Cancer Hospital 2
Beereshwara 36
LaxmiTai 5

ಮಕ್ಕಳಲ್ಲಿ ಕಠಿಣ ಸಂದರ್ಭವನ್ನು ಎದುರಿಸುವ ಮನಸ್ಸನ್ನು ನಿರ್ಮಿಸಲು ಇಂದೇ ಕಾರ್ಯ ಪ್ರವೃತ್ತವಾಗುವುದು ಅಗತ್ಯ

Anvekar 3

ರವಿ ಕರಣಂ

ಇದರ ಬಗ್ಗೆ ಬರೆಯಲೇ ಬೇಕೆನಿಸಿತು. ನೀವೂ ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯತೆಯಿದೆ. ಕಾರಣ, ಹೇಳುವುದೆಲ್ಲ ನಮ್ಮ ಸುತ್ತಲೂ ಅಂದರೆ ಸಮಾಜದಲ್ಲಿನ ಹಲವು ಘಟಿಸಿದ ಸಂಗತಿಗಳೇ ಆಗಿವೆ. ಮತ್ತು ಇದು ಉಪದೇಶವಂತೂ ಖಂಡಿತ ಅಲ್ಲ. ಜೀವ ಮತ್ತು ಜೀವನ ಅತ್ಯಂತ ಮಹತ್ವದ ವಿಷಯಗಳು. ಅದರೆಡೆಗೆ ಒಂಚೂರು ಗಮನ ಕೊಡಲೇ ಬೇಕು. ಮನೋ ಆರೋಗ್ಯಕ್ಕೆ ನಾವೇ ವೈದ್ಯರಾಗಬೇಕೇ ಹೊರತು, ಅಂತರಂಗದ ವಿಷಯಗಳು ಜಗಜ್ಜಾಹೀರಾತು ಮಾಡುವ ಅವಶ್ಯಕತೆಯಿಲ್ಲ. ಮತ್ತು ಅದನ್ನು ಇನ್ನೊಬ್ಬರ ಮುಂದೆ ಹೇಳಿಕೊಂಡು ಚಿಕಿತ್ಸೆ ಪಡೆಯುವುದಕ್ಕೆ ಅವಕಾಶ ಕೊಡಲೇಬಾರದು. ಅಷ್ಟರ ಮಟ್ಟಿಗೆ ಮನಸ್ಸನ್ನು ಸದೃಢಗೊಳಿಸುವುದು ನಮ್ಮ ಕೈಯಲ್ಲಿದೆ. ಸುಖಾ ಸುಮ್ಮನೆ ಕಲ್ಪನೆಗಳನ್ನು ಕಟ್ಟಿಕೊಂಡು, ಭ್ರಮೆಯ ಖೆಡ್ಡಾದಲ್ಲಿ ಬಿದ್ದು ಹೊರಳಾಡುವುದು ಬೇಕಾಗಿಯೇ ಇಲ್ಲ. ನಮಗೆ ನಾವೇ ಚಿಕಿತ್ಸಕರಾಗಬೇಕಿದೆ. ಮನಸ್ಸಿನ ವಿಷಯಕ್ಕೆ ಮಾತ್ರ ಈ ಮಾತು ಸೀಮಿತ. ಮರೆಯಬಾರದು.

