ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ
ಪ್ರಗತಿ ಮೀಡಿಯಾ ಹೌಸ್, ಬೆಳಗಾವಿ – ಭಾರೀ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ರಾಜ್ಯ ಕೈಗಾರಿಕೆ ಸಚಿವರೂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ಚೀನಾ ಪ್ರವಾಸವನ್ನು ರದ್ಧುಪಡಿಸಿದ್ದಾರೆ.
ಜಗದೀಶ್ ಶೆಟ್ಟರ್ ಮತ್ತು ಹಲವಾರು ಅಧಿಕಾರಿಗಳು ಸರಕಾರಿ ಖರ್ಚಿನಲ್ಲಿ ಕುಟುಂಬ ಸಮೇತ ಚೀನಾ ಪ್ರವಾಸ ಹಮ್ಮಿಕೊಂಡಿದ್ದರು. ಪ್ರವಾಹದ ಸಂದರ್ಭದಲ್ಲಿ ವಿದೇಶ ಪ್ರವಾಸ ಹಮ್ಮಿಕೊಂಡಿದ್ದು ಮತ್ತು ಕುಟುಂಬ ಸಹಿತ ಹೊರಟಿದ್ದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಪ್ರವಾಹ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಪ್ರವಾಸ ರದ್ದು ಮಾಡಿದ್ದಾಗಿ ಶೆಟ್ಟರ್ ಬೆಳಗಾವಿಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಪ್ರವಾಹ ಉಂಟಾಗಿ ಲಕ್ಷಾಂತರ ಜನ ತೊಂದರೆಯಲ್ಲಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸುವ ಕಾರ್ಯ ಮಾಡುವ ಬದಲು ಶೆಟ್ಟರ್ ವಿದೇಶ ಪ್ರವಾಸ ಹಮ್ಮಿಕೊಂಡಿದ್ದರು. ಕಾರ್ಯಕ್ರಮಗಳಿಗೆ ಹೊರತುಪಡಿಸಿ, ಪ್ರವಾಹ ಪೀಡಿತರ ಅಹವಾಲು ಆಲಿಸಲೆಂದು ಶೆಟ್ಟರ್ ಇತ್ತ ಸುಳಿಯದಿರುವುದು ಸಹ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲೆಯ ಇತಿಹಾಸ, ಸ್ವಾತಂತ್ರ್ಯ ಹೋರಾಟ, ಸರಕಾರದ ಕಾರ್ಯಕ್ರಮಗಳ ಅವಲೋಕನ
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಗದೀಶ್ ಶೆಟ್ಟರ್, ಜಿಲ್ಲೆಯ ಇತಿಹಾಸ, ಜಿಲ್ಲೆಯಲ್ಲಿ ನಡೆದ ಸ್ವಾಂತ್ರ್ಯ ಹೋರಾಟ, ಪ್ರಸ್ತುತ ರಾಜ್ಯಸರಕಾರದ ಕಾರ್ಯಕ್ರಮಗಳ ಮೆಲುಕು ಹಾಕಿದರು.
ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ…
ಇತಿಹಾಸದಲ್ಲಿ “ವೇಣುಗ್ರಾಮ”ವೆಂದು ಹೆಸರುವಾಸಿಯಾಗಿದ್ದ ನಮ್ಮ ಬೆಳಗಾವಿಯು ತನ್ನ ವಿಶಿಷ್ಟ ಪರಿಸರದಿಂದಾಗಿ ಎಲ್ಲರಿಗೂ ಪ್ರಿಯವಾಗಿದೆ. ಐತಿಹಾಸಿಕವಾಗಿ ಜಿಲ್ಲೆಯ ಹಲಸಿ ಗ್ರಾಮವು ಕದಂಬ ಅರಸರ ರಾಜಧಾನಿಯಾಗಿದ್ದ ಸಂಗತಿ ಸ್ಥಳೀಯವಾಗಿ ಲಭ್ಯವಿರುವ ಶಾಸನಗಳು ಮತ್ತು ತಾಮ್ರ ಪತ್ರಗಳ ಆಧಾರದಿಂದ ತಿಳಿದುಬರುತ್ತದೆ.
6ನೇ ಶತಮಾನದಿಂದ ಕ್ರಿ.ಶ 760ರ ವರೆಗೆ ಬೆಳಗಾವಿಯು ಚಾಲುಕ್ಯ ಸಾಮ್ರಾಜ್ಯದ ಭಾಗವಾಗಿತ್ತು. ಕ್ರಿ,ಶ 875ರ ಅವಧಿಯಲ್ಲಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿ ಸಾಂಸ್ಕೃತಿಕವಾಗಿ ಬೆಳೆದುಬಂದ ಬೆಳಗಾವಿ, ನಂತರ ರಟ್ಟ ವಂಶದ ಅರಸರ ರಾಜಧಾನಿಯಾಗಿತ್ತು. ದೆಹಲಿ ಸುಲ್ತಾನರು, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟು ಕ್ರಿ.ಶ 1347ರಲ್ಲಿ ಬಹುಮನಿ ಸುಲ್ತಾನರ ಆಳ್ವಿಕೆಯ ಭಾಗವಾಗಿರುವ ಕುರಿತಂತೆ ಜಿಲ್ಲೆಯಾದ್ಯಂತ ಅನೇಕ ಸ್ಮಾರಕಗಳನ್ನು ನಾವು ಇಂದಿಗೂ ಕಾಣಬಹುದಾಗಿದೆ.
ಚಾರಿತ್ರಿಕವಾಗಿ ಪಾರತಂತ್ರ್ಯವನ್ನು ವಿರೋಧಿಸಿ ಬ್ರಿಟೀಷÀರೊಡನೆ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಪ್ರಪ್ರಥಮ ಮಹಿಳಾ ಸೈನ್ಯವನ್ನು ಕಟ್ಟಿದ ಬೆಳವಡಿ ಮಲ್ಲಮ್ಮ ನಮ್ಮ ನಾಡಿನ ಧೀಮಂತ ಶಕ್ತಿ ಎಂಬುದು ಸರ್ವವಿದಿತ.
