ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ : ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಪದೇ ಪದೇ ಇನ್ನೆಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪ್ರಶ್ನಿಸುತ್ತಿದ್ದವರು ಬಿಜೆಪಿಯವರು. ಈಗ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಸಂಕಲ್ಪ ಅಧಿವೇಶನದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಅವರ ಭಾಷಣದ ಪೂರ್ಣಪಾಠ ಇಲ್ಲಿದೆ:

1925ರಲ್ಲಿ ಹೆಡಗೇವಾರ್‌ ಅವರು ಆರ್‌,ಎಸ್‌,ಎಸ್‌ ನ ಸಂಸ್ಥಾಪನಾ ಅಧ್ಯಕ್ಷರು. ಅವರ ನಂತರ ಗೋಲ್ವಾಲ್ಕರ್‌ ಅವರು ಸಂಚಾಲಕರಾಗಿ ಕೆಲಸ ಮಾಡಿದ್ದರು. ಸಾವರ್ಕರ್‌ ಅವರು ಹಿಂದೂ ಮಹಾ ಸಭಾದ ಅಧ್ಯಕ್ಷರಾಗಿದ್ದರು. 1951ರಲ್ಲಿ ಜನಸಂಘ ಆರಂಭವಾಯಿತು. 1980ರಲ್ಲಿ ಭಾರತೀಯ ಜನತಾ ಪಕ್ಷ ಹುಟ್ಟಿಕೊಂಡಿತು.

ಈ ಬಿಜೆಪಿ ಎನ್ನುವುದು ಆರ್‌,ಎಸ್,ಎಸ್‌ ನ ರಾಜಕೀಯ ಅಂಗ. ಇದನ್ನು ನಿಯಂತ್ರಿಸುವುದು ಆರ್‌,ಎಸ್‌,ಎಸ್‌ ಮತ್ತು ಹಿಂದೂ ಮಹಾಸಭಾ. ಗೋಲ್ವಾಲ್ಕರ್‌ ಅವರ ಚಿಂತನ ಗಂಗಾ ಪುಸ್ತಕದಲ್ಲಿ, ಆರ್‌,ಎಸ್‌,ಎಸ್‌ ಮುಖವಾಣಿ ಆರ್ಗನೈಸರ್‌ ಪತ್ರಿಕೆಯಲ್ಲಿ ಬಾಬಾ ಸಾಹೇಬರು ರಚನೆ ಮಾಡಿರುವ ಸಂವಿಧಾನವನ್ನು ಅವರು ಒಪ್ಪಿಕೊಂಡಿಲ್ಲ. ಚಿಂತನ ಗಂಗಾ ಕೃತಿಯಲ್ಲಿ ಒಂದು ಕಡೆ “ಅಲ್ಲಿ ಇಲ್ಲಿ ಹೀಗೆ ಹಲವು ದೇಶಗಳ ಸಂವಿಧಾನದಿಂದ ವಿಚಾರಗಳನ್ನು ಹೆಕ್ಕಿ ತೆಗೆದುಕೊಂಡು ಬಂದು, ಹೊಂದಾಣಿಕೆ ಇಲ್ಲದಂತೆ ಅಸಂಬದ್ಧವಾದ ರೀತಿ ಸಂವಿಧಾನ ರಚನೆ ಮಾಡಿದ್ದಾರೆ. ಇದು ಈ ದೇಶಕ್ಕೆ ಹೊಂದಾಣಿಕೆ ಇಲ್ಲದ ಸಂವಿಧಾನ” ಎಂದು ಬರೆದಿದ್ದಾರೆ. ಇದು ಆರ್,ಎಸ್‌,ಎಸ್‌ ಗೆ ಸಂವಿಧಾನದ ಬಗ್ಗೆ ಕವಡೆಕಾಸಿನ ಗೌರವ ಇಲ್ಲ ಎಂಬುದನ್ನು ತೋರಿಸುತ್ತದೆ. ಅವರು ಸಂವಿಧಾನ ಹೇಳುವ ಸಮಾನತೆಗೆ ವಿರುದ್ಧವಾದವರು.

