Kannada NewsKarnataka News

ಪುನರ್ವಸತಿಗೆ ಆದ್ಯತೆ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ

ಪುನರ್ವಸತಿಗೆ ಆದ್ಯತೆ ನೀಡಲು ಜಿಲ್ಲಾಡಳಿತಕ್ಕೆ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
“ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ರಕ್ಷಣಾ ಕಾರ್ಯ ನಡೆದಿದೆ. ಪುನರ್ವಸತಿ ಬಗ್ಗೆ ಜನರ ನಿರೀಕ್ಷೆ ಜಾಸ್ತಿ ಇರುತ್ತದೆ. ಆದ್ದರಿಂದ ಈ ಬಗ್ಗೆ ಇನ್ನೂ ಹೆಚ್ಚಿನ ಕೆಲಸ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು” ಎಂದು ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಸೂಚನೆ ನೀಡಿದರು.
ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಸೋಮವಾರ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ನಲ್ಲಿ ಚಿಕ್ಕೋಡಿಯಿಂದ ಅವರು ಮಾತನಾಡಿದರು.
ಪರಿಹಾರ ಕೇಂದ್ರಕ್ಕೆ ರಜನೀಶ್ ಗೋಯಲ್ ಭೇಟಿ
ಸಂತ್ರಸ್ತಗೊಂಡಿರುವ ಪ್ರತಿ ಕುಟುಂಬಕ್ಕೂ ಹಾಸಿಗೆ, ಹೊದಿಕೆ, ಬಟ್ಟೆ ತಲುಪಿಸಬೇಕು. ಸರ್ಕಾರ ಹಾಗೂ ಸಾರ್ವಜನಿಕರಿಂದ ನೆರವು ಹರಿದುಬರುತ್ತಿದ್ದು, ಅದನ್ನು ಸಕಾಲದಲ್ಲಿ ತಲುಪಿಸಬೇಕು ಎಂದರು.
ಪಠ್ಯಪುಸ್ತಕ ಕಳೆದುಕೊಂಡಿರುವ ಶಾಲಾ ಮಕ್ಕಳಿಗೆ ಹೆಚ್ಚುವರಿ ಪುಸ್ತಕಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಆಲಮಟ್ಟಿ ಜಲಾಶಯದ ಒಳಹರಿವು ಹಾಗೂ ಹೊರ ಹರಿವು ನಡುವೆ ವ್ಯತ್ಯಾಸವಾಗುತ್ತಿದೆ. ಆದ್ದರಿಂದ ಜಲಾಶಯದ ಒಳಹರಿವು ಪ್ರಮಾಣಕ್ಕೆ ಅನುಗುಣವಾಗಿ ಹೊರಹರಿವು ಪ್ರಮಾಣ ಕಾಯ್ದುಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ಒಳಹರಿವು ಮತ್ತು ಹೊರ ಹರಿವು ಸಮಪ್ರಮಾಣದಲ್ಲಿ ಕಾಯ್ದುಕೊಂಡರೆ ಪರಿಸ್ಥಿತಿ ಇನ್ನಷ್ಟು ಉತ್ತಮಪಡಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಈ ಬಗ್ಗೆ ಸೂಚನೆ ನೀಡಲಾಗುವುದು ಎಂದು ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಭರವಸೆ ನೀಡಿದರು.