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಅಧ್ಯಕ್ಷತೆ ವಹಿಸಿದ್ದ ಏಕಮೇವ ಭಾರತೀಯ ಕಾಂಗ್ರೆಸ್ ಅಧಿವೇಶನವು 1924ರಲ್ಲಿ ನಮ್ಮ ಬೆಳಗಾವಿಯ ಪುಣ್ಯಭೂಮಿಯಲ್ಲಿಯೇ ಜರುಗಿದ್ದು ಬೆಳಗಾವಿಯ ಹಿರಿಮೆ. ಅದೇ ರೀತಿ ಡಾ: ಬಾಬಾ ಸಾಹೇಬ ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದ ಪ್ರಕರಣವೊಂದರಲ್ಲಿ ವಕಾಲತ್ತು ವಹಿಸಿದ್ದು, ಈ ನೆಲದ ಇನ್ನೊಂದು ವಿಶೇಷ. ಅಲ್ಲದೇ ಸಮಾನತೆಯನ್ನು ಸಾರಲು ಜಾತಿ ಭೇದವನ್ನು ತೊಡೆದು ಹಾಕಲು ವಿಶೇಷವಾಗಿ ಅಸ್ಪೃಶ್ಯತೆಯ ನಿವಾರಣೆಗಾಗಿ ಬಹಿಷ್ಕೃತ ಹಿತಕರಣಿ ಸಭಾ ಮೂಲಕ ಜಿಲ್ಲೆಯ ನಿಪ್ಪಾಣಿಯಲ್ಲಿ ಚಳುವಳಿಯನ್ನು ರೂಪಿಸಿದ್ದು ನಮಗೆಲ್ಲ ಹೆಮ್ಮೆಯ ವಿಷಯ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ಕನ್ನಡ ಕುಲಪುರೋಹಿತರೆಂದು ಖ್ಯಾತಿವೆತ್ತ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳುವಳಿಯ ಕಿಚ್ಚು ಹೊತ್ತಿಸಿದರೂ 1950ರ ಸುಮಾರಿಗೆ ಭಾರತವು ಗಣರಾಜ್ಯವೆಂದು ಘೋಷಿಸಲ್ಪಟ್ಟ ನಂತರ, ಡೆಪ್ಯೂಟಿ ಚೆನ್ನಬಸಪ್ಪ, ಅ.ನ.ಕೃಷ್ಣರಾಯರು, ಬಿ.ಎಂ.ಶ್ರೀಕಂಠಯ್ಯನವರು, ಫ.ಗು.ಹಳಕಟ್ಟಿಯವರು, ಹುಯಿಲಗೋಳ ನಾರಾಯಣರಾಯರು, ಅಂದಾನೆಪ್ಪ ದೊಡ್ಡಮೇಟಿ ಮುಂತಾದ ಮಹನೀಯರ ಅವಿರತ ಹೋರಾಟದ ಫಲವಾಗಿ 1956ರ ನವೆಂಬರ್ 1 ರಂದು ನಮ್ಮ ಹೆಮ್ಮೆಯ ಕರುನಾಡು, ಚಂದನದ ತವರೂರು ಕರ್ನಾಟಕ ರಾಜ್ಯವು ಉದಯವಾಗಿದೆ.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಹಲವಾರು ಮಹನೀಯರು ಕ್ರಿಯಾಶೀಲರಾಗಿ ಹೋರಾಡಿದ್ದು, ಬೈಲಹೊಂಗಲದ ಗಂಗಾಧರ ತುರಮುರಿ, ಹುದಲಿಯ ಸ್ವಾತಂತ್ರ್ಯಯೋಧರಾದ ಗಂಗಾಧರರಾವ್ ದೇಶಪಾಂಡೆ, ಚಿಂಚಲಿಯ ರಾಷ್ಟ್ರೀಯವಾದಿ ಆರ್.ಎಸ್.ಹುಕ್ಕೇರಿ, ತ್ರಿವಿಧ ದಾಸೋಹಿ ನಾಗನೂರ ಶಿವಬಸವ ಮಹಾಸ್ವಾಮಿಗಳು, ಗೋಕಾವಿ ನಾಡಿನ ಬೆಟಗೇರಿ ಕೃಷ್ಣಶರ್ಮ, ಸವದತ್ತಿಯ ಶಂ.ಬಾ.ಜೋಶಿ, ಅಂಕಲಿಯ ಬಸವಪ್ರಭು ಕೋರೆ, ಅಥಣಿಯ ಬಿ.ಎನ್.ದಾತಾರ, ಕುಂದರನಾಡಿನ ಅಣ್ಣೂ ಗುರೂಜಿ, ದತ್ತೋಪಂತ ಬೆಳವಿ, ಸಂಪಗಾವಿಯ ಚನ್ನಪ್ಪ ವಾಲಿ ಮೊದಲಾದವರ ಕೊಡುಗೆ ಅವಿಸ್ಮರಣೀಯವಾಗಿದೆ.
ಚಂಪಾಬಾಯಿ ಭೋಗಲೆ, ಅಕ್ಕನ ಬಳಗದ ಬಸಲಿಂಗಮ್ಮ ಬಾಳೆಕುಂದ್ರಿ, ಕೃಷ್ಣಾಬಾಯಿ ಪಣಜೀಕರ ಮೊದಲಾದ ಮಹಿಳೆಯರೂ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿರುವುದು ನಾಡು-ನುಡಿ ಹೋರಾಟದಲ್ಲಿ ಬೆಳಗಾವಿ ಜಿಲ್ಲೆಯ ಮಹಿಳೆಯರ ಕೊಡುಗೆ ಅಪಾರ ಎಂಬುದಕ್ಕೆ ಸಾಕ್ಷಿಯಾಗಿದೆ.
ಕನ್ನಡ ಭಾಷಿಕ ಪ್ರದೇಶಗಳು ಒಂದಾಗಿ ಅಖಂಡ ಕರ್ನಾಟಕ ರಚನೆಯಾಗಬೇಕೆಂಬ ಕನಸು ನನಸಾಗಿ ಇಂದಿಗೆ 63 ವರ್ಷಗಳು ಪೂರ್ಣಗೊಂಡಿದ್ದು, ನಾವೆಲ್ಲರೂ 64ನೇ ರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವುದು ಕರ್ನಾಟಕದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನಮ್ಮ ಸರ್ಕಾರವು ಆಡಳಿತದಲ್ಲಿ ಜನಪರ ಕಾರ್ಯಕ್ರಮಗಳನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ.
