Cancer Hospital 2
Beereshwara 36
LaxmiTai 5

ಪುನರ್ಜನ್ಮ ನೀಡುವ ವೈದ್ಯರಿಗೆ ಗೌರವ ಸಲ್ಲಿಸುವುದು ಕರ್ತವ್ಯ (ಇಂದು ವೈದ್ಯರ ದಿನ)

Anvekar 3

ವೈ. ಬಿ. ಕಡಕೋಳ

ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಸತ್ಯ. ವೈದ್ಯೋ ನಾರಾಯಣ ಹರಿ ಎನ್ನುವ ಸಾಲು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಆರೋಗ್ಯವನ್ನು ರಕ್ಷಿಸುವ ಅನಾರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರಿಗೆ ಹೋಲಿಸುವ ಪದ್ಧತಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ.
2002 ಮೇ 23 ರಿಂದ 27 ರವರೆಗೆ ರಾಜ್ಯ ವಿಜ್ಞಾನ ಪರಿಷತ್ತು ಬೆಳಗಾವಿ ಜಿಲ್ಲೆಯ ಸೊಗಲ ಕ್ಷೇತ್ರದಲ್ಲಿ ವಿಜ್ಞಾನ ಲೇಖನ ರಚನೆ ಕುರಿತು ಆಯ್ದ ಲೇಖಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಇದನ್ನು ಬಹುಪಾಲು ಸಮಯವನ್ನು ನೀಡಿದ್ದು ನಾಡಿನ ಖ್ಯಾತ ವೈದ್ಯ ವಿಜ್ಞಾನಿ ದಿವಂಗತ ಸ.ಜ. ನಾಗಲೋಟಿಮಠರು.

ಬಹುತೇಕ ಅವಧಿಯನ್ನು ಅವರು ತಗೆದುಕೊಳ್ಳುತ್ತಿದ್ದರು. ಡಾ.ಸ.ಜ.ನಾಗಲೋಟಿಮಠ ಅವರ ಪರಿಚಯ ನನಗಾದದ್ದು 2002ಲ್ಲಿ. ಈ ಮೊದಲು ಅವರ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದಿದ್ದೆನಾದರೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಒದಗಿ ಬಂದಿರಲಿಲ್ಲ. ಡಾ.ಸ.ಜ.ನಾಗಲೋಟಿಮಠ ಅವರ ಬಗ್ಗೆ ತಿಳಿದಿದ್ದ ನನಗೆ ಅಂತಹ ಪ್ರಸಿದ್ಧ ವ್ಯಕ್ತಿಯ ಮಾರ್ಗದರ್ಶನ ದಲ್ಲಿ ವಿಜ್ಞಾನ ಬರಹಗಳನ್ನು ರೂಪಿಸುವ ಬಗೆಯನ್ನು ತಿಳಿಯುವ ಸದವಕಾಶ ಸಿಕ್ಕಿದ ಸಂದರ್ಭ ಮರೆಯಲಾಗದು.ಇಂದು ವೈದ್ಯರ ದಿನ ಎಂಬ ನೆನಪಿಗೆ ಹಳೆಯ ಸಂಗತಿಯನ್ನು ಇಲ್ಲಿ ಮೆಲಕು ಹಾಕುತ್ತಿರುವೆನು.

2002 ರ ಮೇ 25ರ ಸಾಯಂಕಾಲದ ಸಮಯದಲ್ಲಿ ನಾವೆಲ್ಲರೂ ಸೊಗಲ ಸೋಮೇಶ್ವರನ ದರ್ಶನ ಮಾಡಿಕೊಂಡು ನಮಗೆ ನಿಗದಿ ಪಡಿಸಿದ ಸಭಾಂಗಣದಲ್ಲಿ ಸೇರಿದ್ದೆವು.ಆ ಸಮಯದಲ್ಲಿ ನಾಗಲೋಟಿಮಠರು ಕೈಯಲ್ಲಿ ಧಾರವಾಡ ಫೇಡಾ ಬಾಕ್ಸಗಳೊಂದಿಗೆ ಆಗಮಿಸಿದರು. ನಾವೆಲ್ಲರೂ ಮಾತಿನಲ್ಲಿ ತೊಡಗಿದ್ದೆವು.ಅವರು ಸಭಾಂಗಣದಲ್ಲಿ ಬಂದ ತಕ್ಷಣ ಮಾತು ನಿಲ್ಲಿಸಿದೆವು.