ರಕ್ಷಣಾ ಕಾರ್ಯ ಪೂರ್ಣ

  ಪ್ರವಾಹದಿಂದ ಸಿಲುಕಿರುವ ಎಲ್ಲ ಜನರನ್ನು ರಕ್ಷಿಸಲಾಗಿದೆ. ಚಿಕ್ಕೋಡಿ ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಇನ್ನೂ ಜನರಿದ್ದು, ಅವರು ಸ್ಥಳಾಂತರಗೊಳ್ಳಲು ನಿರಾಕರಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ ಪ್ರವಾಹ ಬಾಧಿತ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಂಡಿದ್ದು, ಪರಿಹಾರ ಹಾಗೂ ಪುನರ್ವಸತಿ ಕೆಲಸಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆ, ಸ್ಥಳಾಂತರ, ಪರಿಹಾರ ಹಾಗೂ ಪುನರ್ವಸತಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶಿಲ್ದಾರರೊಂದಿಗೆ ಸೋಮವಾರ(ಆ.12) ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಹಾರ ಕಾರ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.
ಅಪಾಯದಲ್ಲಿರುವ ಗ್ರಾಮಗಳ ಜನರನ್ನು ಸ್ಥಳಾಂತರಿಸಲಾಗಿದೆ. ಆದಾಗ್ಯೂ ಹೊರಬರಲು ನಿರಾಕರಿಸುತ್ತಿರುವ ಕೆಲ ಗ್ರಾಮಗಳ ಜನರಿಗೆ ಆಹಾರ ಪದಾರ್ಥಗಳನ್ನು ಮತ್ತು ನೀರು ಪೂರೈಸಲಾಗುತ್ತಿದ್ದು, ನೀರಿನ ಮಟ್ಟದಲ್ಲಿ ಹೆಚ್ಚಳ ಕಂಡುಬಂದರೆ ಮತ್ತೊಮ್ಮೆ ಗ್ರಾಮಸ್ಥರ ಮನವೊಲಿಸಿ ಸ್ಥಳಾಂತರಿಸಲಾಗುವುದು.
2005ರಲ್ಲಿ ಕೃಷ್ಣಾ ನದಿಪಾತ್ರದಲ್ಲಿ ಮಾತ್ರ ಪ್ರವಾಹವಿತ್ತು. ಜಿಲ್ಲೆಯ ಎಲ್ಲ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹದಿಂದಾಗಿ ಎಲ್ಲ ತಾಲ್ಲೂಕಿನಲ್ಲಿ ಪ್ರವಾಹ ನಿರ್ವಹಣೆ ಸವಾಲಾಗಿ ಪರಿಣಮಿಸಿತ್ತು.
300ಕ್ಕೂ ಅಧಿಕ ಗ್ರಾಮಗಳ ಸ್ಥಳಾಂತರ, 400 ಕ್ಕೂ ಅಧಿಕ ಪರಿಹಾರ ಕೇಂದ್ರಗಳ ಸ್ಥಾಪನೆ, ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.
ಪರಿಹಾರ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ಊಟೋಪಹಾರ ನೀಡುವಾಗ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಅದೇ ರೀತಿ ಸಂಘ-ಸಂಸ್ಥೆಗಳು ನೀಡುವ ಆಹಾರ ಪದಾರ್ಥಗಳನ್ನು ಪರಿಶೀಲಿಸಿಯೇ ಸಂತ್ರಸ್ತರಿಗೆ ನೀಡಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸಿದರೆ ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಆದ್ದರಿಂದ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.
ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳ ಸಮೀಕ್ಷೆ ನಡೆಸಿ ಜಿಲ್ಲಾಡಳಿಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರವಾಹ ಪರಿಸ್ಥಿತಿ ನಿಯಂತ್ರಣ:

ರಾಮದುರ್ಗ ಎಂಟು ಗ್ರಾಮಗಳಿಗೆ ರಸ್ತೆ ಸಂಚಾರ ಬಂದ್ ಇತ್ತು. ನಾಳೆ ವೇಳೆಗೆ ಸಂಚಾರಕ್ಕೆ ಮುಕ್ತವಾಗಲಿವೆ. ರಾಮದುರ್ಗ ಪಟ್ಟಣ ಕೂಡ ಜಲಾವೃತಗೊಂಡಿವೆ ಎಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
ಚಿಕ್ಕೋಡಿ ತಾಲ್ಲೂಕಿನ ಚಂದೂರ, ಚಂದೂರವಾಡಿ, ಯಡೂರು, ಯಡೂರವಾಡಿ ಈ ನಾಲ್ಕು ಗ್ರಾಮದಲ್ಲಿ ಸಾವಿರಕ್ಕೂ ಅಧಿಕ ಜನರಿದ್ದು, ಅವರು ಸ್ಥಳಾಂತರಕ್ಕೆ ನಿರಾಕರಿಸಿದ್ದಾರೆ ಎಂದು ನೋಡಲ್ ಅಧಿಕಾರಿ ಜಿಲಾನಿ ಮೊಖಾಶಿ ತಿಳಿಸಿದರು.
ಅಥಣಿ ತಾಲ್ಲೂಕಿನ ಮಹೇಶವಾಡಿ 50-60 ಜನರಿದ್ದಾರೆ. ನಂದೇಶ್ವರ ಗ್ರಾಮದಲ್ಲಿ ಸ್ವಲ್ಪ ಜನರಿದ್ದು, ಇಂದು ಸಂಜೆ ವೇಳೆಗೆ ಸ್ಥಳಾಂತರ ಮಾಡಲಾಗುವುದು ಎಂದು ತಹಶೀಲ್ದಾರ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ತಕ್ಷಣ ಪರಿಹಾರ ನೀಡಲು ಸೂಚನೆ:

ಪ್ರವಾಹದಿಂದಾಗಿ ಸಾವನ್ನಪ್ಪಿರುವ ಪ್ರಕರಣಗಳಲ್ಲಿ ಪ್ರಥಮ ಮಾಹಿತಿ ವರದಿ ಆಧರಿಸಿ ತಕ್ಷಣ ಇಂದೇ ಪರಿಹಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಅದೇ ರೀತಿ ಪ್ರವಾಹದಿಂದ ಎತ್ತು, ಎಮ್ಮೆ, ಕೋಳಿಗಳು ಸೇರಿದಂತೆ ಯಾವುದೇ ಜಾನುವಾರುಗಳು ಸಾವನ್ನಪ್ಪಿದ್ದರೆ ನಿಯಮಾವಳಿ ಪ್ರಕಾರ ಮಾಲೀಕರಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಬೆಳಗಾವಿ ತಾಲ್ಲೂಕಿನಲ್ಲಿ 3 ಜನರ ಸಾವನ್ನಪ್ಪಿದ್ದು, ಮೂರು ಕುಟುಂಬಗಳಿಗೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಚೆಕ್ ನೀಡಲಾಗಿದೆ ಎಂದು ತಹಶೀಲ್ದಾರ ಮಂಜುಳಾ ನಾಯಕ ತಿಳಿಸಿದರು.
ಹುಕ್ಕೇರಿ ತಾಲೂಕಿನಲ್ಲಿ ಮೂರು ಸಾವು ಸಂಭವಿಸಿದ್ದು, ಇದರಲ್ಲಿ ಎರಡು ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, ಒಂದು ಪ್ರಕರಣದಲ್ಲಿ ವೈದ್ಯಕೀಯ ಹಾಗೂ ಪೊಲೀಸ್ ವರದಿಗಾಗಿ ಕಾಯಲಾಗುತ್ತಿದೆ.
ಬೈಲಹೊಂಗಲ ತಾಲ್ಲೂಕಿನಲ್ಲಿ ಒಟ್ಟು ಇಬ್ಬರು ಸಾವನ್ನಪ್ಪಿದ್ದು, ಪರಿಹಾರ ನೀಡಲಾಗುತ್ತಿದೆ.
ಸವದತ್ತಿ ತಾಲ್ಲೂಕಿನಲ್ಲಿ ಇಬ್ಬರು, ರಾಮದುರ್ಗ ತಾಲ್ಲೂಕಿನಲ್ಲಿ ಇಬ್ಬರು ಮೃತಪಟ್ಟಿದ್ದು, ವರದಿ ಬಂದ ತಕ್ಷಣ ಪರಿಹಾರ ನೀಡಲಾಗುವುದು. ಗೋಕಾಕ ಮೂರು ಜನರು ಸಾವನ್ನಪ್ಪಿದ್ದು, ಒಬ್ಬರ ಮೃತದೇಹ ದೊರೆತಿಲ್ಲ; ಪೊಲೀಸ್ ವರದಿ ಆಧರಿಸಿ ಮೂರೂ ಪ್ರಕರಣಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ತಿಳಿಸಿದರು.
ಅಥಣಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಒಬ್ಬರ ದೇಹ ಸಿಕ್ಕಿಲ್ಲ; ರಾಯಬಾಗ ಒಂದು ನಾಪತ್ತೆ ಪ್ರಕರಣ ದಾಖಲಾಗಿದೆ.