ಜೀವನ ಎಷ್ಟಿದೆ? ಎಂದು ಯೋಚಿಸಿದಾಗ, ಈ ನಿಸರ್ಗದ ಮೇಲೆ ಕೋಪ ಬರುತ್ತದೆ. ಕಾರಣ ಆಯುಷ್ಯವನ್ನು ಹೆಚ್ಚೆಂದರೆ ನೂರು ವರ್ಷ ಕೊಡಬಹುದೇನೋ! ಅದು ಕೆಲವೇ ಜನರಿಗೆ ಮಾತ್ರ. ಅದೇಕೋ ಸಾಲದಾಗಿದೆ. ಕೇವಲ 36.500 ದಿನಗಳು ಮಾತ್ರ ! ಮತ್ತೆ ನಿಸರ್ಗಕ್ಕೆ ಋಣಿಯೂ ಆಗಿರಬೇಕಾಗುತ್ತದೆ. ಏಕೆಂದರೆ ಎಷ್ಟೋ ಜೀವಿಗಳಿಗೆ ಹತ್ತು, ಇಪ್ಪತ್ತು ವರ್ಷಕ್ಕಿಂತ ಹೆಚ್ಚಿನ ಆಯುಷ್ಯವನ್ನು ಕೊಟ್ಟಿಲ್ಲ. ನಮಗಾದರೂ ಇಂಥಾ ಭಾಗ್ಯ ಕರುಣಿಸಿದೆಯಲ್ಲ ಎಂಬುದಕ್ಕಾಗಿ. ಅಂಥದ್ದರಲ್ಲಿ ಅದನ್ನು ಸಾರ್ಥಕ ರೂಪಕ್ಕೆ ತರದೇ ಹೋದರೆ ಹೇಗೆ? ಅಂದರೆ ನಾನಾ ಕಾರಣಗಳಿಂದಾಗಿ ಬದುಕಿನ ಬಗೆಗೆ ನಕಾರಾತ್ಮಕ ಚಿಂತನೆಗಳು, ಜೀವನದ ಪಯಣ ಸಾಕು ಎಂದೆನಿಸಿಬಿಡುತ್ತದೆ. ಹಾಗಾಗಿ ಜಿಮ್ ಗಳಿಗೆ ಅರ್ಥಾತ್ ಗರಡಿ ಮನೆಗಳಿಗೆ ಹೋಗಿ ದೇಹವನ್ನು ಗಟ್ಟಿ ಮುಟ್ಟಾಗಿ ಕಟ್ಟಿಕೊಳ್ಳುವಂತೆ, ಹುರಿಗಟ್ಟಿಸಿಕೊಳ್ಳುವಂತೆ ಮನಸ್ಸನ್ನು ಎಂದಾದರೂ ಗಟ್ಟಿ ಮುಟ್ಟಾಗಿ ಕಟ್ಟಿಕೊಂಡ, ಅತ್ಯಂತ ಬಲಶಾಲಿಯಾಗಿಸಿಕೊಂಡ ಉದಾಹರಣೆಗಳು ತೀರಾ ಕಡಿಮೆ. ಅದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತಿರುವುದನ್ನು ಕಂಡಾಗ ಅದೇನೋ ಅನಿಸಿಬಿಡುತ್ತದೆ.

ಈ ಜನರೇಕೆ ಸಣ್ಣ ಸಣ್ಣ ವಿಷಯಗಳನ್ನು ಇಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಅದನ್ನೆಲ್ಲ ಕೇಳಿ, ನೋಡಿದಾಗ ಮನುಷ್ಯನಿಗೆ ತನ್ನ ಅಮೂಲ್ಯ ಜೀವನಕ್ಕಿಂತ ಇಂಥಾ ವಿಷಯಗಳೇ ಹೆಚ್ಚಾಗಿ ಬಿಡುತ್ತವೆಯೇ? ಕೆಲ ಉದಾಹರಣೆಗಳನ್ನು ಕೊಟ್ಟು ಬಿಡುವೆ. ನಮ್ಮ “ಪ್ರಗತಿ ವಾಹಿನಿ”ಯಲ್ಲಿ ಇತ್ತೀಚೆಗೆ ಪ್ರಕಟವಾದ ವರದಿ. ತನಗೆ ಮದುವೆಯಾಗಲು ಹೆಣ್ಣು ಸಿಗಲಿಲ್ಲವೆಂಬ ಕಾರಣಕ್ಕೆ ನೇಣು ಹಾಕಿಕೊಂಡ ಯುವಕನೋರ್ವನ ಸುದ್ದಿ ದಿಗ್ಭ್ರಮೆ ಹುಟ್ಟಿಸಿತು. ಬೇಸರವೂ ಆಯಿತು.

