Latest

ವಾಸ್ತವಿಕತೆಗಳನರಿತು ಹೂಡಿಕೆ ಮಾಡಿ, ಅನುಸರಿಸಬೇಡಿ


 ಕೆ ಜಿ. ಕೃಪಾಲ್ 

ಸ್ಟೇಕ್‌ ಸೇಲ್‌ ಎಂಬ ಹೆಡ್‌ ಲೈನ್‌ ನಲ್ಲಿ ಪ್ರಮುಖ ಕಂಪನಿಗಳು ಸಂಪನ್ಮೂಲ ಸಂಗ್ರಹಣೆಗೆ ಹಾತೊರೆಯುತ್ತಿವೆ. ರಿಲಯನ್ಸ್‌ ಇಂಡಸ್ಟ್ರೀಸ್ ಈ ಪ್ರಕ್ರಿಯೆಗೆ ನಾಂದಿ ಹಾಡಿದ ಕಂಪನಿಯಾಗಿದೆ. ‌ ಈ ಕಂಪನಿಯು ತನ್ನ ಸಾಲದ ಹೊರೆಯನ್ನು ಇಳಿಸಿಕೊಳ್ಳಲು ತನ್ನ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್‌ ಫಾರಂ ನ ಭಾಗಿತ್ವವನ್ನು ವಿವಿಧ ಸಂಸ್ಥೆಗಳಿಗೆ ಹಂಚಿ, ಇದರಿಂದ ಸಂಗ್ರಹವಾದ ಹಣವನ್ನು ಸಾಲ ತೀರಿಸುವುದಕ್ಕೆ ಬಳಸಲಾಗುವುದು ಎನ್ನಲಾಗಿದೆ. ಇದರೊಂದಿಗೆ ರೂ.53,124 ಕೋಟಿ ಹಣವನ್ನು ಹಕ್ಕಿನ ಷೇರಿನ ಮೂಲಕ ಸಂಗ್ರಹಿಸುವ ಹಣವನ್ನು ಸಹ ಸಾಲದ ಹೊರೆ ಇಳಿಸಿಕೊಳ್ಳಲು ಬಳಸಿಕೊಳ್ಳಲಾಗುವುದು ಎಂದು ಕಂಪನಿ ಪ್ರಕಟಿಸಿದೆ. ಇದುವರೆಗೂ ರೂ.1.18 ಲಕ್ಷ ಕೋಟಿಯಷ್ಟು ಹಣವನ್ನು ಈ ಸ್ಟೇಕ್‌ ಸೇಲ್‌ ಮೂಲಕ ಸಂಗ್ರಹಿಸಿದೆ. ಈ ಭಾರೀ ಪ್ರಮಾಣದ ಹಣದ ಒಳಹರಿವಿನ ಸದ್ಬಳಕೆಯನ್ನುಮಾಡಿಕೊಳ್ಳುವಲ್ಲಿ ಕಂಪನಿ ಎಷ್ಟರಮಟ್ಟಿಗೆ ಯಶಸ್ವಿಯಾಗುವುದು ಎಂಬುದನ್ನು ಕಾದುನೋಡಬೇಕಾಗಿದೆ.

