ್ಷ, ಕೃತಕ ಬುದ್ಧಿಮತ್ತೆ, ಪ್ರತಿಭೆ ಮತ್ತು ಯುವಜನರ ಆಗರವಾಗಿದೆ. ಇಲ್ಲಿರುವ ಶಕ್ತಿ, ಮಹತ್ತ್ವಾಕಾಂಕ್ಷೆ ಮತ್ತು ಇಲ್ಲಿ ನಡೆಯುತ್ತಿರುವ ನಿರ್ಣಾಯಕ ಕೆಲಸಗಳು ದೇಶವನ್ನು ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಇಲ್ಲಿಂದ ಸದ್ಯದಲ್ಲೇ ಕೃತಕ ಬುದ್ಧಿಮತ್ತೆ ಕ್ಷೇತ್ರದ ಪ್ರಪ್ರಥಮ ಮಾದರಿ ಕೂಡ ಹೊರಬರಲಿದೆ . ಇದಕ್ಕೆಲ್ಲ ಇಲ್ಲಿರುವ ಮಾನವ ಸಂಪನ್ಮೂಲ ಮತ್ತು ಸನ್ನದ್ಧವಾಗಿರುವ ಪ್ರತಿಭೆಯೇ ಕಾರಣ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆ ಆಧರಿತ ಆರ್ಥಿಕತೆ ಮಾತ್ರ ಸುಸ್ಥಿರ ಆರ್ಥಿಕತೆಯನ್ನು ಸೃಷ್ಟಿಸಬಲ್ಲದು. ಇದು ಸಾಧ್ಯವಾಗಬೇಕೆಂದರೆ ಖಾಸಗಿ ಉದ್ಯಮಿಗಳು ಬಹಳ ಮುಖ್ಯ. ಹಿಂದೆ ಹೂಡಿಕೆದಾರರಿಗೆ ಕೆಂಪುಪಟ್ಟಿಯ ತೊಂದರೆ ಎದುರಾಗುತ್ತಿತ್ತು, ಆದರೆ ಈಗ ರತ್ನಗಂಬಳಿಯ ಸ್ವಾಗತ ಸಿಗುತ್ತಿದೆ. ಭಾರತವು ಜಗತ್ತಿನ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಸರಕಾರದಿಂದ ಪ್ರಮುಖ ನಿರ್ಧಾರಗಳೂ ಹೊರಬರುತ್ತಿವೆ. ಬೆಂಗಳೂರಿನ ನಿರ್ಣಾಯಕ ಪಾತ್ರದಿಂದ ಭಾರತವು ವೈಮಾಂತರಿಕ್ಷ ಕ್ಷೇತ್ರದಲ್ಲೂ ಅಸಾಧಾರಣ ಸಾಧನೆಗಳನ್ನು ಮಾಡುತ್ತಿದೆ ಎಂದು ರಾಜನಾಥ್ ಶ್ಲಾಘಿಸಿದ್ದಾರೆ.

*12 ವಿಶೇಷ ಹೂಡಿಕೆ ವಲಯ ಸ್ಥಾಪನೆ: ಎಂ ಬಿ ಪಾಟೀಲ*

ಬೆಂಗಳೂರು: ರಾಜ್ಯದಲ್ಲಿ ಸಮಗ್ರ ಕೈಗಾರಿಕಾ ಬೆಳವಣಿಗೆ ಸಾಧಿಸಲು ಈಗ ಇರುವ 200ಕ್ಕೂ ಹೆಚ್ಚು ಕೈಗಾರಿಕಾ ಪ್ರದೇಶಗಳ ಜತೆಗೆ 30 ಸಾವಿರ ಎಕರೆ ವಿಸ್ತೀರ್ಣದಲ್ಲಿ 12 ವಿಶೇಷ ಹೂಡಿಕೆ ವಲಯಗಳನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ.

ಜಾಗತಿಕ ಹೂಡಿಕೆದಾರರ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಇದಕ್ಕಾಗಿ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ್ದು, ಇಲ್ಲೆಲ್ಲ ವಿಶ್ವ ದರ್ಜೆಯ ಮೂಲಸೌಕರ್ಯ ಒದಗಿಸಲಾಗುವುದು. ಕೆಐಎಡಿಬಿ ರಾಜ್ಯದಲ್ಲಿ ಈಗಾಗಲೇ 85 ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದು, ಇಲ್ಲಿ 25 ಸಾವಿರ ಕೈಗಾರಿಕೆಗಳು ನೆಲೆಯೂರಿವೆ’ ಎಂದರು.