ಇಂಥವೇ ಹಲವು ಉದಾಹರಣೆಗಳಿವೆ. ನೌಕರಿ ಸಿಗಲಿಲ್ಲ, ಸೌಂದರ್ಯದ ಕೊರತೆ, ಹಣಕಾಸಿನ ವಿಷಯಗಳು, ಅನೈತಿಕ ಸಂಬಂಧಗಳು, ಮೊಬೈಲ್ ಕೊಡಿಸಲಿಲ್ಲ. ಬುದ್ದಿ ಹೇಳಿದರೆಂಬ ನೆಪ, ಹೋಂ ವರ್ಕ್ ಮಾಡಲಿಲ್ಲ ಎಂದದ್ದೇ ಅವಮಾನವಾಯಿತೆಂಬ ಭಾವ, ಕಷ್ಟ ಪಟ್ಟು ಕೆಲಸ ಮಾಡಿಯೂ ಯಶಸ್ಸು ಸಿಗಲಿಲ್ಲ, ಪ್ರೇಮ ವೈಫಲ್ಯ, ಸಹೋದ್ಯೋಗಿಗಳು ಜಾತೀಯತೆ ಮಾಡಿದರೆಂದು ಹೀಗೆ ಒಂದಾ ಎರೆಡಾ…. ಇವೆಲ್ಲವೂ ಸಾಯುವಂತೆ ಪ್ರೇರೇಪಿಸಿದ ಸಂಗತಿಗಳು ಎಂದರೆ ನಗಬೇಕೋ, ಅಳಬೇಕೋ? ನಮಗೆ ನಾವೇ ಪ್ರಶ್ನೆ ಹಾಕಿಕೊಳ್ಳಬೇಕು.ಇಂದು ಇದು ಅವರ ಮನೆಯಲ್ಲಿ ನಡೆದ ಘಟನೆ, ನಮ್ಮ ಮನೆಯವರೆಗೂ ಬರಲಿಕ್ಕಿಲ್ಲ ಎಂಬ ಅತಿಯಾದ ವಿಶ್ವಾಸ ಎಂದಿಗೂ ಬೇಡ. ತಿಂದ ಪದಾರ್ಥದಲ್ಲಿಯೇ ವಿಷಕಾರಕ ಅಂಶಗಳಿವೆ ಎಂದ ಮೇಲೆ, ಮನಸ್ಸು ವಿಷವಾಗದಿರಲುಂಟೇ?

ಯಾವುದನ್ನೂ ಸಹ ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಇದೊಂದು ಮನೋ ಸಾಂಕ್ರಾಮಿಕ ಕಾಯಿಲೆಯಂತಾಗಿದೆ. ಅಂದರೆ ಬಾಲ್ಯದಿಂದಲೂ ಜೀವನ ಪ್ರೀತಿಯನ್ನು ಮೂಡಿಸದ ತಾಯಿ ತಂದೆಯರು, ಮನೆಯ ಸದಸ್ಯರುಗಳು, ಎಲ್ಲವನ್ನೂ ಶಾಲೆಯಲ್ಲೇ ಕಲಿಸಬೇಕೆಂಬ ಆಗ್ರಹವನ್ನು ಮುಂದಿಟ್ಟು ಬಿಡುತ್ತಾರೆ. ಹಾಗಿದ್ದರೆ ಮಕ್ಕಳ ಬೆಳವಣಿಗೆಯಲ್ಲಿ ಇವರ ಪಾತ್ರವೇನು? ಅದನ್ನು ಕೇಳುವಂತಿಲ್ಲ ಅಷ್ಟೇ. ಹಣ ಕಟ್ಟಿ ಬಂದ ಮೇಲೆ, ಶಾಲೆಯೇ ಎಲ್ಲ ಜವಾಬ್ದಾರಿ ಹೊರಬೇಕೆಂಬ ಧೋರಣೆ! ಮಗು ಅವರದ್ದೇ ಸ್ವಂತ ಆಸ್ತಿಯೇ ಹೊರತು, ಬೇರೆಯವರೇಕೆ ಹೊಣೆ ಹೊರುವರು? ವರ್ಗಾವಣೆ ಪತ್ರ ಕೊಟ್ಟರೆ, ಅವರಿಗೂ ಇವರಿಗೂ ಸಂಬಂಧ ಅಷ್ಟಕ್ಕಷ್ಟೇ. ನಷ್ಟ ಯಾರಿಗೆ? ವಿಚಾರ ಮಾಡಬೇಕು.

