
ಕರ್ನಾಟಕದಲ್ಲಿ ಹದಗೆಟ್ಟಿರುವ ಸಾಮಾಜಿಕ ಸ್ವಾಸ್ಥ್ಯದಿಂದ ಹೂಡಿಕೆದಾರರು ಉದ್ಯಮಿಗಳು ಬೇಸತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಇಲ್ಲಿನ ಉದ್ದಿಮೆಗಳನ್ನು ತಮ್ಮ ರಾಜ್ಯಕ್ಕೆ ಸೆಳೆದುಕೊಳ್ಳಲು ಅನ್ಯ ರಾಜ್ಯಗಳು ಪ್ರಯತ್ನ ನಡೆಸಿವೆ. ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿವೆ.
ಹದಗೆಡುತ್ತಿರುವ ಸಾಮಾಜಿಕ ಸಾಮರಸ್ಯವು ರಾಜ್ಯದಲ್ಲಿ ಬಂಡವಾಳ ಹೂಡಿಕೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಹಲಾಲ್, ಹಿಜಾಬ್‌ನಂತಹ ಕ್ಷುಲ್ಲಕ ವಿಚಾರಗಳಿಂದ ಶುರುವಾಗಿ ಬೃಹತ್‌ರೂಪ ಪಡೆಯುತ್ತಿರುವ ಧರ್ಮ ಸಂಘರ್ಷವನ್ನು ನಿಯಂತ್ರಣಕ್ಕೆ ತರದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿಯಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೋಮು ಸೌಹಾರ್ಧತೆಗೆ ಹೆಸರಾಗಿದ್ದ ಕರ್ನಾಟಕಕ್ಕೆ ನಿಸರ್ಗದತ್ತವಾದ ಕೊಡುಗೆಗಳೂ ಅಗಣಿತವಾಗಿವೆ. ಉತ್ತಮ ಹವಾಮಾನ, ಮಾನವ ಸಂಪನ್ಮೂಲ, ಕೌಶಲ್ಯಯುತ ಕಾರ್ಮಿಕರು ಇಲ್ಲಿರುವುದರಿಂದ ಕಳೆದ ಒಂದೂವರೆ ದಶಕದಿಂದ ಈಚೆಗೆ ರಾಜ್ಯಕ್ಕೆ ಬೃಹತ್ ಹೂಡಿಕೆದಾರರು ಉದ್ದಿಮೆಗಳನ್ನು ಸ್ಥಾಪಿಸುವತ್ತ ಆಸಕ್ತರಾಗುವಂತಾಯಿತು. ಇದರಿಂದ ರಾಜ್ಯದ ಆರ್ಥಿಕ ಮಟ್ಟ ಗಣನೀಯವಾಗಿ ಅಭಿವೃದ್ಧಿ ಹೊಂದಿತು. ಐಟಿ ಬಿಟಿ ಉದ್ಯಮದಲ್ಲಂತೂ ರಾಜಧಾನಿ ಬೆಂಗಳೂರು ಇಡೀ ವಿಶ್ವಕ್ಕೇ ರಾಜಧಾನಿಯಾಗಿ ಮೆರೆಯುತ್ತಿದೆ. ದೇಶದ ಜಿಡಿಪಿಗೆ ಕೋಡುಗೆ ನೀಡುವ ರಾಜ್ಯಗಳ ಪೈಕಿ ಕರ್ನಾಟಕ ಐದನೇ ಸ್ಥಾನಕ್ಕೆ ಏರಿರುವುದು ರಾಜ್ಯದ ಔದ್ಯೋಗಿಕ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಆದರೆ ಸರ್ವ ಬಣ್ಣ ಮಸಿ ನುಂಗಿತು ಎಂಬ ಗಾದೆ ಮಾತಿನಂತೆ ಎಲ್ಲ ಇದ್ದರೂ ಕಳೆದ ಕೆಲವೇ ದಿನಗಳ ಅಂತರದಲ್ಲಿ ರಾಜ್ಯದ ಸಾಮಾಜಿಕ ಸ್ವಾಸ್ಥ್ಯ ಸಂಪೂರ್ಣ ಅಲ್ಲೋಲ ಕಲ್ಲೋಲವಾಗುತ್ತಿದೆ. ಏನೇ ಉತ್ತಮ ಹವಾಮಾನ, ಮಾನವ ಸಂಪನ್ಮೂಲಗಳಿದ್ದರೂ ಶಾಂತಿಯುತ ವಾತಾವರಣ, ಸ್ವಸ್ಥ ಸಮಾಜ ಇಲ್ಲದಿದ್ದರೆ ನೂರಾರು ಕೋಟಿ ರೂ. ಬಂಡವಾಳ ಹೂಡಲು ಉದ್ಯಮಿಗಳು ಮುಂದಾಗುವುದಿಲ್ಲ. ಹೀಗಾಗಿ ಸಾಮಾಜಿಕವಾಗಿ ಶಾಂತಿ ಸೌಹಾರ್ಧತೆ ಕಾಪಾಡಿಕೊಳ್ಳದಿದ್ದರೆ ಮುಂದಿನ ದಿನಗಳು ಕರ್ನಾಟಕದ ಪಾಲಿಗೆ ದುರ್ಭರವಾಗಲಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೈಗಾರಿಕೋದ್ಯಮಿಗಳು, ತಜ್ಞರ ಎಚ್ಚರಿಕೆ
ರಾಜ್ಯದಲ್ಲಿ ಪ್ರಸಕ್ತ ವಿದ್ಯಮಾನಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿರುವ ಹೂಡಿಕೆದಾರರು, ಉದ್ಯಮಿಗಳು ಸರಕಾರಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಖ್ಯಾತ ಉದ್ಯಮಿ, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ವೀಟ್ ಮಾಡಿದ್ದಾರೆ.