ಮಾಧ್ಯಮಗಳಲ್ಲಿ ಇದನ್ನು ಸಾಲದ ಹೊರೆ ಇಳಿಸಿಕೊಳ್ಳುವ ಪ್ರಕ್ರಿಯೆ ಎಂದು ಬಿಂಬಿಸಲಾಗುತ್ತಿದೆ ಇದು ತಪ್ಪು. ಕಂಪನಿಯು ಸಾಲಮುಕ್ತವಾಗಲಿದೆ ಎಂಬುದು ಹಾಸ್ಯಾಸ್ಪದವಾಗಿದೆ. ಕಾರಣ ಈ ಹಣವು ಕಂಪನಿಯ ಚಟುವಟಿಕೆಯಿಂದ ಉತ್ಪತ್ತಿಯಾದ ಹಣವಲ್ಲ. ಆದರೆ ಈ ಕ್ರಮದಿಂದ ಕಂಪನಿಯು ತನ್ನ ಬಡ್ಡಿಯ ಹೊರೆಯನ್ನು ಇಳಿಸಿಕೊಳ್ಳುತ್ತಿದೆ. ಹೇಗೆಂದರೆ ಒಂದು ನೂರು ಷೇರಿಗೆ ಈಗಿನ ಬೆಲೆಯಲ್ಲಿ ರೂ.1.8 ಲಕ್ಷ ತೆರಬೇಕಾಗುವುದು. ಇದಕ್ಕೆ ಕಂಪನಿ ನೀಡುವ ಡಿವಿಡೆಂಡ್‌ ಅಂದರೆ ಹಿಂದಿನ ವರ್ಷದ ಆಧಾರದ ಮೇಲೆ, ರೂ.650. ಆದರೆ ಕಂಪನಿಯು ರೂ.1.8 ಲಕ್ಷ ಹಣವನ್ನು ಬ್ಯಾಂಕ್‌ ಗಳ ಮೂಲಕ ಸಾಲದ ರೂಪದಲ್ಲಿ ಪಡೆದಿದ್ದರೆ ಅದಕ್ಕೆ ರೂ.2 ಸಾವಿರದಿಂದ ಎರಡೂವರೆ ಸಾವಿರ ರೂಪಾಯಿಗಳಷ್ಟರ ಬಡ್ಡಿಯನ್ನು ನೀಡಬೇಕಾಗಿರುತ್ತಿತ್ತು. ಮತ್ತೊಂದು ಅನುಕೂಲಕರ ಅಂಶವೆಂದರೆ ಮುಂದಿನ ವರ್ಷ ಕಂಪನಿ ರೂ.6.50 ರಷ್ಟರ ಡಿವಿಡೆಂಡನ್ನು ನೀಡದೇ ಕಡಿಮೆ ಪ್ರಮಾಣದ ಡಿವಿಡೆಂಡನ್ನು ನೀಡಬಹುದು. ಇದು ಹೂಡಿಕೆದಾರರಿಗೆ ಹಿತಕರವಾದ ಬೆಳವಣಿಗೆಯಲ್ಲ.

ಇಲ್ಲಿ ಒಂದು ಪ್ರಮುಖ ಅಂಶವನ್ನು ಗಮನಿಸಬೇಕು. ರಿಲಯನ್ಸ್‌ ಇಂಡಸ್ಟ್ರೀಸ್‌ ನ ಈ ಆಂದೋಲನದ ಭರದಲ್ಲಿ ಕಂಪನಿಯು ಹಕ್ಕಿನ ಷೇರಿನ ಮೂಲಕ ರೂ.53,124 ಕೋಟಿ ಹಣ ಸಂಗ್ರಹಿಸಿದೆ ಎಂದು ಬಿಂಬಿಸಲಾಗುತ್ತಿದೆ. ಆದರೆ ಇದರಲ್ಲಿ ಕೇವಲ ಶೇ.25 ರಷ್ಟು ಮಾತ್ರ ಸಂಗ್ರಹವಾಗಿದೆ. ಉಳಿದ ಹಣ ಸಂಗ್ರಹಣೆಯಾಗಬೇಕಾದರೆ ನವೆಂಬರ್‌ 2021 ರ ವರೆಗೂ ಕಾಯಬೇಕಿದೆ. ಇದುವರೆಗೂ ಸಂಗ್ರಹಿಸುವ ಹಣದ ಸದ್ಬಳಕೆಯ ಮೇಲೆ ಕಂಪನಿಯ ಗುರಿಸಾಧನೆ ಅವಲಂಭಿತವಾಗಿದೆ. ಈ ಕಂಪನಿ ಪ್ರತಿ ಷೇರಿಗೆ ರೂ.1,257 ರಂತೆ 1:15 ರ ಅನುಪಾತದಲ್ಲಿ ಹಕ್ಕಿನ ಷೇರು ವಿತರಿಸಿದೆ. ಮಾರ್ಚ್ ಅಂತ್ಯದಲ್ಲಿ ಮೂರು ಅಂಕಿಗಳಲ್ಲಿದ್ದಂತಹ ಷೇರು ಸಧ್ಯ ರೂ.1,800 ರ ಗಡಿ ದಾಟಿದೆ. ಈ ರೀತಿಯ ವಿತರಣೆ ಬೆಲೆಯು ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಪ್ರವರ್ತಕರಾದ, ಕಾರ್ಪೊರೇಟ್ ಪಿತಾಮಹ ಧೀರೂಭಾಯಿ ಅಂಬಾನಿಯವರು ಹಾಕಿಕೊಟ್ಟ ಹೂಡಿಕೆದಾರರ ಸ್ನೇಹಿ ಮನೋಧರ್ಮದಿಂದ ದೂರ ಸರಿಯುತ್ತಿದೆ ಎಂಬ ಭಾವನೆ ಮೂಡಿಸುತ್ತದೆ. ಷೇರುದಾರರಿಗೆ ಡಿವಿಡೆಂಡ್‌ ಪ್ರಮಾಣ ಕಡಿಮೆಯಾಗುವುದರೊಂದಿಗೆ ಷೇರಿನ ಬೆಲೆ ದಿಢೀರನೆ ಏರಿಕೆ ಕಂಡಾಗ ಎಲ್ಲರ ಚಿತ್ತ ಲಾಭದ ಪ್ರಮಾಣದ ಮೇಲೆ ಇದ್ದು, LOYLTY ಗಿಂತ ROYALTY ಹೆಚ್ಚು ಹಿತವೆಂದಾದಲ್ಲಿ ದೀರ್ಘಕಾಲೀನ ಹೂಡಿಕೆಗೆ ಮಾರಕವಾಗುವುದಲ್ಲವೇ?