ಉತ್ಪಾದನಾ ವೆಚ್ಚ ಕಡಿಮೆಯಾಗಿ, ದಕ್ಷತೆ ಹೆಚ್ಚಾಗಬೇಕು ಎನ್ನುವುದು ಸರಕಾರದ ನೀತಿಯಾಗಿದೆ. ಇದನ್ನು ಸಾಧಿಸಲು `ಕ್ಲಸ್ಟರ್ ಆಧಾರಿತ ನೀತಿ’ ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಬೇರೆಬೇರೆ ಭಾಗಗಳಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಇ.ವಿ.ತಯಾರಿಕೆ ಕ್ಲಸ್ಟರ್, ಫಾರ್ಮಾ, ಡೀಪ್-ಟೆಕ್ ಮತ್ತು ಡ್ರೋನ್ ಪಾರ್ಕ್ ಗಳನ್ನು ಸ್ಥಾಪಿಸಲಾಗುತ್ತಿದೆ. ಕೈಗಾರಿಕಾ ಪ್ರದೇಶಗಳಿಗೆ ಹತ್ತಿರದ ನದೀಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು 3,800 ಕೋಟಿ ರೂ. ಮೊತ್ತದ ಬೃಹತ್ ಯೋಜನೆ ರೂಪಿಸಲಾಗಿದೆ ಎಂದು ಅವರು ನುಡಿದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಚೀನಾದಿಂದ ತೀವ್ರ ಸವಾಲು ಎದುರಾಗಿದ್ದು, ತಯಾರಿಕೆ ವಲಯದ ಚಿತ್ರಣವೇ ಬದಲಾಗಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಜಾಗತಿಕ ಅಸ್ಥಿರತೆಯ ಸಮಸ್ಯೆಯೂ ಇದೆ. ಸರಕಾರವು ಪ್ರಗತಿಗೆ ಹೊಸ ಭಾಷ್ಯ ಬರೆಯಲು ಮುಂದಾಗಿದ್ದು, ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ತಯಾರಿಕೆ ಮತ್ತು ನಾವೀನ್ಯತೆಯ ತೊಟ್ಟಿಲನ್ನಾಗಿ ಪ್ರತಿಷ್ಠಾಪಿಸಲಿದೆ ಎಂದರು.

ತಂತ್ರಜ್ಞಾನದ ಬಳಕೆ, ಹೂಡಿಕೆ ಆಕರ್ಷಣೆ ಮತ್ತು ಸ್ಪರ್ಧಾತ್ಮಕ ಉದ್ಯಮಗಳ ಸ್ಥಾಪನೆಯೇ ಭವಿಷ್ಯದ ಆರ್ಥಿಕ ಬೆಳವಣಿಗೆಯ ನಿರ್ಣಾಯಕ ಶಕ್ತಿಗಳಾಗಿವೆ. ಇದಕ್ಕಾಗಿ ಕೈಗಾರಿಕಾ ರಂಗದಲ್ಲಿ ಡಿಜಿಟಲ್ ಪರಿವರ್ತನೆಯನ್ನು ಅಳವಡಿಸಿ ಕೊಳ್ಳಲಾಗುತ್ತಿದೆ. ಜತೆಗೆ ಇಂಗಾಲವನ್ನು ಕಡಿಮೆ ಹೊರಸೂಸುವ ಹಾಗೂ ಪರಿಸರಸ್ನೇಹಿ ಉಪಕ್ರಮಗಳಿಗೂ ಗಮನ ಹರಿಸಲಾಗಿದೆ. 55 ಲಕ್ಷ ಜನರಿಗೆ ಉದ್ಯೋಗ ನೀಡಿರುವ 8 ಲಕ್ಷ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ವಿಶೇಷ ಒತ್ತು ಕೊಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

*16 ದೇಶಗಳ ರಾಯಭಾರಿಗಳು ಭಾಗಿ*

ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5,000ಕ್ಕೂ ಹೆಚ್ಚು ಉದ್ಯಮ ಪ್ರತಿನಿಧಿಗಳಲ್ಲದೆ, ಹಲವು ದೇಶಗಳ ರಾಯಭಾರಿಗಳು ಕೂಡ ಭಾಗವಹಿಸಿದ್ದಾರೆ.

