ಇಟಲಿಯಲ್ಲಿ ಹೆಚ್ಚಿದ ಕೊರೊನಾ ಸೋಂಕು: ಒಂದೇ ದಿನ 651 ಜನ ಸಾವು

ಪ್ರಗತಿವಾಹಿನಿ ಸುದ್ದಿ; ರೋಮ್: ವಿಶ್ವಾದ್ಯಂತ ಕಬಂದ ಬಾಹು ಚಾಚುತ್ತಿರುವ ಕೊರೊನಾ ವೈರಸ್ ಒಟ್ಟು 360 ದೇಶಗಳಿಗೆ ವಿಸ್ತರಿಸಿದ್ದು, 13 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. 3 ಲಕ್ಷಕ್ಕೂ ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇಟಲಿಯಲ್ಲಿ ಒಂದೇ ದಿನ 651 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಹೌದು. ಇಟಲಿಯಲ್ಲಿ ಕೊರೊನಾ ಸೋಂಕಿಗೆ ಇಂದು ಒಂದೇ ದಿನ 651 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 5560 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದೆ. ಇಡೀ ಇಟಲಿಯೊಂದರಲ್ಲೇ ಮೃತರ ಸಂಖ್ಯೆ 5,500ಕ್ಕೆ ಏರಿಕೆ ಆಗಿದೆ. ಸೋಂಕಿಗೆ ಈವರೆಗೆ ಇಟಲಿಯಲ್ಲಿ ಸುಮಾರು 59,138 ಮಂದಿ ತುತ್ತಾಗಿದ್ದು, ಅವರಲ್ಲಿ 6,072 ಮಂದಿ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 42,681 ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ.

ಇರಾನ್‍ನಲ್ಲಿ 1556, ಸ್ಪೇನ್‍ನಲ್ಲಿ 1381, ಫ್ರಾನ್ಸ್‌ನಲ್ಲಿ 562, ಬ್ರಿಟನ್‍ನಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಅಮೇರಿಕಾದಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಸೋಂಕು ಹೆಚ್ಚಾಗದಂತೆ ಅನೇಕ ದೇಶಗಳನ್ನು ನಿರ್ಬಂಧದಲ್ಲಿ ಇಡಲಾಗಿದೆ. ಜನರನ್ನು ಮನೆಯಿಂದ ಹೊರಬರದಂತೆ ಆದೇಶಿಸಲಾಗಿದೆ. ಇನ್ನು ಆಫ್ರಿಕಾಗೂ ಕೊರೊನಾ ವ್ಯಾಪಿಸಿದ್ದು, ಆಫ್ರಿಕಾದ 41 ದೇಶಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದೆ.

ಚೀನಾ, ಇಟಲಿ, ಇರಾನ್, ದಕ್ಷಿಣ ಕೊರಿಯಾ, ಸ್ಪೇನ್, ಫ್ರಾನ್ಸ್, ಜರ್ಮನಿ, ಅಮೆರಿಕದಲ್ಲಿ ಕೊರೊನಾ ವ್ಯಾಪಕವಾಗಿ ಹರಡಿದೆ. ಚೀನಾದಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಆದರೆ ಇಟಲಿಯಲ್ಲಿ ವ್ಯಾಪಕವಾಗಿ ಕೊರೊನಾ ಹರಡುತ್ತಿದ್ದು, ಶನಿವಾರ ಒಂದೇ ದಿನಕ್ಕೆ 793 ಜನ ಸಾವನ್ನಪ್ಪಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button