ಸಮಾಸಮಾಜ ಸ್ಥಾಪನೆ, ಎಲ್ಲರಿಗೂ ಶಿಕ್ಷಣ ನೀಡುವುದು, ಸಂಪತ್ತಿನಲ್ಲಿ ಪಾಲುದಾರರನ್ನಾಗಿ ಮಾಡುವುದು ಅವರಿಗೆ ಇಷ್ಟವಿಲ್ಲ. ಕಾರಣ ಸಮಸಮಾಜ ನಿರ್ಮಾಣವಾದರೆ ಶೋಷಣೆಗೆ ಅವಕಾಶ ಇರುವುದಿಲ್ಲ. ಸಮಾಜದಲ್ಲಿ ಮೇಲು ಕೀಳು ಎಂಬ ತಾರತಮ್ಯ ಇದ್ದಾಗ ಮಾತ್ರ ಶೋಷಣೆಗೆ ಅವಕಾಶ ಇರುತ್ತದೆ. ಅವರಿಗೆ ತಾವು ಮೇಲ್ವರ್ಗದ ಜನ ಎಂಬ ಅಭಿಪ್ರಾಯ ಸಮಾಜದಲ್ಲಿ ಯಾವಾಗಲು ಇರಬೇಕು ಎಂದು ಬಯಸುವವರು. ಸಂಪತ್ತು, ಅಧಿಕಾರ ತಮ್ಮ ಕೈಯಲ್ಲೇ ಇರಬೇಕು ಎಂಬ ಕಾರಣಕ್ಕೆ ಚತುರ್ವರ್ಣ ವ್ಯವಸ್ಥೆಯನ್ನು ಸ್ಥಾಪಿಸಿ, ಮನುಸ್ಮೃತಿಯನ್ನು ಒಪ್ಪಿಕೊಂಡರು. ಇದಕ್ಕೆ ವಿರುದ್ಧವಾಗಿ ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನಿ ಬದುಕಿನ ಅವಕಾಶ ನೀಡುವ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದರು. ಸಂವಿಧಾನವು ಸಮಾಜದಲ್ಲಿ ಶೋಷಣೆಗೆ ಒಳಗಾದ ಜನರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬುವ ಕೆಲಸ ಮಾಡುತ್ತದೆ. ಈ ಹಾದಿಯಲ್ಲಿ ಮೀಸಲಾತಿಯೂ ಒಂದು ಭಾಗ. ಹೀಗಾಗಿ ಅವರು ಸಂವಿಧಾನ ವಿರೋಧ ಮಾಡುತ್ತಾರೆ.

ಬಾಬಾ ಸಾಹೇಬರು ಸಂವಿಧಾನ ಅಂಗೀಕಾರವಾಗುವ ಹಿಂದಿನ ದಿನ 25/10/1949ರಂದು ಸಂವಿಧಾನ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, “ನಾವು ನಾಳೆಯಿಂದ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಇಲ್ಲಿ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಇದೆ. ಸಂವಿಧಾನ ಜಾರಿಗೆ ಬಂದ ನಂತರ ಈ ಅಸಮಾನತೆಯನ್ನು ಹೋಗಲಾಡಿಸಬೇಕು, ಒಂದು ವೇಳೆ ಇದನ್ನು ಮಾಡದಿದ್ದರೆ ಈ ಅಸಮಾನತೆಗೆ ಒಳಗಾಗಿರುವ ಜನರೇ ಪ್ರಜಾಪ್ರಭುತ್ವದ ಸೌಧವನ್ನು ದ್ವಂಸ ಮಾಡುತ್ತಾರೆ” ಎಂದು ಹೇಳಿದ್ದರು. ಇದು ಸಂವಿಧಾನ ಜಾರಿಗೆ ಮೊದಲೇ ಬಾಬಾ ಸಾಹೇಬರು ನೀಡಿದ್ದ ಎಚ್ಚರಿಕೆ. ಅಸಮಾನತೆ ಹೋಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು ಸಂವಿಧಾನದ ಉದ್ದೇಶ, ಇದಕ್ಕೆ ವಿರುದ್ಧವಾಗಿರುವವರು ಬಿಜೆಪಿಯವರು.

