ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮಧುಮೇಹದಿಂದಾಗಿ ಪಾದದ ಹುಣ್ಣುಗಳಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸುಧಾರಿತ ತಂತ್ರಜ್ಞಾನಗಳು ಮತ್ತು ಚಿಕಿತ್ಸಾ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಅಂತಾರಾಷ್ಟ್ರೀಯ ಸಮ್ಮೇಳನ ‘ಪೊಡೊಕಾನ್’ (PODOCON) ಅನ್ನು ಮೇ 27 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ.
ಅಮೆರಿಕನ್ ಲಿಂಬ್ ಪ್ರಿಸರ್ವೇಶನ್ ಸೊಸೈಟಿ ಮತ್ತು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಹಯೋಗದಲ್ಲಿ ಪೊಡೊಕಾನ್ ನಡೆಯಲಿದೆ.
ಪೊಡೊಕಾನ್ ನ ಐದನೇ ಆವೃತ್ತಿ ‘ಡಿ.ಎಫ್.ಟೆಕ್’ (DFTech) ಅತ್ಯಾಧುನಿಕ ಡ್ರೆಸ್ಸಿಂಗ್ ತಂತ್ರಜ್ಞಾನಗಳು, ಸ್ಟೆಮ್ ಸೆಲ್ ಗಳ ಪುನರುತ್ಪಾದಕ ಚಿಕಿತ್ಸೆ, ಗಾಯದ ಆರೈಕೆಯಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ, ಜೀನ್ ಚಿಕಿತ್ಸೆ ಮತ್ತು ಆಫ್‌ಲೋಡಿಂಗ್‌ಗಾಗಿ ಚಿಕಿತ್ಸಕರಿಗೆ ಮಾರ್ಗಸೂಚಿಗಳ ಕುರಿತು ಚರ್ಚಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.
ರೋಗಿಗಳ ಆರೈಕೆ, ಪ್ರಕ್ರಿಯೆ, ಉತ್ಪನ್ನ ಬಳಕೆ ಮತ್ತು 2023ರ ವಿವಿಧ ವಿಭಾಗಗಳಲ್ಲಿನ ನಾವೀನ್ಯತೆಗಾಗಿ ಪೊಡೊಕಾನ್ ‘ಯುವ ಸಾಧಕರ ಪ್ರಶಸ್ತಿ’ (Young Achievers Awards)ಯನ್ನು ಸಹ ಪರಿಚಯಿಸುತ್ತಿದೆ. ಗಾಯದ ಆರೈಕೆ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಬಳಸಿದ ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು.
ಪಾಲುದಾರ ಸಂಸ್ಥೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಫೂಟ್‌ಸೆಕ್ಯೂರ್ ಜತೆಯಲ್ಲಿ ಪೊಡೊಕಾನ್ ಅನ್ನು ಆಯೋಜಿಸಲಿದೆ. IISc ಯ ಡೀನ್ ಡಾ. ಅನಂತ ಸುರೇಶ ಅವರು ಈ ಸಮ್ಮೇಳನ ನಡೆಸಿಕೊಡಲಿದ್ದಾರೆ. ಸಮ್ಮೇಳನದ ಆಯೋಜನೆ ಕುರಿತು ಪ್ರತಿಕ್ರಿಯಿಸಿದ ಅವರು, ಮಧುಮೇಹ ಪಾದದ ನಿರ್ವಹಣೆಯಲ್ಲಿ ಗುರುತರ ಸೇವೆ ನೀಡುವ ಫೂಟ್‌ಸೆಕ್ಯೂರ್‌ನೊಂದಿಗೆ IIScಯ ಫಲಪ್ರದ ಸಂಶೋಧನಾ ಸಹಯೋಗದ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪಾದದ ಆರೋಗ್ಯಕ್ಕಾಗಿ ವಿನೂತನ ಪರಿಹಾರೋಪಾಯಗಳನ್ನು ಮುಂದುವರಿಸಲು ಮತ್ತು ಕ್ಷೇತ್ರದಲ್ಲಿ ಅತ್ಯಾಧುನಿಕ ಸಂಶೋಧನೆಯನ್ನು ಉತ್ತೇಜಿಸುವಲ್ಲಿನ ಬದ್ಧತೆಯನ್ನು ಈ ಜಂಟಿ ಸಹಯೋಗ ಹೊಂದಿದ ಸಂಸ್ಥೆಗಳು ಪ್ರದರ್ಶಿಸುತ್ತಿವೆ.
ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ.ರವಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. “ಅತ್ಯಾಧುನಿಕ ಆರೋಗ್ಯ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನಗಳು ವರ್ಷದಿಂದ ವರ್ಷಕ್ಕೆ ಗಣನೀಯ ಸುಧಾರಣೆ ಕಾಣುತ್ತಿದೆ. ಮಧುಮೇಹ ಪಾದದ ಚಿಕಿತ್ಸೆ ವಿಧಾನಕ್ಕೆ ಇದು ನಿಶ್ಚಿತವಾಗಿಯೂ ಉತ್ತಮ ಭವಿಷ್ಯವಾಗಿದೆ. ಈ ವರ್ಷದ ಸಮ್ಮೇಳನ ತಾಂತ್ರಿಕತೆ ಮತ್ತು ಚಿಕಿತ್ಸಾ ವಿಧಾನವನ್ನು ಸಾರವಾಗಿ ಅಳವಡಿಸಿಕೊಂಡಿರುವುದು ಸಂತೋಷದಾಯಕ ಸಂಗತಿ. ಇದಕ್ಕೆ ಎಲ್ಲರೂ ಒಟ್ಟಾಗಿ ಕೈಜೋಡಿಸೋಣ, PODOCON ಮೂಲಕ ಆರೋಗ್ಯ ರಕ್ಷಣೆಯ ಭವಿಷ್ಯದತ್ತ ಹೆಜ್ಜೆ ಹಾಕೋಣ” ಎಂದು ಅವರು ಹೇಳಿದ್ದಾರೆ.
ಅಮೇರಿಕನ್ ಲಿಂಬ್ ಪ್ರಿಸರ್ವೇಶನ್ ಸೊಸೈಟಿ (ALPS) ಸ್ಥಾಪಕ ಅಧ್ಯಕ್ಷ, ಪಾಡಿಯಾಟ್ರಿಕ್ ಸರ್ಜರಿ, ಮಧುಮೇಹ ಪಾದ, ಅಂಗಗಳ ರಕ್ಷಣೆ, ಅಂಗಾಂಶ ದುರಸ್ತಿ ಮತ್ತು ಗಾಯ ಗುಣಪಡಿಸುವ ಕ್ಷೇತ್ರಗಳಲ್ಲಿ ನಾಯಕರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಿತ ಡಾ. ಡೇವಿಡ್ ಆರ್ಮ್‌ಸ್ಟ್ರಾಂಗ್ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.
“ಹೆಜ್ಜೆಗಳು ಚಿಕ್ಕದಾಗಿರಬಹುದು. ಆದರೆ ಅವು ಅನ್ವೇಷಣೆ, ಸಾಧನೆಯ ಹಾದಿಯಲ್ಲಿ ಮುನ್ನಡೆಯುವ ಅಗಾಧವಾದ ಶಕ್ತಿ ಹೊಂದಿವೆ. ಆರೋಗ್ಯಕರ ನಾಳೆಯ ಕಡೆಗಿನ ನಮ್ಮ ಪಯಣದಲ್ಲಿ ಪ್ರತಿ ಪಾದವೂ ಆ ಹೆಜ್ಜೆಗಳನ್ನು ತುಳಿಯುವ ಶಕ್ತಿ ಮತ್ತು ಸ್ವಾತಂತ್ರ್ಯಕ್ಕೆ ಅರ್ಹವಾಗಿವೆ. ಮಧುಮೇಹ ನಮ್ಮ ಪ್ರಗತಿಗೆ ಅಡ್ಡಿಯಾಗುವುದಿಲ್ಲ. ಪೊಡೊಕಾನ್ 2023 ರಲ್ಲಿ ನಾವು ಮಧುಮೇಹ ಪಾದದ ತೊಂದರೆಗಳನ್ನು ನಿರ್ವಹಿಸುವುದಷ್ಟೇ ಅಲ್ಲ, ಭವಿಷ್ಯದಲ್ಲಿ ಅದನ್ನು ಜಯಿಸುವ ನಿಟ್ಟಿನಲ್ಲಿ ಒಟ್ಟಿಗೆ ಹೆಜ್ಜೆ ಹಾಕೋಣ” ಎಂದು ಡೇವಿಡ್ ಆರ್ಮ್‌ಸ್ಟ್ರಾಂಗ್ ಹೇಳಿದ್ದಾರೆ.
