Kannada NewsKarnataka NewsLatest
ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ; ಡೊಳ್ಳು ಭಾರಿಸಿ ಗಮನ ಸೆಳೆದ ಶಾಸಕಿ, ಸಂಸದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬಸವಾದಿ ಶರಣರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳು ಮಾಡಿದ್ದಾರೆ. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿ ಸಾಮಾಜಿಕ ಕ್ರಾಂತಿಗೆ ಬಸವಣ್ಣನವರು ಕಾರಣರಾಗಿದ್ದಾರೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ನಿರ್ಮೂಲನೆ ಹಾಗೂ ಸಮಾನತೆಗೆ ಶ್ರಮಿಸಿದ ಅವರ ತತ್ವಗಳ ಅಳವಡಿಕೆ ಸಮಾಜಕ್ಕೆ ಅವಶ್ಯಕವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ತಿಳಿಸಿದರು.
ನಗರದ ಶ್ರೀ ಬಸವೇಶ್ವರ ಉದ್ಯಾನವನದಲ್ಲಿ ಮಂಗಳವಾರ (ಮೇ.3) ನಡೆದ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳ್ಳತನ ಮಾಡಬೇಡ, ಕೊಲ್ಲಬೇಡ, ಪರರ ದೂಷಣೆ ಮಾಡಬೇಡ, ಆತ್ಮ ಪ್ರಸಂಶೆಯಲ್ಲಿ ತೊಡಗಬೇಡ – ಇವುಗಳನ್ನು ಪಾಲಿಸುತ್ತ ಬಂದಲ್ಲಿ ಅಂತರಂಗವೂ-ಬಹಿರಂಗವೂ ಶುದ್ಧಿಯಾಗಿರುವುದು ಎಂದು ಬಸವಣ್ಣವರು ಹೇಳಿದ್ದಾರೆ ಇದೇ ಮಾರ್ಗದಲ್ಲಿ ಯುವ ಪೀಳಿಗೆ ನಡೆಯಬೇಕು ಎಂದು ತಿಳಿಸಿದರು.
ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ, ಮಹಾ ಮಾನವತಾ ವಾದಿ ಎಂದೂ ಕರೆಯಲಾಗುತ್ತದೆ. ಮಾನವಿಯತೆ, ಕಾಯಕ ನಿಷ್ಠೆ ಅವರ ಧರ್ಮವಾಗಿತ್ತು. ಸಮಾಜ ಬದಲಾವಣೆಯಲ್ಲಿ ಅವರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.
ಲಿಂಗಭೇದ, ಜಾತಿಭೇದ ತೊಡೆದು ಹಾಕಿ ಸಮಾನತೆ ಸಾಧಿಸುವುದು ಸೇರಿದಂತೆ ಬಸವಣ್ಣನವರ ಅನೇಕ ತತ್ವಗಳು ಭಾರತ ಸಂವಿಧಾನದಲ್ಲಿ ಇವೆ. ಅವರ ವಚನಗಳ ಆಧಾರಿತ ಅನೇಕ ಪುಸ್ತಕಗಳು ಪ್ರಕಟವಾಗಿದ್ದು, ಜಗತ್ತಿನ ಕಟ್ಟ ಕಡೆಯ ವ್ಯಕ್ತಿಯ ವರೆಗೂ ಬಸವಣ್ಣನವರ ವಚನ ತತ್ವಗಳು ತಲುಪಲಿವೆ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.