ಬಿ.ಎಸ್.ಯಡಿಯೂರಪ್ಪರವರ ನೇತೃತ್ವದಲ್ಲಿ ನೂರು ದಿನಗಳನ್ನು ಪೂರೈಸುತ್ತಿರುವ ನಮ್ಮ ಸರ್ಕಾರವು “ಅಭಿವೃದ್ಧಿಯೇ ಆಡಳಿತ ಮಂತ್ರ” ಎಂಬ ಧ್ಯೇಯವಾಕ್ಯದೊಂದಿಗೆ ಮುನ್ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಹರಿಯುತ್ತಿರುವ ಸಪ್ತ ನದಿಗಳಾದ ಕೃಷ್ಣಾ, ಮಲಪ್ರಭಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ದೂಧಗಂಗಾ ಮತ್ತು ವೇದಗಂಗಾ ನದಿಗಳ ಮಹಾಪೂರದಿಂದಾಗಿ ಲಕ್ಷಾಂತರ ಕುಟುಂಬಗಳು ಮನೆಮಠಗಳನ್ನು ತೊರೆಯಬೇಕಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲಾಡಳಿತ ಅತ್ಯಂತ ತ್ವರಿತ ಗತಿಯಲ್ಲಿ ಸಂತ್ರಸ್ತರ ನೆರವಿಗೆ ದೌಡಾಯಿಸಿತು. ಪ್ರವಾಹದಿಂದ ತತ್ತರಿಸಿದ್ದ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳ 872 ಗ್ರಾಮಗಳ 4.15 ಲಕ್ಷ ಜನರನ್ನು ಮತ್ತು 1.10 ಲಕ್ಷ ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಯಿತು.
ಸಂತ್ರಸ್ತರಿಗಾಗಿ ಪ್ರವಾಹ ಬಾಧಿತ ಬೆಳಗಾವಿ ನಗರವೂ ಸೇರಿದಂತೆ ಒಟ್ಟು 493 ಪರಿಹಾರ ಕೇಂದ್ರಗಳನ್ನು ಆರಂಭಿಸುವ ಮೂಲಕ 1,84,966 ಜನರಿಗೆ ಊಟೋಪಹಾರ, ಹಾಸಿಗೆ-ಹೊದಿಕೆಗಳು, ಶುದ್ಧ ಕುಡಿಯುವ ನೀರು, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಅವಶ್ಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
2019-20 ನೇ ಸಾಲಿನ ಮುಂಗಾರು ಹಂಗಾಮಿಗೆ ಜಿಲ್ಲೆಯ ಎಲ್ಲ ಹೊಸ ತಾಲ್ಲೂಕುಗಳಾದ ಕಾಗವಾಡ, ನಿಪ್ಪಾಣಿ, ಮೂಡಲಗಿ ಹಾಗೂ ಕಿತ್ತೂರು ಸೇರಿದಂತೆ ಎಲ್ಲ ಹದಿನಾಲ್ಕು ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಪ್ರವಾಹ ಹಾಗೂ ಧಾರಾಕಾರ ಮಳೆಯ ಪರಿಣಾಮವಾಗಿ ಜಿಲ್ಲೆಯಲ್ಲಿ ಒಟ್ಟಾರೆ 37 ಜನರು ಮೃತಪಟ್ಟಿರುವುದು ದುರದೃಷ್ಟಕರ ಸಂಗತಿಯಾಗಿದ್ದು, ಇವರ ಪೈಕಿ 32 ಜನರ ವಾರಸುದಾರರಿಗೆ ತಲಾ ಐದು ಲಕ್ಷ ರೂಪಾಯಿಗಳಂತೆ ಒಟ್ಟು 1.75 ಕೋಟಿ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ಅದೇ ರೀತಿ ಜೀವ ಕಳೆದುಕೊಂಡ 761 ಜಾನುವಾರುಗಳ ಮಾಲೀಕರಿಗೆ 71 ಲಕ್ಷ ರೂಪಾಯಿ ಪರಿಹಾರವನ್ನೂ ನೀಡಲಾಗಿದೆ.
ಪ್ರವಾಹದಿಂದ ಮನೆಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ಪೂರ್ಣ ಬಿದ್ದ ಮನೆಗಳಿಗೆ ಕೇವಲ ಕೇವಲ 95,100 ಮಾತ್ರ ಪರಿಹಾರ ನೀಡಲು ಅವಕಾಶವಿತ್ತು. ಆದರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿರುವ ರಾಜ್ಯ ಸರ್ಕಾರವು ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಲು ಇತಿಹಾಸದಲ್ಲಿ ಇದೇ ಪ್ರಪ್ರಥಮ ಬಾರಿಗೆ ಪ್ರತಿ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಪರಿಹಾರವನ್ನು ನೀಡುತ್ತಿದೆ.
‘ಎ’ ಮತ್ತು ‘ಬಿ’ ಕೆಟಗರಿ ಮನೆಗಳಿಗೆ ಐದು ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಲಾಗಿದ್ದು, ‘ಸಿ’ ಕೆಟಗರಿ ಮನೆಗಳಿಗೆ ನೀಡಲಾಗುತ್ತಿದ್ದ 25 ಸಾವಿರ ಪರಿಹಾರ ಮೊತ್ತವನ್ನು 50 ಸಾವಿರಕ್ಕೆ ಹೆಚ್ಚಿಸುವ ಮೂಲಕ ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ತನ್ನ ಬದ್ಧತೆಯನ್ನು ತೋರಿಸಿದೆ.
ಬೆಳೆಹಾನಿಯಿಂದ ರೈತರಿಗಾಗಿರುವ ತೊಂದರೆಯನ್ನು ಅರಿತುಕೊಂಡಿರುವ ಮಾನ್ಯ ಮುಖ್ಯಮಂತ್ರಿಗಳು, ಹಾನಿಗೊಳಗಾಗಿರುವ ಬೆಳೆಗೆ ಎನ್.ಡಿ.ಆರ್.ಎಫ್. ಮಾರ್ಗಸೂಚಿ ಪ್ರಕಾರ ನೀಡಲಾಗುತ್ತಿರುವ ಪರಿಹಾರದ ಜತೆಗೆ ಪ್ರತಿ ಹೆಕ್ಟೇರ್‍ಗೆ ಹತ್ತು ಸಾವಿರ ರೂಪಾಯಿ ಹೆಚ್ಚುವರಿ ಪರಿಹಾರವನ್ನು ಘೋಷಿಸಿದ್ದಾರೆ.