ಮೇವು ಬ್ಯಾಂಕ್ ಸ್ಥಾಪಿಸಲು ಸೂಚನೆ:

ಜಾನುವಾರುಗಳಿಗೆ ಅಗತ್ಯವಿರುವ ಮೇವು ಖರೀದಿಸಬೇಕು. ಪರಿಹಾರ ಕೇಂದ್ರಗಳಲ್ಲಿ ಇರುವ ಜಾನುವಾರುಗಳಿಗೆ ಉಚಿತ ಮೇವು ಒದಗಿಸಬೇಕು. ಪ್ರವಾಹ ಬಾಧಿತ ಗ್ರಾಮಗಳಲ್ಲಿ ಮೇವಿನ ಬೇಡಿಕೆ ಇದ್ದರೆ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಪ್ರತಿ ಕುಟುಂಬಕ್ಕೂ ಪರಿಹಾರ ನೀಡಲು ಸೂಚನೆ:

ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಆರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿರುವ ಪ್ರತಿ ಕುಟುಂಬಕ್ಕೂ ಬಟ್ಟೆ ಹಾಗೂ ಪಾತ್ರೆಗಳಿಗಾಗಿ 3800 ರೂಪಾಯಿ ಪರಿಹಾರವನ್ನು ಇಂದು ವಿತರಿಸಬೇಕು ಎಂದು ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪರಿಹಾರ ಕೇಂದ್ರಗಳಲ್ಲಿ ಇರುವ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಿಸಿ ವರದಿ ಸಲ್ಲಿಸಬೇಕು. ನಿಯಮಾವಳಿಗಿಂತ ಮಾನವೀಯತೆ ಆಧಾರದ ಮೇಲೆ ಪರಿಹಾರ ನೀಡಬೇಕು ಎಂದರು.
ಆಯಾ ಕ್ಷೇತ್ರದ ಜನಪ್ರತಿನಿಧಿಗಳ ಗಮನಕ್ಕೆ ತಂದು ಆದಷ್ಟು ಬೇಗನೇ ಪರಿಹಾರ ಚೆಕ್ ವಿತರಿಸಬಹುದು. ಒಂದು ವೇಳೆ ಸಾಧ್ಯವಾದರೆ ಅವರ ಮೂಲಕವೂ ವಿತರಿಸಬಹುದಾಗಿದೆ. ಆದರೆ ಅದಕ್ಕಾಗಿಯೇ ಕಾದು ಕುಳಿತು ಪರಿಹಾರ ವಿಳಂಬಗೊಳಿಸಬಾರದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು, ಪ್ರವಾಹದ ನಂತರ ಸಾಂಕ್ರಾಮಿಕ ರೋಗಗಳು ಮತ್ತು ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಸ್ವಚ್ಛತೆಗೆ ಗಮನ ಕೊಡಬೇಕು ಎಂದು ಸೂಚನೆ ನೀಡಿದರು.
ರಸ್ತೆ ದುರಸ್ತಿ, ಶಾಲಾ ಕಟ್ಟಡಗಳ ನಿರ್ಮಾಣ ಮತ್ತಿತರ ಮೂಲಸೌಕರ್ಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಪ್ರವಾಹದ ಹಾನಿಯ ಕುರಿತು ಸಮಗ್ರ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ., ಅಪರ ಪ್ರಾದೇಶಿಕ ಆಯುಕ್ತರಾದ ರಮೇಶ್ ಕಳಸದ, ಶಶಿಧರ್ ಕುರೇರ್, ಮಹಾನಗರ ಪಾಲಿಕೆ ಆಯುಕ್ತರಾದ ಅಶೋಕ್ ದುಡಗುಂಟಿ ಮತ್ತಿತರರು ಉಪಸ್ಥಿತರಿದ್ದರು.
ಎಲ್ಲ ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button