ಸಂವಿಧಾನ ಶ್ರೇಷ್ಠ ಅಥವಾ ಕನಿಷ್ಠ ಎಂಬುದು ಯಾವ ವರ್ಗದ ಜನ ಇದನ್ನು ಜಾರಿ ಮಾಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಸಂವಿಧಾನದ ಬಗ್ಗೆ ಗೌರವ ಇಲ್ಲದ ಜನ ಅಧಿಕಾರ ಹೊಂದಿದ್ದರೆ ಸಂವಿಧಾನದ ಧ್ಯೇಯೋದ್ದೇಶಗಳು ಈಡೇರಲು ಸಾಧ್ಯವಿಲ್ಲ, ಸಮಾನತೆ ಸಾಧಿಸಲು ಸಾಧ್ಯವಿಲ್ಲ. ಇದನ್ನು ಶೋಷಿತ ವರ್ಗಗಳ ಜನ ಅರ್ಥಮಾಡಿಕೊಳ್ಳಬೇಕು. ಯಾವಾಗೆಲ್ಲ ಹಿಂದುಳಿದ ಸಮುದಾಯಗಳಿಗೆ, ಮಹಿಳೆಯರಿಗೆ ಮತ್ತು ಶೋಷಿತ ಜನರಿಗೆ ಮೀಸಲಾತಿ ನೀಡುವ ವಿಚಾರ ಬಂದಿದೆ ಆಗೆಲ್ಲ ಅದನ್ನು ವಿರೋಧ ಮಾಡಿದ್ದು ಬಿಜೆಪಿ ಪಕ್ಷ. ಮಂಡಲ್‌ ಕಮಿಷನ್‌ ವರದಿ ವಿರೋಧ ಮಾಡಿದ್ದು ಬಿಜೆಪಿ, ಶಾಲಾ ಮಕ್ಕಳನ್ನು ಎತ್ತಿಕಟ್ಟಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದವರು ಇದೇ ಬಿಜೆಪಿಯವರು. ಅರ್ಜುನ್‌ ಸಿಂಗ್‌ ಅವರು ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡಿದಾಗ ಅದನ್ನು ವಿರೋಧ ಮಾಡಿದವರು, ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದಾಗ ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಗೆ ಹೋದವರು ಬಿಜೆಪಿಯವರು. ಇಂಥವರು ಮೀಸಲಾತಿ ಪರವಾಗಿ ಬದ್ಧತೆ ಹೊಂದಿರಲು ಸಾಧ್ಯವೇ?

ಪದೇ ಪದೇ ಇನ್ನೆಷ್ಟು ವರ್ಷ ಮೀಸಲಾತಿ ಇರಬೇಕು ಎಂದು ಪ್ರಶ್ನಿಸುತ್ತಿದ್ದವರು ಬಿಜೆಪಿಯವರು. ಈಗ ಸಾಮಾನ್ಯ ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ಮೇಲೆ ಬಾಯಿ ಮುಚ್ಚಿಕೊಂಡಿದ್ದಾರೆ. ಆರ್ಥಿಕ ಸ್ಥಿತಿಯನ್ನು ಆಧರಿಸಿ ಮೀಸಲಾತಿ ನೀಡಬಹುದು ಎಂಬುದು ಸಂವಿಧಾನದಲ್ಲಿ ಇಲ್ಲ. ಕೇಂದ್ರ ಸರಕಾರ ತರಾತುರಿಯಲ್ಲಿ ಒಂದಿನ ಲೋಕಸಭೆಯಲ್ಲಿ, ಒಂದಿನ ರಾಜ್ಯಸಭೆಯಲ್ಲಿ ಮಸೂದೆ ಪಾಸ್‌ ಮಾಡಿಕೊಂಡು, ಜಾರಿಗೆ ನೀಡಿತು. ಕೇವಲ 48 ಗಂಟೆಯಲ್ಲಿ ಯಾವುದೇ ಸಮೀಕ್ಷೆಯ ವರದಿ ಇಲ್ಲದೆ, ಹೋರಾಟಗಳಿಲ್ಲದೆ ಮೀಸಲಾತಿ ನೀಡಿಬಿಟ್ರು. ಈಗ ಮೀಸಲಾತಿ ಇಲ್ಲದವರು ಯಾರಾದರೂ ಉಳಿದಿದ್ದಾರಾ? ಹೀಗಾದರೆ ಸಾಮಾಜಿಕವಾಗಿ ಸಮಾನತೆ ಹೇಗೆ ಸಾಧ್ಯ? ಶೋಷಿತ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಂತಾಗುತ್ತಾ?

