*ಜೈನಮುನಿ ಹತ್ಯೆ ಪ್ರಕರಣ; ಇದು ನಾಗರೀಕ ಪ್ರಪಂಚ ತಲೆ ತಗ್ಗಿಸುವಂಥ ಘಟನೆ; ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು*
ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣವನ್ನು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ತೀವ್ರವಾಗಿ ಖಂಡಿಸಿದ್ದಾರೆ.
ನಗರದ ಶ್ರೀಮದಭಿನವ ರೇಣುಕ ಮಂದಿರದಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಹಿಂಸಾ ಮಾರ್ಗದಲ್ಲಿ ಸಾಗುತ್ತಿದ್ದ ಮತ್ತು ಬಡ ಜನರಿಗೆ ಉಪಕಾರ ಮಾಡುತ್ತಿದ್ದ ಜೈನಮುನಿ ಕಾಮಕುಮಾರ ನಂದಿ ಮುನಿಗಳ ಅಮಾನುಷ ಹತ್ಯೆ ಇಡೀ ನಾಗರೀಕ ಪ್ರಪಂಚಕ್ಕೆ ತಲೆ ತಗ್ಗಿಸುವಂಥ ಘಟನೆಯಾಗಿದೆ. ಮಾನವೀಯತೆ ಇಲ್ಲದ ದುಷ್ಟ ಶಕ್ತಿಗಳು ಈ ಕೃತ್ಯ ಎಸೆಗಿದ್ದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಸರ್ಕಾರ ವಿಧಿಸುವಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಧಾರ್ಮಿಕ ಮತ್ತು ಸಾಮಾಜಿಕ ಕಳಕಳಿಯಿಂದ ಕಾರ್ಯ ನಿರ್ವಹಿಸುವವರಿಗೆ ಸರಕಾರ ರಕ್ಷಣೆಯನ್ನು ಕೊಡಬೇಕೆಂದು ಒತ್ತಾಯಪಡಿಸಿದ್ದಾರೆ. ಅಲ್ಲದೇ ಇಂಥ ಘಟನೆ ಮುಂದೆ ನಡೆಯಲಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳಲ್ಲಿ ಸಂಘರ್ಷ ಉಂಟಾಗಿ 12 ಜನರು ಸಾವಿಗೀಡಾಗಿದ್ದು ನೋವಿನ ಸಂಗತಿ. ರಾಜಕೀಯ ಅಧಿಕಾರ ಪಡೆಯಲು ವ್ಯಾಪಕವಾದ ಸಂಘರ್ಷಗಳು ಇತ್ತೀಚೆಗೆ ಹೆಚ್ಚೆಚ್ಚು ನಡೆಯುತ್ತಿರುವುದು ಒಳ್ಳೆಯದಲ್ಲ. ರಾಜಕೀಯ ಧುರೀಣರು ಉದ್ರೇಕ ಭಾವನೆಗಳಿಂದ ಆಗುವ ಅನಾಹುತಕ್ಕೆ ಅವಕಾಶ ಕೊಡದೇ ಜನ ಸಮುದಾಯ ಪರಸ್ಪರ ಶಾಂತಿ ಸಾಮರಸ್ಯದಿಂದ ಬಾಳಲು ಶ್ರಮಿಸಬೇಕೆಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