ಸ್ಟೇಕ್‌ ಸೇಲ್‌ ನಲ್ಲಿ ಖರೀದಿಸಿದ ಕಂಪನಿಗಳು ವಿದೇಶಿ ಕಂಪನಿಗಳಾದ್ದರಿಂದ ಹೆಚ್ಚು ಸೂಕ್ಷ್ಮತೆಯಿಂದ ಕೂಡಿದೆ. ಕಂಪನಿಯ ಸಾಧನೆ ತೃಪ್ತಿದಾಯಕವಲ್ಲದಿದ್ದರೆ ಈ ಕಂಪನಿಗಳು ತಮ್ಮ ಸ್ಟೇಕ್‌ ನ್ನು ಮಾರಾಟಮಾಡುವದಕ್ಕೆ ಹಿಂಜರಿಯುವುದಿಲ್ಲ. ಅಂತಹ ಸಂದರ್ಭದಲ್ಲಿ ಷೇರಿನ ಬೆಲೆ ಹೇಗೆ ಕುಸಿಯಬಹುದೆಂಬುದನ್ನು ಅನಿಲ್‌ ಅಂಬಾನಿ ಸಮೂಹದ ಕಂಪನಿಗಳಾದ ರಿಲಯನ್ಸ್‌ ಕ್ಯಾಪಿಟಲ್‌, ರಿಲಯನ್ಸ್‌ ಇನ್‌ ಫ್ರಾಸ್ಟ್ರಕ್ಚರ್‌ ಕಂಪನಿಗಳ ಷೇರಿನ ಬೆಲೆ ಕುಸಿತಗಳು ತೋರಿಸಿಕೊಟ್ಟಿವೆ. ಈ ಹಿನ್ನೆಲೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಕಂಪನಿಯ ಆಡಳಿತ ಮಂಡಳಿಯ ಮೇಲೆ ಗುರುತರವಾದ ಜವಾಬ್ಧಾರಿ ಇದೆ. ಈಗ ಅದು ಎಲ್ಲಾ ಹೂಡಿಕೆದಾರರ ನಂಬಿಕೆಯನ್ನುಳಿಸಿಕೊಂಡು, ನಿರೀಕ್ಷಿತ ಮಟ್ಟದ ಸಾಧನೆ ತೋರಿಸಲೇಬೇಕಾಗಿದೆ. ಈ ನಿರೀಕ್ಷೆಯನ್ನು ಹುಸಿಗೊಳಿಸಿದಲ್ಲಿ ಆಘಾತ ನಿಶ್ಚಿತ. ಒಂದು ರೀತಿಯ ಮಾಡು ಇಲ್ಲವೇ ಮಡಿ ಪರಿಸ್ಥಿತಿ ನಿರ್ಮಿಸಿಕೊಂಡಂತಿದೆ.

ರಿಲಯನ್ಸ್‌ ಇಂಡಸ್ಟ್ರೀಸ್‌ ನ ಈ ಯಶಸ್ವೀ ಪ್ರಯೋಗವು ಅನೇಕ ಕಂಪನಿಗಳನ್ನೂ ಪ್ರೇರೇಪಿಸಿದೆ. ಕೆಲವು ಕಂಪನಿಗಳ ಯೋಜನೆ ಪ್ರಮಾಣ ಇಂತಿದೆ.

