
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಡಿನ ಅತ್ಯಂತ ಶ್ರದ್ಧಾಭಕ್ತಿಯ ಧಾರ್ಮಿಕ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಕೀರ್ತಿ ತರಲು ಕೆಲವು ಯೂಟ್ಯೂಬರ್ ಗಳು ಹಾಗೂ ಕೆಲ ದುಷ್ಟ ಶಕ್ತಿಗಳು ಅತ್ಯಂತ ಕೆಟ್ಟ ಭಾಷೆ ಬಳಸುತ್ತಿರುವುದು ತೀವ್ರ ಖಂಡನೀಯ ಎಂದು ಬೆಳಗಾವಿಯ ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ತಿಳಿಸಿದೆ.
ಈ ಬಗ್ಗೆ ಪ್ರಕಟಣೆ ನೀಡಿರುವ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಪದಾಧಿಕಾರಿಗಳು, ಜೈನ ಧರ್ಮದ ಇತಿಹಾಸ ಗಮನಿಸಿದರೆ ಇಡೀ ಜಗತ್ತಿನಲ್ಲೇ ಜೈನ ಬಾಂಧವರು ಅತ್ಯಂತ ಶಾಂತಿ ಪ್ರಿಯರು ಹಾಗೂ ಸಹನಶೀಲರು ಎಂಬ ಸತ್ಯ ಗೋಚರವಾಗುತ್ತದೆ. ಆದರೆ, ಈಗ ಧರ್ಮಸ್ಥಳದ ಹೆಸರಿನಲ್ಲಿ ಜೈನ ಬಾಂಧವರನ್ನು ಕೆಣಕುವ ಪ್ರಯತ್ನ ನಡೆದಿದ್ದು, ಇದನ್ನು ಸಹಿಸಿಕೊಂಡು ಹೋಗುವ ತಾಳ್ಮೆಯನ್ನು ಕಳೆದುಕೊಳ್ಳುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಮಾರು ೮೦೦ ವರ್ಷಗಳ ಭವ್ಯ ಹಿನ್ನೆಲೆ ಇದೆ. ಧರ್ಮಸ್ಥಳ ದೇಶದಲ್ಲೇ ಅತ್ಯಂತ ಶ್ರದ್ಧಾ- ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಆದರೆ ಕೆಲ ದಿನಗಳಿಂದ ಈ ಪುಣ್ಯಕ್ಷೇತ್ರದ ಮೇಲೆ ಕೆಲವು ಶಕ್ತಿಗಳು ಇನ್ನಿಲ್ಲದಂತೆ ಅಪಪ್ರಚಾರ ನಡೆಸಿ ಕ್ಷೇತ್ರಕ್ಕೆ ಕುಂದುಂಟು ಮಾಡುತ್ತಿರುವುದು ಖೇದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಸರ್ವಧರ್ಮಗಳನ್ನು, ಸರ್ವಜಾತಿಯ ಜನರನ್ನು ಶ್ರದ್ಧಾಪೂರ್ವಕವಾಗಿ ಗೌರವಿಸುವ ಏಕೈಕ ಧರ್ಮ ಕ್ಷೇತ್ರ ಎಂಬ ಕೀರ್ತಿಗೆ ಪಾತ್ರವಾಗಿದೆ. ಸೇವಾ ಕಾರ್ಯಗಳು ಅಲ್ಲಿ ನಿರಂತರವಾಗಿ ಪಾಲನೆಯಾಗುತ್ತಿದೆ. ಅನ್ನದಾನ, ವಿದ್ಯಾದಾನ, ಆರೋಗ್ಯದಾನ ಸೇರಿದಂತೆ ಬಡ ಜನರಿಗೆ ಬೇಕಾದ ಸಕಲ ಸೌಲಭ್ಯಗಳನ್ನು ನೀಡುತ್ತಿದೆ. ಈ ಮೂಲಕ ಸರ್ಕಾರ ಮಾಡಬೇಕಾಗಿರುವ ಕೆಲಸಗಳನ್ನು ಧಾರ್ಮಿಕ ಕೇಂದ್ರ ಸದ್ದುಗದ್ದಲವಿಲ್ಲದೆ ಮಾಡಿಕೊಂಡು ಬರುತ್ತಿದೆ. ಆದರೆ, ಈಗ ಈ ಪುಣ್ಯಕ್ಷೇತ್ರಕ್ಕೆ ಕಳಂಕ ತರುವ ಕೆಲಸ ನಡೆಯುತ್ತಿರುವುದು ಅಘಾತದ ಸಂಗತಿ ಎಂದು ತಿಳಿಸಿದ್ದಾರೆ.
