ಜಮ್ಮು-ಕಾಶ್ಮೀರ ವಿದ್ಯಮಾನ : ರಾಷ್ಟ್ರಾದ್ಯಂತ ಹೈ ಅಲರ್ಟ್ -ಕೆಲವೇ ಕ್ಷಣದಲ್ಲಿ ಕೇಂದ್ರ ನಿರ್ಧಾರ ಪ್ರಕಟ
ಪ್ರಗತಿವಾಹಿನಿ ಸುದ್ದಿ, ನವದೆಹಲಿ –
ಜಮ್ಮು ಕಾಶ್ಮೀರದಲ್ಲಿ ಕಳೆದ 8-10 ದಿನಗಳಿಂದ ನಡೆಯುತ್ತಿರುವ ವಿದ್ಯಮಾನಕ್ಕೆ ಇನ್ನು ಕೆಲವೇ ಕ್ಷಣದಲ್ಲಿ ಉತ್ತರ ಸಿಗಲಿದೆ.
ಕೇಂದ್ರ ಸಚಿವಸಂಪುಟದ ವಿಶೇಷ ಸಭೆ ಮುಕ್ತಾಯವಾಗಿದ್ದು, ಗೃಹ ಸಚಿವ ಅಮಿತ ಶಾ ಲೋಕಸಭೆಯಲ್ಲಿ ಈ ಸಂಬಂಧ ಭಾಷಣ ಮಾಡಲಿದ್ದಾರೆ.
ಕಣಿವೆ ರಾಜ್ಯ ಸಂಬಂಧ ಕೇಂದ್ರ ಸರಕಾರ ಮಹ್ತವದ ನಿರ್ಧಾರವೊಂದನ್ನು ಘೋಷಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.
ಕಳೆದ 2 ವಾರದಲ್ಲಿ ಜಮ್ಮು ಕಾಶ್ಮೀರಕ್ಕೆ 35 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಲಾಗಿದೆ. ಅಲ್ಲಿನ ಎಲ್ಲ ಪ್ರಮುಕ ರಾಜಕಾರಣಿಗಳನ್ನು ಗೃಹಬಂಧನದಲ್ಲಿಡಲಾಗಿದೆ. ಪ್ರವಾಸಿಗಳಿಗೆ ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳಲು ಸೂಚನೆ ನೀಡಲಾಗಿದೆ. ಅಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ನೆಟವರ್ಕ್ ಬಂದ್ ಮಾಡಲಾಗಿದೆ. ಯಾವುದೇ ರೀತಿಯ ಸಂಪರ್ಕ ವ್ಯವಸ್ಥೆ ಇಲ್ಲ.
ಕಳೆದ 2 ವಾರದಿಂದಲೂ ಸಂಪೂರ್ಣ ನಿಗೂಢ ಕಾರ್ಯಾಚರಣೆ ನಡೆಯುತ್ತಿದ್ದು, ಕೇಂದ್ರ ಸರಕಾರ ಏನು ಮಾಡುತ್ತಿದೆ ಎನ್ನುವುದು ಯಾರಿಗೂ ಗೊತ್ತಾಗುತ್ತಿಲ್ಲ.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನ ರದ್ಧು ಮಾಡಲಾಗುತ್ತದೆ, ರಾಜ್ಯವನ್ನು 2 ಅಥವಾ 3 ಭಾಗಗಳಾಗಿ ವಿಭಜಿಸಲಾಗುತ್ತದೆ ಎನ್ನುವ ಸುದ್ದಿಗಳು ಹರಡಿವೆ. ಇವೆಲ್ಲಕ್ಕಿಂತಲೂ ಪ್ರಮುಖವಾದ ನಿರ್ಧಾರವನ್ನೇನಾದರೂ ತೆಗೆದುಕೊಳ್ಳಲಾಗುತ್ತದೆಯೋ ಎನ್ನುವುದೂ ಗೊತ್ತಾಗಿಲ್ಲ.
ಸಂಪೂರ್ಣ ರಾಜ್ಯ ಸ್ಥಬ್ಧವಾಗಿದ್ದು, ಲೋಕಸಭೆಯಲ್ಲಿ ವಿಪಕ್ಷಗಳು ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿವೆ.
ಇದೀಗ ಅಮಿತ ಶಾ ಗೃಹ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಬಿಜೆಪಿ ತನ್ನ ಸಂಸದರಿಗೆ ಸಂಸತ್ ನಲ್ಲಿ ಕಡ್ಡಾಯವಾಗಿ ಹಾಜರಾಗುವಂತೆ ವಿಪ್ ಜಾರಿ ಮಾಡಿದೆ.
ಈ ಎಲ್ಲ ಬೆಳವಣಿಗೆಗಳಿಗೆ ಇಂದು 11 ಗಂಟೆಗೆ ಉತ್ತರ ನೀಡಲಿದ್ದಾರೆ ಅಮಿತ ಶಾ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