“ಯಾಕ್ರೋ ಮಾತು ನಿಲ್ಲಿಸಿದಿರಿ.ಮಾತಾಡ್ರಿ ನಾನು ಕೇಳ್ತೀನಿ” ಅಂದರು. ನಾವೆಲ್ಲರೂ ಸುಮ್ಮನಾದೆವು. ವೇದಿಕೆಯಲ್ಲಿ ಹೋಗಿ ತಮ್ಮ ಕೈಯಲ್ಲಿ ಇದ್ದ ಫೇಡಾ ಪೊಟ್ಟಣ ಟೇಬಲ್ ಮೇಲೆ ಇಟ್ಟು ನೀವು ಫೇಡಾ ತಿಂದಿರುವಿರೇನು.? ಅಂತ ಪ್ರಶ್ನಿಸಿದರು. ಎಲ್ಲರೂ ತಿಂದಿದ್ದೇವೆ ಎಂದು ಹೇಳಿದರು. ನಾವು 30 ಶಿಬಿರಾರ್ಥಿಗಳು ಅಲ್ಲಿದ್ದ ದ್ದು. ಒಬ್ಬೊಬ್ಬರನ್ನು ಕರೆದು ಪೇಡಾ ಕೊಟ್ಟು ತಿನ್ನೋಕೆ ಹೇಳತೊಡಗಿದರು. ಎಲ್ಲರೂ ಪೇಡಾ ತಿನ್ನುವುದು ಮುಗಿಯಿತು. ನಮ್ಮ ನಮ್ಮ ಸ್ಥಳದಲ್ಲಿ ಬಂದು ಕುಳಿತಿದ್ದೆವು.ಆಗ ಉಳಿದಿರೋ ಪೇಡಾ ಕೂಡ ಎಲ್ಲರಿಗೂ ಹಂಚಿ ಈಗ ನಾನು ಹೇಳುವ ವರೆಗೂ ಫೇಡಾ ತಿನ್ನುವಂತಿಲ್ಲ. ಎಂದು ಷರತ್ತು ಹಾಕಿ ವೇದಿಕೆಯಲ್ಲಿ ನಿಂತು ಕೊಂಡು ಪೇಡಾ ದ ಮಹತ್ವ ತಿಳಿಸಿ ಪೇಡಾ ತಿನ್ನುವ ವಿಧಾನವನ್ನು ಹೇಳಿದರು.

ಅವರು ಒಂದು ಪೇಡಾ ಕನಿಷ್ಠ 10 ನಿಮಿಷ ತಿಂದರು. ಇದು ಹೇಗೆ ಅಂತಿರಾ.? ಪೇಡಾ ನಾಲಿಗೆಯು ಮೇಲಿರಿಸಿ ಪೇಪರ್ ಮಿಂಟ್ ಸೀಪುವ ರೀತಿಯಲ್ಲಿ ಸೀಪುತ್ತಾ ಪೇಡಾ ತಿನ್ನುವ ವಿಧಾನವನ್ನು ತೋರಿಸಿ ಈಗ ತಿನ್ನಿರಿ ಎಂದು ನಮಗೆ ನೀಡಿದ್ದ ಪೇಡಾ ತಿನ್ನಲು ಹೇಳಿದರು. ನಾಲಿಗೆಯ ವಿವಿಧ ಗ್ರಂಥಗಳಲ್ಲಿ ಫೇಡಾ ಸವಿಯುವ ಮೂಲಕ ಹಾಲಿನ ಈ ಸಿಹಿಯಾದ ವಸ್ತು ತಿನ್ನಬೇಕು ಎಂದು ಹೇಳಿ ಆ ದಿನದ ಸಂಜೆ ತರಬೇತಿ ತಗೊಂಡು ಖಡಕ್ ರೊಟ್ಟಿ ಕ್ಯಾನ್ಸರ್ ಘಟನೆಯನ್ನು ಉದಾಹರಣೆಗೆ ನೀಡಿದರು. ರೊಟ್ಟಿ ಯನ್ನು ತಿನ್ನುವ ಬಗ್ಗೆ ಬಹಳ ಮಾರ್ಮಿಕವಾಗಿ ಹೇಳುತ್ತ ಅಬಡ ಜಬಡ ರೊಟ್ಟಿ ತಿಂದರೆ ಅದು ಜೀರ್ಣವಾಗುವ ಬದಲು ಕ್ಯಾನ್ಸರ್ ಗೆ ದಾರಿ ಮಾಡಿಕೊಡುತ್ತದೆ ಎಂಬ ಸಂಗತಿಗಳನ್ನು ಅವರು ಉದಾಹರಣೆ ಸಹಿತ ಹೇಳಿದರು.