Emergency Service

ಭೂಮಿಯ ಮೇಲೆ ಯಾವುದಕ್ಕೆ ಕೊರತೆಯಿದೆ? ಎಲ್ಲವೂ ಜೀವನದ ಆಗು ಹೋಗುಗಳಿಗೆ ನಿರಂತರ ಬೆಂಗಾವಲುಗಳಾಗಿ ಇಲ್ಲವೇ ? ಅವು ಎಂದಾದರೂ ಬೇಸರಪಟ್ಟುಕೊಂಡಿದ್ದೇ ಇಲ್ಲವಲ್ಲ. ಗಾಳಿ,ಬೆಳಕು,ನೀರು,ಬೆಂಕಿ ಮತ್ತು ಮಣ್ಣು ನಿರಂತರ ನಮಗಾಗಿ ಕ್ರಮಬದ್ಧವಾಗಿ ಒದಗುತ್ತಿರುವಾಗ, ಜೀವನವನ್ನು ಅದೆಷ್ಟು ಸುಖಮಯಗೊಳಿಸಬಹುದೋ … ಅದು ಕಲ್ಪನಾತೀತ. ಹಾಗಿದ್ದ ಮೇಲೆ, ಕಿಂಚಿತ್ ನಮ್ಮ ಬಗ್ಗೆ, ನಮ್ಮನ್ನು ಪೊರೆವ ತಾಯಿ-ತಂದೆ, ನಿಸರ್ಗದ ಬಗ್ಗೆ ಯೋಚಿಸಬೇಕಲ್ಲವೇ? ಬದುಕು ಇಷ್ಟಕ್ಕೆ ಅಂತ್ಯ ಕಂಡು ಬಿಡುತ್ತದೆಯೇ? ಇದೆಂಥಾ ವಿಚಿತ್ರ ! ಮನಸುಗಳೇಕೆ ಇಷ್ಟು ದುರ್ಬಲವಾಗುತ್ತವೆಯೋ ಕಾಣೆ. ನಾವು ಎಲ್ಲಿ ಎಡವುತ್ತಿದ್ದೇವೆ? ಒಂದು ತಿಳಿಯುತ್ತಿಲ್ಲ. ಅನುವಂಶೀಯತೆ, ಬೆಳೆಸುವ ವಿಧಾನ, ಶಿಕ್ಷಣ ಮಾರ್ಗ, ಸಾಮಾಜಿಕ ತಿರಸ್ಕಾರ, ಸೌಲಭ್ಯಗಳ ಕೊರತೆ, ಗೆಳೆಯರ ಬಳಗದ ಪ್ರಭಾವ, ಮನೆ ಮತ್ತು ನೆರೆಹೊರೆಯ ಆಗು ಹೋಗುಗಳೆಲ್ಲ ದುರ್ಬಲ ಸ್ಥಿತಿಗೆ ಇಳಿಸುತ್ತವೆಯೋ ಎನಿಸಿಬಿಡುತ್ತದೆ. ಮನುಷ್ಯನ ಮನಸು ಹೇಗೆ ವಿಷಯವೊಂದನ್ನು ಗ್ರಹಿಸಿ, ಪರಾಮರ್ಶಿಸಿ, ಮುಂದೆ ಹೆಜ್ಜೆಯಿಡುತ್ತದೆ ಎಂಬುದನ್ನು ಇದುವರೆಗಿನ ಮನೋ ಚಿಕಿತ್ಸಕ ವೃಂದಕ್ಕೂ ತಿಳಿಯದ ಸಂಗತಿಯೇ. ಭೌತಿಕ ವಸ್ತುವಾಗಿದ್ದರೆ ಅದನ್ನು ಸರಿಮಾಡಬಹುದಾಗಿತ್ತೇನೋ? ಅಗೋಚರ, ಚಂಚಲ ಮತ್ತು ದುಡುಕುತನದ ಪ್ರಪಾತಕ್ಕೆ ಜಿಗಿಯುವ ಮನಸ್ಸನ್ನು, ಒಂದು ನಿರ್ಬಂಧಿತ ವಾತಾವರಣಕ್ಕೆ ತರುವುದು ಅಸಾಧ್ಯ. ಅದಕ್ಕೆಲ್ಲ ಮದ್ದು ಮಾತುಗಳಲ್ಲಿದೆ ಎಂಬುದು ನನ್ನ ಅಭಿಮತ. ಅದನ್ನು ಪಾಶ್ಚಾತ್ಯರು Talk therapy ಎಂದು ಕರೆಯುವರು. ಅಂದರೆ, ಹೀನಾಯ ಸ್ಥಿತಿ ತಲುಪಿದ ಮನಸಿಗೆ, ಸ್ವಂತ ಸಾಮರ್ಥ್ಯದ ಪರಿಚಯ, ಮಾಡಬಹುದಾದ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕ್ರಮವುಂಟು.

