Kannada NewsLatest

ಮಗುವಿನ ಅಪೌಷ್ಠಿಕತೆ ನಿವಾರಣೆಗೆ ಕಾಂಗರೂ ಮಾದರಿ ಆರೈಕೆ ಅಗತ್ಯ: ಡಾ. ಎಸ್ ಸಿ ಧಾರವಾಡ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಷ್ಯದ ಉತ್ತಮ ನಾಗರಿಕರನ್ನು ನೀಡುವಲ್ಲಿ ತಾಯಿಯ ಪಾತ್ರ ಮಹತ್ತರವಾದುದು. ಆದ್ದರಿಂದ ಪ್ರತಿಯೊಬ್ಬ ತಾಯಿಯು ತನ್ನ ಮಗುವಿಗೆ ಅಗತ್ಯ ಕಾಳಜಿಯನ್ನು ನೀಡಲೇಬೇಕು ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಅಭಿಪ್ರಾಯಪಟ್ಟಿದ್ದಾರೆ.

ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ನಡೆದ “ವಿಶ್ವ ಕಾಂಗರೂ ಮಾದರಿ ಆರೈಕೆ” ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಅವರು, ಅಭಿವೃದ್ದಿ ಹೊಂದುತ್ತಿರುವಂತಹ ನಮ್ಮ ದೇಶದಲ್ಲಿ ಶೇಕಡಾ 45 ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಕಡಿಮೆ ತೂಕದಿಂದ ರೋಗಗ್ರಸ್ಥರಾಗಿ ಮರಣವನ್ನಪ್ಪುತ್ತಿವೆ ಆದ್ದರಿಂದ ತಾಯ್ತನದ ಬಂಧವನ್ನು ಬಿಗಿಗೊಳಿಸಲು ಕಾಂಗರೂ ಮಾದರಿ ಆರೈಕೆ ಅತ್ಯಗತ್ಯವಾಗಿದೆ. ಕೋರೊನಾ ಸೋಂಕಿನ ಭೀತಿ ಎಷ್ಟೇ ಇದ್ದರೂ ಕಾಂಗರೂ ಮಾದರಿ ಆರೈಕೆಯಿಂದಾಗಿ ಮಗು ಮತ್ತು ತಾಯಿಯ ನಡುವೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಕಿವಿಮಾತು ಹೇಳಿದರು.

ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದ ಚಿಕ್ಕಮಕ್ಕಳ ವಿಭಾಗದ ವೈದ್ಯ ವಿದ್ಯಾರ್ಥಿ ಡಾ. ಆಯುಷ ಜೈನ ಕಾಂಗರೂ ಮಾದರಿ ಆರೈಕೆಯ ಬಗ್ಗೆ ಉಪನ್ಯಾಸ ನೀಡುತ್ತ “ಕಾಂಗರೂ ಮಾದರಿ ಆರೈಕೆ ಎನ್ನುವುದು 2.5 ಕೆ.ಜಿ ಗಿಂತ ಕಡಿಮೆ ತೂಕ ಇರುವ ಮಕ್ಕಳು ಮತ್ತು ದಿನ ತುಂಬದೆ ಹೆರಿಗೆ ಆದ ಮಕ್ಕಳನ್ನು ತಾಯಿ, ತಂದೆ ಅಥವಾ ಅಜ್ಜಿ ತಮ್ಮ ಚರ್ಮಕ್ಕೆ ಮಗುವಿನ ಚರ್ಮ ತಾಗುವಂತೆ ಎದೆಯ ಮೇಲೆ ಹಾಕಿಕೊಂಡು 6 ರಿಂದ 8 ಘಂಟೆಗಳ ಕಾಲ ಆರೈಕೆ ಮಾಡಬೇಕು ಇದರಿಂದ ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಗಣನೀಯ ಪ್ರಮಾಣದಲ್ಲಿ ಗುಣಾತ್ಮಕ ಬೆಳವಣಿಗೆಯಾಗಿ ಸಮಾಜಕ್ಕೆ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕೊಡುಗೆಯಾಗಿ ನೀಡಬಹುದು ಎಂದು ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ. ಎಮ್ ಎಸ್ ಕಡ್ಡಿ, ಹೆಸರಾಂತ ಮಕ್ಕಳ ತಜ್ಞರಾದ ಡಾ. ಸೌಮ್ಯ ವೇರ್ಣೆಕರ, ಡಾ. ಬಸವರಾಜ ಕುಡಸೋಮಣ್ಣವರ ಹಾಗೂ ಸಾರ್ವಜನಿಕ ಸಂಪರ್ಕಾದಿಕಾರಿಗಳು ಮತ್ತು 20ಕ್ಕೂ ಅಧಿಕ ತಾಯಂದಿರು ಮಾಸ್ಕ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಅರುಣ ನಾಗಣ್ಣವರ ನಿರೂಪಿಸಿ ವಂದಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button