Karnataka News

*ಐವಿ ರಿಂಗರ್ ಲ್ಯಾಕ್ಟೇಟ್ ನಿಷೇಧ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ*

ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ತಡೆಹಿಡಿಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು ಪ್ರಕರಣ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವರು, ಐವಿ ದ್ರಾವಣದ ಬಗ್ಗೆ ಅನುಮಾನಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಿಂಗರ್ ಲ್ಯಾಕ್ಟೇಟ್ ಗ್ಲುಕೋಸ್ ಈ ಹಿಂದಿನಿಂದಲು ಆಸ್ಪತ್ರೆಗಳಲ್ಲಿ ಬಳಕೆ ಮಾಡುತ್ತಾ ಬರಲಾಗಿದೆ. ಈ ಬಾರಿ ಔಷಧ ಸರಬರಾಜು ನಿಗಮಕ್ಕೆ 192 ಬ್ಯಾಚ್ ಗಳಲ್ಲಿ‌ ಐವಿ ದ್ರಾವಣ ಪೂರೈಕೆಯಾಗಿತ್ತು. ಇದರ ಬಳಕೆ ಸಂದರ್ಭದಲ್ಲಿ ಎರಡು ಬ್ಯಾಚ್ ಗಳ ಬಗ್ಗೆ ಕೆಲವು ಅನುಮಾನಗಳು ವ್ಯಕ್ತವಾದಾಗ ಮುಂಜಾಗ್ರತೆ ದೃಷ್ಟಿಯಿಂದ ಸಂಪೂರ್ಣವಾಗಿ ಎಲ್ಲ 192 ಬ್ಯಾಚ್ ಗಳ ದ್ರಾವಣವನ್ನ ಆಸ್ಪತ್ರೆಗಳಲ್ಲಿ ಬಳಸದಂತೆ ತಡೆಹಿಡಿಯಲಾಗಿತ್ತು. ಆ ಬಳಿಕ ಕಂಪನಿಯವರು ಹೈ ಕೋರ್ಟ್ ನಿಂದ ಆದೇಶ ಪಡೆದ ಹಿನ್ನೆಲೆಯಲ್ಲಿ ಸೆಂಟ್ರಲ್ ಡ್ರಗ್ ಲ್ಯಾಬರೋಟರಿಯಲ್ಲಿ ಟೆಸ್ಟಿಂಗ್ ನಡೆದಾಗ ದ್ರಾವಣ ಬಳಸಬಹುದು ಎಂಬ ವರದಿ ಬಂದಿತ್ತು. ವರದಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಜ್ಞರ ತಾಂತ್ರಿಕ ಸಮಿತಿ ರಚಿಸಿ ಟೆಸ್ಟಿಂಗ್ ನಡೆಸಿ ಸ್ಟ್ಯಾಂಡರ್ಡ್ ಕ್ವಾಲಿಟಿಯ ಕೆಲವು ಬ್ಯಾಚ್ ಗಳ ದ್ರಾವಣವನ್ನ ಬಳಸಲು ಅವಕಾಶ ಮಾಡಿಕೊಡಲಾಗಿತ್ತು. ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ ದ್ರಾವಣದ ಬಳಕೆಯಾಗಿದೆ. ಆದರೆ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮಾತ್ರ ಕೆಲ ಅನುಮಾನಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.

ಬಳ್ಳಾರಿ ಆಸ್ಪತ್ರೆಗೆ ಪೂರೈಕೆಯಾದ ಬ್ಯಾಚ್ ಗಳನ್ನ ಅನರೋಬಿಕ್ ಟೆಸ್ಟ್ ಗೆ ಕಳಿಸಿದ್ದೇವೆ. ಬಾಣಂತಿಯರ ಸಾವಿಗೆ ಐವಿ ದ್ರಾವಣವೂ ಒಂದು ಕಾರಣವಾಗಿರಬಹುದಾ ಅಥವಾ ಇಲ್ಲಾವಾ ಎಂಬುದು ಅನರೋಬಿಕ್ ಟೆಸ್ಟ್ ನಲ್ಲಿ ಸ್ಪಷ್ಟತೆ ಸಿಗಲಿದೆ. ವಾರದಲ್ಲಿ ಈ ಟೆಸ್ಟಿಂಗ್ ವರದಿ ಬರಲಿದೆ. ಆ ಬಳಿಕ ಐವಿ ದ್ರಾವಣ ಬಳಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಹಾಗಾಗಿ ಅಲ್ಲಿಯವರೆಗೆ ಮುಂಜಾಗ್ರತೆ ಕ್ರಮವಾಗಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನ ರಾಜ್ಯಾದ್ಯಂತ ತಡೆಹಿಡಿಯಲಾಗಿದೆ ಎಂದರು.

ಪ್ರತಿಯೊಂದು ಜೀವವು ಮುಖ್ಯ. ಈ ರೀತಿಯ ಅನುಮಾನಗಳು ಕಂಡುಬಂದಾಗ ಮುನ್ನೆಚ್ಚೆರಿಕೆ ವಹಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಐವಿ ರಿಂಗರ್ ಲ್ಯಾಕ್ಟೇಟ್ ಬಳಸದಂತೆ ಎಲ್ಲ‌ ಆಸ್ಪತ್ರೆಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button