ನಾಡಿನ ಖ್ಯಾತ ವೈದ್ಯರು ಹೀಗೆ ಸಮಯವನ್ನು ನಮಗೆ ಕೊಟ್ಟು ಜೊತೆಗೆ ಬದುಕಿನ ಮಹತ್ವ ತಿಳಿಸಿದ್ದು ನಮ್ಮ ಸುದೈವವೇ ಸರಿ.
ಅವರ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಮಾತನಾಡುತ್ತಾ ವೈದ್ಯಕೀಯ ವಿಸ್ಮಯ ತಿಳಿಸಿದ್ದು ನಾನು ಎಂದಿಗೂ ಮರೆಯಲಾರದಂತಹ ಅನುಭವ.

ಡಾ.ಸಜನಾ ಅವರ ಸಾಧನೆಯ ಕ್ಷೇತ್ರ ಒಂದೇ ಆಗಿರಲಿಲ್ಲ. ಏಕೆಂದರೆ ಅವರು ಯಾವುದೇ ಒಂದು ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ವೈದ್ಯಕೀಯ ವಿಜ್ಞಾನದ ರೋಗ ನಿದಾನ ಶಾಸ್ತ್ರದಲ್ಲಿ ಅವರು ಪ್ರಾವಿಣ್ಯತೆ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆಗೈದರು ನಿಜ. ಆದರೆ ವೈದ್ಯಕೀಯ ಕ್ಷೇತ್ರದ ಆಚೆಯೂ ಸಜನಾ ಅವರು ಸಾಧಿಸಿದ ಸಾಧನೆ ಅಪಾರ. ಅವರೊಬ್ಬ ವೈದ್ಯ, ಶಿಕ್ಷಕ, ಸಾಹಿತಿ, ಆಡಳಿತಾಗಾರ, ಸಂಸ್ಥಾಪಕ, ವಾಗ್ಮಿ, ಶರಣ, ಸಂತ, ಸಂಘಟಕ ಮತ್ತು ಇವೆಲ್ಲವುಕ್ಕಿಂತ ಅವರೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ಪ್ರಾಮಾಣಿಕತೆ, ಸಮಯ ಪ್ರಜ್ಞೆ ಮತ್ತು ಪರಿಶ್ರಮ ಇವುಗಳ ಪ್ರತಿರೂಪ ಸಜನಾ. ಸ್ವತಃ ಲೇಖಕರಾಗಿದ್ದ ಡಾ.ಸ.ಜ.ನಾಗಲೋಟಿಮಠ ಇತರರನ್ನು ಬರೆಯಲು ಪ್ರೇರೆಪಿಸುತ್ತಿದ್ದರು.

‘ಅನ್ನ ಮಾರ್ಗದಲ್ಲಿ ಅಪಘಾತಗಳು’ ಮತ್ತು ‘ಸತ್ತ ಮೇಲೆ ಸಮಾಜ ಸೇವೆ’ ಒಬ್ಬ ಸಾಮಾನ್ಯನೂ ಅರ್ಥ ಮಾಡಿಕೊಳ್ಳುವಂತಹ ಪುಸ್ತಕಗಳನ್ನು ಬರೆದು ವೈದ್ಯಕೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅವರ ಆತ್ಮ ಚರಿತ್ರೆ ‘ಬಿಚ್ಚಿದ ಜೋಳಿಗೆ’ ಒಂದು ಸಂಗ್ರಹಯೋಗ್ಯ ಕೃತಿ. ಸಜನಾ ತಮ್ಮಲ್ಲಿರುವ ಬರಹಗಾರನನ್ನು ಯಾವ ರೀತಿ ದುಡಿಸಿಕೊಂಡಿರುವರು ಎನ್ನುವುದು ‘ಬಿಚ್ಚಿದ ಜೋಳಿಗೆ’ ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಅವರ ಆತ್ಮ ಚರಿತ್ರೆ ಕನ್ನಡದ ಅತ್ಯುತ್ತಮ ಕೃತಿಗಳಲ್ಲೊಂದು.

