ಪ್ರಗತಿವಾಹಿನಿ ಸುದ್ದಿ: ಕಳೆದ ಕೆಲದಿನಗಳಿಂದ ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಭಾರತದ ದಿಗ್ಗಜ ಉದ್ಯಮಿ ರತನ್ ಟಾಟಾ ವಿಧಿವಶರಾಗಿದ್ದಾರೆ.
ಅವರು ಚಿಕಿತ್ಸೆಗಾಗಿ ನಿನ್ನೆ ಬೆಳಗ್ಗೆ ಮುಂಬೈ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 86 ವರ್ಷದ ರತನ್ ಟಾಟಾ ಅವರು ಅಕ್ಟೋಬರ್ 7ರ ಸೋಮವಾರದಂದು ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ತಮ್ಮ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾಗಿ ಹೇಳಿದ್ದರು.
ಸೋಮವಾರದಂದು (ಅ.8), ಟಾಟಾ ರವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅವರ ಆರೋಗ್ಯದ ಸ್ಥಿರವಾಗಿದ್ದು, ಯಾರೂ ಊಹಾಪೋಹಗಳನ್ನು ನಂಬಬೇಡಿ ಎಂದು ಪೋಸ್ಟ್ ಮಾಡಿದ್ದರು. ಆದರೆ ಬುಧವಾರ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟ ಕಾರಣ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ
ರತನ್ ಟಾಟಾ ಕೇವಲ ಉದ್ಯಮಿಯಾಗಿ ಮಾತ್ರವಲ್ಲ, ಅವರ ಟ್ರಸ್ಟ್ ಗಳ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರು ತಮ್ಮ ಸರಳತೆ ಹಾಗೂ ಪರೋಪಕಾರಕ್ಕಾಗಿ ಹಲವರಿಗೆ ಸ್ಪೂರ್ತಿಯಾಗಿದ್ದಾರೆ.
ವಾಪಾರೋದ್ಯಮ ಕ್ಷೇತ್ರದ ದಂತಕಥೆ
ಟಾಟಾ ಸನ್ಸ್‌ನ ಚೇರ್‌ಮನ್ ಆಗಿ ರತನ್ ಟಾಟಾ ಅವರು ಎರಡು ದಶಕ ಅಂದರೆ 1991 ರಿಂದ 2012ರ ತನಕ ಕೆಲಸ ನಿರ್ವಹಿಸಿದ್ದರು. ಅದಾಗಿ ವಿರಮಿಸಿದ್ದರು. ಆದಾಗ್ಯೂ 2016ರಲ್ಲಿ ಮತ್ತೆ ಮಧ್ಯಂತರ ಚೇರ್‌ಮನ್ ಟಾಟಾ ಗ್ರೂಪ್ ಅನ್ನು ಮುನ್ನಡೆಸಿದರು.
ರತನ್ ಟಾಟಾ ಅವರು ಮುಂಬೈನಲ್ಲಿ 1937ರ ಡಿಸೆಂಬರ್ 28 ರಂದು ಜನಿಸಿದರು. ಪೂರ್ತಿ ಹೆಸರು ರತನ್ ನವಲ್ ಟಾಟಾ. ಅವರಿಗೆ 10 ವರ್ಷ ವಯಸ್ಸಾಗಿದ್ದ ಸಂದರ್ಭದಲ್ಲಿ ನವಲ್ ಮತ್ತು ಸೂನಿ ಟಾಟಾ ದಂಪತಿ ವಿವಾಹ ವಿಚ್ಛೇದನ ಪಡೆದ ಬಳಿಕ ರತನ್ ಟಾಟಾ ಅವರು ಅಜ್ಜಿಯ ಆರೈಕೆಯಲ್ಲಿ ಬೆಳೆದರು. ಟಾಟಾ ಗ್ರೂಪ್‌ನ ಸಂಸ್ಥಾಪಕ ಜೆಮ್‌ಶೆಟ್ಜಿ ಟಾಟಾ ಅವರ ಸೊಸೆ ರತನ್ ಅವರ ತಂದೆ ನವಲ್ ಅವರನ್ನು ಅವರ 13ನೇ ವಯಸ್ಸಿನಲ್ಲಿ ದತ್ತು ಪಡೆದ ಕಾರಣ ಟಾಟಾ ಕುಟುಂಬ ಸೇರಿದ್ದರು. ರತನ್ ಟಾಟಾ ಅವಿವಾಹಿತರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