ಎಂ.ಕೆ.ಹೆಗಡೆ, ಬೆಳಗಾವಿ – ಇದೇ 25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ. ರಾಜ್ಯದ 8.50 ಲಕ್ಷ ವಿದ್ಯಾರ್ಥಿಗಳೂ ಪರೀಕ್ಷೆ ಬರೆಯಲು ಸಿದ್ಧತೆಯಲ್ಲಿ ತೊಡಗಿದ್ದಾರೆ.
ಕೊರೋನಾ ಹಾವಳಿಯ ಈ ಸಂದರ್ಭದಲ್ಲಿ ಎಸ್ಎಸ್ ಎಲ್ ಸಿ ಪರೀಕ್ಷೆ ನಡಸಬೇಕೋ ಬೇಡವೋ ಎನ್ನುವ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಶಿಕ್ಷಣ ಇಲಾಖೆ ಪರೀಕ್ಷೆ ನಡೆಸುವುದು ಶತಃಸಿದ್ಧ ಎಂದಿದೆ. ಸರಕಾರ ಅಂದುಕೊಂಡಂತೆ ನಡೆದರೆ ಇನ್ನು 10 ದಿನದಲ್ಲಿ ಪರೀಕ್ಷೆ ಆರಂಭವಾಗಬೇಕಿದೆ.
ಆದರೆ ಈ ಮಧ್ಯೆ ಬೆಳಗಾವಿಯ ಮರಾಠಾ ಮಂಡಳ ಎಜಿಕೇಶನ್ ಸೊಸೈಟಿಯ ಚೆರಮನ್ ರಾಜಶ್ರೀ ಹಲಗೇಕರ್ ಎಸ್ಎಸ್ ಎಲ್ ಸಿ ಪರೀಕ್ಷೆ ನಡೆಸಬಾರದೆಂದು ಕೋರಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಾರದಲ್ಲೇ ವಿಚಾರಣೆಗೆ ಬರಬಹುದು.
ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಿದ್ದರೆ ಆಗುವ ನಷ್ಟ ಏನೇನೂ ಇಲ್ಲ ಎನ್ನುವ ರಾಜಶ್ರೀ ಹಲಗೇಕರ್, ನಡೆಸಿದರೆ ದೊಡ್ಡ ಅಪಾಯಕ್ಕೆ ಆಹ್ವಾನ ಕೊಟ್ಟಂತಾಗಬಹುದು ಎನ್ನುವ ಆತಂಕ ವ್ಯಕ್ತಪಡಿಸುತ್ತಾರೆ.
ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ವಿದ್ಯಾರ್ಥಿಗಳ ಹಿತದೃಷ್ಟಿ ಹೊರತುಪಡಿಸಿ ಇದರಲ್ಲಿ ನನಗೆ ಬೇರೆ ಯಾವುದೇ ಉದ್ದೇಶವಿಲ್ಲ. ಒಂದು ವೇಳೆ ಪ್ರಕರಣದಲ್ಲಿ ನಾನು ಸೋತರೂ ಅದರಿಂದ ವಯಕ್ತಿಕವಾಗಿ ಆಗುವ ನಷ್ಟವೇನೂ ಇಲ್ಲ ಎಂದು ಅವರು ತಿಳಿಸಿದರು.
ಈಗಾಗಲೆ 3 ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ದಿನದಿಂದ ದಿನಕ್ಕೆ ಕಂಟೈನ್ಮೆಂಟ್ ಝೋನ್ ಸಂಖ್ಯೆ ಹೆಚ್ಚುತ್ತಿದೆ. ಪರೀಕ್ಷೆ ಮೊದಲ ದಿನ ಪರೀಕ್ಷಾ ಕೇಂದ್ರವಿರುವ ಪ್ರದೇಶ ಕಂಟೈನ್ಮೆಂಟ್ ಝೋನ್ ಆದರೆ ಪರೀಕ್ಷಾ ಕೇಂದ್ರವನ್ನು ಹೇಗೆ ಸ್ಥಳಾಂತರಿಸಲು ಸಾಧ್ಯ? 3 ಗಂಟೆ ಪರೀಕ್ಷೆ, 1 ಗಂಟೆ ಥರ್ಮಲ್ ಸ್ಕ್ರೀನ್ ಟೆಸ್ಟ್, ಒಂದು ಗಂಟೆ ಮನೆಯಿಂದ ಹೋಗಿ, ಬರುವ ಸಮಯ ಸೇರಿ ಒಟ್ಟೂ ಅಂದಾಜು 5 ತಾಸು ಯಾರಾದರೂ ಮಾಸ್ಕ್ ಧರಿಸಿರಲು ಸಾಧ್ಯವಿದೆಯೇ? ಎನ್ನುವುದು ರಾಜಶ್ರೀ ಹಲಗೇಕರ್ ಪ್ರಶ್ನೆ.
ಸಾಮಾನ್ಯವಾಗಿ ಒಂದೊಂದಿ ಕೇಂದ್ರದಲ್ಲಿ 300 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಬ್ಬೊಬ್ಬರಿಗೆ ಥರ್ಮಲ್ ಟೆಸ್ಟ್ ಗೆ 15 ಸೆಕೆಂಡ್ ಲೆಕ್ಕ ಹಾಕಿದರೂ ಕನಿಷ್ಟ ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತದೆ. ಅಷ್ಟು ಸಮಯ ಮಕ್ಕಳು ಸಾಲು ಹಚ್ಚಿ ನಿಲ್ಲಬೇಕೆ? ನಿಲ್ಲಲು ಸ್ಥಳಾವಕಾಶವಿದೆಯೇ? ಮಳೆಗಾಲವಾಗಿರುವುದರಿಂದ ಮಳೆಯಿಂದ ರಕ್ಷಿಸಿ ವಿದ್ಯಾರ್ಥಿಗಳನ್ನು ಸಾಲಿನಲ್ಲಿ ನಿಲ್ಲಿಸಲು ಸಾಧ್ಯವಿದೆಯೇ? ಎಂದು ಅವರು ಪ್ರಶ್ನಿಸಿದರು.