ಮೀಸಲಾತಿ ಹೆಚ್ಚಳ ಮಾಡಿದ್ದಾರೆ ಎಂದು ಭಾವಿಸಿಕೊಂಡು ಕೆಲವು ಜನ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಸನ್ಮಾನ ಮಾಡಿ ಹೊಗಳಿದ್ದಾರೆ. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದಿದ್ದು ರಾಜೀವ್‌ ಗಾಂಧಿ ಅವರು, ಇದು ಅನುಷ್ಠಾನವಾದದ್ದು ನರಸಿಂಹರಾಯ ಸರ್ಕಾರದ ಕಾಲದಲ್ಲಿ. ಇದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮತ್ತು ಹಿಂದುಳಿದವರಿಗೆ ಮೀಸಲಾತಿ ಸಿಕ್ಕಿತು. ಕೆಲವರು ಏನು ಮಾಡುತ್ತಾರಪ್ಪ ಎಂದರೆ ಹಿಂದುಳಿದ ಜಾತಿಗಳ ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ ಟಿಕೇಟ್‌ ಸಿಗದಿದ್ದರೆ ಬಿಜೆಪಿ, ಜೆಡಿಎಸ್‌ ನಿಂದ ನಿಂತುಕೊಳ್ತೇವೆ ಎಂದು ಹೋಗುತ್ತಾರೆ. ಹೀಗಾದರೆ ನಿಮ್ಮನ್ನು ಹಗುರಾಗಿ ತೆಗೆದುಕೊಳ್ಳದೆ ಇನ್ನೇನು ಮಾಡುತ್ತಾರೆ. ಬಿಜೆಪಿಯವರು ಬಿ ಫಾರಂ ಹಿಡಿದುಕೊಂಡು ನಿಂತಿರುತ್ತಾರೆ. ಹಾಗಂತ ನಿಮ್ಮಲ್ಲಿ ಬದ್ಧತೆ ಇರಬೇಕಲ್ವಾ? ಶೋಷಿತ ಸಮುದಾಯದ ಮುಖಂಡರು ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡಲು ಹೋಗಬಾರದು. ಜನರಿಗೆ ಇವೆಲ್ಲಾ ಗೊತ್ತಿರುವುದಿಲ್ಲ, ನಾವು ಅವರ ಹಾದಿ ತಪ್ಪಿಸಬಾರದು.

ಹಿಂದುಳಿದ ಜಾತಿಯವರು ಅಥವಾ ದಲಿತರು ಬಿಜೆಪಿಯಿಂದ ಗೆದ್ದರೆ ಅವರು ಹೇಳಿದಂತೆ ಮಾಡಬೇಕಲ್ವಾ? ಅವರು ಗರ್ಭಗುಡಿಯಲ್ಲಿ ನಿಂತು ತೀರ್ಮಾನ ಮಾಡಿ ಬಂದು ಹೇಳುತ್ತಾರೆ, ಅದನ್ನು ಇವರು ಜಾರಿ ಮಾಡಬೇಕು. ಕರಾವಳಿ ಭಾಗದಲ್ಲಿ ಗಲಾಟೆ, ಕೊಲೆಗಳು ಆಗಬೇಕಾದರೆ ಶೂದ್ರರ ಹುಡುಗರನ್ನು ಕರೆದುಕೊಂಡು ಬಂದು ಮುಂದೆ ಬಿಡುತ್ತಾರೆ. ಆರ್‌,ಎಸ್‌,ಎಸ್‌ ನ ಒಬ್ಬನಾದ್ರೂ ಜೈಲಿಗೆ ಹೋಗಿದ್ದರೆ, ಕೊಲೆ ಆಗಿದ್ದರೆ ತೋರಿಸಿ ನೋಡೋಣ. ಜೈಲಿನಿಂದ ಬಂದವರಿಗೆ ಹೂವಿನ ಹಾರ ಹಾಕುವವರು ಇವರು. ಅವರನ್ನು ಜೈಲಿಗೆ ಕಳಿಸಿದ್ದು ಕೂಡ ಇವರೇ. ಈ ರೀತಿ ಜನರ ದಾರಿ ತಪ್ಪಿಸಿ ಗೊಂದಲ ನಿರ್ಮಾಣ ಮಾಡಿಸುತ್ತಾರೆ. ಇದನ್ನೆಲ್ಲ ಅರ್ಥಮಾಡಿಕೊಳ್ಳದೆ ಹೋದರೆ ಅಂಬೇಡ್ಕರ್‌ ಅವರು ನೀಡಿದ್ದ ಎಚ್ಚರಿಕೆಯ ಮಾತು ಸತ್ಯವಾಗುತ್ತದೆ.