ಇದಲ್ಲದೇ ಪ್ರವಾಹ ಹಾಗೂ ಮಳೆಯಿಂದ ನೇಕಾರ ಕುಟುಂಬಗಳು ತೀವ್ರ ಸಂಕಷ್ಟಕ್ಕೀಡಾಗಿರುವುದನ್ನು ಮನಗಂಡಿರುವ ರಾಜ್ಯ ಸರ್ಕಾರವು ಎನ್‍ಡಿಆರ್‍ಎಫ್ ಮಾರ್ಗಸೂಚಿ ಪ್ರಕಾರ ನಿಗದಿಪಡಿಸಲಾಗಿದ್ದ 4100 ರೂಪಾಯಿ ಪರಿಹಾರದ ಮೊತ್ತವನ್ನು 25 ಸಾವಿರ ರೂಪಾಯಿಗಳಿಗೆ ಹೆಚ್ಚಿಸಿದೆ.
ಪ್ರವಾಹ ಮತ್ತು ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಹಾನಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ 1.12 ಲಕ್ಷ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂಪಾಯಿಗಳಂತೆ ಪರಿಹಾರವನ್ನು ವಿತರಿಸಲಾಗಿದೆ. ಅದೇ ರೀತಿ 1.12 ಲಕ್ಷ ಕುಟುಂಬಗಳಿಗೆ ವಿಶೇಷ ಆಹಾರ ಕಿಟ್‍ಗಳನ್ನೂ ನೀಡಲಾಗಿರುತ್ತದೆ.
ಪ್ರಸ್ತುತ 2019 ಮುಂಗಾರಿನಲ್ಲಿ ಆರಂಭದಲ್ಲಿ ಮಳೆ ಕೊರತೆಯಿಂದ ಬಿತ್ತನೆ ಪ್ರಾರಂಭವಾಗಲು ಸ್ವಲ್ಪ ಹಿನ್ನಡೆಯಾದರೂ, ಜೂನ್ ಮತ್ತು ಜುಲೈ ತಿಂಗಳಲ್ಲಿ ಬಂದಂತಹ ಮಳೆ ರೈತರಿಗೆ ಅನುಕೂಲಕರವಾಗಿತ್ತು. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 718351 ಹೆ. ಗುರಿ ಪೈಕಿ 680451 ಹೆ. ಅಂದರೆ ಶೇ. 95 ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ.
ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಆಗಿರುವ ಧಾರಾಕಾರ ಮಳೆಯಿಂದಾಗಿ, ಪ್ರಮುಖ ನದಿಗಳ ನೀರಿನ ಮಟ್ಟ ಹೆಚ್ಚಾಗಿ, ಆಣೆಕಟ್ಟಿನಿಂದ ಬಿಡುಗಡೆಯಾದ ನೀರಿನಿಂದ ಉಂಟಾಗಿರುವ ಪ್ರವಾಹದಿಂದ ಜಿಲ್ಲೆಯಲ್ಲಿ ಅತಿವೃಷ್ಠಿ/ ನೆರೆ ಪರಿಸ್ಥಿತಿ ಉದ್ಭವವಾಯಿತು. ಬೆಳೆಗಳಲ್ಲಿ ನೀರು ನಿಂತು ಸುಮಾರು 2,16,793 ಹೆಕ್ಟೇರ್ ಪ್ರದೇಶ ಜಂಟಿ ಸಮೀಕ್ಷೆ ಪ್ರಕಾರ ಬಾಧಿತಗೊಂಡಿರುತ್ತದೆ.
ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಒಟ್ಟು 1.47 ಲಕ್ಷ ರೈತರಿಗೆ 11.80 ಕೋಟಿ ರೂ. ಗಳ ಅನುದಾನದಲ್ಲಿ 46,584 ಕ್ವಿಂಟಾಲ್ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 191184.29 ಮೆ.ಟನ್ ರಸಗೊಬ್ಬರ ವಿತರಣೆಯಾಗಿದೆ ಹಾಗೂ ಹಿಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ರಸಗೊಬ್ಬರ ವಿತರಣೆ ಕಾರ್ಯ ಪ್ರಗತಿಯಲ್ಲಿದೆ.
ರೈತರ ಬೆಳೆಗಳಿಗೆ ಸುರಕ್ಷತೆಯನ್ನು ಒದಗಿಸಲು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 2019 ಮುಂಗಾರು ಹಂಗಾಮಿನಲ್ಲಿ 29200 ರೈತಾಪಿ ಜನರ ಬೆಳೆಯನ್ನು ವಿಮೆ ಮಾಡಿಸಲಾಗಿದೆ.
ಜಿಲ್ಲೆಯ ಒಟ್ಟು ತೋಟಗಾರಿಕೆ ಕ್ಷೇತ್ರವು 85177 ಹೆಕ್ಟೇರ್‍ಗಳಷ್ಟಿರುತ್ತದೆ. ಕಳೆದ 5 ವರ್ಷಗಳಲ್ಲಿ ತೋಟಗಾರಿಕೆ ಕ್ಷೇತ್ರವು ಶೇ11.55 ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದರಿಂದ ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯು ತೋಟಗಾರಿಕೆ ಜಿಲ್ಲೆಯೆಂದು ಪ್ರಸಿದ್ಧವಾಗಿದೆ.
ಆಯುಷ್ಮಾನ ಭಾರತ-ಆರೋಗ್ಯ ಕರ್ನಾಟಕ ಯೋಜನೆಯಡಿ 30 ಅಕ್ಟೋಬರ್ 2018 ರಿಂದ 30 ಸೆಪ್ಟೆಂಬರ್ 2019 ರವರೆಗೆ ಒಟ್ಟು 18282 ಫಲಾನುಭವಿಗಳಿಗೆ ರೂ. 53.52 ಕೋಟಿ ವಿನಿಯೋಗಿಸಲಾಗಿದೆ. ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸೇವಾ ಸ್ವಾಮ್ಯದ ಬೆಳಗಾವಿ ಕೇ ಒನ್ 4 ಹಾಗೂ ಸೇವಾ ಸಿಂಧೂ ಕೇಂದ್ರಗಳ ಮುಖಾಂತರ ಜಿಲ್ಲೆಯಲ್ಲಿ ಒಟ್ಟು 1.76 ಲಕ್ಷ ಎಬಿ-ಎಆರ್‍ಕೆ ಕಾರ್ಡಗಳನ್ನು ಇಲ್ಲಿಯವರೆಗೆ ವಿತರಿಸಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ 5323 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರ ಆರೋಗ್ಯದಲ್ಲಿನ ಪೌಷ್ಠಿಕಾಂಶದ ಸುಧಾರಣೆಗೆ ಅಂಗನವಾಡಿ ಕೇಂದ್ರಗಳಲ್ಲಿಯೇ ಮಧ್ಯಾಹ್ನದ ಬಿಸಿಯೂಟ ಹಾಗೂ ಕಬ್ಬಿಣಾಂಶದ ಮಾತ್ರೆಯನ್ನು ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ ಪ್ರಸ್ತುತ 34,250 ಗರ್ಭಿಣಿಯರು ಹಾಗೂ 31242 ಬಾಣಂತಿಯರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದಾರೆ.