ರಾಜ್ಯದಲ್ಲಿ ನಡೆದಿರುವ ಹಿಜಾಬ್, ಹಲಾಲ್ ಸಂಘರ್ಷದಿಂದ ಬಂಡವಾಳ ಹೂಡಿಕೆ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಕುರಿತು ಸುದೀರ್ಘ ಲೇಖನವನ್ನೇ ಬರೆದಿರುವ ಖ್ಯಾತ ಪತ್ರಕರ್ತ, ಲೇಖಕ, ದಿ ಪ್ರಿಂಟ್ ನಿಯತಕಾಲಿಕದ ಸಂಪಾದಕ ಶೇಖರ್ ಗುಪ್ತಾ, ಇದುವರೆಗೂ ಬೆಂಗಳೂರು ದಿ ಫೀಲ್ ಗುಡ್ ಸಿಟಿ ಆಗಿತ್ತು. ಆದರೆ ಪ್ರಸಕ್ತ ವಿದ್ಯಮಾನಗಳು ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕದ ಸಾಮಾಜಿಕ ಆರೋಗ್ಯವನ್ನೇ ಬುಡಮೇಲು ಮಾಡುತ್ತಿವೆ ಎಂದಿದ್ದಾರೆ.
ಉತ್ತರ ಭಾರತದಲ್ಲಿ ಖಡು ಬೇಸಿಗೆಯ ರಣ ಬಿಸಿಲು ಕಂಗೆಡಿಸುತ್ತದೆ. ಅಂತಹ ಯಾವುದೇ ಸಂದರ್ಭದಲ್ಲಿ ನಾನು ಬೆಂಗಳೂರಿಗೆ ಬಂದರೆ ಇಲ್ಲಿನ ಆಹ್ಲಾದಕರ ವಾತಾವರಣ ನನ್ನಲ್ಲಿ ಉತ್ಸಾಹ ತುಂಬುತ್ತಿತ್ತು. ಅಮೇರಿಕದಲ್ಲಿ ಒಂದೊಂದು ನಗರಗಳಿಗೂ ಒಂದೊಂದು ಅನ್ವರ್ಥಕ ಹೆಸರುಗಳಿವೆ. ನ್ಯೂ ಯಾರ್ಕ್ ಗೆ ದಿ ಬಿಗ್ ಆಪಲ್, ಚಿಕಾಗೋಕ್ಕೆ ದಿ ವಿಂಡ್ ಸಿಟಿ, ವರ್ಜಿನಿಯಾಕ್ಕೆ ಲವರ್ಸ್ ಈ ರೀತಿ ಪರ್ಯಾಯ ಹೆಸರುಗಳಿರುವಂತೆ ಬೆಂಗಳೂರಿಗೆ ನಾನು ದಿ ಫೀಲ್ ಗುಡ್ ಸಿಟಿ ಎಂಬ ಹೆಸರಿಟ್ಟುಕೊಂಡಿದ್ದೇನೆ.
