Latest

ಮುಖ್ಯಮಂತ್ರಿ ಅವರದು ಗ್ರಾಮ ವಾಸ್ತವ್ಯ ಅಲ್ಲ, ಅದು ಡ್ರಾಮ ವಾಸ್ತವ್ಯ – ಬಿಜೆಪಿ

 ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಮುಖ್ಯಮಂತ್ರಿ ಅವರದು ಗ್ರಾಮ ವಾಸ್ತವ್ಯ ಅಲ್ಲ, ಅದು ಡ್ರಾಮ ವಾಸ್ತವ್ಯ, ದುರಹಂಕಾರದ ಆಡಳಿತಕ್ಕೆ ಇಡೀ ರಾಜ್ಯದ ಜನ ಈಗಾಗಲೇ ಶಾಪ ಹಾಕಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,  ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಗ್ರಾಮ ವಾಸ್ತವ್ಯದ ಸಂದರ್ಭದಲ್ಲಿ ರೈತರು, ಕಾರ್ಮಿಕರು ಮತ್ತು ವೈ.ಟಿ.ಪಿ.ಎಸ್ ಸಿಬ್ಬಂದಿಗಳ ಸಂಕಷ್ಟಗಳಿಗೆ ಸರಿಯಾದ ರೀತಿಯಲ್ಲಿ ಆಲಿಸದೇ ಅವರ ಮೇಲೆ ದರ್ಪ ತೋರಿದ್ದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಡೀ ರಾಜ್ಯದ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬಾರದು. ಮತ ಹಾಕಿದವರಿಗೆ ಮಾತ್ರ ನೀವು ಮುಖ್ಯಮಂತ್ರಿಗಳಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ ಎಂದರು.
 ಕುಮಾರಸ್ವಾಮಿ ಅವರು ಇಂದು ರಾಯಚೂರಿನ ಕರೇಗುಡ್ಡಕ್ಕೆ ಹೋಗುವ ಸಂದರ್ಭದಲ್ಲಿ ಅಲ್ಲಿನ ರೈತರು ತಮ್ಮ ಸಂಕಷ್ಟಗಳ ಬೇಡಿಕೆಗಳನ್ನು ಸಿಎಂ ಅವರಿಗೆ ನೀಡಲು ಬಂದಾಗ ನೀವು “ಮೋದಿಗೆ ವೋಟ್ ಹಾಕುತ್ತೀರಿ, ಸಮಸ್ಯೆಗಳನ್ನು ನನ್ನ ಮುಂದೆ ಹೇಳಿಕೊಳ್ಳತ್ತೀರಾ? ಮೋದಿಗೆ ಹೋಗಿ ಕೇಳಿ ನಿಮ್ಮ ಸಮಸ್ಯೆಗಳನ್ನು, ಮತ್ತೆ ನಿಮಗೆ ಏಕೆ ನಾನು ಮರ್ಯಾದೆ ಕೊಡಬೇಕು” ಎಂದು ಹೇಳಿದ್ದಾರೆ. ಹೀಗೆ ಮುಖ್ಯಮಂತ್ರಿ ಸ್ಥಾನಕ್ಕೆ ಪದೇಪದೇ ಅವಮಾನ ಮಾಡುತ್ತಲೇ ಬಂದಿದ್ದಾರೆ.
 ಇದಲ್ಲದೇ ಜನಪ್ರತಿನಿಧಿಗಳಿಗೆ ಅವಮಾನ ಮಾಡುವಂತೆ ಲಾಠಿಚಾರ್ಜ್ ಮಾಡಿಸುವುದಾಗಿ ಮುಖ್ಯಮಂತ್ರಿಯೇ ಬೆದರಿಕೆ ಒಡ್ಡಿರುವುದು ದುರಹಂಕಾರದ ಪರಮಾವಧಿ ಮತ್ತು ಪ್ರಜಾತಂತ್ರಕ್ಕೆ ಮಾಡಿದ ಘೋರ ಅಪಚಾರ.
