
ಪ್ರಗತಿವಾಹಿನಿ ಸುದ್ದಿ, ಅಥಣಿ – ತೀವ್ರ ಕ್ಷಯರೋಗ ಸಂಬಂಧಿ ಕಾಯಿಲೆಯಿಂದಾಗಿ ಮೃತಪಟ್ಟವನ ಶವ ಸಂಸ್ಕಾರಕ್ಕೆ ಯಾರೂ ಹೆಗಲು ಕೊಡದ ಕಾರಣ ಮೃತನ ಪತ್ನಿ ಮತ್ತು ಮಗ ಇಬ್ಬರೇ ಶವವನ್ನು ತಳ್ಳುಗಾಡಿಯಲ್ಲಿ ಸಾಗಿಸಿ ಸಂಸ್ಕಾರ ಮಾಡಿರುವ ಘಟನೆ ಅಥಣೆಯಲ್ಲಿ ನಡೆದಿದೆ.

ಅಥಣಿಯ ಬಸ್ ನಿಲ್ದಾಣ ಸಮೀಪದ ಅಂಬೇಡ್ಕರ್ ಕಾಲನಿ ನಿವಾಸಿ ಸದಾಶಿವ ಹಿರಟ್ಟಿ (55) ಮೃತರು. ಆಸ್ಪತ್ರೆಯೊಂದರ ಮುಂಭಾಗ ಅನೇಕ ವರ್ಷಗಳಿಂದ ಚಪ್ಪಲಿ ಹೊಲಿಯುವ ಕೆಲಸದಲ್ಲಿ ನಿರತರಾಗಿದ್ದ ಸದಾಶಿವ ಹಿರಟ್ಟಿ ಕ್ಷಯ ರೋಗದಿಂದ ಬಳಲುತ್ತಿದ್ದರು, ಗುರುವಾರ ಮನೆಯಲ್ಲಿ ಮಲಗಿದ್ದಲ್ಲೇ ಅವರು ಮೃತಪಟ್ಟಿದ್ದರು.
ಜನತೆಯ ಅಸಹಕಾರದ ಮಧ್ಯೆಯೂ ಧೃತಿಗೆಡದ ಸದಾಶಿವ ಅವರ ಪತ್ನಿ, ಪತಿಯ ಶವವನ್ನು ಬಟ್ಟೆಯಲ್ಲಿ ಸುತ್ತಿ ಮಗನೊಂದಿಗೆ ಹಾಗೂ ಇನ್ನೊಬ್ಬರ ಸಹಾಯದಿಂದ ತಳ್ಳುವ ಗಾಡಿಯಲ್ಲಿ ಸಾಗಿಸಿ, ಗಂಡನ ಅಂತ್ಯಸಂಸ್ಕಾರ ನೆರವೇರಿಸಿದರು.
ತಳ್ಳುವ ಗಾಡಿಯಲ್ಲಿ ಮಗ ಶವ ಸಾಗಿಸುತ್ತ ಅದರ ಹಿಂದಿಂದೆ ಪತ್ನಿ ಓಡುತ್ತಿದ್ದ ದೃಶ್ಯ ಮನಕಲಕುವಂತಿದೆ. ಮಾನವೀಯತೆ ಸತ್ತು ಹೋಗಿದೆಯಾ ಎಂಬ ಪ್ರಶ್ನೆ ಕಾಡುತ್ತದೆ. ಸಂಸ್ಕಾರಕ್ಕೂ ಹೆಗಲಿಲ್ಲದೆ ತಳ್ಳುವ ಗಾಡಿಯಲ್ಲಿ ಗಂಡನ ಶವ ಸಾಗಿಸಿ ಅಂತ್ಯಸಂಸ್ಕಾರ ಮಾಡುವ ಇಂತಹ ದುಸ್ಥಿತಿ ನಿಜಕ್ಕೂ ಅಮಾನವೀಯವಾದುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