ಎಲ್ಲರಿಗೂ ತಾನು ಶಾಸಕನಾಗಬೇಕು, ಪಾಲಿಕೆ ಸದಸ್ಯನಾಗಬೇಕು ಎಂಬ ಆಸೆ ಇರುತ್ತದೆ, ಆದರೆ ಇವೆಲ್ಲಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಇಂದಿನ ನಿರ್ಣಯಗಳ ಜಾರಿಗೆ ಹೋರಾಟ ಮಾಡಿ. ಹಿಂದುಳಿದ ಜಾತಿಯವರಿಗೆ ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮೀಸಲಾತಿ ಇರಬೇಕು ಎಂದು ಹೋರಾಟ ಮಾಡಿ. ರಾಜ್ಯಸಭೆಯಲ್ಲಿ ದಲಿತರಿಗೆ, ಅಲ್ಪಸಂಖ್ಯಾತರಿಗೆ ಮೀಸಲಾತಿ ಬೇಕು ಎಂದು ಹೋರಾಟ ಮಾಡಿ. ಇದನ್ನು ಮಾಡುವುದಿಲ್ಲ. ಅವರಿಗೊಂದಷ್ಟು ಜನ ಸಿಗುತ್ತಾರೆ, ಅವರ ಮೂಲಕ ತುತ್ತೂರಿ ಊದಿಸುತ್ತಾರೆ. ಮಹಿಳೆಯರು ನಮಗೆ ಟಿಕೇಟ್‌ ಸಿಗುವುದಿಲ್ಲ ಎಂದು ದೂರುತ್ತಾರೆಯೇ ವಿನಃ ನಾವು ಜನಸಂಖ್ಯೆಯ 50% ಇದ್ದೇವೆ, ನಮಗೆ 50% ಟಿಕೇಟ್‌ ಕೊಡಿ ಎಂದು ಹೋರಾಟ ಮಾಡುವುದಿಲ್ಲ. ನಾವೆಷ್ಟೇ ಕಷ್ಟಪಟ್ಟರೂ ಕೂಡ ಮಹಿಳೆಯರಿಗೆ ಟಿಕೇಟ್‌ ಕೊಡಿಸುವುದು ತುಂಬಾ ಕಷ್ಟ. ಅಲ್ಲಿ ಸ್ಥಳೀಯವಾಗಿ ಅಭಿಪ್ರಾಯ ಕೊಡುವವರು ಬಹುತೇಕ ಕಡೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ವಿರುದ್ಧವಾಗಿ ಹೇಳುತ್ತಾರೆ. ಬಹುಸಂಖ್ಯಾತರಿಗೆ ಒಂದು ಅನುಕೂಲ ಎಂದರೆ ಸ್ಥಳೀಯ ಸಂಘಸಂಸ್ಥೆಗಳು, ಪ್ರಾಥಮಿಕ ಹಂತದ ಸಂಘಗಳು, ಸಹಕಾರಿ ಸಂಘಗಳು ಇವರ ಕೈಕೆಳಗೆ ಇರುತ್ತದೆ, ಆ ಮೂಲಕ ಅವರು ಪ್ರಭಾವ ಬೀರಿ ಟಿಕೇಟ್‌ ಪಡೆಯುತ್ತಾರೆ, ಇದು ಹಿಂದುಳಿದ ವರ್ಗದ ಜನರಿಗೆ ಆಗುವುದಿಲ್ಲ. ಇಂಥದಕ್ಕೆ ಕಾರಣಗಳೇನು ಎಂಬುದನ್ನು ನಾವು ಹುಡುಕಬೇಕು. ಅಸಮಾನತೆ ಯಾಕೆ ಸೃಷ್ಟಿಯಾಯಿತು, ಇದಕ್ಕೆ ಕಾರಣ ಯಾರು ಎಂಬ ವಿಚಾರಗಳಿಗೆ ಹೋರಾಟದ ಮೂಲಕ ಕಾರಣ ಮತ್ತು ಪರಿಹಾರ ಹುಡುಕಬೇಕಾಗಿದೆ.