  ನೀವು ಇಡೀ ರಾಜ್ಯದ ಮುಖ್ಯಮಂತ್ರಿ. ನೀವು ಕೆಲವೇ ಜಿಲ್ಲೆಗಳಿಗೆ ಮುಖ್ಯಮಂತ್ರಿಗಳಲ್ಲ ಎಂಬುದನ್ನು ಮರೆಯಬಾರದೆಂದು ಬಿಜೆಪಿ ಎಚ್ಚರಿಸುತ್ತದೆ.
 ಸಂಕಷ್ಟಗಳನ್ನು ಹೇಳಿಕೊಳ್ಳುವ ರೈತರು, ಕಾರ್ಮಿಕರು ಮತ್ತು ವೈ.ಟಿ.ಪಿ.ಸಿ ಸಿಬ್ಬಂದಿಗಳ ಮೇಲೆ ಅನಗತ್ಯವಾಗಿ ದರ್ಪ ತೋರುವ ನಿಮ್ಮ ದುರಹಂಕಾರದ ಆಡಳಿತಕ್ಕೆ ಇಡೀ ರಾಜ್ಯದ ಜನ ಈಗಾಗಲೇ ಶಾಪ ಹಾಕಿದ್ದಾರೆ.
 ಮೋದಿ ಅವರು ಪ್ರಧಾನಮಂತ್ರಿಯಾಗಿ ಯಾವ ಯಾವ ಜವಾಬ್ದಾರಿಗಳನ್ನು ಕೈಗೊಳ್ಳಬೇಕೆಂದು ಗೊತ್ತಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ನಿಮ್ಮ ಕೆಲಸ ಏನು ಎನ್ನುವ ಬಗ್ಗೆ ನಾಡಿನ ಜನತೆಗೆ ಉತ್ತರ ಕೊಡಿ.
 ರೈತರು, ಕಾರ್ಮಿಕರು ಮತ್ತು ವೈ.ಟಿ.ಪಿ.ಎಸ್ ಸಿಬ್ಬಂದಿಗಳ ಮೇಲೆ ಇಂದು ದರ್ಪದ ಮಾತುಗಳನ್ನು ಗಮನಿಸಿದರೆ ನೀವು ಮುಖ್ಯಮಂತ್ರಿಯಾಗಿ ಗ್ರಾಮ ವಾಸ್ತವ್ಯ ಮಾಡುತ್ತಿಲ್ಲ, ಡ್ರಾಮ ವಾಸ್ತವ್ಯ ಮಾಡುತ್ತಿದ್ದೀರಿ ಎಂಬುದು ಕಾಣುತ್ತದೆ ಎಂದರು.
 ಜನಸಾಮಾನ್ಯರು ಭೇಟಿ ನೀಡಲಾಗದಂತೆ ಈವರೆಗೆ ಪಂಚತಾರಾ ಹೋಟೆಲ್ ವಾಸ್ತವ್ಯ ಮಾಡಿದ್ದ ನಿಮಗೆ ಈಗ ಗ್ರಾಮಕ್ಕೆ ಭೇಟಿ ನೀಡಿದಾಗಲೂ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ. ದರ್ಪ, ಅಹಂಕಾರ ಮತ್ತು ಅಧಿಕಾರ ದಾಹದ ಲಕ್ಷಣಗಳೇ ನಿಮ್ಮ ಎಲ್ಲ ವರ್ತನೆಯಲ್ಲೂ ಗೋಚರಿಸುತ್ತಿದೆ.
ತಕ್ಷಣವೇ ಇಡೀ ರೈತ ಸಮುದಾಯ ಮತ್ತು ನಾಡಿನ ಜನತೆಗೆ ಕ್ಷಮೆಯಾಚಿಸಬೇಕೆಂದು ಬಿಜೆಪಿ ಆಗ್ರಹಿಸುವುದಲ್ಲದೇ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತದೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button