ಆಕ್ಸಿಸ್‌ ಬ್ಯಾಂಕ್‌ : ರೂ.15,000 ಕೋಟಿ
ಐಸಿಐಸಿಐ ಬ್ಯಾಂಕ್‌ : ರೂ.15,000.00 ಕೋಟಿ
ಪಿ ಎನ್‌ ಬಿ : ರೂ.10,000.00 ಕೋಟಿ
ಇದರ ಅಂಗ ಸಂಸ್ಥೆ ಪಿ ಎನ್‌ ಬಿ ಹೌಸಿಂಗ್‌ ಫೈನಾನ್ಸ್‌ ಕಂಪನಿ ರೂ.45 ಸಾವಿರ ಕೋಟಿ ಹಣ, ವಿವಿಧ ರೀತಿ, ಹಂತದಲ್ಲಿ ಸಂಗ್ರಹಿಸುವ ಗುರಿ ಹೊಂದಿದೆ.
ಪಿ ಐ ಇಂಡಸ್ಟ್ರೀಸ್‌ : ರೂ.2,000 ಕೋಟಿ
ಟಾಟಾ ಪವರ್‌ : ರೂ.2,600.00 ಕೋಟಿ

ಇವುಗಳ ಜೊತೆಗೆ ಹೆಚ್‌ ಡಿ ಎಫ್ ಸಿ ಬ್ಯಾಂಕ್‌ ರೂ.50,000 ಕೋಟಿ ಮೌಲ್ಯದ ಪರ್‌ ಪೆಚುಯಲ್‌ ಬಾಂಡ್‌ ಗಳ ಮೂಲಕ ಸಂಪನ್ಮೂಲ ಸಂಗ್ರಹಣೆ ಮಾಡಲಿದೆ.
ಕೇಂದ್ರ ಸರ್ಕಾರದ ಬಂಡವಾಳ ಹಿಂತೆಗೆತ ಯೋಜನೆಯಡಿ ರೂ.20 ಸಾವಿರ ಕೋಟಿ ಮೌಲ್ಯದ ಷೇರು ಮಾರಾಟದ ಯೋಜನೆ.

ಈ ವಾರ ಕಳೆದ ಮಾರ್ಚ್‌ ನಲ್ಲಿ ರೂ.10 ಲಕ್ಷ ಮುಖಬೆಲೆಯ ಟೈರ್‌ 1 ಬಾಂಡ್ ಗಳನ್ನು ಹೂಡಿಕೆದಾರರಿಗೆ ಹಣ ಹಿಂದಿರುಗಿಸದೆ ಮನ್ನಾಮಾಡಿದ, ಶೇ.75 ರಷ್ಟರ ಷೇರುಗಳನ್ನು ಮೂರು ವರ್ಷಗಳ ಕಾಲ ನಿಶ್ಕ್ರಿಯಗೊಳಿಸಿ ಧಾಖಲೆ ನಿರ್ಮಿಸಿದ ಯೆಸ್‌ ಬ್ಯಾಂಕ್‌ ರೂ.15,000.00 ಕೋಟಿ ಮೌಲ್ಯದ ಷೇರು ವಿತರಣೆ ನಡೆಯಲಿದೆ. ಇಂತಹ ನಕಾರಾತ್ಮಕ ವಾತಾವರಣ ನಿರ್ಮಿಸಿದ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದಲ್ಲಿ ಅದರಿಂದಾಗುವ ಅಪಾಯಕ್ಕೆ ಹೂಡಿಕೆದಾರರೇ ಹೊಣೆ ಎಂಬ ಚಿಂತನೆಯೇ ಷೇರುದಾರರಿಗೆ ಮುಳುವಾಗಬಹುದೇ? ಕಾದು ನೋಡಬೇಕು.

ಹೀಗೆ ಒಟ್ಟಾರೆ ಸಂಪೂರ್ಣ ಕಾರ್ಪೊರೇಟ್‌ ವಲಯವು ಸಂಪನ್ಮೂಲ ಸಂಗ್ರಹಣೆಗೆ ಮುಂದಾಗುವುದರಿಂದ ಪೇಟೆಯಲ್ಲಿ ಹರಿದಾಡುವ ಹಣ ಮೊಟಕುಗೊಳ್ಳುವುದರಿಂದ ಪೇಟೆಯಲ್ಲಿ ಹಣದ ಒತ್ತಡವು ಮಾರಾಟದ ಹಾದಿ ಹಿಡಿದರೂ ಅಚ್ಚರಿಯಲ್ಲ. ದೀರ್ಘಕಾಲೀನ ಹೂಡಿಕೆಗಿಂತ ಲಾಭಕಾಲೀನವಾದ ಹೂಡಿಕೆಯೇ ಸ್ವಲ್ಪ ಸುರಕ್ಷಿತವಾಗಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button