ಮಾತೃವಂದನಾ ಈ ಯೋಜನೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಐದು ಸಾವಿರ ರೂಪಾಯಿಗಳನ್ನು ಒಟ್ಟು 3 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿಯವರೆಗೆ ಒಟ್ಟು 58,665 ಫಲಾನುಭವಿಗಳಿಗೆ ರೂ. 22.62ಕೋಟಿ ಮೊತ್ತವನ್ನು ಸಂದಾಯ ಮಾಡಲಾಗಿದೆ.
ಮಾತೃಶ್ರೀ ಯೋಜನೆಯಲ್ಲಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ರೂ. 6,000-00ಗಳನ್ನು 6 ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಇಲ್ಲಿಯವರೆಗೆ ಒಟ್ಟು 14,951 ಫಲಾನುಭವಿಗಳು ಸದುಪಯೋಗಪಡಿದುಕೊಂಡಿರುತ್ತಾರೆ.
ಭಾಗ್ಯಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳಿಗೆ 1.00 ಲಕ್ಷ ರೂಪಾಯಿಗಳ ಪರಿಪಕ್ವ ಮೊತ್ತ ದೊರೆಯುವಂತೆ ಬೆಳಗಾವಿ ಜಿಲ್ಲೆಗೆ ಇಲ್ಲಿಯವರೆಗೆ 2,39,501 ಫಲಾನುಭವಿಗಳಿಗೆ ಮಂಜೂರಿ ನೀಡಿದ್ದು, ಇಲ್ಲಿಯವರೆಗೆ 219926 ಬಾಂಡ್‍ಗಳನ್ನು ವಿತರಣೆ ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2019-20ನೇ ಸಾಲಿನಲ್ಲಿ ಸೆಪ್ಟಂಬರ್-2019ರ ಅಂತ್ಯದವೆರೆಗೆ ಒಟ್ಟು 18.03 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು, ಅದರಲಿ 4.83 ಕೋಟಿ ರೂಪಾಯಿ ಖರ್ಚಾಗಿರುತ್ತದೆ.
ಬೆಳಗಾವಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2018-19 ನೇ ಸಾಲಿನಲ್ಲಿ ಒಟ್ಟು ಅನುದಾನ 77.91 ಕೋಟಿ ರೂಪಾಯಿ ಖರ್ಚು ಮಾಡಿ, ಶೇಕಡಾ 100% ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.
2019-20ನೇ ಸಾಲಿನಲ್ಲಿ ಸಪ್ಟೆಂಬರ್ ಅಂತ್ಯದವರೆಗೆ ಒಟ್ಟು ಅನುದಾನದಲ್ಲಿ 15.46 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಶೇಕಡಾ 91% ರಷ್ಟು ಪ್ರಗತಿ ಸಾಧಿಸಲಾಗಿರುತ್ತದೆ. ಇದುವೆರೆಗೆ ಒಟ್ಟಾರೆ 3.45 ಲಕ್ಷ ಫಲಾನುಭವಿಗಳು ಇದರ ಪ್ರಯೋಜನೆಗಳನ್ನು ಪಡೆದುಕೊಂಡಿರುತ್ತಾರೆ.
ಬೆಳಗಾವಿ ಜಿಲ್ಲೆಯು ಸಹಕಾರ ಜಿಲ್ಲೆಯಾಗಿದ್ದು ರಾಜ್ಯದಲ್ಲಿ ಸಹಕಾರ ಚಳುವಳಿಯಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯಲ್ಲಿ ಸುಮಾರು 5588 ವಿವಿಧ ರೀತಿಯ ಸಹಕಾರ ಸಂಘಗಳು ಹಾಗೂ 1039 ಸೌಹಾರ್ದ ಸಹಕಾರಿಗಳು ಕೆಲಸ ನಿರ್ವಹಿಸುತ್ತಿವೆ.
ಒಂದು ಕುಟುಂಬಕ್ಕೆ ಗರಿಷ್ಟ ರೂ. 1.00 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿ ಸರ್ಕಾರ ಆದೇಶ ಹೊರಡಿಸಿರುತ್ತದೆ. ಈ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯ ಒಟ್ಟು 2 ಲಕ್ಷ 88 ಸಾವಿರ ರೈತರ ಸಾಲ ರೂ. 1293 ಕೋಟಿ ಮನ್ನಾ ಆಗುವ ಬಗ್ಗೆ ಅಂದಾಜಿಸಲಾಗಿದೆ. ಈವರೆಗೆ ಜಿಲ್ಲೆಯ 207242 ರೈತರಿಗೆ 724 ಕೋಟಿ ಅನುದಾನ ರೈತರ ಖಾತೆಗೆ ಜಮಾ ಮಾಡಲಾಗಿರುತ್ತದೆ.
ಗ್ರಾಮೀಣ ಭಾಗದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ಶೂನ್ಯ ಬಡ್ಡಿ ದರದಲ್ಲಿ ಅಲ್ಪಾವಧಿ ಸಾಲ ವಿತರಿಸಲಾಗುತ್ತಿದೆ. 2019-20 ನೇ ಜೂನ್ ಅಂತ್ಯದವರೆಗೆ 2 ಲಕ್ಷ 66 ಸಾವಿರ ರೈತರಿಗೆ ರೂ. 1109 ಕೋಟಿ ಬೆಳೆ ಸಾಲ ವಿತರಿಸಲಾಗಿದೆ.
ಬೆಳಗಾವಿ ವಿಭಾಗಕ್ಕೆ ಸಂಬಂಧಪಟ್ಟಂತೆ, ಒಟ್ಟು ಐದು ತಾಲೂಕುಗಳಾದ ಬೆಳಗಾವಿ, ಖಾನಾಪೂರ, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು. ಅದರಂತೆ ಬರ ಪರಿಹಾರವನ್ನು ನೀಗಿಸಲು ಸಿ.ಆರ್.ಎಫ್ ಯೋಜನೆಯಡಿಯಲ್ಲಿ ಬೆಳಗಾವಿ ವಿಭಾಗದಲ್ಲಿ ಒಟ್ಟು 279 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ನೀರು ಸರಬರಾಜು ಮಾಡಲಾಗಿದೆ.
