Kannada NewsKarnataka NewsLatestPolitics

*ಮಂದಗತಿಯಲ್ಲಿ ಸಾಗುತ್ತಿರುವ ನೀರಾವರಿ ಯೋಜನೆಗಳ ಕಾಮಗಾರಿ; ಕಾರಣ ವಿವರಿಸಿದ ಡಿಸಿಎಂ*

ಪ್ರಗತಿವಾಹಿನಿ ಸುದ್ದಿ: “ನೀರಾವರಿ ಕ್ಷೇತ್ರದ ಅಭಿವೃದ್ಧಿ, ಕೆರೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದಕ್ಕೆ ಮೊದಲ ಆದ್ಯತೆ. ನಂತರ ರಸ್ತೆ ಅಭಿವೃದ್ದಿಗೆ ಒತ್ತು ನೀಡಲಾಗುವುದು. ಈ ವಿಚಾರವಾಗಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡಿಸಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬೃಹತ್ ನೀರಾವರಿ ಹಾಗೂ ಬೆಂಗಳೂರು ಅಭಿವೃದ್ದಿ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಂಗಳವಾರ ಉತ್ತರಿಸಿದರು.

ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಯಗಚಿ ನದಿ ಆಣೆಕಟ್ಟಿನ ಅಭಿವೃದ್ಧಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದು ಹೀಗೆ;

“ಯಗಚಿ ನದಿ ಅಣೆಕಟ್ಟಿನ ಕಾಲುವೆಗಳ ಅಭಿವೃದ್ದಿ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದು, ಈಗಾಗಲೇ 5.5 ಕಿ.ಮೀ.ನಷ್ಟು ಮಣ್ಣನ್ನು ತೆಗೆದಿದ್ದು, 1.5 ಕಿ.ಮೀ.ನಷ್ಟು ಕಾಮಗಾರಿ ಭೂಸ್ವಾಧೀನದ ವಿಚಾರವಾಗಿ ಸ್ಥಗಿತಗೊಂಡಿದೆ. ಎತ್ತಿನಹೊಳೆ ಯೋಜನೆಗೆ ಮಹತ್ವ ನೀಡಿದಂತೆ ಯಗಚಿ ಯೋಜನೆಗೂ ಮೊದಲ ಆದ್ಯತೆ ನೀಡುತ್ತೇವೆ” ಎಂದರು.

ಚಿಕ್ಕನಾಯಕನಹಳ್ಳಿ ಶಾಸಕರಾದ ಸುರೇಶ್ ಬಾಬು ಅವರ “ಭದ್ರಾ ಮೇಲ್ದಂಡೆ ಯೋಜನೆಯ ಮಂದಗತಿ ಕಾಮಗಾರಿಯ ಬಗ್ಗೆ ಪ್ರಶ್ನೆ ಕೇಳಿದಾಗ, “ಭದ್ರಾ ಮೇಲ್ದಂಡೆ ಯೋಜನೆಯ ಅಡಿ ರೂ. 856 ಕೋಟಿ ಮೊತ್ತದ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಯೋಜನೆ ಹಾದು ಹೋಗುವ ಸಾಕಷ್ಟು ಕಡೆ ಭೂ ಸ್ವಾಧೀನದ ಸಮಸ್ಯೆಯಿದ್ದು, ಅದನ್ನು ಬಗೆಹರಿಸಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಕಾಮಗಾರಿ ಕುಂಠಿತವಾಯಿತು. ಕೇಂದ್ರ ಸರ್ಕಾರ ರೂ.5,300 ಕೋಟಿ ಅನುದಾನ ನೀಡುವಲ್ಲಿ ವಿಳಂಬ ಮಾಡಿರುವ ಕಾರಣ ಹಿನ್ನಡೆಯಾಗಿದೆ” ಎಂದರು.