ಸಮಾಜದಲ್ಲಿ ಸಮಾನತೆ ತೋರಿಸಿಕೊಟ್ಟ ಮೊದಲ ಶರಣರು:
ಈ ವೇಳೆ ಬಸವಣ್ಣನವರ ಕುರಿತು ವಿಶೇಷ ಉಪನ್ಯಾಸ ನೀಡಿದ ಹಿರಿಯ ಸಾಹಿತಗಳಾದ ಡಾ. ಸಿ. ಕೆ.ನಾವಲಗಿ ಅವರು 12 ನೇ ಶತಮಾನದಲ್ಲಿ ವರ್ಗಭೇದ, ವರ್ಣಭೇದ, ಲಿಂಗಭೇದಗಳನ್ನು ಹೋಗಲಾಡಿಸಲು ಅಂದಿನ ಕಾಲದಲ್ಲಿ ಸಮಾಜವನ್ನು ತಿದ್ದುವ ಕಾರ್ಯಕ್ಕೆ ಬಸವಣ್ಣವರು ಮುಂದಾಗಿ ಸಮಾನತೆ ತೋರಿಸಿಕೊಟ್ಟಿದ್ದಾರೆ. ಪ್ರತಿಯೊಬ್ಬರೂ ಅವರ ವಚನ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಾತಿಯಲ್ಲಿ ಮೇಲು-ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕು ಇದೆ ಎಂದು ಅಂದಿನ ಸಮಾಜಕ್ಕೆ ತೋರಿಸಿಕೊಟ್ಟ ಮೊದಲ ಶರಣರು ಬಸವಣ್ಣನವರು.
ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದ್ದಾರೆ ಎಂದು ಬಸವಣ್ಣವರ ತತ್ವಗಳ ಕುರಿತು ಡಾ. ಕೆ ಸಿ ನಾವಲಗಿ ಉಪನ್ಯಾಸದಲ್ಲಿ ತಿಳಿಸಿದರು.
ಸಂಗೀತ ಕಾರ್ಯಕ್ರಮ:
ಶುಭಾ ತೆಲಸಂಗ, ಪ್ರತಿಭಾ ಕಳ್ಳಿಮಠ, ರೋಹಿಣಿ ಕೆ. ಎಂ ಹಾಗೂ ಅಂಧ ಕಲಾವಿದರಾದ ಬಸಪ್ಪ ಅಂಗಡಿ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಇದಕ್ಕೂ ಮುಂಚೆ ಸಂಸದೆ ಮಂಗಳಾ ಅಂಗಡಿ, ಶಾಸಕ ಅನಿಲ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ, ಪೊಲೀಸ್ ಆಯುಕ್ತರಾದ ಎಂ. ಬೋರಲಿಂಗಯ್ಯ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಅವರು ಜಗಜ್ಯೋತಿ ಶ್ರೀ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ಆಯುಕ್ತರಾದ ಎಂ. ಬೋರಲಿಂಗಯ್ಯ, ಮಹಾ ನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಬೆಳಗಾವಿ ತಹಶೀಲ್ದಾರ್ ಕುಲಕರ್ಣಿ, ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಸ್ವಾಗತ ಕೋರಿದರು, ಸರ್ವಮಂಗಳ ಅರಳಿಮಟ್ಟಿ ಅವರು ನಿರೂಪಿಸಿ, ವಂದಿಸಿದರು.
ಡೊಳ್ಳು ಭಾರಿಸಿದ ಹೆಬ್ಬಾಳಕರ್, ಹಟ್ಟಿಹೊಳಿ, ಮಂಗಲಾ
ಸಂಜೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಸಂಸದೆ ಮಂಗಲಾ ಅಂಗಡಿ ಮೊದಲಾದವರು ಡೊಳ್ಳು ಭಾರಿಸಿ ಗಮನ ಸೆಳೆದರು.
ಕಾರಂಜಿ ಮಠದ ಗುರುಸಿದ್ದ ಸ್ವಾಮಿಗಳು, ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೊರೆ, ಶಾಸಕ ಅನಿಲ ಬೆನಕೆ, ಬಸವಜಯಂತಿ ಉತ್ಸವ ಕೇಂದ್ರ ಸಮಿತಿ ಅಧ್ಯಕ್ಷೆ, ಮಾಜಿ ಉಪಮಹಾಪೌರರಾದ ಜ್ಯೋತಿ ಬಾವಿಕಟ್ಟಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ್, ಬಿಜೆಪಿ ಮುಖಂಡ ಶಂಕರಗೌಡ ಪಾಟೀಲ, ಉದ್ಯಮಿ ಮದನ್ ಕುಮಾರ ಭೈರಪ್ಪನವರ್, ಆರ್.ಪಿ.ಪಾಟೀಲ ಮೊದಲಾದವರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