ಮುಂದಿನ 5 ವರ್ಷಗಳಲ್ಲಿ ರಾಜ್ಯವನ್ನು ಗುಡಿಸಲು ವಾಸಿಗಳ ರಹಿತ ರಾಜ್ಯವನ್ನಾಗಿಸುವ ಸರ್ಕಾರದ ಉದ್ದೇಶವಾಗಿದ್ದು, ಈ ದಿಶೆಯಲ್ಲಿ ಗುಡಿಸಲು ವಾಸಿ ಮತ್ತು ನಿವೇಶನ ರಹಿತರ ಸಮೀಕ್ಷೆ ಕೈಗೊಳ್ಳಲಾಗಿರುತ್ತದೆ.
ಒಟ್ಟು 2.04 ಲಕ್ಷ ವಸತಿ ರಹಿತ ಕುಟುಂಬಗಳ ಹಾಗೂ 18,613 ನಿವೇಶನ ರಹಿತ ಕುಟುಂಬಗಳ ಸಮೀಕ್ಷೆ ಮಾಡಿದ್ದು, ಅರ್ಹ ಕುಟುಂಬಗಳಿಗೆ ನಿಯಮಾನುಸಾರ ಮನೆ ಮತ್ತು ನಿವೇಶನ ಹಂಚುವ ಕಾರ್ಯ ಕೈಕೊಳ್ಳಲಾಗುವುದು.
ಅದರಂತೆ ಕಳೆದ 2019-20ನೇ ಸಾಲಿನಲ್ಲಿ ಕೇಂದ್ರ ಪುರಸ್ಕøತ್ ಯೋಜನೆಯಾದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 12284 ಮನೆಗಳ ಗುರಿ ನೀಡಿದ್ದು, ಅದರ ಪೈಕಿ 4956 ಫಲಾನುಭವಿಗಳ ಅನುಮೋದನೆ ಆಗಿದ್ದು ಬಾಕಿ ಫಲಾನುಭವಿಗಳ ಆಯ್ಕೆ ಪ್ರಕ್ರಿಯಲ್ಲಿರುತ್ತದೆ.
2019-20ನೇ ಸಾಲಿಗೆ ವಾರ್ಷಿಕ 21061 ಭೌತಿಕ ಪ್ರಗತಿ ಸಾಧಿಸಲು ನಮ್ಮ ಜಿಲ್ಲೆಗೆ ಗುರಿ ನೀಡಿದ್ದು, 6425 ಮನೆಗಳನ್ನು ಪೂರ್ಣಗೊಳಿಸಿ ಶೇ. 30.51% ರಷ್ಟು ಪ್ರಗತಿ ಸಾಧಿಸಲಾಗಿದೆ. 2018-19ನೇ ಸಾಲಿಗೆ 30206 ಗುರಿ ನೀಡಿದ್ದು ಜೂನ್ 2019ರ ವರೆಗೆ 32967 ಮನೆಗಳನ್ನು ಪೂರ್ಣಗೊಳಿಸಿ ಶೇ.100 ರಷ್ಟು ಪ್ರಗತಿ ಸಾಧಿಸಲಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ ವತಿಯಿಂದ ಕೈಗಾರಿಕೆಗಳ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 62,044 ಕೈಗಾರಿಕೆಗಳು ನೋಂದಣಿಯಾಗಿದ್ದು, ಒಟ್ಟು ರೂ. 4,37,528 ಲಕ್ಷಗಳ ಬಂಡವಾಳ ಹೂಡಿಕೆಯಾಗಿ 374678 ಉದ್ಯೋಗಾವಕಾಶ ಒದಗಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 68 ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದ್ದು, ಒಟ್ಟು 20776.85 ಕೋಟಿಗಳು ಬಂಡವಾಳ ಹೂಡಿಕೆಯಾಗಿ 69314 ಉದ್ಯೋಗಾವಕಾಶ ಒದಗಿಸಲಾಗಿದೆ.
ಕೆಐಎಡಿಬಿ ವತಿಯಿಂದ ಕಿತ್ತೂರ ಮತ್ತು ಕಣಗಲಾದಲ್ಲ್ಲಿ ಒಟ್ಟು 1255 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಹೊಸ ಕೈಗಾರಿಕಾ ಪ್ರದೇಶವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಈಗಾಗಲೇ 108 ಉದ್ದಿಮೆದಾರರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕೆ.ಎಸ್.ಎಸ್.ಐ.ಡಿ.ಸಿ. ವತಿಯಿಂದ ಚಿಕ್ಕೋಡಿ ತಾಲೂಕಿನ ಮಾಂಗೂರ ಕೈಗಾರಿಕಾ ವಸಾಹತುವಿನಲ್ಲಿ 14 ಎಕರೆ ಕ್ಷೇತ್ರದಲ್ಲಿ ಬೆಳ್ಳಿ ಆಭರಣ ತಯಾರಿಕೆಗಾಗಿ ಕ್ಲಿಸ್ಟಕರ ಮೂಲಭೂತ ಸೌಕರ್ಯ ಯೋಜನೆಯಡಿ 5.75 ಕೋಟಿ ರೂ.ಗಳಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿ ಪಡಿಸಲು ಕ್ರಮ ಕೈಕೊಳ್ಳಲಾಗಿದೆ.