ರಾಮಾಯಣದಲ್ಲಿ ಇದರ ಒಂದು ಉಲ್ಲೇಖವಿದೆ. ಸಮುದ್ರೋಲ್ಲಂಘನೆ ಮಾಡಲಾಗದೆಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ಹನುಮಂತನಿಗೆ, ಜಾಂಬವಂತನು ಅವನ ಶಕ್ತಿ ಸಾಮರ್ಥ್ಯಗಳ ಪರಿಚಯ ಮಾಡಿಕೊಟ್ಟಿದ್ದನ್ನು ಸ್ಮರಿಸಿಕೊಳ್ಳೋಣ. ಅದು ಆ ಕಾಲದಲ್ಲಿಯೇ Talk therapy ಜಾರಿಯಲ್ಲಿತ್ತು ಎಂಬುದಕ್ಕೆ ಸ್ಪಷ್ಟ ನಿದರ್ಶನ. ಅಂಥ ಮಹತ್ಕಾರ್ಯವನ್ನು ಮನೆಯಲ್ಲಿ, ಶಾಲೆಗಳಲ್ಲಿ ಕೈಗೊಳ್ಳುವುದನ್ನು ಚುರುಕುಗೊಳಿಸಬೇಕಿದೆ. ಎಳೆಸುತನದಿಂದಲೇ ಬಲಿಷ್ಠ ಮನೋ ನಿರ್ಮಾಣ ಕಾರ್ಯ ಜರುಗಬೇಕಿದೆ. ವಿಶ್ವದ ಬೃಹತ್ ಜನಸಂಖ್ಯೆಯ ಮೊದಲ ರಾಷ್ಟ್ರದಲ್ಲಿ, ಆತ್ಮಹತ್ಯೆಗಳ ಸಂಖ್ಯೆಯೂ ಬೃಹತ್ ಪ್ರಮಾಣದಲ್ಲಿ ಬೆಳೆಯಬಾರದು. ಚೆಂದವಾಗಿ ಬಾಳುವ ಕಲೆಯನ್ನು ಕರಗತ ಮಾಡಿಕೊಳ್ಳುವ ಮತ್ತು ಮಾಡಿಕೊಡುವ ತಂತ್ರಗಳನ್ನು ಹುಡುಕಬೇಕಿದೆ.

ಜೇಡರ ಹುಳುವೊಂದು ಗ್ರೀಕ್‌ ನ ರಾಜ ಆ್ಯಂಡಿ ಬ್ರೂಸ್ ನಿಗೆ ಪ್ರೇರಣೆ ನೀಡಿದಂತೆ, ಪಾಣಿನಿಗೆ ಕಲಿಯುವ ಇಚ್ಛೆ ತಾಯಿ ದಕ್ಷಿಯಿಂದ ಮೂಡಿದಂತೆ, ನಮ್ಮಿಂದಾಗಬೇಕು. ಅಮೂಲ್ಯ ಜೀವನದ ಸದ್ಬಳಕೆ, ಆನಂದ, ಸಫಲತೆಗೆ ಭದ್ರ ಬುನಾದಿ ಹಾಕಲು ಮುಂದಾಗಬೇಕು.

