Belagavi NewsBelgaum NewsKannada NewsKarnataka NewsLatestPolitics

*ಅರ್ಜಿಗಳ ತ್ವರಿತ ವಿಲೇವಾರಿಗೆ ಅಧಿಕಾರಿಗಳಿಗೆ ಸಂಸದ ಈರಣ್ಣ ಕಡಾಡಿ ಸೂಚನೆ*

ಜಿಲ್ಲಾ ಮಟ್ಟದ ಬ್ಯಾಂಕ್ ಅಧಿಕಾರಿಗಳ ಸಲಹಾ ಸಮಿತಿ- ಸಮೀಕ್ಷೆ ಸಮಿತಿ ಸಭೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜನಸಾಮಾನ್ಯರು, ವಿದ್ಯಾವಂತ ನಿರುದ್ಯೋಗಿಗಳು, ಮಹಿಳಾ ಸ್ವ-ಸಹಾಯ ಸಂಘಗಳು ಹಾಗೂ ಕೃಷಿಕರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಬ್ಯಾಂಕ್ ಅಧಿಕಾರಿಗಳ ನಿರ್ಲಕ್ಷದಿಂದ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿವೆ. ಆದಕಾರಣ ಬಾಕಿಯಿರುವ ಎಲ್ಲ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಬೇಕು ಎಂದು ಸಂಸದ ಈರಣ್ಣ ಕಡಾಡಿ ಅವರು ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಜೂ.22) ನಡೆದ ವಿವಿಧ ಬ್ಯಾಂಕ್ ಅಧಿಕಾರಿಗಳ ಜಿಲ್ಲಾ ಮಟ್ಟದ ಸಲಹಾ ಸಮಿತಿ ಹಾಗೂ ಸಮೀಕ್ಷೆ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 16 ಗ್ರಾಮಗಳಲ್ಲಿ ಹೊಸ ಬ್ಯಾಂಕ್ ಶಾಖೆ ತೆರೆಯುವ ಕುರಿತು ಸಾರ್ವಜನಿಕರಿಂದ ಮನವಿಗಳು ಬಂದಿದ್ದು, ಈ ಬಗ್ಗೆ ಹಲವಾರು ಬಾರಿ ಚರ್ಚಿಸಿಲಾಗಿದೆ ಆದರೆ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಕೂಡಲೇ ಹೊಸ ಶಾಖೆಗಳ ಪ್ರಾರಂಭಕ್ಕೆ ಕ್ರಮ ವಹಿಸಲು ಸೂಚಿಸಿದರು.

ಗ್ರಾಮೀಣ ಪ್ರದೇಶದ ಜನರ ಮನೆಬಾಗಿಲಿಗೆ ಯೋಜನೆಗಳ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇವುಗಳ ಬಗ್ಗೆ
ಕಳೆದ ಬಾರಿ ಸಭೆ ನಡೆಸಿ, ಸೂಚನೆ ನೀಡಿದರೂ ಒಂದು ಅರ್ಜಿಯೂ ವಿಲೇವಾರಿ ಆಗಿಲ್ಲ. ಅರ್ಹರಿಗೆ ಸೌಲಭ್ಯ ನೀಡಲು ವಿಳಂಬ ಧೋರಣೆ ಬಿಟ್ಟು ಶೀಘ್ರ ಬಾಕಿ ಇರುವ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಬೇಕು’ ಎಂದು ತಾಕೀತು ಮಾಡಿದರು.

ಸರ್ಕಾರದ ವಿವಿಧ ಯೋಜನೆಗಳ ಅನುಷ್ಟಾನಕ್ಕೆ ಬ್ಯಾಂಕ್ ಗಳ ಪಾತ್ರ ಮಹತ್ವದಾಗಿದೆ. ಹಾಗಾಗಿ ಬ್ಯಾಂಕ್ ಅಧಿಕಾರಿಗಳು ಸಭೆಗೆ ಸಂಬಂಧಿಸಿದ ದಾಖಲೆ ಹಾಗೂ ಮಾಹಿತಿಗಳನ್ನು ಕಡ್ಡಾಯವಾಗಿ ತರಬೇಕು. ಯಾವುದೇ ನೆಪ ಹೇಳದೆ ಹೊಸ ಶಾಖೆ ಪ್ರಾರಂಭಿಸುವ ಕುರಿತು ನಿಗದಿತ ಅವಧಿಯಲ್ಲಿ ಮಾಹಿತಿ ಸಲ್ಲಿಸಬೇಕು ಎಂದು ತಿಳಿಸಿದರು.

