Kannada NewsKarnataka NewsPolitics

ಒಂದೇ ವೇದಿಕೆಯಲ್ಲಿ ಜನಾಂದೋಲನ – ಪಾದಯಾತ್ರೆ ಸಮಾವೇಶ! ಏನಿದು ವಿಚಿತ್ರ?

ಪ್ರಗತಿವಾಹಿನಿ ಸುದ್ದಿ, ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಹಗರಣ ವಿರೋಧಿಸಿ ಭಾರತೀಯ ಜನತಾಪಾರ್ಟಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಹಮ್ಮಿಕೊಂಡಿದೆ. ಬಿಜೆಪಿ- ಜೆಡಿಎಸ್ ಪಾದಯಾತ್ರೆ ವಿರೋಧಿಸಿ ಕಾಂಗ್ರೆಸ್ ಪಕ್ಷ ಜನಾಂದೋಲನ ಹಮ್ಮಿಕೊಂಡಿದೆ.

ಈ ಎರಡರ ಸಮಾರೋಪ ಸಮಾವೇಶವೂ ಒಂದೇ ವೇದಿಕೆಯಲ್ಲಿ ನಡೆಯುತ್ತಿದೆ!

ಆಗಸ್ಟ್ 3ರಿಂದ ಬಿಜೆಪಿ – ಜೆಡಿಎಸ್ ಪಾದಯಾತ್ರೆ ನಡೆಯುತ್ತಿದ್ದು, 10ರಂದು ಮೈಸೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಇದಕ್ಕೂ ಒಂದು ದಿನ ಮೊದಲು ಆಗಸ್ಟ್ 2ರಿಂದ ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆಸುತ್ತಿದೆ. ಪಾದಯಾತ್ರೆ ಹೋಗುವ ಮಾರ್ಗದಲ್ಲಿ ಅದಕ್ಕೂ ಒಂದು ದಿನ ಮೊದಲು ಕಾಂಗ್ರೆಸ್ ಸಮಾವೇಶ ನಡೆಸುತ್ತಿದೆ. ಹಾಗಾಗಿ 9ರಂದು ಮೈಸೂರಿನಲ್ಲಿ ಜನಾಂದೋಲನ ಸಮಾರೋಪ ಸಮಾವೇಶ ನಡೆಸುತ್ತಿದೆ.

ನಾಳೆ ಮೈಸೂರಿನಲ್ಲಿ KPCC ವತಿಯಿಂದ ಕನ್ನಡಿಗರ ಸ್ವಾಭಿಮಾನಿ ಪ್ರತಿರೋಧ ಸಮಾವೇಶ ನಡೆಯಲಿರುವ ಮಹರಾಜ ಕಾಲೇಜು ಮೈದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿ ಸಿದ್ದತೆಗಳನ್ನು ಪರಿಶೀಲಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಚಿವರುಗಳಾದ ಕೆ.ವೆಂಕಟೇಶ್, ಹೆಚ್.ಸಿ.ಮಹದೇವಪ್ಪ, ಜಮೀರ್ ಅಹಮದ್ ಖಾನ್, ಎಂ.ಸಿ.ಸುಧಾಕರ್ ಸೇರಿ ಹಲವರು ಉಪಸ್ಥಿತರಿದ್ದರು.

ಶುಕ್ರವಾರ ಮೈಸೂರಿನಲ್ಲಿ ನಡೆಯಲಿರುವ ಜನಾಂದೋಲನ ಸಮಾವೇಶದಲ್ಲಿ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ. ಹಾಗಾಗಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಭರ್ಜರಿ ವೇದಿಕೆ ಹಾಕಲಾಗಿದೆ. ಒಂದು ಲಕ್ಷ ಜನರು ಆಸೀನರಾಗಲು ವ್ಯವಸ್ಥೆ ಮಾಡಲಾಗಿದೆ. ಮಳೆ ಬಂದರೂ ತೊಂದರೆಯಾಗದಂತೆ ಪೆಂಡಾಲ್ ಹಾಕಲಾಗಿದೆ. ಗುರುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಹಲವಾರು ಸಚಿವರು, ಮುಖಂಡರು ಸಮಾವೇಶದ ವೇದಿಕೆಯನ್ನು ಪರಿಶೀಲಿಸಿದ್ದಾರೆ.

ವಿಶೇಷವೆಂದರೆ, ಶನಿವಾರ ನಡೆಯಲಿರುವ ಬಿಜೆಪಿ- ಜೆಡಿಎಸ್ ಪಾದಯಾತ್ರೆ ಸಮಾವೇಶವೂ ಇದೇ ವೇದಿಕೆಯಲ್ಲಿ ನಡೆಯಲಿದೆ. ಎಲ್ಲ ವ್ಯವಸ್ಥಗಳೂ ಹಾಗೇ ಇರಲಿವೆ. ಕಾಂಗ್ರೆಸ್ ಮುಖಂಡರು ಶುಕ್ರವಾರ ಘರ್ಜಿಸುವ ವೇದಿಕೆಯಲ್ಲೇ ಶನಿವಾರ ಬಿಜೆಪಿ – ಜೆಡಿಎಸ್ ಮುಖಂಡರು ಘರ್ಜಿಸಲಿದ್ದಾರೆ. ಎದುರುಗಡೆ ಕುಳಿತುಕೊಳ್ಳುವ ಒಂದಿಷ್ಟು ಕಾರ್ಯಕರ್ತರು ಬದಲಾಗಬಹುದು, ಆದರೆ ಹಣ ಕೊಟ್ಟು ಕರೆಸುವ ಜನರು ಮಾತ್ರ ಎರಡೂ ಸಮಾವೇಶಕ್ಕೆ ಅವರೇ ಇರುತ್ತಾರೆ ಎನ್ನುವುದು ಮೈಸೂರಿನ ಜನಸಾಮಾನ್ಯರ ಅಂಬೋಣ.

ಮೂಲಗಳ ಪ್ರಕಾರ ಸಮಾವೇಶದ ವೇದಿಕೆ ಮತ್ತು ಪೆಂಡಾಲ್ ಖರ್ಚನ್ನು ಗುತ್ತಿಗೆದಾರರು ಎರಡೂ ಪಕ್ಷಗಳಿಂದ ಅರ್ಧ ಅರ್ಧ ಪಡೆಯಲಿದ್ದಾರೆ. ಹಾಗಾಗಿ ಇಬ್ಬರಿಗೂ ಆರ್ಥಿಕ ಭಾರವೂ ಕಡಿಮೆಯಾಗಲಿದೆ !! ವಿಚಿತ್ರವಾದರೂ ಸತ್ಯ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button