ಇವರಲ್ಲಿ ಬಹ್ರೇನ್ ರಾಯಭಾರಿ ಮಹಮದ್ ಅಲ್ ಗಾವ್ಡ್, ಕ್ಯೂಬಾದ ಅಬೆಲ್ ಅಬಾಲ್ ಡೆಸ್ಪೇನ್, ಇಟಲಿಯ ಆಂಟೋನಿಯೊ ಬಾರ್ತೋಲಿ, ನೇಪಾಳದ ಡಾ.ಶಂಕರ್ ಪ್ರಸಾದ್ ಶರ್ಮ, ಪೋಲೆಂಡಿನ ಸೆಬಾಸ್ಟಿಯನ್ ಡಾಮ್ಜಾಲ್ಸ್ಕಿ, ಮಲೇಷ್ಯಾದ ದಾತೊ ಮಜಾಫರ್ ಷಾ ಮುಸ್ತಫ, ಜಪಾನಿನ ಓನೋ ಕೀಚಿ, ಕಾಂಗೋದ ರೇಮಂಡ್ ಸರ್ಜ್ ಬೇಲ್, ಜಮೈಕಾದ ಜೇಸನ್ ಹಾಲ್ ಫಿಜಿಯ ಜಗನ್ನಾಥ ಸ್ವಾಮಿ, ಜಮೈಕಾದ ಜೇಸನ್ ಹಾಲ್, ಕಝಕಸ್ತಾನದ ನೂರುಲಾನ್ ಝಲ್ಗಸ್ಬಯೇವ್, ಮೊರಾಕ್ಕೋದ ಮಹಮದ್ ಮಾಲೀಕಿ, ಸೀಷೆಲ್ಸ್ ನ ಲಲಟಿಯಾನಾ ಅಕೌಷೆ, ತಝಕಿಸ್ತಾನದ ಲೂಕ್ಮನ್ ಬೊಬಕಾಲೊಜೋಡ, ಟೋಗೋದ ಯಾವೋ ಇಡೆಂ ಮತ್ತು ಜಿಂಬಾಬ್ವೆಯ ಸ್ಟೆಲ್ಲಾ ನೋಮೋ ಸೇರಿದ್ದಾರೆ.

*ಸಚಿವರ, ಉದ್ಯಮಿಗಳ ದಂಡು*

ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ರಾಜನಾಥಸಿಂಗ್, ಪ್ರಹ್ಲಾದ್ ಜೋಶಿ, ರಾಜ್ಯ ಸಂಪುಟದ ಸಚಿವರಾದ ಜಿ.ಪರಮೇಶ್ವರ, ಕೆ ಜೆ ಜಾರ್ಜ್, ಪ್ರಿಯಾಂಕ ಖರ್ಗೆ, ಡಾ. ಎಂ ಸಿ ಸುಧಾಕರ್ ಎಚ್ ಸಿ ಮಹದೇವಪ್ಪ, ಕೆ ಎಚ್ ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಡಾ.ಶರಣ ಪ್ರಕಾಶ ಪಾಟೀಲ, ಶಿವಾನಂದ‌ ಪಾಟೀಲ ಕೂಡ ಹಾಜರಿದ್ದರು.

ಗಣ್ಯ ಉದ್ಯಮಿಗಳಾದ ಆನಂದ್ ಮಹೀಂದ್ರ, ಸಜ್ಜನ್ ಜಿಂದಾಲ್, ಕಿರಣ್ ಮಜುಂದಾರ್ ಷಾ, ಗೀತಾಂಜಲಿ ಕಿರ್ಲೋಸ್ಕರ್, ರಾಹುಲ್ ಬಜಾಜ್, ಶೇಷ ವರದರಾಜನ್, ಪ್ರಶಾಂತ್ ಪ್ರಕಾಶ್ ಮುಂತಾದವರು ಕೂಡ ಪಾಲ್ಗೊಂಡಿದ್ದರು. ಇವರನ್ನೆಲ್ಲ ಸಚಿವ ಎಂ ಬಿ ಪಾಟೀಲ ಅವರು ಶಾಲು ಹೊದಿಸಿ, ಕಾಣಿಕೆ ನೀಡಿ, ರಾಜ್ಯದ ಪರವಾಗಿ ಬರಮಾಡಿಕೊಂಡರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸೆಲ್ವಕುಮಾರ್ ಸೇರಿದಂತೆ ಇತರರು ಇದ್ದರು.

*ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 3.43 ಲಕ್ಷ ಕೋಟಿ ರೂ. ಹೂಡಿಕೆ*

– *ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 13 ಕಂಪನಿಗಳ ಜತೆ ಕ್ರೆಡಲ್ ನಿಂದ ಒಪ್ಪಂದಕ್ಕೆ ಸಹಿ*

*78,253 ಉದ್ಯೋಗ ಸೃಷ್ಟಿ*

*ಬೆಂಗಳೂರು, ಫೆ. 11, 2025*: ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಈ ಬಾರಿ ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ವಿವಿಧ ಕಂಪನಿಗಳ ಒಟ್ಟು 3.43 ಲಕ್ಷ ಕೋಟಿ ರೂ. ಮೊತ್ತದ  ಒಪ್ಪಂದಗಳಿಗೆ ಕ್ರೆಡಲ್ ಸಹಿ ಹಾಕಿದೆ.

 ಮಂಗಳವಾರ ಸಮಾವೇಶದ ಉದ್ಘಾಟನೆ ಬಳಿಕ ನವೀರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿದ ಸಂಸ್ಥೆಗಳ ಮುಖ್ಯಸ್ಥರು  ಇಂಧನ ಸಚಿವ ಕೆ.ಜೆ. ಜಾರ್ಜ್ ಅವರಿಂದ ಒಪ್ಪಂದ ಪತ್ರ ಸ್ವೀಕರಿಸಿದರು. 

 ಕ್ರೆಡಲ್ ಅಧ್ಯಕ್ಷ ಟಿ.ಡಿ.ರಾಜೇಗೌಡ,  ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರು  ಉಪಸ್ಥಿತರಿದ್ದರು.

ನವೀಕರಿಸಹುದಾದ ಇಂಧನ ಕ್ಷೇತ್ರದಲ್ಲಿ ಒಟ್ಟು 13 ಕಂಪನಿಗಳು ಹೂಡಿಕೆಗೆ ಆಸಕ್ತಿ ತೋರಿದ್ದು, ಒಟ್ಟು 3,42,925 ಕೋಟಿ ರೂ. ಹೂಡಿಕೆಗೆ ಮುಂದಾಗಿದ್ದಾರೆ. ಇದರಿಂದ 78,253 ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ.

*ಪ್ರಮುಖ ಹೂಡಿಕೆಗಳು*: 

ಜೆಎಸ್ ಡಬ್ಲ್ಯು ನಿಯೋ ಎನರ್ಜಿ ಲಿಮಿಟೆಡ್- 56 ಸಾವಿರ ಕೋಟಿ ರೂ. 

ರಿನ್ಯೂ ಪ್ರೈ. ಲಿ. ಮತ್ತು ಟಾಟಾ ಪವರ್ ರಿನಿವೇಬಲ್ ಎನರ್ಜಿ ಲಿಮಿಟೆಡ್ ಗಳು ತಲಾ 50 ಸಾವಿರ ಕೋಟಿ ರೂ., 

ಸೆರೆಂಟಿಕಾ ರಿನಿವೇಬಲ್ ಇಂಡಿಯಾ ಪ್ರೈ. ಲಿ.- 43,975 ಕೋಟಿ ರೂ., 

ಮಹೀಂದ್ರ ಸಸ್ಟೆನ್ ಪ್ರೈ.ಲಿ.- 35,000 ಕೋಟಿ ರೂ. ಸೇರಿದಂತೆ ವಿವಿಧ ಕಂಪನಿಗಳು ಒಟ್ಟಾರೆ 3,42,925 ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಗಳಿಗೆ ಸಹಿ ಹಾಕಿವೆ.

̲̲ಇನ್ವೆಸ್ಟ್‌ ಕರ್ನಾಟಕ-2025; ಬುಧವಾರದ ಪ್ರಮುಖ ಗೋಷ್ಠಿಗಳು

  ಬಹುನಿರೀಕ್ಷಿತ ಇನ್ವೆಸ್ಟ್‌ ಕರ್ನಾಟಕ 2025- ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವು ಮಂಗಳವಾರ ಸಂಜೆ ಅದ್ದೂರಿಯಾಗಿ ಉದ್ಘಾಟನೆಗೊಂಡಿದೆ.

