ಸರ್ಕಾರ ಕೆಡವಲು ಹೊರಟವರಿಗೆ ಸಂದೇಶ
ಪ್ರಗತಿವಾಹಿನಿ ಸುದ್ದಿ: “ನಮ್ಮ ಪಕ್ಷದ ಆಚಾರ ವಿಚಾರಗಳನ್ನು ಪ್ರಚಾರ ಮಾಡಲು ಹಾಸನದಲ್ಲಿ ಕೆಪಿಸಿಸಿ ಹಾಗೂ ಸ್ವಾಭಿಮಾನಿಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಜನಕಲ್ಯಾಣ ಸಮಾವೇಶ ಹಮ್ಮಿಕೊಳ್ಳಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಹಾಸನದಲ್ಲಿ ಡಿಸೆಂಬರ್ 5 ರಂದು ಸಮಾವೇಶ ನಡೆಯಲಿರುವ ಸ್ಥಳಕ್ಕೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಭೇಟಿ ನೀಡಿ ಪೂರ್ವಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು.
“ಈ ಸಮಾವೇಶ ಕೆಪಿಸಿಸಿ ನೇತೃತ್ವದಲ್ಲಿ ನಡೆಯುತ್ತಿದೆ. ಪಕ್ಷಕ್ಕೆ ಬೆಂಬಲವಾಗಿ ನಿಂತಿರುವ ಸ್ನೇಹಿತರು, ಸ್ವಾಭಿಮಾನಿಗಳ ಒಕ್ಕೂಟಗಳು ಕೂಡ ಮುಖ್ಯಮಂತ್ರಿಗಳು ಹಾಗೂ ಸರ್ಕಾರ ಮಾಡುತ್ತಿರುವ ಕೆಲಸಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ನಿರ್ಧರಿಸಿದ್ದು, ನಮ್ಮ ಜತೆ ಕೈ ಜೋಡಿಸಿರುವ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜನರ ಬದುಕು ಬದಲಾವಣೆ ಹಾಗೂ ಕಲ್ಯಾಣಕ್ಕೆ ಈ ಸಮಾವೇಶ ಮಾಡುತ್ತಿದ್ದೇವೆ” ಎಂದು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆಗಳು ಸತ್ತಿವೆ, ಜನರೇ ಉತ್ತರ ಕೊಟ್ಟಿದ್ದಾರೆ:
“ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ವಿರುದ್ಧ ನಿರಂತರವಾಗಿ ಟೀಕೆ ಮಾಡುತ್ತಾ ಬಂದಿದ್ದರು. ಆಗ ನಾನು ಒಂದು ಮಾತು ಹೇಳಿದ್ದೆ. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು. ರಾಜ್ಯದ ಜನ ಹಳೇ ಮೈಸೂರು ಭಾಗ, ಕಲ್ಯಾಣ ಕರ್ನಾಟಕ ಹಾಗೂ ಕಿತ್ತೂರು ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಆ ಮೂಲಕ ವಿರೋಧ ಪಕ್ಷಗಳ ಟೀಕೆಗಳು ಸತ್ತಿವೆ.
ಮತದಾರ ಈಗಾಗಲೇ ತನ್ನ ತೀರ್ಪು ನೀಡಿದ್ದು, ವಿರೋಧ ಪಕ್ಷಗಳನ್ನು ಟೀಕೆ ಮಾಡುವ ಅಗತ್ಯವಿಲ್ಲ. ಕಳೆದ 25 ವರ್ಷಗಳ ನಂತರ ಈ ಜಿಲ್ಲೆಯ ಜನ ನಮ್ಮ ಸಂಸದರನ್ನು ಆಯ್ಕೆ ಮಾಡಿದ್ದಾರೆ. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುತ್ತಿದ್ದು, 2028ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ ಚುನಾವಣೆಯಲ್ಲಿ ಜನ 135 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದರು. ಈಗ ಅದು 138 ಆಗಿದೆ” ಎಂದು ತಿಳಿಸಿದರು.