ರಾಮ ಮಂದಿರವನ್ನು ನಾವು ಕಳೆದುಕೊಂಡು ಮತ್ತೆ ೫೦೦ ವರ್ಷಗಳ ನಂತರ ಮತ್ತೆ ಪಡೆದುಕೊಂಡೆವು. ಅದೇ ರೀತಿ ಈಗ ಮಂಜುನಾಥನ ಕ್ಷೇತ್ರವನ್ನು ಕಳೆದುಕೊಳ್ಳಲು ನಾವು ತಯಾರಿಲ್ಲ. ಕ್ಷೇತ್ರದಲ್ಲಿ ಅನ್ಯಾಯ ನಡೆದಿದೆ ಎಂದು ಹೇಳಿಕೊಳ್ಳುವ ಕೆಲ ದುಷ್ಟ ಶಕ್ತಿಗಳು ಈ ದೇಶದ ನ್ಯಾಯಾಂಗ ವ್ಯವಸ್ಥೆ, ಸರಕಾರ ಮತ್ತು ಸಿಬಿಐ ಮೇಲೆ ನಂಬಿಕೆ ಇಲ್ಲದವರಾಗಿದ್ದಾರೆ. ಇನ್ನು ಎಸ್‌ಐಟಿ ಮೇಲೆ ನಂಬಿಕೆಯೇ ಇಲ್ಲದೆ, ಒಂದು ದುಷ್ಟಕೂಟವಾಗಿ ಸೇರಿಕೊಂಡು ಅಲ್ಲಿನ ಆಡಳಿತ ವ್ಯವಸ್ಥೆಗೆ ಕಳಂಕ ತರುವ ಕೆಲಸ ಮಾಡಲಾಗುತ್ತಿದೆ. ಧರ್ಮಸ್ಥಳಕ್ಕೆ ಬರುವ ಭಕ್ತರು ಮಂಜುನಾಥ ಸ್ವಾಮಿ, ಅಣ್ಣಪ್ಪ, ಬಾಹುಬಲಿಯ ದರ್ಶನ ಪಡೆದು ಪ್ರಸಾದ ಸೇವಿಸಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರನ್ನು ಕಂಡು ಸಂತಸಪಡುತ್ತಿದ್ದರು. ಕ್ಷೇತ್ರದಲ್ಲಿ ಸಂಗೀತ, ಭಜನೆಗೆ ನಿರಂತರವಾಗಿ ಪ್ರೋತ್ಸಾಹ ಸಿಗುತ್ತಿದೆ. ಆದರೆ ಅಲ್ಲಿನ ಆಡಳಿತ ಶಾಂತಿಪ್ರಿಯ ಜೈನರ ಕೈಯಲ್ಲಿದೆ ಎಂಬ ಒಂದೇ ಒಂದು ಉದ್ದೇಶ ಇಟ್ಟುಕೊಂಡು ಹಿಂದೂ ಧರ್ಮದ ಹೆಸರನ್ನು ಹಾಳು ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತಿಹಾಸವನ್ನು ನೋಡುತ್ತಾ ಹೋದರೆ ದಕ್ಷಿಣ ಕನ್ನಡವನ್ನು ಆಳಿದ ಅರಸರೆಲ್ಲರು ಜೈನರೇ. ಆಗಿನ ಜೈನರು ಅದೆಷ್ಟು ಹಿಂದೂ ದೇವಾಲಯಗಳನ್ನು ಸ್ಥಾಪನೆ ಮಾಡಿದ್ದಾರೆ. ಅವರು ಮತೀಯರಾಗಿದ್ದರೆ ಕೇವಲ ಬಸದಿಯನ್ನು ಮಾತ್ರ ನಿರ್ಮಾಣ ಮಾಡುತ್ತಿದ್ದರು. ಇಂತಹ ಪರಂಪರೆ ಇರುವ ದಕ್ಷಿಣ ಕನ್ನಡ ಜೈನರ ಬಗ್ಗೆ ಅವಹೇಳನ ಮಾಡುವ ಯೂಟ್ಯೂಬರ್ ಗಳು ತಮ್ಮದೇ ಆದ ರೀತಿಯಲ್ಲಿ ಮಾಡುತ್ತಿರುವ ಕೆಟ್ಟ ರೀತಿಯ ವರ್ಣನೆಯನ್ನು ಸಹಿಷ್ಣುಗಳಾದ ಜೈನ ಸಮುದಾಯ ಕೇಳಲು ಅಸಾಧ್ಯವಾಗಿದೆ.
ಜೈನ ಧರ್ಮಕ್ಕೆ ತನ್ನದೇ ಆದ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ. ಅದನ್ನು ಈ ಅವಿವೇಕಿಗಳು ಇನ್ನಾದರೂ ಅರ್ಥಮಾಡಿಕೊಳ್ಳಬೇಕು. ಭಗವಂತನು ಅವರಿಗೆ ಒಳ್ಳೆಯ ಸದ್ಭುದ್ಧಿ ನೀಡಲಿ ಎಂದು ನಾವು ವಿನಯ ಪೂರ್ವಕವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಹಾಗೆಯೇ ಸರಕಾರ ಈಗ ತೆಗೆದುಕೊಂಡ ನಿರ್ಧಾರವನ್ನು ಆದಷ್ಟು ಬೇಗ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಇಲ್ಲದೆ ಹೋದರೆ ಹಲವಾರು ಸಮಸ್ಯೆಗಳು ಸೃಷ್ಟಿಯಾಗಬಹುದು ಎಂದು ಬೆಳಗಾವಿ ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಗೌರವಾಧ್ಯಕ್ಷ ಶಿರ್ಲಾಲು ಬಿ.ಗುಣಪಾಲ ಹೆಗ್ಡೆ, ಅಧ್ಯಕ್ಷ ಮಹಾವೀರ ಪೂವಣಿ, ಉಪಾಧ್ಯಕ್ಷ, ನಿವೃತ್ತ ಪ್ರಾಚಾರ್ಯ ಅಜಿತ ಕುಮಾರ ಜೈನ್, ಕಾರ್ಯದರ್ಶಿ ವೀರೇಂದ್ರ ಹೆಗ್ಡೆ, ಮಹಾವೀರ ಜೈನ್, ಮಲ್ಲಿನಾಥ ಜೈನ್ ಮತ್ತು ಇತರ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.