ಕರ್ನಾಟಕದಲ್ಲಿ ಹೂಡಿಕೆ ಹಾಗೂ ನಾವೀನ್ಯತೆ ಮುನ್ನಡೆಸಲು  ಜಾಗತಿಕ ಉದ್ದಿಮೆ ದಿಗ್ಗಜರು, ನೀತಿ ನಿರೂಪಕರು ಹಾಗೂ ಮುನ್ನೋಟದ ಚಿಂತಕರನ್ನು ಒಂದುಗೂಡಿಸಿದೆ.

ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಮಾವೇಶವು ಜಾಗತಿಕ ಬಂಡವಾಳ ಹೂಡಿಕೆಯ ಪ್ರಮುಖ ತಾಣವನ್ನಾಗಿರುವುದನ್ನು ಈ ಸಮಾವೇಶವು ಪುನರುಚ್ಚರಿಸಲಿದೆ.

ಕೈಗಾರಿಕೆಗಳ ಭವಿಷ್ಯ ರೂಪಿಸಲು ನೆರವಾಗುವ  ತಂತ್ರಜ್ಞಾನ, ಸುಸ್ಥಿರ ತಯಾರಿಕೆ ಮತ್ತು ಆರ್ಥಿಕ ಕ್ಷಮತೆ ಸೇರಿದಂತೆ ವಿವಿಧ ವಿಷಯಗಳ ಹಲವಾರು ಗೋಷ್ಠಿಗಳು ಸಮಾವೇಶದಲ್ಲಿನ ಬುಧವಾರದ ಪ್ರಮುಖ  ಆಕರ್ಷಣೆಗಳಾಗಿವೆ.

ಫೆಬ್ರುವರಿ 12: ಬೆಳಗಿನ ಗೋಷ್ಠಿಗಳು

• ಬೆಳಿಗ್ಗೆ 10:35 – 11:05   | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ ಮತ್ತು ಸರ್ಕಾರ: ಅನಿಶ್ಚಿತ ಜಗತ್ತಿನಲ್ಲಿ ಡಿಜಿಟಲ್ ಕ್ಷಮತೆ ನಿರ್ಮಾಣ  

ಭಾಷಣಕಾರರು: ಸೈಮನ್ ಲಾಂಗ್ (ದಿ ಎಕನಾಮಿಸ್ಟ್-ನ ಸಂಪಾದಕ) 

ಕಾರ್ಯಕ್ರಮ ನಿರೂಪಣೆ: ಆನ್ ಡಂಕಿನ್ (ಅಮೆರಿಕದ ಇಂಧನ ಇಲಾಖೆಯ ಮಾಜಿ ಸಿಐಒ) 

ಬೆಳಿಗ್ಗೆ 10.30 ರಿಂದ 11.45: ಸಭಾಂಗಣ ಇ – ಸಂವಾದ- ಸೆಮಿಕಂಡಕ್ಟರ್‌ ಕ್ರಾಂತಿ ಮುನ್ನಡೆಸಲಿರುವ ಭಾರತದ ಸರದಿ  

ಬೆಳಿಗ್ಗೆ 10.30 ರಿಂದ 11.00 – ಸಭಾಂಗಣ ಸಿ: ಬಹ್ರೇನ್‌ ದೇಶದ ಅಧಿವೇಶನ: ಕೊಲ್ಲಿ ದೇಶಗಳಿಗೆ ಮಹಾದ್ವಾರ  

ಬೆಳಿಗ್ಗೆ 11.00 ರಿಂದ 12.00- ಸಭಾಂಗಣ ಡಿ. ಸಂವಾದ- ಪ್ರಗತಿಗೆ ಹೂಡಿಕೆಯ ಮರುಕಲ್ಪನೆ 5 ವರ್ಷಗಳಲ್ಲಿ ಕರ್ನಾಟಕದ ಮುನ್ನೋಟ 2030 ಸಾಧಿಸಲು ನೆರವಾಗುವ 5 ವಲಯಗಳು 