1931ರ ನಂತರ ಜಾತಿ ಗಣತಿ ನಡೆದಿಲ್ಲ, ಇದನ್ನು ನಾವು ಮಾಡಿದ್ದೆವು. ಸ್ವಾತಂತ್ರ್ಯ ನಂತರ
ಲಂಬಾಣಿ ಜನ, ಕುರುಬರು, ಕುಂಬಾರರು, ಮಡಿವಾಳರು, ಅಲ್ಪಸಂಖ್ಯಾತರು, ಕ್ಷೌರಿಕರು, ದಲಿತರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಪರಿಸ್ಥಿತಿ ಹೇಗಿದೆ ಎಂಬುದು ಗೊತ್ತಾಗಬೇಕಲ್ವಾ? ಈ ಪರಿಸ್ಥಿತಿ ಗೊತ್ತಾಗದೆ ಹೋದರೆ ಅವರನ್ನು ಮುನ್ನೆಲೆಗೆ ತರಲು ಕಾರ್ಯಕ್ರಮಗಳನ್ನು ರೂಪಿಸುವುದು ಹೇಗೆ? 1931ರ ನಂತರ ಜಾತಿ ಗಣತಿ ಮಾಡಿಲ್ಲ, ಮೀಸಲಾತಿ ವಿಚಾರ ಬಂದಾಗಲೆಲ್ಲಾ ನ್ಯಾಯಾಲಯಗಳು ನಿಮ್ಮ ಬಳಿ ಜಾತಿಗಳ ಜನಸಂಖ್ಯೆಗೆ, ಅವರ ಸ್ಥಿತಿಗತಿಗಳಿಗೆ ಸಂಬಂಧಿಸಿದ ನಂಬಿಕಾರ್ಹ ಮಾಹಿತಿ ಯಾವುದಿದೆ ಎಂದು ಹಲವು ಬಾರಿ ಪ್ರಶ್ನಿಸಿವೆ. ಜನ ತಮ್ಮ ಸಮುದಾಯದ ಜನಸಂಖ್ಯೆಗಿಂತ ಎರಡು ಮೂರು ಪಟ್ಟು ಜಾಸ್ತಿ ಜನಸಂಖ್ಯೆ ಹೇಳುತ್ತಾರೆ. ಹೀಗಾದರೆ ಆರೂವರೆ ಕೋಟಿ ಇರುವ ಕನ್ನಡಿಗರು ಹದಿನಾರುವರೆ ಕೋಟಿ ಆಗಿಬಿಡುತ್ತಾರೆ. ನಾವು ಮನೆ ಮನೆಗೆ ತೆರಳಿ ಮೂರು ವರ್ಷಗಳ ಕಾಲ ಮಾಹಿತಿ ಸಂಗ್ರಹಿಸಿ ಜಾತಿ ಗಣತಿ ಮಾಡಿದ್ದೆವು, ಇಷ್ಟೆಲ್ಲ ಮಾಡಿದ ಮೇಲೆ ಆ ವರದಿಯನ್ನು ತೆಗೆದುಕೊಳ್ಳಬೇಕಾ ಬೇಡ್ವಾ? ಸದಾಶಿವ ಆಯೋಗದ ವರದಿ ಇನ್ನು ಸದನದ ಮುಂದೆ ಬಂದೇ ಇಲ್ಲ, ಬಹಳಷ್ಟು ಜನ ಇದನ್ನು ಓದಿಕೊಂಡಿಲ್ಲ.