Emergency Service

ಕಡಿಮೆ ಹಣದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಬೇಕೆನ್ನುವುದು ಸಜನಾ ಅವರ ಇನ್ನೊಂದು ಮಹತ್ವಾಕಾಂಕ್ಷೆಯಾಗಿತ್ತು. ಬಡತನದ ಅರಿವಿದ್ದ ಅವರಿಗೆ ಬಡ ರೋಗಿಗಳ ಬಗ್ಗೆ ಕಾಳಜಿ ಇತ್ತು. ಡಾ.ಸ.ಜ.ನಾಗಲೋಟಿಮಠ ಅವರ ಪ್ರತಿಭೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಮೇಲೆ ನಂಬಿಕೆ ಇದ್ದುದ್ದರಿಂದಲೇ ಸರ್ಕಾರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ನಿರ್ದೇಶಕರಾಗಿ ನೇಮಿಸಿತ್ತು ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯಬೇಕಾದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಲು ಅವರು ದುಡಿದ ರೀತಿ ಅನನ್ಯ.

ಬೆಂಗಳೂರಿನ ಲ್ಲಿರುವ ನನ್ನ ಆತ್ಮೀಯ ಹಿರಿಯ ಸ್ನೇಹಿತ ಅಶೋಕ ಚಿಕ್ಕಪರಪ್ಪ ನನಗೆ ಸ.ಜ. ನಾಗಲೋಟಿಮಠರ ‘ಜೀವಧಾರೆ’ (ಅವರ ಅಭಿನಂದನಾ ಗ್ರಂಥ) ಪುಸ್ತಕವನ್ನು 2018 ರಲ್ಲಿ ಕೊಟ್ಟಿರುವರು ಈಗಲೂ ಅದನ್ನು ಜೋಪಾನವಾಗಿ ಇಟ್ಟುಕೊಂಡಿರುವೆನು.
ವಿಜ್ಞಾನ ಬರಹಗಳನ್ನು ಬರೆಯುವ ರೀತಿ ನಮಗೆ ಕಲಿಸಿದ ಗುರು ಸ. ಜ. ನಾಗಲೋಟಿಮಠರು ಇಂದು ವೈದ್ಯರ ದಿನ ಹೀಗಾಗಿ ಅವರು ಕಳೆದ ಸಮಯ ಹಂಚಿಕೊಂಡೆನು.ಬಡತನದ ಬೇಗೆಯಲ್ಲಿ ಬೆಳೆದು ವೈದ್ಯಕೀಯ ರಂಗದಲ್ಲಿ ಸಾಧನೆ ಗೈದ ಮಹಾನ್ ವ್ಯಕ್ತಿ ಸ. ಜ. ನಾಗಲೋಟಿಮಠರು. ನಾವಿಂದು ಅನೇಕ ವೈದ್ಯರನ್ನು ನೋಡುತ್ತೇವೆ ಹಣ ಮುಖ್ಯ ವಲ್ಲ ಗುಣ ಮುಖ್ಯ. ಗುಣಮಟ್ಟ ಮುಖ್ಯ ಎಂಬುದು ಮಹತ್ವ ಪಡೆಯಬೇಕು.


ವೈದ್ಯರ ದಿನ :
ಭಾರತದಲ್ಲಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.ಅದೇ ರೀತಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಮಾರ್ಚ್ 30, ಕ್ಯೂಬಾದಲ್ಲಿ ಡಿಸೆಂಬರ್ 3, ಇರಾನ್ ನಲ್ಲಿ ಆಗಸ್ಟ್ 23ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತದೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಜಾರ್ಜಿಯಾದಲ್ಲಿ 1933 ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನಾಚರಣೆ ಶುರು ಮಾಡಲಾಗಿತ್ತು. ಅಂದು ವೈದ್ಯರಿಗೆ ಕಾರ್ಡ್ ಕಳುಹಿಸಿ ಮೂಲಕ ಹಾಗೂ ನಿಧನರಾದ ಶ್ರೇಷ್ಠ ವೈದ್ಯರ ಸಮಾಧಿಗೆ ಪುಷ್ಪಾರ್ಪಣೆ ಮಾಡಿ ಈ ದಿನವನ್ನು ಆಚರಿಸಲಾಯಿತು.

ರಾಷ್ಟ್ರೀಯ ವೈದ್ಯರ ದಿನದ ಮಹತ್ವ ಮತ್ತು ಇತಿಹಾಸ :
ಭಾರತದಲ್ಲಿ 1991ರಿಂದ ರಾಷ್ಟ್ರೀಯ ವೈದ್ಯ ದಿನ ಆಚರಣೆ ಶುರು ಮಾಡಲಾಗಿದೆ. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಹಾಗೂ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್ ನೀಡಿರುವ ಕೊಡುಗೆ ಜ್ಞಾಪಕಾರ್ಥವಾಗಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯ ದಿನವಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸ್ಥಾಪನೆಯಲ್ಲಿ ಬಿಧನ್ ಚಂದ್ರ ರಾಯ್ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆ ಅವರ ಜನ್ಮ ದಿನ ಮತ್ತು ಪುಣ್ಯಸ್ಮರಣೆ ದಿನವನ್ನೇ ರಾಷ್ಟ್ರೀಯ ವೈದ್ಯಕೀಯ ದಿನ ಎಂದು ಘೋಷಿಸಲಾಯಿತು

