*ಕಿಡ್ನಿ ಕಸಿಗಾಗಿ ದೇಶದಲ್ಲೇ ಮೊದಲ ರೊಬೋಟ್ ನೆರವಿನ ‘ಟ್ರೀಟ್ ಟೆಕ್ನಾಲಜಿ’ ಪರಿಚಯ*

ಪ್ರಗತಿವಾಹಿನಿ ಸುದ್ದಿ: ಏಕಕಾಲದಲ್ಲೇ ರೊಬೋಟ್ ಸಹಾಯದಿಂದ ದಾನಿಗಳಿಂದ ಕಿಡ್ನಿ ಪಡೆದು, ರೋಗಿಗೆ ಕಿಡ್ನಿ ಕಸಿ ಮಾಡುವ TREAT (ಟೋಟಲ್ ರೋಬೋಟ್ ಎನೇಬಲ್ಡ್ ಅಂಡ್ ಅಸ್ಸಿಸ್ಟಡ್ ಟ್ರಾನ್ಸ್ಪ್ಲಾಂಟ್) ಎಂಬ ಅಪರೂಪದ ಟೆಕ್ನಾಲಜಿಯನ್ನು ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಪರಿಚಯಿಸಿದ್ದು, ದೇಶದಲ್ಲೇ ಮೊದಲ ಪ್ರಯತ್ನ ಇದಾಗಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆ ಮೂತ್ರಪಿಂಡ ವಿಜ್ಞಾನದ ಪ್ರಧಾನ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿ, ಟ್ರೀಟ್ ಎಂಬ ನೂತನ ಟೆಕ್ನಾಲಜಿ ಕಿಡ್ನಿ ಕಸಿಯನ್ನು ಅತ್ಯಂತ ಸುಲಭಗೊಳಿಸಿದೆ. ರೋಬೋಟ್-ಸಂಯೋಜಿತ ಮೂತ್ರಪಿಂಡದ ಕಸಿ ನಡೆಸುವ ಈ ಅತ್ಯಾಧುನಿಕ ಉಪಕ್ರಮವು ಏಕಕಾಲದಲ್ಲೇ ದಾನಿ ಮತ್ತು ಸ್ವೀಕರಿಸುವವರಿಗೆ ಎರಡು ರೋಬಾಟ್ ನೆರವಿನಿಂದ ಕಿಡ್ನಿ ತೆಗೆದು , ಕಿಡ್ನಿ ಕಸಿ ಮಾಡುವ ಶಸ್ತ್ರಚಿಕಿತ್ಸೆಯನ್ನು ನಿಖರವಾಗಿ ನಡೆಸಲಿದ್ದು, ಸಂಪೂರ್ಣ ಯಶಸ್ಸು ನೀಡಲಿದೆ. ಈ ವಿನೂತನ ಪ್ರಯತ್ನದಿಂದ ಚೇತರಿಕೆಯ ಸಮಯವೂ ಕಡಿಮೆ ಆಗಲಿದ್ದು, ಶಸ್ತ್ರಚಿಕಿತ್ಸೆ ಅತ್ಯಂತ ನಿಖರವಾಗಿರಲಿದೆ ಎಂದು ಹೇಳಿದರು.
ಈ ಟೆಕ್ನಾಲಜಿಯು ದಾನಿಗಳು ಕೂಡ ಶೀಘ್ರವೇ ಚೇತರಿಸಿಕೊಳ್ಳುವಂತೆ ಸಹಾಯಕಾರಿಯಾಗಲಿದೆ. ನಮ್ಮ ದೇಶದಲ್ಲಿ ಮಹಿಳೆಯರೇ ಅಂಗಾಂಗ ದಾನದಲ್ಲಿ ಮುಂದಿದ್ದಾರೆ. ಬಹುತೇಕರಿಗೆ ತಮ್ಮ ಅಂಗ ದಾನ ಮಾಡಿದ ಬಳಿಕ ಚೇತರಿಕೆಗೆ ಸಾಕಷ್ಟು ಸಮಯ ಬೇಕಾಗಬಹುದು ಅಥವಾ ಅಂಗಾಂಗ ದಾನದ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆಗಬಹುದು ಎಂಬ ಆತಂಕದಿಂದ ದಾನ ಮಾಡಲು ಮುಂದಾಗುವವರ ಸಂಖ್ಯೆಯೂ ಕಡಿಮೆ. ಅದಕ್ಕಾಗಿಯೇ ಈ ರೊಬೋಟ್ ಆಧಾರಿತ ಟ್ರೀಟ್ ಟೆಕ್ನಾಲಜಿಯು ಶೇ.೧೦೦ರಷ್ಟು ನಿಖರವಾಗಿ ಅಂಗವನ್ನು ತೆಗೆದು ಕಸಿ ಮಾಡಲಿದೆ, ಇದು ದಾನಿಗಳು ಹಾಗೂ ರೋಗಿಗೆ ಯಾವುದೇ ಹಾನಿಯಾಗಲು ಬಿಡುವುದಿಲ್ಲ. ಅದರಲ್ಲೂ ಸ್ಥೂಲಕಾಯತೆ ಹೊಂದಿರುವವರಿಗೆ ಕಸಿ ಮಾಡಲು ಈ ಟೆಕ್ನಾಲಜಿ ಸೂಕ್ತವಾಗಿದೆ ಎಂದರು.
