Kannada NewsKarnataka NewsLatest

ಕಾಂಗ್ರೆಸ್ ನಿಂದ ವಿಶ್ವಕರ್ಮ ಸಮುದಾಯಕ್ಕೆ ಅನ್ಯಾಯ -ನಂಜುಂಡಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಎಲ್ಲ ವರ್ಗಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಡುವುದರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಗ್ರಗಣ್ಯರು. ಮುಂದಿನ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ಬಿಜೆಪಿ ಸರ್ಕಾರ ಮುಂದುವರೆಯಲು ವಿಶ್ವಕರ್ಮ ಸಮಾಜದವರು ಬಿಜೆಪಿಗೆ ಮತ ನೀಡಿ ಆಶೀರ್ವದಿಸುವಂತೆ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ಮನವಿ ಮಾಡಿದರು.
ಸೋಮವಾರ ಇಲ್ಲಿಯ ಎನ್‌ಎಸ್‌ಎಫ್ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಕರ್ಮ ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಯಡಿಯೂರಪ್ಪನವರ ಸರ್ಕಾರ ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ಪ್ರತಿ ಸಮಾಜಕ್ಕೂ ಯಡಿಯೂರಪ್ಪನವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ನೀಡುತ್ತಿದ್ದಾರೆ. ಅವುಗಳ ಅಭ್ಯುದಯಕ್ಕೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಹಿಂದುಳಿದ ವರ್ಗದವರು ಇಂದು ಏನನ್ನಾದರೂ ಸಾಧನೆ ಮಾಡಿದ್ದಾರೆಂದರೆ ಅದಕ್ಕೆ ಬಿಜೆಪಿ ಸರ್ಕಾರ ಕಾರಣವೆಂದು ತಿಳಿಸಿದರು.

ಸಮಾಜಕ್ಕೆ ಕಾಂಗ್ರೇಸ್ಸಿನಿಂದ ಅನ್ಯಾಯ

ನಮ್ಮ ಸಮುದಾಯವನ್ನು ಕಾಂಗ್ರೇಸ್ ಪಕ್ಷ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾ ಬಂದಿದೆ. ಸಮಾಜದ ಅಭಿವೃದ್ಧಿಯಲ್ಲಿ ಕಾಂಗ್ರೇಸ್ಸಿನ ಸಾಧನೆ ಶೂನ್ಯವಾಗಿದೆ. ಹಿಂದುಳಿದ ವರ್ಗದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸದೇ, ಹಿಂದುಳಿದ ವರ್ಗಗಳನ್ನು ಒಡೆಯುವ ಕೆಲಸ ಮಾಡಿದರು. ಕೇವಲ ದೇವರಾಜ್ ಅರಸು ಅವರ ಹೆಸರು ಹೇಳಿ ಜನರನ್ನು ಮರುಳು ಮಾಡಿದರೇ ವಿನಹ: ಅವರಿಂದ ನಮ್ಮಂತಹ ಸಮುದಾಯಗಳಿಗೆ ನ್ಯಾಯ ದೊರೆಕಿಸಿಕೊಡುವ ಪ್ರಯತ್ನವನ್ನು ಮಾಡಲೇ ಇಲ್ಲವೆಂದು ಆರೋಪಿಸಿದರು.

ರಮೇಶ ಜಾರಕಿಹೊಳಿ ಬೆಂಬಲಿಸಿ 

ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಸಮಾಜದವರು ಬೆಂಬಲಿಸಿ ಆಶೀರ್ವದಿಸಬೇಕು. ಕಳೆದ ೨೦ ವರ್ಷಗಳಿಂದ ಎಲ್ಲ ಸಮಾಜಗಳನ್ನು ಪ್ರೀತಿಸಿ ಗೌರವಿಸುತ್ತಿರುವ ರಮೇಶ್ ಜಾರಕಿಹೊಳಿ ಅವರು ಅಭಿವೃದ್ಧಿಯ ಹರಿಕಾರರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಕೈಗೊಳ್ಳುವ ಮೂಲಕ ಜನಾನುರಾಗಿಯಾಗಿರುವ ರಮೇಶ್ ಅವರಿಂದಲೇ ನಮ್ಮ ಸರ್ಕಾರ ರಾಜ್ಯದಲ್ಲಿ ಉದಯಿಸಿದೆ.

ಮುಂದಿನ ೪೦ ತಿಂಗಳು ಕಾಲ ಅಧಿಕಾರ ನಡೆಸಿ ರಾಜ್ಯದಲ್ಲಿ ಸ್ಥಿರ ಸರ್ಕಾರ ನಡೆಸಲು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಕರೆ ನೀಡಿದ ಅವರು, ಹಿಂದುಳಿದ ವರ್ಗಗಳ ಅಭಿವೃದ್ಧಿಯಾಗಬೇಕಾದರೆ ಅದು ಬಿಜೆಪಿಯಿಂದ ಮಾತ್ರ ಸಾಧ್ಯವೆಂದು ಹೇಳಿದರು.

ಕ್ಷೇತ್ರದಲ್ಲಿ ಸುಮಾರು ೧೦ ಸಾವಿರ ವಿಶ್ವಕರ್ಮ ಸಮಾಜದವರ ಮತಗಳಿದ್ದು, ಎಲ್ಲ ಮತಗಳು ಯಡಿಯೂರಪ್ಪನವರ ಕೈ ಬಲಪಡಿಸಲು ರಮೇಶ ಜಾರಕಿಹೊಳಿ ಅವರಿಗೆ ಮತ ನೀಡಿ ಆಶೀರ್ವಾದ ಮಾಡುವಂತೆ ಈಗಾಗಲೇ ಸಮಾಜ ಬಾಂಧವರಲ್ಲಿ ಮನವಿ ಮಾಡಲಾಗಿದೆ ಎಂದು ಹೇಳಿದರು.

ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ, ಗೋಕಾಕ ಕ್ಷೇತ್ರದ ಉಸ್ತುವಾರಿ ಹಾಗೂ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ), ಬಿಜೆಪಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button