ಡಾ. ಅಭಿಷೇಕ್ ತಿವಾರಿ, ಡಾ. ಅರುಣ್ ಮೈಯಾ, ಡಾ. ಶ್ರೀನಿವಾಸ್, ಡಾ. ಭರತ್ ಕೊಟ್ರು, ಡಾ.ಅಶ್ವಿಂದ್ ಬಾವಾ, ಡಾ. ಪಾಲ್ ಗ್ರಹಾಂ, ಡಾ. ಮೈಕೆಲ್ ರೋಡ್ರಿಗಸ್, ಡಾ. ಕಿಮ್ ಜೀಹೀ, ಡಾ. ಅನಂತ ಸುರೇಶ, ವಿದ್ಯಾ ವಿನಯ್, ಮತ್ತು ಡಾ. ಸಿದ್ಧಾರ್ಥ್ ಜುಂಜುನ್ವಾಲಾ ಅವರು ಸಹ ವಕ್ತಾರರಾಗಿ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
“ಹಾಲಿ ಹಾಗೂ ನೂತನ ತಂತ್ರಜ್ಞಾನಗಳು ಮಧುಮೇಹ ಪಾದದ ಸಮಸ್ಯೆಯನ್ನು ನಿವಾರಿಸಲು ನಮಗೆ ಅನುವು ಮಾಡಿಕೊಡುತ್ತದೆ, ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಂತ ಕಾಲಿನ ಮೇಲೆ ನಡೆಯಲು ಈ ಸಮ್ಮೇಳನ ಅನುವು ಮಾಡಿಕೊಡಲಿದೆ” ಎಂದು ಫೂಟ್‌ಸೆಕ್ಯೂರ್‌ನ ಸಂಸ್ಥಾಪಕ ಡಾ. ಸಂಜಯ್ ಶರ್ಮಾ ಹೇಳಿದರು.
ಪೊಡೊಕಾನ್ ಅನ್ನು ಫೂಟ್‌ಸೆಕ್ಯೂರ್ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗುತ್ತದೆ. ಭಾರತ ಮತ್ತು ವಿದೇಶಗಳ 1000 ಕ್ಕೂ ಹೆಚ್ಚು ವೈದ್ಯರು ಹಿಂದಿನ ಪೊಡೊಕಾನ್ ಆವೃತ್ತಿಗಳಲ್ಲಿ ಭಾಗವಹಿಸಿದ್ದರು, ಇವುಗಳಲ್ಲಿ ಮಧುಮೇಹ ಪಾದದ ರೋಗಗಳಿಗೆ ರೋಗನಿರ್ಣಯ, ಆಫ್‌ಲೋಡಿಂಗ್, ಡ್ರೆಸ್ಸಿಂಗ್ ಮತ್ತು ಪುನರುತ್ಪಾದಕ ಚಿಕಿತ್ಸೆಗಳ ಬಗ್ಗೆ ಚರ್ಚಿಸಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮತ್ತು ಸಮ್ಮೇಳನಕ್ಕೆ ನೋಂದಾಯಿಸಲು https://podocon.com ವೆಬ್‌ಸೈಟ್ ಗೆ ಭೇಟಿ ನೀಡಬಹುದು.
ಸಂಪರ್ಕಿಸಿ:
ಡಾ. ಸಂಜಯ್ ಶರ್ಮಾ
ಸಂಸ್ಥಾಪಕರು, ಫೂಟ್ ಸೆಕ್ಯೂರ್
ಮೊ: 8282829470 | ಇ ಮೇಲ್: [email protected]
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