ಆದರೆ ಹೂಡಿಕೆದಾರರು, ಉದ್ದಿಮೆಗಳ ಸ್ಥಾಪನೆಗೆ ಕೇವಲ ಉತ್ತಮ ಹವಾಮಾನ ಸಾಲುವುದಿಲ್ಲ. ಉತ್ತಮ ಸಾಮಾಜಿಕ ವಾತಾವರಣವೂ ಅತ್ಯಂತ ಅಗತ್ಯ. ಈ ನಿಟ್ಟಿನಲ್ಲಿ ಪ್ರಸ್ತುತ ಬೆಂಗಳೂರೂ ಸೇರಿದಂತೆ ಇಡೀ ಕರ್ನಾಟಕದಲ್ಲಿ ಉಂಟಾಗಿರುವ ಕ್ಷೋಬೆ ಬಂಡವಾಳ ಹೂಡಿಕೆದಾರರನ್ನು ಹಿಂದೇಟು ಹಾಕುವಂತೆ ಮಾಡುತ್ತಿದೆ ಎಂದು ಅವರು ಹೇಳಿದ್ದಾರೆ.
ಹಿಜಾಬ್ ವಿವಾದದ ಪರಿಣಾಮ ಶೈಕ್ಷಣಿಕ ರಂಗಕ್ಕೆ ಸೀಮಿತವಾಗಿತ್ತು. ಆ ನಂತರ ಶುರುವಾಗಿರುವ ಹಲಾಲ್- ಜಟ್ಕಾ ಕಟ್ ವಿವಾಧ ವ್ಯಾಪಾರಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಉದ್ದಿಮೆಗಳು ಸಮೃದ್ಧವಾಗಿ ಅಭಿವೃದ್ಧಿ ಹೊಂದುವಲ್ಲಿ ವಿಸ್ತಾರವಾದ ಮುಕ್ತ ಮಾರುಕಟ್ಟೆ, ಸಾಮಾಜಿಕ ಸೌಹಾರ್ದತೆ ಅತ್ಯಗತ್ಯ ಎಂದು ಅವರು ಎಚ್ಚರಿಸಿದ್ದಾರೆ. ಮಾರುಕಟ್ಟೆಗಳು ಧರ್ಮದ ಹೆಸರಿನಲ್ಲಿ ವಿಭಜನೆಯಾಗುತ್ತ ಹೋದರೆ ಬಂಡವಾಳ ಹೂಡುವವರು ಮುಂದೆಬರುವುದಿಲ್ಲ. ತಮ್ಮ ಉದ್ದಿಮೆಗಳನ್ನು ಇನ್ಯಾವುದಾದರೂ ಸ್ವಸ್ಥ ಸಮಾಜವಿರುವ ರಾಜ್ಯಗಳಿಗೆ ಕೊಂಡೊಯ್ಯುತ್ತಾರೆ. ಇದರ ಪರಿಣಾಮ ಕರ್ನಾಟಕದ ಆರ್ಥಿಕತೆಯ ಮೇಲೆ ಉಂಟಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
ಅಸ್ವಸ್ಥ ಸಮಾಜದಲ್ಲಿ ಉದ್ಯಮಿಯಾಗಲು ಕರೆಯುವುದು ಹಾಸ್ಯಾಸ್ಪದ
ರಾಜ್ಯ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ಉದ್ಯಮಿಯಾಗು ಉದ್ಯೋಗ ನೀಡು ಎಂಬ ಘೋಷವಾಕ್ಯದೊಂದಿಗೆ ರಾಜ್ಯದ ಪ್ರಮುಖ ನಗರಗಳಲ್ಲಿ ಯುವ ಜನತೆಯನ್ನು ಉದ್ಯಮ ಸ್ಥಾಪಿಸುವತ್ತ ಆಕರ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಯತ್ನವೇನೋ ಬಹಳ ಒಳ್ಳೆಯದು, ಆದರೆ ಪ್ರಸ್ತುತ ಕರ್ನಾಟಕದ ಪ್ರಕ್ಷುಬ್ದ ಸಾಮಾಜಿಕ ಸ್ಥಿತಿಯಲ್ಲಿ ಉದ್ಯಮಿಯಾಗಲು ಯಾರು ಧೈರ್ಯ ಮಾಡುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಪಿ. ಭಾಸ್ಕರ ಪ್ರಶ್ನಿಸುತ್ತಾರೆ.