11.05 ರಿಂದ 12.00 – ಸಭಾಂಗಣ ಬಿ- ಸಂವಾದ – ಸುಸ್ಥಿರ ತಯಾರಿಕೆ;  ಜಾಗತಿಕ ಪರಿಸರ ಸ್ನೇಹಿ ಆರ್ಥಿಕತೆ ಪ್ರಗತಿಗೆ ಚಾಲನೆ 

11.05 ರಿಂದ 12- ಸಭಾಂಗಣ  ಎ- ಸಂವಾದ- ಉದ್ಯಮಶೀಲತೆ ಮತ್ತು ಡಿಜಿಟಲ್‌

• ಮಧ್ಯಾಹ್ನ 12:00 ರಿಂದ 1:00 | ಸಭಾಂಗಣ ಎ | ಸಂವಾದ ಕಾರ್ಯಕ್ರಮ – ಕ್ಷಮತೆಯ ಮಾರ್ಗೋಪಾಯಗಳು: ಜಾಗತಿಕ ಸವಾಲುಗಳ ಮಧ್ಯೆ ಭಾರತದ ಆರ್ಥಿಕ ಬೆಳವಣಿಗೆ  ಸಾಧಿಸುವುದು  

ಮುಖ್ಯ ಭಾಷಣ: ಮೊಂಟೆಕ್ ಸಿಂಗ್ ಅಹ್ಲುವಾಲಿಯಾ (ಭಾರತದ ಅರ್ಥಶಾಸ್ತ್ರಜ್ಞ, ಭಾರತದ ಯೋಜನಾ ಆಯೋಗದ ಮಾಜಿ ಉಪಾಧ್ಯಕ್ಷ) 

ಕಾರ್ಯಕ್ರಮ ನಿರ್ವಹಣೆ: ಸಲ್ಮಾನ್ ಸೋಜ್ (ಅರ್ಥಶಾಸ್ತ್ರಜ್ಞ ಮತ್ತು ಲೇಖಕ)

 • ಮಧ್ಯಾಹ್ನ  2:00 ರಿಂದ  3:00  | ಸಭಾಂಗಣ ಎ | ಸಂವಾದ ಕಾರ್ಯಕ್ರಮ:  ಭವಿಷ್ಯಕ್ಕೆ ನಾವೀನ್ಯತೆ  

 ಮುಖ್ಯ ಭಾಷಣ: ಅಕಿಸ್ ಇವಾಂಜೆಲಿಡಿಸ್ (ನಥಿಂಗ್‌-ನ ಸಹ-ಸಂಸ್ಥಾಪಕ ಮತ್ತು ಮಾರಾಟ ಮುಖ್ಯಸ್ಥ,) ಕಾರ್ಯಕ್ರಮ ನಿರೂಪಣೆ: ಶಿವ್ ಅರೂರ್ (ಭಾರತದ ಪತ್ರಕರ್ತ ಮತ್ತು ಬರಹಗಾರ)

 • ಮಧ್ಯಾಹ್ನ 4:30 ರಿಂದ 5:30 | ಸಭಾಂಗಣ ಎ | 

ತಜ್ಞರ ಸಮೂಹ ಚರ್ಚೆ – ಮುಂದಾಳತ್ವ: ಭಾರತದ ಭವಿಷ್ಯ  ರೂಪಿಸುತ್ತಿರುವ ಯುವ ನಾವೀನ್ಯಕಾರರು  

ಭಾಷಣಕಾರರು: ಪಾರ್ಥ್ ಜಿಂದಾಲ್ ( ಜೆಎಸ್‌ಡಬ್ಲ್ಯು ಸಿಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕ), ಜಯ್‌  ಕೋಟಕ್ (ಕೋಟಕ್‌811-ನ ಸಹ-ಮುಖ್ಯಸ್ಥ), ಸುಜನ್ನಾಹ ಮುತ್ತೂಟ್ (ಮುತ್ತೂಟ್ ಹೌಸಿಂಗ್ ಫೈನಾನ್ಸ್ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕಿ)

 ಕಾರ್ಯಕ್ರಮ ನಿರೂಪಣೆ: ನಿಖಿಲ್ ಕಾಮತ್ (ಜಿರೋಧಾ, ಟ್ರೂ ಬಿಯಕಾನ್, ಗೃಹಸ್-ನ ಸಹ-ಸಂಸ್ಥಾಪಕ)

Related Articles

Back to top button