ಪರಿಶಿಷ್ಟ ಜಾತಿಯವರ ಮೀಸಲಾತಿ ಪ್ರಮಾಣವನ್ನು 15 ರಿಂದ 17% ಗೆ ಏರಿಕೆ ಮಾಡಿ, ಈ 17% ಅನ್ನು ಆಧಾರವಾಗಿಟ್ಟುಕೊಂಡು ವಿವಿಧ ಜಾತಿಗಳಿಗೆ 6%, 4.5%, 1% ಹೀಗೆ ಲೆಕ್ಕಹಾಕಿದ್ದಾರೆ. ಆದರೆ ಈ ಮೀಸಲಾತಿ ಹೆಚ್ಚಳ ಇನ್ನು ಊರ್ಜಿತವೇ ಆಗಿಲ್ಲ. ಲಂಬಾಣಿಗಳಿಗೆ, ಬೋವಿಗಳಿಗೆ 4.5% ಮೀಸಲಾತಿ ಲೆಕ್ಕ ಹಾಕಿದ್ದಾರೆ ಇದಕ್ಕೂ ಮೊದಲು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕು. ಈ ಬಿಜೆಪಿಯವರು ಜನರ ಹಣೆಗೆ ತುಪ್ಪ ಹಚ್ಚಿದ್ದಾರೆ, ಮೂಗಿಗೆ ಹಚ್ಚಿದ್ದರೆ ವಾಸನೆಯಾದರೂ ಬರುತ್ತಿತ್ತು, ಈಗ ವಾಸನೆಯೂ ಬರುತ್ತಿಲ್ಲ.

ನಮ್ಮ ಸರ್ಕಾರದ ಕಡೆಯ ಬಜೆಟ್‌ 2.02 ಲಕ್ಷ ಕೋಟಿ ಇದ್ದಾಗ ಎಸ್‌,ಸಿ,ಪಿ/ಟಿ,ಎಸ್‌,ಪಿ ಗೆ ನೀಡಿದ್ದ ಅನುದಾನ 30,000 ಕೋಟಿ ರೂ. ಇತ್ತು. ಈಗ ಬಜೆಟ್‌ ಗಾತ್ರ 3.10 ಲಕ್ಷ ಕೋಟಿ ಇರುವಾಗ ಎಸ್‌,ಸಿ,ಪಿ/ಟಿ,ಎಸ್‌,ಪಿ ಗೆ ನೀಡುವ ಅನುದಾನ ಮಾತ್ರ 30,000 ಕೋಟಿಯೇ ಇದೆ. ಇದು ನ್ಯಾಯವೋ? ಅನ್ಯಾಯವೋ? ಬಿಜೆಪಿಯವರು ಈ ಸಮುದಾಯಗಳ ಪರ ಇದ್ದಾರ ನೀವೇ ಹೇಳಿ. ದಲಿತ ಸಂಘರ್ಷ ಸಮಿತಿಯವರು ಎಸ್‌,ಸಿ,ಪಿ/ಟಿ,ಎಸ್‌,ಪಿ ಕಾಯ್ದೆಯ 7ಡಿ ತೆಗೆಯಿರಿ ಎಂದು ಒತ್ತಾಯ ಮಾಡಿದ್ದರು, ಡೀಮ್ಡ್‌ ಎಂಕ್ಸ್‌ಪೆಂಡಿಚರ್‌ ಹೆಸರಿನಲ್ಲಿ ಬೇರೆ ಯಾವುದೋ ಉದ್ದೇಶಗಳಿಗೆ ಎಸ್‌,ಸಿ,ಪಿ/ಟಿ,ಎಸ್‌,ಪಿ ಯೋಜನೆಯ ಹಣವನ್ನು ಖರ್ಚು ಮಾಡುತ್ತಾರೆ. ನೀರಾವರಿಗೆ ಖರ್ಚು ಮಾಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರ ಜಮೀನಿಗೆ ಅನುಕೂಲ ಆಗಿದೆ ಎನ್ನುವುದು, ಮೆಟ್ರೋ ಕಾಮಗಾರಿಗೆ ಖರ್ಚು ಮಾಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನ ಮೆಟ್ರೋದಲ್ಲಿ ಓಡಾಡುತ್ತಾರೆ ಎನ್ನುವುದು ಹೀಗೆಲ್ಲ ಜನರ ದಾರಿತಪ್ಪಿಸುತ್ತಿದ್ದಾರೆ. ಇದನ್ನು ಕೂಡ ಬಿಜೆಪಿಯಲ್ಲಿರುವ ದಲಿತ ಮುಖಂಡರು ಸಹಿಸಿಕೊಂಡು, ಜನರಿಗೂ ಸುಳ್ಳು ಹೇಳುತ್ತಿದ್ದಾರೆ.