ಟಾಂಜಾನಿ ಮೂಲದ 47 ವರ್ಷದ ಜೊವಾಕಿಮ್ ಎಂಬ ರೋಗಿಯು ಮಧುಮೇಹದಿಂದಾಗಿ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. ಅವರ ಕಿರಿಯ ಸಹೋದರ ತಕ್ಷಣವೇ ತನ್ನ ಮೂತ್ರಪಿಂಡವನ್ನು ದಾನ ಮಾಡಲು ಮುಂದಾದರು. ಜೋಕಿಮ್ ಹೃದಯ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರಿಂದ ಇತರೆ ಆಸ್ಪತ್ರೆಗಳು ಕಸಿ ಮಾಡುವ ಅಪಾಯವನ್ನು ತೆಗೆದುಕೊಳ್ಳಲು ನಿರಾಕರಿಸಿದವು. ಆದರೆ ಫೋರ್ಟಿಸ್ ಆಸ್ಪತ್ರೆಯಲ್ಲಿ, ರೋಬೋಟ್ ನೆರವಿನ ಕಸಿಗೆ ಒಳಗಾದರು, ಕೇವಲ 24 ಗಂಟೆಗಳ ಒಳಗೆ ಅವರು ಚಲನಶೀಲತೆ ಮರಳಿ ಪಡೆದರು, ದಾನ ನೀಡಿದವರೂ ಸಹ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಈ ಟೆಕ್ನಾಲಜಿಯೇ ಕಾರಣ ಎಂದರು.
ಮತ್ತೊಂದು ಪ್ರಕರಣದಲ್ಲಿ, ಬಿಜಾಪುರದ 35 ವರ್ಷದ ಸನಾ ಕೊನೆ ಹಂತದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿದ್ದರು. ರೋಗಿಯ ಸಹೋದರ ಚಂದ್ ಆತಂಕದಿಂದ ಕಿಡ್ನಿ ದಾನ ಮಾಡಲು ಹಿಂಜರಿಕೆ ಹೊಂದಿದ್ದರು.ಆದರೆ, ಫೋರ್ಟಿಸ್ ಆಸ್ಪತ್ರೆಯಲ್ಲಿ ಟ್ರೀಟ್ ಟೆಕ್ನಾಲಜಿ ವಿವರಿಸಿದ ಬಳಿಕ ದಾನ ನೀಡಲು ಮುಂದಾದರು, ಇವರಿಗೆ ಏಕಕಾಲದಲ್ಲೇ ಎರಡು ರೊಬೋಟ್ ಬಳಕೆಯಿಂದ ಕಸಿ ನೆರವೇರಿಸಲಾಯಿತು. ಒಂದು ವಾರದಲ್ಲಿಯೇ ಇಬ್ಬರೂ ಚೇತರಿಕೆ ಕಂಡರು ಎಂದರು. ಹೀಗೆ ದಾನಿಗಳು ಸಹ ಯಾವುದೇ ಭಯವಿಲ್ಲದೇ ದಾನ ಮಾಡಲು ಮುಂದಾಗುವಂತೆ ಈ ಟೆಕ್ನಾಲಜಿ ಆತ್ಮಸ್ಥೈರ್ಯವನ್ನು ಹೆಚ್ಚಿಸಲಿದೆ. ಅಷ್ಟೆ ಅಲ್ಲದೆ, ಚೇತರಿಕೆಯ ಸಮಯವೂ ಕಡಿಮೆ ಇರಲಿದೆ ಎಂದು ವಿವರಣೆ ನೀಡಿದರು.
ಫೋರ್ಟಿಸ್ನ ಗ್ರೋಥ್ ಆಂಡ್ ಇನೋವೇಷನ್ ಆಫೀಸರ್ ಡಾ. ರಿತು ಗಾರ್ಗ್ ಮತ್ತಿತರರು ಉಪಸ್ಥಿತರಿದ್ದರು.