ನೊಂದಿರುವ ಜಿಲ್ಲೆಯ ಕುಟುಂಬಗಳಿಗೆ ಧೈರ್ಯ ತುಂಬಬೇಕು
“ರಾಜ್ಯದ ನಾನಾ ಭಾಗಗಳಲ್ಲಿ ಈ ಜನಕಲ್ಯಾಣ ಸಮಾವೇಶ ಮಾಡಲಾಗುವುದು. ತುಮಕೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಮಾವೇಶ ಮಾಡಿದ್ದೇವೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಅನೇಕ ಕುಟುಂಬಗಳ ನೋವು ದೇಶವ್ಯಾಪಿ ಚರ್ಚೆಯಾಗಿತ್ತು. ಅವರಿಗೆ ಶಕ್ತಿ ತುಂಬಬೇಕು, ಧೈರ್ಯ ತುಂಬಬೇಕು ಎಂಬ ಉದ್ದೇಶದಿಂದ ಇಲ್ಲಿ ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ. ನಮ್ಮ ಮಂತ್ರಿಗಳು, ಶಾಸಕರು ಈ ಸಮಾವೇಶದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ಸಮಾವೇಶದ ಮೂಲಕ ನಾವು ಜನರಿಗೆ ಸಂದೇಶ ನೀಡಬೇಕಿದೆ” ಎಂದು ತಿಳಿಸಿದರು.
“ವಿರೋಧ ಪಕ್ಷದ ನಾಯಕರು ಈ ಸಮಾವೇಶವನ್ನು ಪ್ರಶ್ನಿಸಿದ್ದಾರೆ. ರಾಜಕೀಯ ಎಂದರೆ ಪಕ್ಷ ಹಾಗೂ ಜನರ ನಡುವಣ ಸಂಬಂಧ ಬಹಳ ಮುಖ್ಯ. ವಿರೋಧ ಪಕ್ಷದವರು ಭಾವನೆ ಮೇಲೆ ರಾಜಕಾರಣ ಮಾಡುತ್ತಾರೆ. ನಾವು ಜನರ ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ. ಜನರ ಬದುಕು ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ನಮ್ಮ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಅದಕ್ಕಾಗಿ 56 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿದೆ. ಆ ಮೂಲಕ ರಾಜ್ಯದ ಮಹಿಳೆಯರಿಗೆ ಶಕ್ತಿ ತುಂಬಲಾಗಿದೆ. ನಮ್ಮ ಈ ಕೆಲಸಗಳು, ನಮ್ಮ ಆಚಾರ ವಿಚಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಸಮಾವೇಶ ಮಾಡಲಾಗುವುದು. ಎಲ್ಲಾ ರಾಜಕೀಯ ಪಕ್ಷಗಳು ಇಂತಹ ಸಮಾವೇಶ ಮಾಡಿಕೊಂಡು ಬಂದಿವೆ. ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರಧಾನಮಂತ್ರಿಗಳನ್ನು ಕರೆಸಿ ಭಾಷಣ ಮಾಡಿಸಲಿಲ್ಲವೇ? ಎಂದು ಪ್ರಶ್ನಿಸಿದರು.
ಚುನಾವಣೆ ಇಲ್ಲದಿದ್ದರೂ ನಮ್ಮ ಯೋಜನೆಗಳು ಜನರಿಗೆ ಮುಟ್ಟಿದೆಯೋ ಇಲ್ಲವೋ ಎಂದು ಪರಿಶೀಲಿಸಲಾಗುವುದು. ಗ್ಯಾರಂಟಿ ಯೋಜನೆ ಜಾರಿಗೆ ಸಮಿತಿ ರಚಿಸಿದ್ದೇವೆ. ಬಿಪಿಎಲ್ ಕಾರ್ಡ್ ವಿಚಾರದಲ್ಲಿ ಅನರ್ಹರು ಫಲಾನುಭವಿಗಳಾಗಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದ ಮಾನದಂಡದಂತೆ ಪರಿಶೀಲನೆಗೆ ಮುಂದಾದೆವು. ಆದರೆ ಬಿಜೆಪಿಯವರು ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದು ಅಪಪ್ರಚಾರ ಮಾಡಿದರು. ಯಾರಿಗೆ ಅನ್ಯಾಯವಾಗಿದೆಯೋ ಅದನ್ನು ಸರಿಪಡಿಸಲು ನಾವು ಬದ್ಧವಾಗಿದ್ದೇವೆ” ಎಂದರು.