ದುರ್ಬಲ ಮನೋ ಪ್ರವೃತ್ತಿಯ ಹಿಂದೆಲ್ಲ ಮನೆಯವರ ಪಾತ್ರವೇ ಹೆಚ್ಚಿದೆ. ಅದೆಷ್ಟು ಕಡೆಗಣನೆಯೆಂದರೆ, ಮಕ್ಕಳನ್ನು ಅಪರಿಚಿತರಂತೆ ಕಾಣುವ ನಡೆವಳಿಕೆಯು ನಾಯಿ ಕೊಡೆಯಂತೆ ಏಳುತ್ತಿದೆ ಎಂದರೆ ನಂಬುತ್ತೀರಾ? ಇದೇನೋ ಹೊಸ ಸಂಗತಿ ಎಂದುಕೊಳ್ಳಬೇಡಿ. ನಗರ, ಮಹಾನಗರಗಳಲ್ಲಿ ಇದು ಒಳಹೊಕ್ಕು ದಶಕ ದಶಕಗಳೇ ಕಳೆದಿವೆ. ಒಬ್ಬ ಸಮಾಜ ಶಾಸ್ತ್ರದ ವಿದ್ಯಾರ್ಥಿಯಾಗಿ, ನಾನಾ ಬಗೆಯ ಸಮಾಜಗಳ ಅಧ್ಯಯನ ಮಾಡಿದರಿಂದಲೇ ಇಂತಹ ಸೂಕ್ಷ್ಮಗಳ ಅರಿವು ಒಡಮೂಡಿದೆ. ಇದರ ಮುಂದಿನ ಪರಿಣಾಮಗಳು ಅದೆಷ್ಟು ಭೀಕರವಾಗಿರುತ್ತದೆ ಎಂದರೆ, ತಾಯಿ,ತಂದೆ, ಗುರು ಹಿರಿಯರೆಂದರೆ ವೈರಿಗಳಂತೆ ಕಾಣುವ ದಿನಮಾನಗಳು ದೂರವಿಲ್ಲ. ಇತ್ತೀಚೆಗೆ ವೃದ್ಧಾಶ್ರಮಗಳ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣುತ್ತಿದ್ದೀರಿ. ನೀವೆಲ್ಲ ಹಾಗಾಗಲಿಕ್ಕಿಲ್ಲ ಹೀಗಾಗಲಿಕ್ಕಿಲ್ಲ ಎಂಬ ವಿಶ್ಲೇಷಣೆ ಮಾಡುತ್ತಾ ಹೋದಲ್ಲಿ, ಅದಾಗಲೇ ಮನೆ ಹೊಕ್ಕ ಹೆಗ್ಗಣವಾಗಿರುತ್ತದೆ. ಹಾಗಾಗಿ ಯಾವತ್ತೂ ಮನೆ ಮಂದಿಯ ಭಾವನೆಗಳಿಗೆ ತಕ್ಷಣ ಮತ್ತು ಪರಿಣಾಮಕಾರಿ ಸ್ಪಂದಿಸುವ ಗುಣ ನಮ್ಮಲ್ಲೇ ವೃದ್ಧಿಯಾಗಬೇಕಾಗಿದೆ.

ಹದಿ ವಯಸ್ಸಿಗೆ ಬಂದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕೆಂಬ ವಾಕ್ಯ, ಅಪಾರ್ಥಕ್ಕೊಳಗಾಗಿ ಇನ್ಯಾವುದೋ ರೂಪ ತಳೆದಿದೆ. ಅದನ್ನೆಲ್ಲ ಹೇಳುವ ವ್ಯವಧಾನ ಸಧ್ಯಕ್ಕಿಲ್ಲ. ಏಕೆಂದರೆ ಅತೀ ಚಿಕ್ಕ ಕಾರಣಗಳು ಬದುಕಿಗೆ ವಿದಾಯ ಹೇಳುವಂತಾಗುತ್ತಿದೆಯಲ್ಲ ಅದಕ್ಕೊಂದು ಶಾಶ್ವತ ಪರಿಹಾರಕ್ಕಾಗಿ ಹೆಣಗಾಡಬೇಕಿದೆ. ಅದನ್ನು ಇಷ್ಟು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಮಕ್ಕಳನ್ನು ಬೆಳೆಸುವ ವಿಧಾನ, ಮೊದಲ ಪ್ರಾಶಸ್ತ್ಯ ಪಡೆಯಲಿ. ಅವರಿಗಾಗಿಯೇ ನಮ್ಮ ಹೋರಾಟವಲ್ಲವೇ? ಕೆಲ ಅನಿಸಿಕೆಗಳನ್ನು ಮುಂದಿಡುತ್ತಿದ್ದೇನೆ. ಸರಿಯಾದುದಾಗಿದ್ದರೆ ಆಯ್ಕೆ ಮಾಡಿಕೊಳ್ಳಬಹುದು.