ಕೃಷಿ, ಶಿಕ್ಷಣ, ಸ್ವಯಂ ಉದ್ಯೋಗ, ಗೃಹ ಸಾಲ ಹಾಗೂ ಸ್ವ ಸಹಾಯ ಸಂಘಗಳ ಸಾಲ ಸೇರಿದಂತೆ ಬ್ಯಾಂಕ್ ಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅವಶ್ಯಕ ದಾಖಲೆಗಳನ್ನು ಪರಿಶೀಲಿಸಿ, ಕೂಡಲೇ ಸಾಲ ಮಂಜೂರು ಮಾಡಲು ಸೂಚಿಸಬೇಕು. ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಕ್ರಮ ವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾರ್ವಜನಿಕರ ಅನುಕೂಲಕ್ಕೆ ಕಾರ್ಯ ನಿರ್ವಹಿಸಬೇಕು. ಬ್ಯಾಂಕ್ ಗ್ರಾಹಕರಿಗೆ ತೊಂದರೆಯಾಗುವ ನಿಟ್ಟಿನಲ್ಲಿ ಬ್ಯಾಂಕ್ ಸಿಬ್ಬಂದಿಗಳು ಕೆಲಸ ಮಾಡುತ್ತಿರುವ ಪ್ರಕರಣಗಳ ಕಂಡುಬಂದಿವೆ. ಕೂಡಲೇ ಸಂಬಂಧಿತ ಬ್ಯಾಂಕ್ ಶಾಖೆಯ ಅಧಿಕಾರಿಗಳು ಸಿಬ್ಬಂದಿಗಳಿಗೆ ತಿಳಿಹೇಳಬೇಕು ಎಂದು ಸೂಚಿಸಿದರು.

ಅವಶ್ಯವಿರುವ ವಿವಿಧ ಗ್ರಾಮಗಳಲ್ಲಿ ಹೊಸ ಬ್ಯಾಂಕ್ ಶಾಖೆ ತೆರೆಯುವ ಕುರಿತು ಕಳೆದ ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಈವರೆಗೆ ಯಾವುದೇ ಶಾಖೆಗಳು ಪ್ರಾರಂಭವಾಗಿಲ್ಲ ಕೂಡಲೇ ಹೊಸ ಶಾಖೆಗಳ ಪ್ರಾರಂಭಕ್ಕೆ ಕ್ರಮ ವಹಿಸಬೇಕು ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಹೇಳಿದರು.

ಯುವಕ- ಯುವತಿಯರಿಗೆ ಸ್ವ-ಉದ್ಯೋಗ ತರಬೇತಿ:

ಆರ್.ಸಿಟಿ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಈಗಾಗಲೇ ಜಿಲ್ಲೆಯಲ್ಲಿ ಸ್ವಯಂ ಉದ್ಯೋಗ ಕೈಗೊಳ್ಳಲು ಗ್ರಾಮೀಣ ಭಾಗದ ಯುವಕ ಯುವತಿಯರಿಗೆ ಹೈನುಗಾರಿಕೆ, ಕುರಿ ಸಾಕಾಣಿಕೆ, ಬ್ಯೂಟಿ ಪಾರ್ಲರ್, ಸೇರಿದಂತೆ ವಿವಿಧ ವೃತ್ತಿಪರ ತರಬೇತಿಗಳನ್ನು ನೀಡಲಾಗುತ್ತದೆ.

ಈಗಾಗಲೇ ನಿಗದಿಪಡಿಸಿದ ಗುರಿಗಿಂತ ಹೆಚ್ಚು ಪ್ರಮಾಣದ ಗುರಿ ಸಾಧಿಸಲಾಗಿದೆ ಎಂದು ಕೆನರಾ ಬ್ಯಾಂಕ್ ಆರ್.ಸಿಟಿ ನಿರ್ದೇಶಕರಾದ ಸಿದ್ದನಗೌಡ ಅವರು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಸ್ವ ಉದ್ಯೋಗ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಜಿಲ್ಲೆಯ ಎಲ್ಲ ಭಾಗಗಳಲ್ಲಿ ತರಬೇತಿ ನೀಡುವ ಕುರಿತು ಯೋಜನೆ ರೂಪಿಸಬೇಕು. ತರಬೇತಿ ಕಾರ್ಯಗಾರದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜನರಿಗೆ ತಲುಪಲು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಎಂದು ತಿಳಿಸಿದರು.

ಅದೇ ರೀತಿಯಲ್ಲಿ ಗ್ರಾಮದ ಜನರಿಗೆ ಸರ್ಕಾರಿ ಯೋಜನೆಗಳ ವಿಮೆ ಮಾಡಿಸಲು ಈಗಾಗಲೇ ಬ್ಯಾಂಕ್ ಗಳಿಗೆ ನಿರ್ದೇಶನ ನೀಡಲಾಗಿದೆ. ಬ್ಯಾಂಕ್ ಸಿಬ್ಬಂದಿಯು ಕನ್ನಡ ಬಳಕೆಗೆ ಹೆಚ್ಚು ಒತ್ತು ನೀಡಬೇಕು.

ಗ್ರಾಹಕರೊಂದಿಗೆ ಕಡ್ಡಾಯವಾಗಿ ಕನ್ನಡ ಭಾಷೆ ಮಾತನಾಡಬೇಕು. ಅರ್ಜಿ ನಮೂನೆ, ಮಾಹಿತಿ ಫಲಕಗಳು ಸೇರಿದಂತೆ ಪತ್ರ ವ್ಯವಹಾರಗಳನ್ನು ಕನ್ನಡಲ್ಲೇ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ನಿರ್ದೇಶಕರಾದ ಗಂಗಾಧರ ಅವರು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ ಕುಲಕರ್ಣಿ, ನಬಾರ್ಡ್ ಡಿಡಿಎಂ ಭಾರದ್ವಾಜ, ಡಿಸಿಸಿ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಕಲಾವಂತ, ಕೆನರಾ ಬ್ಯಾಂಕ್ ಮ್ಯಾನೇಜರ್ ಸಂಜೀವ ವನಜೇರಿ ಹಾಗೂ ವಿವಿಧ ಬ್ಯಾಂಕ್ ಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button