ಯಾರು ಈ ಶ್ರೇಷ್ಠ ವೈದ್ಯ ಬಿಧನ್ ಚಂದ್ರ ರಾಯ್?:
ಶ್ರೇಷ್ಠ ವೈದ್ಯ ಎನಿಸಿರುವ ಬಿಧನ್ ಚಂದ್ರ ರಾಯ್ ಜುಲೈ 1 1882ರಲ್ಲಿ ಜನಿಸಿದ್ದರು. ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿ, ವೈದ್ಯರಾಗಿ ಬಿ.ಸಿ. ರಾಯ್ ವೈದ್ಯಕೀಯ ರಂಗಕ್ಕೆ ಅಮೋಘ ಕೊಡುಗೆಗಳನ್ನು ನೀಡಿದ್ದಾರೆ. ಜಾಧವಪುರ್ ಟಿಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ, ಕಮಲಾ ನೆಹರೂ ಮೆಮೋರಿಯಲ್ ಆಸ್ಪತ್ರೆ, ವಿಕ್ಟೋರಿಯಾ ಇನ್ಸ್ ಟಿಟ್ಯೂಶನ್, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಹಿಳೆಯರು ಮತ್ತು ಮಕ್ಕಳಿಗೆ ವಿಶೇಷವಾಗಿ ತೆರೆದಿರುವ ಚಿತ್ತರಂಜನ್ ಸೇವಾ ಸದನಗಳ ಸ್ಥಾಪನೆಯಲ್ಲಿ ಬಿ.ಸಿ. ರಾಯ್ ಪಾತ್ರ ಪ್ರಮುಖವಾಗಿದೆ. ಇವರ ಸೇವೆಯನ್ನು ಪರಿಗಣಿಸಿ 1961ರ ಫೆಬ್ರವರಿ 4ರಂದು ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೈದ್ಯಕೀಯ ರಂಗದಲ್ಲಿ ಸಾಧನೆ ತೋರಿದ ಬಿಧನ್ ಚಂದ್ರ ರಾಯ್ 1962ರ ಜುಲೈ 1ರಂದು ವಿಧಿವಶರಾದರು.

ಭಾರತದಲ್ಲಿ ವೈದ್ಯಕೀಯ ರಂಗದಲ್ಲಿ ನಿಸ್ವಾರ್ಥ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಯೊಬ್ಬ ವೈದ್ಯರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ರಾಷ್ಟ್ರೀಯ ವೈದ್ಯರ ದಿನ ಎಂದು ಆಚರಿಸಲಾಗುತ್ತದೆ. ಭಾರತದಲ್ಲಿ ಮಾತ್ರ ವೈದ್ಯರ ದಿನವನ್ನು ಆಚರಿಸಲಾಗುತ್ತಿಲ್ಲ. ಬದಲಿಗೆ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ದಿನವನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.

ಅನಾರೋಗ್ಯಕ್ಕೆ ತುತ್ತಾದ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಪುನರ್ಜನ್ಮ ನೀಡುವ ವೈದ್ಯರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಶ್ರೇಷ್ಠ ವೈದ್ಯ ಹಾಗೂ ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿ ಬಿಧನ್ ಚಂದ್ರ ರಾಯ್ ಜನ್ಮದಿನ ಹಾಗೂ ಪುಣ್ಯಸ್ಮರಣೆ ಜ್ಞಾಪಕಾರ್ಥವಾಗಿ ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ.

ನಮ್ಮ ನಡುವೆ ನಿಸ್ವಾರ್ಥವಾಗಿ ಬದುಕುವ ರೋಗಿಗಳ ಉಪಚಾರದಲ್ಲಿ ಪ್ರಾಮಾಣಿಕ ಸೇವೆಗೈಯುವ ಎಲ್ಲಾ ವೈದ್ಯರ ಸೇವೆಯನ್ನು ನಾವು ಇಂದು ಅವರನ್ನು ಅಭಿನಂದಿಸುವ ಮೂಲಕ ಗೌರವಿಸುವ ಮೂಲಕ ವೈದ್ಯರ ದಿನ ಆಚರಿಸೋಣ.

Bottom Add3
Bottom Ad 2