ಅಲ್ಲದೇ ಚಿಕ್ಕೋಡಿ ತಾಲೂಕಿನ ಮಜಲಟ್ಟಿ ಗ್ರಾಮದಲ್ಲಿ 15 ಎಕರೆ ಕ್ಷೇತ್ರದಲ್ಲಿ 3.75 ಕೋಟಿ ರೂ. ಗಳಲ್ಲಿ ಜವಳಿ ಪಾರ್ಕಿಗಾಗಿ ಕೈಗಾರಿಕಾ ವಸಾಹತು ಅಭಿವೃದ್ಧಿ ಪಡಿಸಲು ಕ್ರಮ ಕೈಕೊಳ್ಳಲಾಗಿದೆ. ಹಾಗೂ ಚಿಕ್ಕೋಡಿ ತಾಲೂಕಿನ ಬೋರಗಾಂವದಲ್ಲಿ 75 ಎಕರೆ ಹೊಸ ಟೆಕ್ಸಟೈಲ ಪಾರ್ಕ ನಿರ್ಮಿಸಲಾಗಿದ್ದು, ಸುಮಾರು 217 ನಿವೇಶನಗಳನ್ನು ಅಭಿವೃದ್ಧಿ ಪಡಿಸಲಾಗಿದ್ದು, ಈಗಾಗಲೇ 217 ಜವಳಿ ಘಟಕಗಳನ್ನು ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗಿದೆ. ನಿಪ್ಪಾಣಿ ಕೋ-ಆಪರೇಟಿವ್ ಕೈಗಾರಿಕಾ ಪ್ರದೇಶದಲ್ಲಿ ಮೂಲಭೂತ ಸೌಕರ್ಯ ಯೋಜನೆಯಡಿ 5.04 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ಒಟ್ಟು 34 ಕೈಗಾರಿಕಾ ಘಟಕಗಳಿಗೆ ರೂ. 2 ಕೋಟಿ 38 ಲಕ್ಷಗಳ ಬಂಡವಾಳ ಹೂಡಿಕೆ ಸಹಾಯಧನ ಮಂಜೂರು ಮಾಡಲಾಗಿದೆ ಹಾಗೂ ಕಳೆದ ಸಾಲಿನ 72 ಘಟಕಗಳಿಗೆ ರೂ. 4 ಕೋಟಿ 45 ಲಕ್ಷಗಳ ಸಹಾಯಧನ ಬಿಡುಗಡೆ ಮಾಡಲಾಗಿದೆ.
ಕ್ಲಸ್ಟರ ಘಟಕ ಪ್ರಾರಂಭಕ್ಕೆ ಕೇಂದ್ರ ಸರ್ಕಾರಕ್ಕೆ 6 ಹಾಗೂ ರಾಜ್ಯ ಸರ್ಕಾರಕ್ಕೆ 2 ಪ್ರಸ್ತಾವನೆಗಳನ್ನು ಮಂಜೂರಾತಿಗಾಗಿ ಕೇಂದ್ರ ಕಚೇರಿಗೆ ಶಿಫಾರಸ್ಸು ಮಾಡಲಾಗಿದೆ.
ನಗರೋತ್ಥಾನ ಹಂತ-3ರ ಯೋಜನೆಯಡಿ ಬೆಳಗಾವಿ ಜಿಲ್ಲೆಯ 32 ನಗರ ಸ್ಥಳೀಯ ಸಂಸ್ಥೆಗಳಿಗೆ ಒಟ್ಟು 241.50 ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿರುತ್ತದೆ. ಅದರಲ್ಲಿ 109.87 ಕೋಟಿ ಬಿಡುಗಡೆಯಾಗಿದ್ದು, 109.84 ಕೋಟಿ ರೂಪಾಯಿ ವೆಚ್ಚವಾಗಿರುತ್ತದೆ.
ಬೆಳಗಾವಿ ಜಿಲ್ಲೆಯ 33 ನಗರ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ವಿವಿಧ ವಸತಿ ಯೋಜನೆಯಡಿ ಒಟ್ಟು 13,258 ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ 6720 ಮನೆಗಳನ್ನು ಫಲಾನುಭವಿಗಳು ನಿರ್ಮಿಸಿಕೊಂಡಿರುತ್ತಾರೆ. ಬಾಕಿ ಉಳಿದ 6538 ಮನೆಗಳು ವಿವಿಧ ಹಂತದಲ್ಲಿ ಪ್ರಗತಿಯಲ್ಲಿರುತ್ತವೆ.
ಬೆಳಗಾವಿ ಮಹಾನಗರ ಪಾಲಿಕೆ, ನಿಪ್ಪಾಣಿ ನಗರಸಭೆ, ರಾಯಬಾಗ ಪಟ್ಟಣ ಪಂಚಾಯತ ನಗರ ಸಂಸ್ಥೆಗಳಲ್ಲಿ ಒಟ್ಟು 4060 ಫಲಾನುಭವಿಗಳಿಗೆ ಗೃಹ ಸಮುಚ್ಛಯ ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆಯಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ನೀರು ಸರಬರಾಜು ವ್ಯವಸ್ಥೆಯಲ್ಲಿ ಸುಧಾರಣೆಯನ್ನು ತರಲು ಉದ್ದೇಶಿಸಿದ್ದು, ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯ ಆಯ್ದ 10 ವಾರ್ಡ್‍ಗಳಲ್ಲಿ ನಿರಂತರ ನೀರು ಸರಬರಾಜು ಯೋಜನೆಯನ್ನು ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅನುಷ್ಠಾನಗೊಳಿಸಲಾಗಿದೆ. ಉಳಿದ 48 ವಾರ್ಡ್‍ಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಕುರಿತು ಯೋಜನೆಯನ್ನು ರೂಪಿಸಲಾಗಿದ್ದು, ಯೋಜನೆಯನ್ನು ವಿಶ್ವ ಬ್ಯಾಂಕಿನ ಧನ ಸಹಾಯದ ಆಧಾರದ ಮೇಲೆ ಕೈಗೆತ್ತಿಕೊಳ್ಳಲು ಯೋಜಿಸಲಾಗಿರುತ್ತದೆ.
ಸದರಿ ಯೋಜನೆಯನ್ನು 2 ಹಂತದಲ್ಲಿ ಅನುಷ್ಠಾನಗೊಳಿಸಲು ತಿರ್ಮಾನಿಸಿದ್ದು, ಮೊದಲನೆ ಹಂತದ ರೂ. 427 ಕೋಟಿಗಳ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಗುತ್ತಿಗೆದಾರರ ನೇಮಕಾತಿಗಾಗಿ ಟೆಂಡರ್ ಪ್ರಕ್ರೀಯೆಯನ್ನು ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಂದ ಕೈಕೊಂಡಿದ್ದು ದಿನಾಂಕ: 05.10.2019 ರಂದು ತಾಂತ್ರಿಕÀ ಬಿಡ್‍ನ್ನು ತೆರೆಯಲಾಗಿದೆ. ಅಗತ್ಯವಿರುವ ಎಲ್ಲಾ ಗುತ್ತಿಗೆ ಪ್ರಕ್ರೀಯೆ ಹಾಗೂ ಅವಶ್ಯಕ ಅನುಮೋದನೆಗಳನ್ನು ಪಡೆದು, 2 ರಿಂದ 3 ತಿಂಗಳುಗಳಲ್ಲಿ ಕಾಮಗಾರಿ ಅನುಷ್ಠಾನ ಪ್ರಾರಂಭವಾಗಲಿದೆ.
