ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಶಿಶುಗಳ ಮಾರಾಟ ಜಾಲ ಪತ್ತೆಯಾಗಿದ್ದು, ಅದರಲ್ಲಿಯು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂತದ್ದೊಂದು ಭಯಾನಕ ಕೃತ್ಯವೆಸಗುವ ಬೃಹತ್ ಜಾಲವೇ ಪತ್ತೆಯಾಗಿದೆ.
ಎರಡು ದಿನಗಳ ಹಿಂದೆ ಬೆಂಗಳೂರಿನ ಆರ್.ಆರ್.ನಗರದಲ್ಲಿ 20 ದಿನಗಳ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗಲೇ ಪೊಲೀಸರು ರೆಡ್ ಹ್ಯಾಂಡ್ ಆಗಿ ತಮಿಳುನಾಡು ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರನ್ನು ಬಂಧಿಸಲಾಗಿದೆ.
ಓರ್ವ ಮಹಿಳಾ ಏಜೆಂಟ್ ಹಾಗೂ ನಕಲಿ ಡಾಕ್ಟರ್ ಓರ್ವನನ್ನು ಬಂಧಿಸಲಾಗಿದೆ. ರಮ್ಯಾ ಹಾಗೂ ಕೆವಿನ್ ಎಂಬ ನಕಲಿ ವೈದ್ಯನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.
ರಮ್ಯಾಳನ್ನು ಹೆಬ್ಬಾಳದಲ್ಲಿ ಹಾಗೂ ನಕಲಿ ವೈದ್ಯ ಕೆವಿನ್ ನನ್ನು ರಾಜಾಜಿನಗರದಲ್ಲಿ ಬಂಧಿಸಲಾಗಿದೆ. ರಮ್ಯಾಳ ಸಂಬಂಧಿಯೊಬ್ಬರು ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದಳು. ಅಬಾರ್ಷನ್ ಗೆ ಓಡಾಡುತ್ತಿದ್ದ ಆಕೆಯನ್ನು ಮನವೊಲಿಸಿ 9ತಿಂಗಳು ತನ್ನ ಮನೆಯಲ್ಲಿಟ್ಟುಕೊಂಡು ಆರೈಕೆ ಮಾಡಿದ್ದ ರಮ್ಯಾ ಬಳಿಕ ಮಗು ಹುಟ್ಟುತ್ತಿದ್ದಂತೆ ಮಗುವನ್ನು ಮಾರಾಟ ಮಾಡಿದ್ದಳು. ಮಗುವಿನ ತಾಯಿಗೆ ಬೇರೊಂದು ಮದುವೆಯನ್ನೂ ಮಾಡಿಸಿದ್ದಳು. ಬಂಧಿತ ಆರೋಪಿಗಳು ರಮ್ಯಾಳ ಹೆಸರನ್ನು ಬಾಯ್ಬಿಡುತ್ತಿದ್ದಂತೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಆರೋಪಿ ಕೆವಿನ್ ಎಂಬಿಬಿಎಸ್ ಅರ್ಧಕ್ಕೆ ನಿಲ್ಲಿಸಿ ಡಾಕ್ಟರ್ ಎಂದು ಬೋರ್ಡ್ ಹಾಕಿಕೊಂಡು ಕ್ಲಿನಿಕ್ ನಡೆಸುತ್ತಿದ್ದ. ಮಕ್ಕಳ ಮಾರಾಟ ಜಾಲದಲ್ಲಿ ಈತನೂ ಪ್ರಮುಖವಾಗಿ ಭಾಗಿಯಾಗಿದ್ದು, ಬರ್ತ್ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲೆಗಳನ್ನು ತಯಾರಿಸಿಕೊಡುತ್ತಿದ್ದ ಎಂದು ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