ಪ್ರಗತಿವಾಹಿನಿ ಸುದ್ದಿ; ಮುಂಬೈ: ವಿಶ್ವಾದ್ಯಂತ ಕೊರೊನಾ ವೈರಸ್ ಆತಂಕ ಸೃಷ್ಟಿಸಿದ್ದು, ಈ ನಡುವೆ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳ ಮೇಲೂ ಕೊರೊನಾ ಭೀತಿ ಹುಟ್ಟಿಸಿದೆ. ಕೋವಿಡ್ 19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಐಪಿಎಲ್ 2020 ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ಮುಂದೂಡಲಾಗಿದೆ ಎಂದು ಬಿಸಿಸಿಐ ಅಧಿಕೃತ ಮಾಹಿತಿ ನೀಡಿದೆ.
ಮುಂಬೈ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜೇ ಶಾ ಐಪಿಎಲ್ ಮುಂದೂಡಲು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದೀಗ ಮಾರ್ಚ್ 14 ಶನಿವಾರದಂದು ಬಿಸಿಸಿಐ ಆಡಳಿತ ಮಂಡಳಿ ಸಭೆಯಲ್ಲಿ ಫ್ರಾಂಚೈಸಿ ಪದಾಧಿಕಾರಿಗಳ ಜೊತೆಗೆ ಚರ್ಚಿಸಿ ಟೂರ್ನಿ ಆಯೋಜನೆಗೆ ಸಂಬಂಧಿಸಿದಂತೆ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಐಪಿಎಲ್ ಸೇರಿದಂತೆ ಎಲ್ಲ ಕ್ರೀಡಾಕೂಟಗಳ ಆಯೋಜನೆಗೆ ಸರಕಾರ ನಿಷೇಧ ಹೇರಿದೆ. ಹಾಗಾಗಿ ನಿಗದಿತ ವೇಳಾಪಟ್ಟಿಯಂತೆ ಐಪಿಎಲ್ ಆಯೋಜಿಸುವುದು ಬಿಸಿಸಿಐಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