*ಇನ್ಸ್ ಪೆಕ್ಟರ್ ಹಿಂದೆ ಬಿದ್ದ ಮಹಿಳೆ: ಲವ್ ಮಾಡುವಂತೆ ಲೆಟರ್, ಮೆಸೇಜ್ ಮಾಡಿ ಕಾಟ: FIR ದಾಖಲು*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಇನ್ಸ್ ಪೆಕ್ಟರ್ ಓರ್ವರಿಗೆ ಮಹಿಳೆಯೊಬ್ಬರು ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಪತ್ರಗಳ ಮೇಲೆ ಪತ್ರ, ಮೆಸೇಜ್ ಗಳ ಮೇಲೆ ಮೆಸೇಜ್ ಕಳುಹಿಸಿ ಕಾಟ ಕೊಡುತ್ತಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ರಾಮಮೂರ್ತಿನಗರ ಠಾಣೆ ಇನ್ಸ್ ಪೆಕ್ಟರ್ ಸತೀಶ್ ಎಂಬುವವರಿಗೆ ಮಹಿಳೆಯೊಬ್ಬರು ಪೀಡಿಸುತ್ತಿದ್ದು, ಮಹಿಳೆಯ ಕಾಟಕ್ಕೆ ಬೇಸತ್ತ ಪೊಲೀಸ್ ಅಧಿಕಾರಿ ಎಫ್ ಐ ಆರ್ ದಾಖಲಿಸಿದ್ದಾರೆ.
ಬರೋಬ್ಬರಿ 11 ಮೊಬೈಲ್ ಸಂಖ್ಯೆಗಳಿಂದ ಮಹಿಳೆ ಇನ್ಸ್ ಪೆಕ್ಟರ್ ಗೆ ಮೆಸೇಜ್ ಕಳುಹಿಸುತ್ತಿದ್ದಾಳಂತೆ. ತನ್ನನ್ನು ಪ್ರೀತಿಸಬೇಕು. ಇಲ್ಲವಾದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಪೊಲೀಸ್ ಠಾಣೆಗೂ ಡಬ್ಬಿಯಲ್ಲಿ ಕಚ್ಚಾಯ, ಹೂ ಗುಚ್ಛಗಳನ್ನು ತಂದಿಟ್ಟಿದ್ದು, ಪ್ರೀತಿಸದಿದ್ದರೆ ಸಾಯುವುದಾಗಿ ರಕ್ತದಲ್ಲಿ ಹಾರ್ಟ್ ಚಿತ್ರ ಬರೆದು ಪತ್ರವನ್ನೂ ರವಾನಿಸಿದ್ದಾಳಂತೆ.
ಇನ್ಸ್ ಪೆಕ್ಟರ್ ಮಹಿಳೆಯ 11 ಮೊಬೈಲ್ ನಂಬರ್ ಗಳನ್ನು ಬ್ಲಾಕ್ ಮಾಡಿದ್ದಾರೆ. ಆದರೂ ಮಹಿಳೆಯ ಕಾಟ ತಪ್ಪಿಲ್ಲ. ತನಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೊತ್ತು, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವರೂ ಗೊತ್ತು ಎಂದು ಅವರೊಂದಿಗಿನ ಫೋಟೋ ಕಳುಹಿಸಿದ್ದಾಳೆ. ದೂರು ಕೊಟ್ಟರೆ ತೆಗೆದುಕೊಳ್ಳಬೇಕು ಎಂದು ದಮ್ಕಿ ಹಾಕಿದ್ದಾಳಂತೆ. ಮಹಿಳೆಯ ಕಾಟಕ್ಕೆ ಬೇಸತ್ತ ಇನ್ಸ್ ಪೆಕ್ಟರ್ ಮಹಿಳೆ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.