“ನಮ್ಮ ಸಂವಿಧಾನದ ಮೂಲ ಉದ್ದೇಶ ಸರ್ವರಿಗೂ ಸಮಬಾಳು, ಸಮಪಾಲು. ನಮ್ಮ ಸಿದ್ಧಾಂತವೂ ಅದೇ ಆಗಿದೆ. ಹೀಗಾಗಿ ರಾಜಕೀಯ ಪಕ್ಷಗಳ ಜತೆ ಗುರುತಿಸಿಕೊಳ್ಳದ ಸ್ವಾಭಿಮಾನಿಗಳು ಈ ಸರ್ಕಾರದ ಕಾರ್ಯ ನೋಡಿ ಬೆಂಬಲ ಸೂಚಿಸುತ್ತಿದ್ದಾರೆ. ಈ ಸಮಾವೇಶ ಪೂರ್ವಸಿದ್ಧತೆ ಪರಿಶೀಲಿಸಿ, ನಮ್ಮ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬಲು ಬಂದಿದ್ದೇನೆ. ಡಿ. 5 ರಂದು ನಾನು, ಮುಖ್ಯಮಂತ್ರಿಗಳು ಹಾಗೂ ಪಕ್ಷದ ನಾಯಕರು ಬಂದು ರಾಜ್ಯದ ಜನರಿಗೆ ಸಂದೇಶ ರವಾನಿಸುತ್ತೇವೆ” ಎಂದು ತಿಳಿಸಿದರು.
ಸರ್ಕಾರ ಕೆಡವಲು ಹೊರಟವರಿಗೆ ಸಂದೇಶ:
ಈ ಸಮಾವೇಶದ ಸಂದೇಶವೇನು ಎಂದು ಕೇಳಿದಾಗ, “ನಮ್ಮನ್ನು ನಂಬಿರುವ ಜನರ ನಂಬಿಕೆ ಉಳಿಸಿಕೊಂಡು ನುಡಿದಂತೆ ನಡೆದಿದ್ದೇವೆ. ಮುಂದೆಯೂ ಅವರ ವಿಶ್ವಾಸ ಉಳಿಸಿಕೊಳ್ಳುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡಿದರು. ಕಾಂಗ್ರೆಸ್ ಸರ್ಕಾರ ಕೆಡವಲು ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಕುಮಾರಸ್ವಾಮಿ ಅವರು ಜೆಡಿಎಸ್ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಈ ಹಿಂದೆ ಆರು ತಿಂಗಳಲ್ಲಿ ಸರ್ಕಾರ ತೆಗೆಯುತ್ತೇವೆ ಎಂದಿದ್ದರು. ದೇವೇಗೌಡರು ಈ ಸರ್ಕಾರ ತೆಗೆಯಬೇಕು ಎಂದು ಹೇಳಿದ್ದರು. ಅವರಿಗೆ ಜನ ಈಗಾಗಲೇ ಉತ್ತರ ನೀಡಿದ್ದು, ನಾವು ಈ ವೇದಿಕೆ ಮೂಲಕ ಅವರಿಗೆ ಉತ್ತರ ನೀಡುತ್ತೇವೆ” ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರ ಅಭಿಮಾನಿಗಳು ಪಕ್ಷದ ಹೊರತಾಗಿ ಮಾಡುತ್ತಿದ್ದ ಸಮಾವೇಶ ಈ ಹಂತಕ್ಕೆ ಬಂದು ನಿಂತಿದೆಯೇ ಎಂಬ ಪ್ರಶ್ನೆಗೆ, “ನನಗೆ ಆ ಬಗ್ಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ. ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿದ್ದು, ಈ ವಿಚಾರವಾಗಿ ಮುಖ್ಯಮಂತ್ರಿಗಳೇ ನನ್ನ ಜತೆ ಚರ್ಚೆ ಮಾಡಿದ್ದಾರೆ. ನಮ್ಮ ಕೆಲವು ಸಚಿವರು ಚರ್ಚೆ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಈಗಾಗಲೇ ತಿಳಿಸಿದ್ದಾರೆ” ಎಂದರು.
ಎಷ್ಟು ಜಿಲ್ಲೆ ಕಾರ್ಯಕರ್ತರು, ಅಭಿಮಾನಿಗಳು ಬರುತ್ತಾರೆ ಎಂದು ಕೇಳಿದಾಗ, “ಈ ಸಮಾವೇಶ ಹಾಸನ ಕೇಂದ್ರೀಕೃತವಾಗಿ ಮಾಡುತ್ತಿದ್ದು, ಸುತ್ತಮುತ್ತ ಜಿಲ್ಲೆಯವರು ಬರಲಿದ್ದಾರೆ” ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಘೋಷಣೆ ಮಾಡಲಾಗುವುದೇ ಎಂದು ಕೇಳಿದಾಗ, “ಈ ಸಮಾವೇಶದಲ್ಲಿ ಘೋಷಣೆ ಮಾಡುವುದಿಲ್ಲ. ಬೇರೆ ಕಾರ್ಯಕ್ರಮ ಮಾಡಿ ಅದರ ಬಗ್ಗೆ ಮಾತನಾಡುತ್ತೇವೆ” ಎಂದು ತಿಳಿಸಿದರು.