  • ಮಕ್ಕಳು ಮತ್ತು ಯುವಕರಿಗೆ ಪ್ರೀತಿಯ ಕೊರತೆ ಆಗದಿರಲಿ. ಅದೇ ಅವರ ಜೀವ ಮತ್ತು ಜೀವನವನ್ನು ಉಳಿಸುತ್ತದೆ.
  • ಅವರ ಮನಸ್ಸಿನಲ್ಲಿ ಕೂಡ ಇದೊಂದು ಭಾವನೆ ಮೊಳಕೆ ಒಡೆಯಲಿ. ತಮ್ಮ ಬಗೆಗೆ ಪಾಲಕರು, ಹಿರಿಯರು, ಎಲ್ಲರೂ ಕಾಳಜಿ ವಹಿಸುತ್ತಾರೆ. ಹೀಗಾಗಿ ತನಗೆ ಸಾಮಾಜಿಕ, ಮಾನಸಿಕ ಭದ್ರತೆ ಇದೆ ಎಂಬುದಾಗಿ.
  • ಚಿಕ್ಕ ಚಿಕ್ಕ ಕಾರಣಗಳಿಗಾಗಿ ಬೈಯುವುದನ್ನು ನಿಲ್ಲಿಸಬೇಕು. ಸಾಮರ್ಥ್ಯ ಇಲ್ಲದವನು, ದಡ್ಡ, ಅಯೋಗ್ಯ, ಕೈಲಾಗದವನು ಎಂಬ ಮಾತುಗಳನ್ನು ಆಡಲೇ ಬಾರದು. ಇದರಿಂದಾಗಿ ಅದೇ ಭಾವನೆಗಳು, ಅವರ ಮನಸ್ಸಿನಲ್ಲಿ ಉಳಿದು, ಅವಘಡಗಳಿಗೆ ದಾರಿ ಮಾಡಿಕೊಡುತ್ತದೆ.
  • ಚಿಕ್ಕಪುಟ್ಟ ಸಾಧನೆಗಳಿಗೆ ನೀವು ಶಹಬ್ಬಾಶ್ ಗಿರಿ ಕೊಡಲೇಬೇಕು. ಬೆನ್ನು ತಟ್ಟಿ ಪ್ರೋತ್ಸಾಹಿಸಿ. ಅದು ದೊಡ್ಡದಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕು. ನೀವೇ ಅವರಿಗೆ ಆದರ್ಶ ವ್ಯಕ್ತಿಗಳಾಗುತ್ತೀರಿ.
  • ಮಕ್ಕಳ ಮೇಲೆ ತಮ್ಮ ಸಿಟ್ಟನ್ನೆಲ್ಲ ಎತ್ತಿ ಹಾಕುವುದು ಸರಿಯಾದ ಕ್ರಮವೇ ಅಲ್ಲ.
  • ಯುವಕರಿಗಂತೂ ನೌಕರಿ ದೊರೆಯುವುದು ಅತೀ ಕಠಿಣ. ದುಡಿಯಲೊಂದು ವ್ಯವಸ್ಥೆಯನ್ನು ಕಲ್ಲಿಸಿದರೆ, ಅವರ ಜೀವನವನ್ನು ಅವರೇ ಕಟ್ಟಿ ಕೊಳ್ಳುತ್ತಾರೆ.
  • ಜೀವನದ ಆಯ್ಕೆಗಳು ಅವರದ್ದಾಗಿರಲಿ. ನಿಮ್ಮಂತಾಗಿರಲೇ ಬಾರದು. ಸೋಲು ಗೆಲುವುಗಳಿಗೆ ತಾನೇ ಹೊಣೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ಆದಾಗ್ಯೂ ಸೋಲಿನ ಕ್ಷಣಗಳಲ್ಲಿ ಬೆನ್ನಿಗೆ ನಿಂತಿರಬೇಕು.