ಎತ್ತಿನಹೊಳೆ ಯೋಜನೆಯು ಮಂದಗತಿ ಕಾಮಗಾರಿ ಹಾಗೂ ರಣಘಟ್ಟ ಯೋಜನೆಯಲ್ಲಿ ಯಾವುದೇ ಪ್ರಗತಿ ಕಾಣುತ್ತಿಲ್ಲ ಎನ್ನುವ ಬೇಲೂರು ಶಾಸಕ ಎಚ್.ಕೆ.ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ರಣಘಟ್ಟ ಯೋಜನೆಯ ಕಾಲುವೆಯು 5.24 ಕಿಮೀ ನಷ್ಟು ಉದ್ದ ಸುರಂಗ ಮಾರ್ಗದಲ್ಲಿ ಹೋಗಬೇಕು. ಇದರಲ್ಲಿ 2.4 ಕಿಮೀ ನಷ್ಟು ಕಾಮಗಾರಿ ಮುಗಿದಿದೆ. ಎತ್ತಿನಹೊಳೆ ಯೋಜನೆಗೆ 402 ಎಕರೆಯಷ್ಟು ಅರಣ್ಯ ಭೂಮಿಯನ್ನು ಹಾಸನ ಮತ್ತು ತುಮಕೂರು ಭಾಗದಲ್ಲಿ ಸ್ವಾಧೀನ ಪಡಿಸಿಕೊಳ್ಳಬೇಕು” ಎಂದರು.

ಮದಗ ಮಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಯ ಅಭಿವೃದ್ದಿ ಕುರಿತು ಯು.ಬಿ.ಬಣಕಾರ್ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು “2019 ರಲ್ಲಿ 25 ಕೋಟಿ ವೆಚ್ಚದಲ್ಲಿ ಮದಗ ಮಸೂರು ಕೆರೆಯ ಸಮಗ್ರ ಅಭಿವೃದ್ದಿಗೆ ಯೋಜನೆ ಘೋಷಿಸಲಾಗಿತ್ತು. ರೂ.52 ಕೋಟಿ ವೆಚ್ಚದಲ್ಲಿ ಕೆರೆಯ ಎಡದಂಡೆ ಮತ್ತು ಬಲದಂಡೆ ಆಧುನೀಕರಣ ಯೋಜನೆಯ ಪ್ರಸ್ತಾವನೆ ಸರ್ಕಾರ ಮುಂದಿದ್ದು, ರೂ.60 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ದಿ ಮಾಡಲಾಗುವುದು” ಎಂದು ಭರವಸೆ ನೀಡಿದರು.

ಕೃಷ್ಣ ಮೇಲ್ದಂಡೆ ಯೋಜನೆ ಪುನರ್ ವಸತಿ ಕಾರ್ಯ ನಿರಂತರ

ಕೃಷ್ಣ ಮೇಲ್ದಂಡೆ ಯೋಜನೆಯ ಸಂತ್ರಸ್ಥ ಕೇಂದ್ರಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ವಿಚಾರವಾಗಿ ಬೀಳಗಿ ಕ್ಷೇತ್ರದ ಶಾಸಕರಾದ ಜಿ.ಟಿ.ಪಾಟೀಲ್ ಅವರ ಪ್ರಶ್ನೆಗೆ “ಕೃಷ್ಣ ಮೇಲ್ದಂಡೆ ಯೋಜನೆಯ ಪುನರ್ ವಸತಿ ಕಾರ್ಯ ಎಂದಿಗೂ ಮುಗಿಯದ ಕೆಲಸ. ಈ ಹಿಂದೆ ಮೂಲಸೌರ್ಕರ್ಯಗಳ ಅಭಿವೃದ್ದಿಗೆ ಎಂದು 2017 ರಲ್ಲಿ ರೂ.191 ಕೋಟಿ ರೂಪಾಯಿ ಮೀಸಲಿಟ್ಟು ಮುಕ್ತಾಯ ಮಾಡಲಾಗುವುದು ಎಂದು ಹೇಳಲಾಗಿತ್ತು. ಈಗ ಹೊಸದಾಗಿ 2,600 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದೀರಿ. ಮೊದಲಿಗೆ ಜಮೀನು ಕಳೆದಕೊಂಡವರಿಗೆ ಪರಿಹಾರ ಹಣ ಮತ್ತು ಜಮೀನುಗಳಿಗೆ ನೀರು ಬಿಡುಗಡೆ ಮಾಡಬೇಕು. ಈ ಎಲ್ಲಾ ಕೆಲಸಗಳು ಆದ ನಂತರ ಮಿಕ್ಕ ವಿಚಾರಗಳ ಬಗ್ಗೆ ಗಮನ ಹರಿಸಲಾಗುವುದು” ಎಂದು ಉತ್ತರಿಸಿದರು.

Related Articles

Back to top button