ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ನವೆಂಬರ್ ಎರಡನೇ ವಾರದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಅಂತಿಮ ಹೋರಾಟ ನಡೆಸಲಿದ್ದೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ನಲ್ಲಿ ನಡೆಯಲಿರುವ ಹೋರಾಟ ಅಂತಿಮ ಹೋರಾಟವಾಗಲಿದೆ. ಮೀಸಲಾತಿ ಪಡೆದೇ ಮಡಿವೆವು ಎಂಬ ಉದ್ಘೋಷಣೆಯ ಮೂಲಕ ಹೋರಾಟ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ಪಂಚಮಸಾಲಿ ಸಮುದಾಯದ 25 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.
ನವೆಂಬರ್ ನಲ್ಲಿ ನಡೆಯುವ ಹೋರಾಟದ ದಿನಾಂಕ ನಿಗದಿಪಡಿಸುವುದು ಮತ್ತು ಹೋರಾಟದ ರೂಪರೇಷೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಹುಕ್ಕೇರಿಯಲ್ಲಿ ಅ. 21 ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶಕ್ಕೆ ಸುಮಾರು 50 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ ಎಂದರು.
ಅ. 23 ರಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಡೆಯಲಿದ್ದು, ಅಷ್ಟರಲ್ಲಿ ಮೀಸಲಾತಿ ನಿರ್ಧರಿಸುವ ಬಗ್ಗೆ ಸರಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು, ಇಲ್ಲದಿದ್ದರೆ ಸರಕಾರದಿಂದ ಆಯೋಜಿಸುವ ಚನ್ನಮ್ಮ ಜಯಂತಿಯನ್ನು ಬಹಿಷ್ಕರಿಸುವ ಬಗ್ಗೆ ನಾವು ಯೋಚಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಸ್ ಸಿ ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸಿದ ಬಗ್ಗೆ ಸಂತೋಷವಿದೆ. ಅದೇ ರೀತಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ಬಗ್ಗೆ ಮುಖ್ಯಮಂತ್ರಿಗಳು ಆದಷ್ಟು ಬೇಗ ಸರ್ವ ಪಕ್ಷಗಳ ಸಭೆ ಕರೆದು ನಿರ್ಧರಿಸಲಿ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾವಸಾಹೇಬ ಪಾಟೀಲ, ರಾಜು ಮುಗದುಮ್ಮ , ರಾಜೇಂದ್ರಕುಮಾರ ಹರ್ಕುಣಿ ಮೊದಲಾದವರು ಇದ್ದರು.
https://pragati.taskdun.com/latest/thieves-who-robbed-gold-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