ನಾವು 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದರೆ ಬಿಜೆಪಿಯವರು ಇದನ್ನು ನಂಬಬೇಡಿ, ಅವರಿಂದ 10 ಕೆ.ಜಿ ಕೊಡೋಕಾಗಲ್ಲ ಎನ್ನುತ್ತಾರೆ. ಹಿಂದೆ 7 ಕೆ.ಜಿ ಅಕ್ಕಿ ಕೊಟ್ಟವರಿಗೆ ಈಗ 10 ಕೆ.ಜಿ ಅಕ್ಕಿ ಕೋಡೋಕಾಗಲ್ವಾ? ಇದಕ್ಕೆ ಎರಡು ಮೂರು ಸಾವಿರ ಕೋಟಿ ಹಣ ಹೆಚ್ಚು ಖರ್ಚಾಗಬಹುದು ಅಷ್ಟೆ. ಬೆಲೆಯೇರಿಕೆ ವಿಪರೀತವಾಗಿದೆ, ಗ್ಯಾಸ್‌ ಬೆಲೆ 2013ರಲ್ಲಿ 414 ರೂ. ಇತ್ತು, ಇಂದು 1,150 ರೂ ಆಗಿದೆ, ಇದಕ್ಕಾಗಿ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ. ನೀಡುತ್ತೇವೆ ಎಂದಿದ್ದೇವೆ, ಇದನ್ನು ಮಾಡಲು ಆಗಲ್ಲ ಎಂದು ಅವರು ಅಪಪ್ರಚಾರ ಮಾಡುತ್ತಿದ್ದಾರೆ. ನಮ್ಮ ರಾಜ್ಯವು ಒಂದು ವರ್ಷಕ್ಕೆ ಅಸಲು ಮತ್ತು ಬಡ್ಡಿ ರೂಪದಲ್ಲಿ 56,000 ಕೋಟಿ ರೂ. ಕಟ್ಟಬೇಕಾಗಿದೆ. ಸಾಲ ಪಡೆಯುವುದು ಕಡಿಮೆ ಮಾಡಿ, ಅನಗತ್ಯ ಖರ್ಚು ಕಡಿಮೆ ಮಾಡಿ, ತೆರಿಗೆ ಸಂಗ್ರಹವನ್ನು ಸಮರ್ಪಕವಾಗಿ ಮಾಡಿದ್ರೆ ಈ ಎಲ್ಲವನ್ನು ಕೊಡಬಹುದು. ಪ್ರತೀ ವರ್ಷ ಬಜೆಟ್‌ ಗಾತ್ರ 25 ರಿಂದ 30 ಸಾವಿರ ಕೋಟಿ ಹೆಚ್ಚಾಗುತ್ತಾ ಹೋಗುತ್ತಿದೆ, ಹೀಗಿದ್ದಾಗ ಜನರ ಕಲ್ಯಾಣ ಕಾರ್ಯಕ್ರಮಗಳನ್ನು ಖಂಡಿತಾ ಜಾರಿಗೆ ಕೊಡಲು ಸಾಧ್ಯವಿದೆ. ಅಪಪ್ರಚಾರ ಮಾಡುವವರ ಮಾತಿಗೆ ಬೆಲೆ ಕೊಡದೆ ನಾವು ಎಚ್ಚರಿಕೆಯಿಂದ ಇರಬೇಕು.

https://pragati.taskdun.com/ramesh-jarakiholi-outrage-again-against-lakshmana-savadi/
https://pragati.taskdun.com/siddaramaiahpm-narendra-modikarnataka-visit/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button