ಜನಪರ ಆಡಳಿತ ನೀಡುವುದು ಕಾಂಗ್ರೆಸ್ ಜಾಯಮಾನದಲ್ಲೇ ಇಲ್ಲ; ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿ: ಜನಪರ ಆಡಳಿತ ನೀಡುವುದು ಕಾಂಗ್ರೆಸ್ ಜಾಯಮಾನದಲ್ಲೇ ಇಲ್ಲ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ಪೆಟ್ರೋಲ್, ಡಿಸೇಲ್ ದರ ಹೆಚ್ಚಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಅಧಿಕಾರ ಇದ್ದಾಗ ಬಿಜೆಪಿಯನ್ನು ದೂಷಿಸುವುದು, ಆಡಳಿತದಲ್ಲಿ ಇಲ್ಲದಿರುವಾಗಲೂ ಬಿಜೆಪಿಯನ್ನೇ ದೂಷಿಸುವುದು ಕಾಂಗ್ರೆಸ್ ವಾಕ್ಚಾಳಿ ಆಗಿದೆ ಎಂದು ಖಂಡಿಸಿದ್ದಾರೆ.
2021ರಲ್ಲಿ ತಮಿಳುನಾಡಿನಲ್ಲಿ ಪೆಟ್ರೋಲ್ ಡೀಸೆಲ್ ದರ 3 ರೂ.ಕಡಿತ ಮಾಡಿದಾಗ, ನಮ್ಮ ಪಕ್ಷ ಅಧಿಕಾರದಲ್ಲಿದ್ದರೆ ಕನಿಷ್ಠ 10 ರೂ. ತೆರಿಗೆ ಕಡಿತ ಮಾಡುತ್ತಿದ್ದೆ ಎಂದು ದೊಡ್ಡದಾಗಿ ಟ್ವೀಟ್ ಮಾಡಿದ್ದರು ಸಿಎಂ ಸಿದ್ದರಾಮಯ್ಯ ಅವರು. ಈಗ ಕರ್ನಾಟಕದಲ್ಲಿ ಅಧಿಕಾರ ತಮ್ಮ ಕೈಯಲ್ಲೇ ಇದೆ. ಏಕೆ ಸಾಧ್ಯವಾಗ್ತಿಲ್ಲ? ಬದಲಿಗೆ ಮತ್ತಷ್ಟು ಹೆಚ್ಚಳ ಮಾಡಿದ್ದೀರಿ ಎಂದು ಟ್ವೀಟ್ ಮೂಲಕವೇ ಟೀಕಿಸಿದ್ದಾರೆ ಸಚಿವ ಪ್ರಲ್ಹಾದ ಜೋಶಿ.
ಕೇಂದ್ರ ಕೊಟ್ಟ 5096 ಕೋಟಿ ಎಲ್ಲಿ ಹೋಯ್ತು?
ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಹಣ 5096.72 ಕೋಟಿ ರೂ. ಬಿಡುಗಡೆ ಆಗಿದೆ. ಈ ಹಣ ಎಲ್ಲಿ ಹೋಯಿತು? ಎಂದು ಸಚಿವ ಜೋಶಿ ಸಿಎಂ ಅವರನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವುದು ಕುಣಿಯಲಾರದವರು, ನೆಲ ಡೊಂಕು ಎಂದಂತಿದೆ. ಇದನ್ನು ಪದೇ ಪದೇ ತಾವೇ ಸಾಬೀತು ಪಡಿಸುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಡದ್ರೋಹಿ ಮಾತ್ರವಲ್ಲ ಜನವಿರೋಧಿಯೂ ಆಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