ಅಲ್ಲದೇ ಪ್ರಸಕ್ತ ವರ್ಷ ನವೆಂಬರ್ ೨ರಿಂದ ೪ರವರೆಗೆ ವಿಶ್ವದಾದ್ಯಂತ ಉದ್ಯಮಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಗ್ಲೋಬಲ್ ಮೀಟ್ ಹಮ್ಮಿಕೊಳ್ಳಲು ಸಚಿವ ನಿರಾಣಿ ಯೋಜನೆ ರೂಪಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಪ್ರಸಕ್ತ ನಡೆದಿರುವ ವಿದ್ಯಮಾನವನ್ನು ಇಡೀ ವಿಶ್ವವೇ ಗಮನಿಸುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಗ್ಲೋಬಲ್ ಮೀಟ್‌ಗೆ ಬರುವ ಅಂತಾರಾಷ್ಟ್ರೀಯ ಹೂಡಿಕೆದಾರರು ಸಹ ಯೋಚನೆ ಮಾಡುವ ಸ್ಥಿತಿ ಉಂಟಾಗಲಿದೆ ಎಂಬುದು ಪಿ. ಭಾಸ್ಕರ್ ಅವರ ಕಳಕಳಿಯಾಗಿದೆ.
ತಮ್ಮತ್ತ ಸೆಳೆಯಲು ಮುಂದಾದ ಇತರ ರಾಜ್ಯಗಳು
ಕರ್ನಾಟಕದಲ್ಲಿ ಹದಗೆಟ್ಟಿರುವ ಸಾಮಾಜಿಕ ಸ್ವಾಸ್ಥ್ಯದಿಂದ ಹೂಡಿಕೆದಾರರು ಉದ್ಯಮಿಗಳು ಬೇಸತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಇಲ್ಲಿನ ಉದ್ದಿಮೆಗಳನ್ನು ತಮ್ಮ ರಾಜ್ಯಕ್ಕೆ ಸೆಳೆದುಕೊಳ್ಳಲು ಅನ್ಯ ರಾಜ್ಯಗಳು ಪ್ರಯತ್ನ ನಡೆಸಿವೆ. ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿವೆ.
ತೆಲಂಗಾಣದ ಸಚಿವರೊಬ್ಬರು ಇತ್ತೀಚೆಗೆ ಬೆಂಗಳೂರಿನ ಉದ್ಯಮಿಯೊಬ್ಬರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡುತ್ತ ನೀವು ನಮ್ಮಲ್ಲಿ ಬನ್ನಿ ಉತ್ತಮ ಸೌಕರ್ಯ ಒದಗಿಸುತ್ತೇವೆ ಎಂದು ಆಹ್ವಾನಿಸಿದ್ದರು. ಈಗ ತಮಿಳುನಾಡಿನ ವಿತ್ತ ಸಚಿವ ಪಳನಿವೇಲ್ ತ್ಯಾಗರಾಜನ್ ನೇರವಾಗಿಯೇ ಕರ್ನಾಟಕದ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷವನ್ನು ನಾವು ಗಮನಿಸುತ್ತಿದ್ದೇವೆ. ಕೋಮು ಗಲಭೆಗೆ ಬೇಸತ್ತು ಸ್ಥಳಾಂತರಗೊಳ್ಳಲು ಬಯಸುವ ಉದ್ಯಮಿಗಳಿಗೆ ನಾವು ಆಹ್ವಾನ ನೀಡುತ್ತೇವೆ ಎಂದು ನೇರಾನೇರ ಹೇಳಿಕೆಯನ್ನು ಅವರು ನೀಡಿದ್ದಾರೆ.
ಉದ್ಯಮಿಗಳೂ ಸಹ ಇಂಥಹ ಅವಕಾಶವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ತಾವಾಗಿಯೇ ಆಹ್ವಾನ ನೀಡುವ ರಾಜ್ಯಗಳು ಸಾಕಷ್ಟು ತೆರಿಗೆ ವಿನಾಯಿತಿ, ಮೂಲ ಸೌಕರ್ಯಗಳನ್ನು ಒದಗಿಸುವ ಆಶಯವಿರುವುದರಿಂದ ಬೃಹತ್ ಉದ್ದಿಮೆಗಳು ತಮೀಳುನಾಡು ತೆಲಂಗಾಣದ ಕಡೆಗೆ ಮುಖಮಾಡಿದರೂ ಆಶ್ಚರ್ಯವಿಲ್ಲ. ಇಂಥಹ ಸಂಗತಿಗಳು ಘಟಿಸಿ ಕರ್ನಾಟಕದ ಯುವಜನತೆ ಉದ್ಯೋಗ ಕಳೆದುಕೊಂಡು ಅಸಹಾಯಕರಾಗುವ ಮುನ್ನ ರಾಜ್ಯ ಸರಕಾರ, ರಾಜಕೀಯ ಮುಖಂಡರು ಎಚ್ಚೆತ್ತುಕೊಂಡು ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸೂಕ್ತ ಕ್ರಮ ವಹಿಸಬೇಕಿದೆ ಎಂಬುದು ಸಮಸ್ತ ಸಾರ್ವಜನಿಕರ ಆಗ್ರಹವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