ಸ್ಮಾರ್ಟಸಿಟಿ ಯೋಜನೆಯಡಿ ಈಗಾಗಲೇ ಬೀದಿ ದೀಪಗಳ ಅಳವಡಿಕೆ, ರಸ್ತೆ ಬದಿ ಕುಡಿಯುವ ನೀರಿನ ಕಿಯಾಸ್ಕ್‍ಗಳ ಅಳವಡಿಕೆ, ಮಳೆ ನೀರುಕೊಯ್ಲು, ನಾಥ ಪೈ ಉದ್ಯಾನವನ ಸುಧಾರಣೆ, ಸ್ಮಾರ್ಟ ಬಸ್ ಶೆಲ್ಟರ್ ನಿರ್ಮಾಣ, ಡಿಜಿಟಲ್ ಬಿಲ್ ಬೋರ್ಡ ಅಳವಡಿಕೆ, ಸ್ಮಾರ್ಟಕ್ಲಾಸ್ ರೂಂಗಳ ನಿರ್ಮಾಣ ಸೇರಿದಂತೆಒಟ್ಟು 14 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ.
ನಗರದಲ್ಲಿ ಸುಮಾರು 331 ಕೋಟಿ ರೂಪಾಯಿ ಅನುದಾನದಡಿ ಸಿಮೆಂಟ್ ಕಾಂಕ್ರೀಟ್‍ರಸ್ತೆ, ವೈಟ್‍ಟಾಪಿಂಗ್ ರಸ್ತೆ, ಸ್ಮಾರ್ಟರಸ್ತೆ, ಪೇವರ್ ಅಳವಡಿಕೆ, ಮುಂತಾದ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ.
46.69 ಕೋಟಿ ರೂಪಾಯಿ ಮೊತ್ತದಲ್ಲಿ ನಗರದ ಟಿಳಕವಾಡಿಯಲ್ಲಿ ಬಹು ಉದ್ದೇಶಿತ ವಾಣಿಜ್ಯ ಸಂಕೀರ್ಣ ಮಳಿಗೆ ಕಲಾಮಂದಿರಕಾಮಗಾರಿ ಪ್ರಗತಿಯಲ್ಲಿದೆ.
ಬೆಳಗಾವಿ ನಗರದಲ್ಲಿ ಒಟ್ಟು 11 ಹಂತಗಳಲ್ಲಿ ಒಟ್ಟು ರೂ. 81.21 ಕೋಟಿ ಅನುದಾನದಡಿ ಅಂಡರ್‍ಗ್ರೌಂಡ್ ವಿದ್ಯುತ್ ಕೇಬಲ್ ಅಳವಡಿಕೆ ಹಾಗೂ ಬೀದಿ ದೀಪ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೇ ಸ್ಮಾರ್ಟ ಬಸ್ ನಿಲ್ದಾಣ, ಪ್ರೈವೇಟ್ ಬಸ್ ಪಾರ್ಕಿಂಗ್ ಸೇರಿದಂತೆ ಒಟ್ಟಾರೆ ರೂ. 617.35 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ.
ಆಜ್ಞೆ ಮತ್ತು ನಿಯಂತ್ರಣಾ ಕೇಂದ್ರಕ್ಕೆ ಸಂಬಂಧಿಸಿದಂತೆ ದಿನಾಂಕ: 29-09-2019 ರಂದು ಈಗಾಗಲೇ ಸಾಫ್ಟ್ ಲಾಂಚ್ ಆಗಿದ್ದು, ಘನ ತ್ಯಾಜ್ಯ ನಿರ್ವಹಣೆ, ಸ್ಮಾರ್ಟ ಟ್ರಾನ್ಸ್‍ಪೋರ್ಟ, ಅಗ್ನಿಶಾಮಕ ವಾಹನ ಮತ್ತು ಆಂಬ್ಯೂಲನ್ಸ್‍ಗಳಿಗೆ ಜಿಪಿಎಸ್ ಅಳವಡಿಕೆ ಹಾಗೂ ಹಾಲಿ ಇರುವ ಇ-ಗವ್ರ್ಹನನ್ಸ್ ಸೇವೆಗಳನ್ನು ಏಕೀಕರಣಗೊಳಿಸಿ ಸ್ಮಾರ್ಟಟ್ರ್ಯಾಕ್ ಮಾಡಲಾಗುತ್ತಿದೆ. ಬಾಕಿ ಉಳಿದ ಎಲ್ಲಾ ಕಾಮಗಾರಿಗಳನ್ನು 2020 ರ ಅಂತ್ಯದವರೆಗೆ ಪೂರ್ಣಗೊಳಿಸಲು ಕ್ರಮ ಕೈಕೊಳ್ಳಲಾಗುವುದು.
ಅಖಂಡ ಕರ್ನಾಟಕದ ನಿರ್ಮಾಣದ ಕನಸು ನನಸು ಮಾಡಲು ಶ್ರಮಿಸಿದ ನಮ್ಮ ಹಿರಿಯರ ಆಶಯದಂತೆ ಸಮಗ್ರ ಕರ್ನಾಟಕವನ್ನು ಪ್ರಗತಿಪರ ರಾಜ್ಯವನ್ನಾಗಿ ಕಟ್ಟಲು ಎಲ್ಲರೂ ಕೈ ಜೋಡಿಸೋಣ. ಯುವ ಪೀಳಿಗೆಯು ನಮ್ಮ ನಾಡಿನ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಯ ಕುರಿತು ಆಸಕ್ತಿಯಿಂದ ತಿಳಿದುಕೊಂಡು ನಮ್ಮ ವೈಯಕ್ತಿಕ ಜೀವನ ಹಾಗೂ ನಾಡಿನ ಭವಿಷ್ಯ ರೂಪಿಸಬೇಕು. ಕನ್ನಡದ ಕೆಲಸಗಳಿಗೆ ಸರಕಾರ ಸದಾ ಬದ್ಧವಾಗಿರುತ್ತದೆ. ಎಲ್ಲರೂ ಒಂದಾಗಿ ಕನ್ನಡದ ತೇರನ್ನು ಮುನ್ನಡೆಸೋಣ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ವಿಧಾನಪರಿಷತ್ ಸರಕಾರದ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ್, ಸತೀಶ್ ಜಾರಕಿಹೊಳಿ, ಅಭಯ ಪಾಟೀಲ, ಅನಿಲ ಬೆನಕೆ, ಜಿಲ್ಲೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