Latest

ಜೆಇಇ ಹಾಗೂ ನೀಟ್ ಪರೀಕ್ಷೆ ಮುಂದೂಡುವಂತೆ ರಾಜ್ಯ ಸರ್ಕಾರಗಳು ಸಲ್ಲಿಸಿದ್ದ ಅರ್ಜಿ ವಜಾ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೊರೊನಾ ಸೋಂಕು ಹಿನ್ನಲೆಯಲ್ಲಿ ಜೆಇಇ ಹಾಗೂ ನೀಟ್ ಪರೀಕ್ಷೆಯನ್ನು ಮುಂದೂಡುವಂತೆ ಒತ್ತಾಯಿಸಿ ಅನೇಕ ರಾಜ್ಯಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ಕೊರೊನಾ ವೈರಸ್ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡುವಂತೆ ಹಲವು ರಾಜ್ಯಗಳು ಸುಪ್ರೀಂಗೆ ಮನವಿ ಮಾಡಿದ್ದವು.

ಕಳೆದ ಆಗಸ್ಟ್ 17ರಂದು ಈ ಕುರಿತ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಆದರೆ, ಪಶ್ಚಿಮ ಬಂಗಾಳ, ಪಂಜಾಬ್‌ ಸೇರಿದಂತೆ 6 ರಾಜ್ಯಗಳು ಈ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ ಒತ್ತಾಯಿಸಿ ಮತ್ತೆ ಸುಪ್ರೀಂ ಕೋರ್ಟ್‌‌ಗೆ ಮನವಿ ಸಲ್ಲಿಸಿದ್ದವು. ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಬಿ.ಆರ್.ಗವಾಯಿ ಮತ್ತು ಕೃಷ್ಣ ಮುರಾರಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠ ರಾಜ್ಯಗಳ ಅರ್ಜಿಯನ್ನುವಜಾ ಮಾಡಿದೆ. ನಿಗದಿಯಂತೆ ಪರೀಕ್ಷೆ ನಡೆಸುವ ಕೇಂದ್ರ ಸರ್ಕಾರದ ನಿಲುವನ್ನು ಎತ್ತಿಹಿಡಿದಿದೆ.

ಸೆಪ್ಟೆಂಬರ್‌ 1ರಂದು ಆರಂಭವಾಗಿದ್ದ ಜೆಇಇ ಪರೀಕ್ಷೆಗಳಿಗೆ ದೇಶದಾದ್ಯಂತ ಸುಮಾರು ಶೇ.50ರಷ್ಟು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇನ್ನೂ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ಸೆಪ್ಟೆಂಬರ್ 13 ರಂದು ಆರಂಭವಾಗಲಿದ್ದು ಕೊರೊನಾ ಹಾಗೂ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದ ಪ್ರವಾಹವಾಗುತ್ತಿರುವುದರಿಂದ ಈ ಪರೀಕ್ಷೆಗೂ ಹಲವು ವಿದ್ಯಾರ್ಥಿಗಳು ಗೈರಾಗುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button