Politics

*ಯುಜಿ/ಎಬಿ ಕೇಬಲ್‌ ಅಳವಡಿಕೆ ಶೇ.97ರಷ್ಟು ಪೂರ್ಣ: ಇಂಧನ ಸಚಿವ ಕೆ.ಜೆ. ಜಾರ್ಜ್‌*

ಶೇ. 100ರಷ್ಟು ಕಾರ್ಯ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ

ಪ್ರಗತಿವಾಹಿನಿ ಸುದ್ದಿ: ಬೆಂಗಳೂರು ನಗರದಲ್ಲಿ ವಿದ್ಯುತ್‌ ಪೂರೈಕೆಯ ಭೂಗತ ಕೇಬಲ್‌ ಮತ್ತು ಏರಿಯಲ್‌ ಬಂಚ್ಡ್ ಕೇಬಲ್‌ ಅಳವಡಿಕೆ ಕಾರ್ಯಯನ್ನು ಬೆಸ್ಕಾಂ ಬಹುತೇಕ ಪೂರ್ಣಗೊಳಿಸಿದ್ದು, ಒಟ್ಟಾರೆ ಶೇ.97ರಷ್ಟು ಪ್ರಗತಿ ಸಾಧಿಸಿದೆ.

ಭೂಗತ ಕೇಬಲ್‌ ಮತ್ತು ಏರಿಯಲ್‌ ಬಂಚ್ಡ್ ಕೇಬಲ್‌ ಅಳವಡಿಕೆ ಕುರಿತಂತೆ ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನೆ ನಡೆಸಿದ ಇಂಧನ ಸಚಿವ ಕೆ.ಜೆ.ಜಾರ್ಜ್‌, ಬಾಕಿ ಇರುವ ಕೇಬಲ್ ಅಳವಡಿಕೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವ ಮೂಲಕ ಭೂಗತ ಕೇಬಲ್‌ ಮತ್ತು ಏರಿಯಲ್‌ ಬಂಚ್ಡ್ ಕೇಬಲ್‌ ಅಳವಡಿಕೆ ಯೋಜನೆಯಲ್ಲಿ ಶೇ. 100ರಷ್ಟು ಯಶಸ್ಸು ಸಾಧಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು ನಗರದಲ್ಲಿ ನಾಲ್ಕು ಹಂತಗಳಲ್ಲಿ 11 ಕೆ.ವಿ.ಯ 7396.64 ಕಿ.ಮೀ. ತಂತಿಗಳನ್ನು ಭೂಗತ ಕೇಬಲ್ ಅಥವಾ ಏರಿಯಲ್ ಬಂಚ್ಡ್ ಆಗಿ ಪರಿವರ್ತಿಸಲು ನಿರ್ಧರಿಸಲಾಗಿದ್ದು, ಈ ಪೈಕಿ 7285.03 ಕಿ.ಮೀ. (ಶೇ. 98.49) ಪ್ರಗತಿಯಾಗಿದೆ. ಅದೇ ರೀತಿ 6354.47 ಎಲ್ ಟಿ ಕೇಬಲ್ ಪೈಕಿ 6280.15 ಕಿ.ಮೀ. (ಶೇ. 98.83) ಸಾಧನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಭೂಗತ ಕೇಬಲ್‌ಗೆ ಹಾನಿ ಮಾಡಿದರೆ ದಂಡ

ಬೆಸ್ಕಾಂ ವತಿಯಿಂದ ನಗರದಲ್ಲಿ ಅಳವಡಿಸಿರುವ ಭೂಗತ ಕೇಬಲ್ ಗಳಿಗೆ ಇತರೆ ಖಾಸಗಿ ಕಂಪನಿಗಳ ಕೇಬಲ್ ಗಳಿಂದ ಹಾನಿಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಈ ರೀತಿಯ ಕೃತ್ಯಗಳಿಗೆ ದಂಡ ವಿಧಿಸುವ ಬಗ್ಗೆ ಸೂಕ್ತ ನಿಯಮ ರೂಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.

“ಖಾಸಗಿ ಜಾಲಗಳು ರಸ್ತೆ ಅಗೆದು ತಮ್ಮ ಕೇಬಲ್ ಅಳವಡಿಸುವ ಸಂದರ್ಭದಲ್ಲಿ ಬೆಸ್ಕಾಂನ ಭೂಗತ ವಿದ್ಯುತ್ ಕೇಬಲ್ ಗಳಿಗೆ ಹಾನಿ ಮಾಡುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರ ಜತಗೆ ಆರ್ಥಿಕವಾಗಿಯೂ ನಷ್ಟವಾಗುತ್ತಿದೆ. ಹೀಗಾಗಿ ಕೇಬಲ್ ಇರುವ ಬಗ್ಗೆ ಗುರುತು ಹಾಕಬೇಕು. ಜತೆಗೆ, ಅದಕ್ಕೆ ಹಾನಿ ಮಾಡಿದರೆ ಹೆಚ್ಚು ಮೊತ್ತದ ದಂಡ ವಿಧಿಸುವ ಬಗ್ಗೆ ನಿಯಮ ರೂಪಿಸಬೇಕು. ತಕ್ಷಣದಿಂದಲೇ ಇದರ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button