ಪರೀಕ್ಷೆ ಬರೆಯಲು ಹೊರಡುವ ವಿದ್ಯಾರ್ಥಿಗಳಿಗೆ ಜ್ವರ ಬಂದಲ್ಲಿ ಒಂದು ಗುಳಿಗೆ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗುತ್ತಾರೆ. ಪರೀಕ್ಷೆ ಅವರಿಗೆ ಭವಿಷ್ಯದ ಪ್ರಶ್ನೆಯಾಗಿ ಕಾಣುತ್ತದೆ. ಹಾಗಾಗಿ ಜ್ವರ ಇರುವುದನ್ನು ಬಹಿರಂಗಪಡಿಸಲು ಹೊಗುವುದಿಲ್ಲ. ಪರೀಕ್ಷಾ ಸುಪ್ರವೈಸರ್ ದೂರದಿಂದ ಪ್ರಶ್ನೆ ಪತ್ರಿಕೆ ಎಸೆಯಲು ಆಗುವುದಿಲ್ಲ. ಮಕ್ಕಳ ಹತ್ತಿರ ಹೋಗಿ ಕೈಯಲ್ಲಿ ಕೊಡಬೇಕಾಗುತ್ತದೆ. ಅದೇ ಸುಪ್ರವೈಸರ್ ಆ ಕೊಠಡಿಯ ಎಲ್ಲ ವಿದ್ಯಾರ್ಥಿಗಳನ್ನೂ ಸಂಪರ್ಕಿಸುತ್ತಾನೆ. ಇದು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು ಎಂದು ಅವರು ಹೇಳಿದರು.
ಪರಿಕ್ಷಾ ಕೇಂದ್ರದಲ್ಲಿ ಸುಮಾರು 5 ಗಂಟೆಗಳ ಕಾಲ ಇರುವ ವಿದ್ಯಾರ್ಥಿಗಳು ಶೌಚಾಲಯ ಬಳಸದಿರಲು ಸಾಧ್ಯವೇ ಇಲ್ಲ. ಒಂದು ಪರೀಕ್ಷಾ ಕೇಂದ್ರದಲ್ಲಿ ಎಷ್ಟು ಶೌಚಾಲಯವಿರುತ್ತದೆ? ಶೌಚಾಲಯವೂ ವೈರಸ್ ಹರಡುವ ಸ್ಥಳವಾಗಬಹುದು. ಇಂತಹ ಹಲವು ಪ್ರಮುಖ ಅಂಶಗಳನ್ನಿಟ್ಟು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದೇನೆ.
ಜುಲೈ ಮತ್ತು ಆಗಷ್ಟ್ ತಿಂಗಳಲ್ಲಿ ಕೊರೋನಾ ಇನ್ನಷ್ಟು ಹೆಚ್ಚಾಗಬಹುದು ಎಂದು ರಾಜ್ಯಸರಕಾರವೇ ಆತಂಕ ವ್ಯಕ್ತಪಡಿಸುತ್ತಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಆಸ್ಪತ್ರೆಗಳ ಕೊರತೆಯಾಗಬಹುದು ಎಂದು ಸಚಿವರೇ ಹೇಳುತ್ತಿದ್ದಾರೆ. ಈಗಾಗಲೆ ಕ್ರೀಡಾಂಗಣಗಳನ್ನೂ ಆಸ್ಪತ್ರೆಯಾಗಿಸಲು, ಕ್ವಾರಂಟೈನ್ ಸೆಂಟರ್ ಆಗಿಸಲು ಯೋಚನೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿ ಅಪಾಯವನ್ನು ಮೈಮೇಲ ಎಲೆದುಕೊಳ್ಳುವುದೇಕೆ ಎಂದು ಪ್ರಶ್ನಿಸಿದರು.
ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸದಿದ್ದರೆ ಏನೇನೂ ತೊಂದರೆ ಇಲ್ಲ. ಲಾಕ್ ಡೌನ್ ಆರಂಭವಾಗುವ ಮುನ್ನವೇ ಪ್ರತಿ ಶಾಲೆಯಿಂದ ಪ್ರಿಲಿಮ್ನರಿ ಪರೀಕ್ಷೆಯ ಫಲಿತಾಂಶ ಕಳಿಸಲಾಗಿದೆ. ಅದರ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಬಹುದು. ಇಲ್ಲವೇ ಕಾಲೇಜುಗಳಲ್ಲಿ ಪ್ರವೇಶದ ಸಂದರ್ಭದಲ್ಲಿ ಸ್ಕ್ರೀನಿಂಗ್ ಟೆಸ್ಟ್ ಮಾಡಬಹುದು. ಹಾಗಾಗಿ ಯಾವುದೇ ಸಮಸ್ಯೆಯಾಗುವುದಿಲ್ಲ. ಲಕ್ಷಾಂತರ ವಿದ್ಯಾರ್ಥಿಗಳನ್ನು, ಅವರ ಪಾಲಕರನ್ನು ಆತಂಕದಲ್ಲಿ ಮುಳುಗಿಸಿ ಪರೀಕ್ಷೆ ನಡೆಸುವ ಅವಶ್ಯಕತೆಯೇ ಇಲ್ಲ ಎಂದು ರಾಜಶ್ರೀ ಹಲಗೇಕರ್ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