ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಭಾರತೀಯ ಜನತಾ ಪಾರ್ಟಿಯ ಟಿಕೆಟ್ ಘೋಷಣೆ ಇನ್ನೂ 2 ದಿನ ಮುಂದಕ್ಕೆ ಹೋಗುವ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ನವದೆಹಲಿಯಲ್ಲಿ ನಿರಂತರ ಸಭೆಯ ಮಧ್ಯೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದೇ ಘೋಷಣೆ ಮಾಡಬೇಕೆಂದಿತ್ತು. ಆದರೆ ಕೆಲವು ಕ್ಷೇತ್ರಗಳ ಬಗ್ಗೆ ಇನ್ನಷ್ಟು ಗ್ರೌಂಡ್ ರಿಪೋರ್ಟ್ ಪಡೆಯುವುದು, ಹೊಸ ಅಭ್ಯರ್ಥಿಗಳ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುವುದು ಇರುವುದರಿಂದ ನನಗನಿಸುತ್ತದೆ ನಾಳೆ ಅಥವಾ ನಾಡಿದ್ದು ಘೋಷಣೆಯಾಗಬಹುದು ಎಂದು ತಿಳಿಸಿದರು.
ಕಳೆದ 2 ದಿನಗಳಿಂದ ನವದೆಹಲಿಯಲ್ಲಿ ನಿರಂತರವಾಗಿ ಸಭೆಯ ಮೇಲೆ ಸಭೆ ನಡೆಯುತ್ತಿದೆ. ಭಾನುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸಭೆ ನಡೆದಿದೆ. ಸೋಮವಾರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನಿವಾಸದಲ್ಲಿ, ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನಿವಾಸದಲ್ಲಿ ಸಭೆ ನಡೆದಿದೆ. ಸಂಜೆ ಕೂಡ ನಡ್ಡಾ ನಿವಾಸದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಯುವುದು.
ಅನೇಕ ಕ್ಷೇತ್ರಗಳಿಗೆ ಹೊಸಮುಖ ಹಾಕುವ ಸುಳಿವನ್ನು ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಅನೇಕ ಕಡೆ ಪ್ರಭಾವಿಗಳೇ ತಮ್ಮ ಜೊತೆಗೆ ಮಕ್ಕಳಿಗೂ ಕೆಲವರು ಟಿಕೆಟ್ ಕೇಳುತ್ತಿದ್ದಾರೆ. ವಲಸೆ ಬಂದವರು ತಮ್ಮನ್ನು ಕೈ ಬಿಡದಂತೆ ಒತ್ತಡ ಹೇರುತ್ತಿದ್ದಾರೆ. ಕೆಲವರ ಫರಫಾರ್ಮೆನ್ಸ್ ಸರಿ ಇಲ್ಲದಿರುವುದರಿಂದ, ಮತ್ತೆ ಕೆಲವರ ವಯಸ್ಸಿನ ಕಾರಣದಿಂದ ಕೈಬಿಡಬೇಕು ಎನ್ನುವ ಚರ್ಚೆಯೂ ನಡೆದಿದೆ.
ಈ ಎಲ್ಲ ಕಾರಣಗಳಿಂದಾಗಿ ಚರ್ಚೆ ಇನ್ನು ಒಂದೆರಡು ದಿನ ಬೇಕಾಗಬಹುದು ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ದಾರೆ. ಇದೇ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಅಷ್ಟರೊಳಗೆ ಟಿಕೆಟ್ ಘೋಷಣೆಯಾಗಬೇಕಿದೆ. ಆದರೆ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವುದರಿಂದ ಸಭೆಯ ಮೇಲೆ ಸಭೆ ನಡೆಯುತ್ತಿದೆ. ರಾಜ್ಯದ ಬಹುತೇಕ ಕ್ಷೇತ್ರಗಳ ಮುಖಂಡರು, ಪದಾಧಿಕಾರಿಗಳು ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.
ಬೆಳಗ್ಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿಗಳೂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಬಿ.ಎಸ್.ಯಡಿಯೂರಪ್ಪ ಇದು ಸಂಜೆಯೊಳಗೆ 170ರಿಂದ 180 ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಲಿದೆ ಎಂದಿದ್ದರು. ಈ ಇಬ್ಬರು ನಾಯಕರ ಹೇಳಿಕೆ ಈಗ ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