ಜನ ಕಲ್ಯಾಣ ಸಮಾವೇಶ ಹಾಸನದಿಂದಲೇ ಯಾಕೆ ಆರಂಭ ಮಾಡಲಾಗುತ್ತಿದೆ ಎಂದು ಕೇಳಿದಾಗ, “ಈ ಜಿಲ್ಲೆಯಲ್ಲಿ ನಮಗೆ ಒಬ್ಬರೇ ಶಾಸಕರಿದ್ದಾರೆ. ಹೀಗಾಗಿ ಇಲ್ಲಿಂದಲೇ ಆರಂಭಿಸುತ್ತಿದ್ದೇವೆ. ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರದಲ್ಲಿ ಹೆಚ್ಚು ಶಾಸಕರಿದ್ದಾರೆ. ಈ ಜಿಲ್ಲೆಯಲ್ಲೂ ಪಕ್ಷ ಸಂಘಟನೆ ಮಾಡಲು ಸಮಾವೇಶ ಮಾಡುತ್ತಿದ್ದೇವೆ” ಎಂದರು.
ರಾಜ್ಯದಲ್ಲಿ 19 ಸಾವಿರ ಕಿ.ಮೀ ರಸ್ತೆ ಹಾಳಾಗಿದ್ದು, ಶಿರಾಢಿ ಘಾಟ್ ರಸ್ತೆ ಹಾಳಾಗಿದೆ ಎಂದು ಕೇಳಿದಾಗ, “ಈ ಬಗ್ಗೆ ಮುಂದೆ ಮಾಧ್ಯಮಗೋಷ್ಠಿ ನಡೆಸಿ ನಾನು ಅಥವಾ ಲೋಕೋಪಯೋಗಿ ಸಚಿವರಿಂದ ಉತ್ತರ ನೀಡಲಾಗುವುದು” ಎಂದರು.
ಐಪಿಎಸ್ ಅಧಿಕಾರಿ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕರಣದ ತನಿಖೆ ಮಾಡಲಾಗುವುದೇ ಎಂದು ಕೇಳಿದಾಗ, “ನಮ್ಮ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ” ಎಂದು ತಿಳಿಸಿದರು.
ಹಾಸನದ ಪೊಲೀಸ್ ಇಲಾಖೆಯಲ್ಲಿ ವಾಹನಗಳ ವ್ಯವಸ್ಥೆ ಸುರಕ್ಷಿತವಾಗಿಲ್ಲ ಎಂದು ಹೇಳಿದಾಗ, “ನಿಮ್ಮ ಎಲ್ಲಾ ಮಾಹಿತಿಗಳನ್ನು ಗೃಹ ಸಚಿವರ ಗಮನಕ್ಕೆ ತರುತ್ತೇವೆ” ಎಂದು ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ ಪ್ರತಿಯಾಗಿ ಈ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡಲಾಗುತ್ತಿದೆಯೇ ಎಂದು ಕೇಳಿದಾಗ, “ಅವರು ಇಬ್ಬರು ಮೈತ್ರಿ ಮಾಡಿಕೊಂಡಿದ್ದಾರೋ, ಮೂವರು ಮೈತ್ರಿ ಮಾಡಿಕೊಂಡಿದ್ದಾರೋ, ಬಿಜೆಪಿಯಲ್ಲಿ ಎರಡು ಪಕ್ಷವಿದ್ದು, ಜೆಡಿಎಸ್ ನಲ್ಲಿ ಎಷ್ಟು ಪಕ್ಷವಿದೆಯೋ ಗೊತ್ತಿಲ್ಲ. ಅವರೆಲ್ಲರೂ ಸೇರಿ ನಮ್ಮ ಪಾಲಿಗೆ ಎನ್ ಡಿಎ. ಈ ಎನ್ ಡಿಎಗೆ ಜನ ಈಗಾಗಲೇ ಉತ್ತರ ನೀಡಿದ್ದಾರೆ” ಎಂದು ತಿಳಿಸಿದರು.
ಸಮಾವೇಶದಲ್ಲಿ ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಬಗ್ಗೆ ಚರ್ಚೆ ಇದೆ ಎಂದು ಕೇಳಿದಾಗ, “ಬಹಳ ಸಂತೋಷ. ಯಾರೇ ಬಂದರೂ ಸ್ವಾಗತ ಮಾಡುತ್ತೇವೆ ” ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