  • ಜೀವನದಲ್ಲಿ ಉತ್ಸಾಹ, ಹುರುಪು, ಆಶಾಭಾವನೆಯ ಕೊರತೆ ಕಂಡು ಬಂದಲ್ಲಿ, ತಕ್ಷಣವೇ ಎಚ್ಚೆತ್ತುಕೊಳ್ಳಿ. ಮಾನಸಿಕ ಕೊರಗು ಒಳಗೊಳಗೇ ಗೂಡು ಕಟ್ಟಿ, ನಕಾರಾತ್ಮಕ ಚಿಂತನೆಗಳಿಗೆ ದೂಡುವುದನ್ನು ಗುರುತಿಸಲಾಗದು. ಅದಕ್ಕಾಗಿ ಮೇಲಿಂದ ಮೇಲೆ ಅವರ ಮನೋಲಹರಿಯ ಮೇಲೆ ಮೇಲ್ವಿಚಾರಣೆ ಇರಲಿ.
  • ಅವರ ನಿರಾಸೆಗಳಿಗೆ ನೀವೇ ಮದ್ದು ಅರೆಯುವ ಕೆಲಸ ಮಾಡಬೇಕು. ಸೋಲಿನ ನಂತರ ಸಿಗುವ ಜಯದ ಬಗ್ಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿ. ಭರವಸೆಯನ್ನು ಮೂಡಿಸಿ. ಏನೇ ಆದರೂ ಜೊತೆಗಿರುವ, ಬೆಂಬಲಿಸುವ ಮಾತುಗಳನ್ನು ಮುಂದಿಡಿ.
  • ಪ್ರೀತಿ, ಪ್ರೇಮ, ಮದುವೆ ಜೀವನದ ಒಂದು ಭಾಗವಷ್ಟೇ. ಅದೇ ಜೀವನದ ಅಂತಿಮವೇನಲ್ಲ. ಹೆಣ್ಣು, ನೌಕರಿ, ಅಂದು ಕೊಂಡ ಕಾರ್ಯ ನಮ್ಮದಾಗುತ್ತದೆ ಎಂದೇನಿಲ್ಲ. ಅದಕ್ಕೂ ಪರ್ಯಾಯ ಮಾರ್ಗಗಳಿರುತ್ತವೆ. ತೀರಾ ಮನಸಿಗೆ ತೆಗೆದುಕೊಂಡರೆ, ಅರ್ಥಾತ್ ಮೋಹಕ್ಕೊಳಗಾದರೆ, ನಷ್ಟ ಅನುಭವಿಸುವವರು ನಾವೇ ಎಂಬುದನ್ನು ಮೇಲಿಂದ ಮೇಲೆ ತಿಳಿಸುವುದೊಳಿತು.

ಇದರೊಟ್ಟಿಗೆ ಅವರವರ ಮನೆಯ ಪರಿಸ್ಥಿತಿಗಳಿಗನುಗುಣವಾಗಿ ಕ್ರಿಯಾಯೋಜನೆಯೊಂದನ್ನು ಸಿದ್ದಮಾಡಿಕೊಂಡು, ಉತ್ತಮ ನಾಗರಿಕನನ್ನಾಗಿಸುವುದು ಮನೆಯವರ ಜವಾಬ್ದಾರಿ. ಏಕೆಂದರೆ ನಿಮ್ಮ ಮೇಲೆ ಮಕ್ಕಳು ಇಟ್ಟುಕೊಂಡಷ್ಟು ನಂಬಿಕೆಯನ್ನು ಪರರ ಮೇಲೆ ಎಂದೂ ಇಟ್ಟುಕೊಂಡಿರಲಾರರು. ಹಾಗಾಗಿ ಅವರ ಅಮೂಲ್ಯ ಜೀವವನ್ನು ಜತನದಿಂದ ಕಾಯ್ದುಕೊಳ್ಳುವುದು ಎಲ್ಲರ ಹೊಣೆ.

Bottom Add3
Bottom Ad 2